ನವದೆಹಲಿ: ಭಾರತ್ ಜೋಡೋ ಯಾತ್ರೆಯ ವೇಳೆ ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಿಡಿ ಸಾವರ್ಕರ್ (VD Savarkar) ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ವಿರುದ್ಧ ದೂರು ದಾಖಲಾಗಿದ್ದು, ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಯಿಂದ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಬಾಳಾಸಾಹೆಬಂಚಿ ಶಿವಸೇನಾ ನಾಯಕಿ ವಂದನಾ ಡೋಂಗ್ರೆ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಅಕೋಲಾದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರಿಗೆ ಕ್ಷಮೆಯಾಚನೆಯ ಪತ್ರ ಬರೆದು ಸಾವರ್ಕರ್ ಅವರು ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರು ಮತ್ತು ಸರ್ದಾರ್ ಪಟೇಲ್ ಅವರಂತಹ ನಾಯಕರಿಗೆ ದ್ರೋಹ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದರು.
ಮಂಗಳವಾರ ಮುಂಜಾನೆ ರಾಹುಲ್ ಗಾಂಧಿ ಜಂಜಾಟಿಯ ಗೌರವ್ ದಿವಸ್ ಸಂದರ್ಭದಲ್ಲಿ ಹಿಂಗೋಲಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಬುಡಕಟ್ಟು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ಟೀಕಿಸಿದ್ದರು.
ಅಂಡಮಾನ್ ಜೈಲಿನಲ್ಲಿ ವೀರ್ ಸಾವರ್ಕರ್ ಇದ್ದಾಗ ಬ್ರಿಟಿಷರಿಗೆ ಪತ್ರ ಬರೆದು, ತಮ್ಮನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಲು ಹೇಳಿದರು. ವೀರ್ ಸಾವರ್ಕರ್ ಅವರು ಬ್ರಿಟಿಷರಿಂದ ಪಿಂಚಣಿ ಪಡೆದರು. ಅವರು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರು. ಜೈಲಿನಿಂದ ಹೊರಬಂದ ನಂತರ ಅವರು ಬ್ರಿಟಿಷರ ಪ್ರಸ್ತಾಪವನ್ನು ಒಪ್ಪಿಕೊಂಡು ಅವರ ಕಡೆಗೆ ಸೇರಿದರು. ಸಾವರ್ಕರ್ ಮತ್ತು ಬಿರ್ಸಾ ಮುಂಡಾ ನಡುವಿನ ವ್ಯತ್ಯಾಸವೆಂದರೆ ಬಿರ್ಸಾ ಮುಂಡಾ 24 ವರ್ಷದವರಾಗಿದ್ದಾಗ ಬ್ರಿಟಿಷರ ವಿರುದ್ಧ ಹೋರಾಡಿದರು ಎಂದು ರಾಹುಲ್ ಗಾಂಧಿ ಹೇಳಿದ್ದರು.
ಇದನ್ನೂ ಓದಿ: ಸಾವರ್ಕರ್ ಕುರಿತು ನಮಗೆ ಅಪಾರ ಗೌರವವಿದೆ; ರಾಹುಲ್ ಗಾಂಧಿ ಹೇಳಿಕೆಗೆ ಉದ್ಧವ್ ಠಾಕ್ರೆ ಆಕ್ಷೇಪ
ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸಿದ್ಧಾಂತದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.
ರಾಹುಲ್ ಗಾಂಧಿಯವರ ಹೇಳಿಕೆಗಾಗಿ ಶಿವಸೇನೆ ಪಕ್ಷದ ಮಹಿಳಾ ಅಘಾಡಿ ಮುಖ್ಯಸ್ಥೆಯೂ ಆಗಿರುವ ಬಾಳಾಸಾಹೆಬಂಚಿ ಶಿವಸೇನಾ ನಾಯಕಿ ವಂದನಾ ಡೋಂಗ್ರೆ ವಿರುದ್ಧ ದೂರು ದಾಖಲಿಸಿದ್ದಾರೆ. ನಮ್ಮ ಮಹಾಪುರುಷರ ಮಾನಹಾನಿಯನ್ನು ನಾವು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
“ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆಯ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ್ ಸಾವರ್ಕರ್ ಅವರನ್ನು ದೂಷಿಸುವ ಹೇಳಿಕೆ ನೀಡಿದ್ದಾರೆ. ಇದರಿಂದಾಗಿ ಸ್ಥಳೀಯ ನಾಗರಿಕರ ಭಾವನೆಗಳಿಗೆ ಧಕ್ಕೆಯಾಗಿದೆ” ಎಂದು ವಂದನಾ ಡೋಂಗ್ರೆ ಹೇಳಿದ್ದಾರೆ.
ಇದನ್ನೂ ಓದಿ: ವೀರ್ ಸಾವರ್ಕರ್ ವಿರುದ್ಧ ಅವಮಾನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ದೂರು ನೀಡಲು ಸಾವರ್ಕರ್ ಮೊಮ್ಮಗ ನಿರ್ಧಾರ
“ಮಹಾರಾಷ್ಟ್ರದ ನೆಲದಲ್ಲಿ ನಮ್ಮ ಮಹಾನ್ ವ್ಯಕ್ತಿಗಳ ಮಾನಹಾನಿಯನ್ನು ನಾವು ಸಹಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ವಿರೋಧಿಸಿ ಬಾಳಾಸಾಹೇಬ್ ಅವರ ಶಿವಸೇನೆ ಪಕ್ಷವು ಗುರುವಾರ ಥಾಣೆಯಲ್ಲಿ ಪ್ರತಿಭಟನಾ ಮೆರವಣಿಗೆಯನ್ನು ಆಯೋಜಿಸಿತ್ತು.
ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ ರಂಜಿತ್ ಸಾವರ್ಕರ್ ಕೂಡ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಂಜಿತ್ ಸಾವರ್ಕರ್, ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ. ನಮ್ಮ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿದ್ದಕ್ಕಾಗಿ ನಾನು ದೂರು ದಾಖಲಿಸಿದ್ದೇನೆ. ರಾಹುಲ್ ಗಾಂಧಿ ಈ ಹಿಂದೆ 2017ರಲ್ಲಿಯೂ ಇದೇ ರೀತಿಯ ಕೆಲಸ ಮಾಡಿದ್ದರು ಎಂದು ಹೇಳಿದ್ದಾರೆ.