ವೀರ್ ಸಾವರ್ಕರ್​ ವಿರುದ್ಧ ಅವಮಾನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ದೂರು ನೀಡಲು ಸಾವರ್ಕರ್ ಮೊಮ್ಮಗ ನಿರ್ಧಾರ

ಹಿಂದುತ್ವ ಸಿದ್ಧಾಂತವಾದಿ ವೀರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ರಾಹುಲ್ ಗಾಂಧಿ ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ರಂಜಿತ್ ಸಾವರ್ಕರ್ ಆಕ್ರೋಶ ಹೊರಹಾಕಿದ್ದಾರೆ.

ವೀರ್ ಸಾವರ್ಕರ್​ ವಿರುದ್ಧ ಅವಮಾನಕಾರಿ ಹೇಳಿಕೆ; ರಾಹುಲ್ ಗಾಂಧಿ ವಿರುದ್ಧ ದೂರು ನೀಡಲು ಸಾವರ್ಕರ್ ಮೊಮ್ಮಗ ನಿರ್ಧಾರ
ವೀರ್​ ಸಾವರ್ಕರ್
Follow us
TV9 Web
| Updated By: ಸುಷ್ಮಾ ಚಕ್ರೆ

Updated on: Nov 17, 2022 | 8:33 AM

ಮುಂಬೈ: ವೀರ್ ಸಾವರ್ಕರ್ ಅವರನ್ನು ಅವಮಾನಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ವಿನಾಯಕ ದಾಮೋದರ್ ಸಾವರ್ಕರ್ (VD Savarkar) ಅವರ ಮೊಮ್ಮಗ ರಂಜಿತ್ ಸಾವರ್ಕರ್ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಈ ಬಗ್ಗೆ ಮಾತನಾಡಿದ ರಂಜಿತ್ ಸಾವರ್ಕರ್, “ರಾಹುಲ್ ಗಾಂಧಿ (Rahul Gandhi) ಮತ್ತು ಕಾಂಗ್ರೆಸ್ ಪಕ್ಷದ ನಾಯಕರು ವೀರ್ ಸಾವರ್ಕರ್ (Veer Savarkar) ಅವರನ್ನು ಅವಮಾನಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಅವರು ಸಾವರ್ಕರ್ ಅವರನ್ನು ಅವಮಾನಿಸಿದ್ದಾರೆ. ಆದ್ದರಿಂದ ನಾನು ರಾಹುಲ್ ಗಾಂಧಿ ವಿರುದ್ಧ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ನಿರ್ಧರಿಸಿದ್ದೇನೆ” ಎಂದು ಹೇಳಿದ್ದಾರೆ.

“ನಮ್ಮ ನಾಯಕ ಹಾಗೂ ಸ್ವಾತಂತ್ರ್ಯ ಹೋರಾಟಗಾರನನ್ನು ಅವಮಾನಿಸಿದ್ದಕ್ಕಾಗಿ ನಾನು ದೂರು ದಾಖಲಿಸುತ್ತೇನೆ. ರಾಹುಲ್ ಗಾಂಧಿ ಈ ಹಿಂದೆ 2017ರಲ್ಲಿಯೂ ಇದೇ ರೀತಿಯ ಕೆಲಸ ಮಾಡಿದ್ದರು.” ಎಂದು ರಂಜಿತ್ ಸಾರ್ವರ್ಕರ್ ಹೇಳಿದ್ದಾರೆ. “ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಪ್ರಯತ್ನಿಸುತ್ತಿದೆ. ವೀರ್ ಸಾವರ್ಕರ್ ಅವರನ್ನು ಅವಮಾನಿಸುವ ಅಜೆಂಡಾ ಕಾಂಗ್ರೆಸ್​ಗಿದೆ” ಎಂದು ರಂಜಿತ್ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: National Herald Case: ನ್ಯಾಷನಲ್ ಹೆರಾಲ್ಡ್​ ಪ್ರಕರಣ; ಸೋನಿಯಾ ಗಾಂಧಿ, ರಾಹುಲ್ ಗಾಂಧಿಗೆ ಇಡಿಯಿಂದ ಮತ್ತೆ ಸಮನ್ಸ್​ ಜಾರಿ ಸಾಧ್ಯತೆ

ಮಂಗಳವಾರ ಮುಂಜಾನೆ ರಾಹುಲ್ ಗಾಂಧಿ ಜಂಜಾಟಿಯ ಗೌರವ್ ದಿವಸ್ ಸಂದರ್ಭದಲ್ಲಿ ಹಿಂಗೋಲಿಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಬುಡಕಟ್ಟು ಸಮಾವೇಶದಲ್ಲಿ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಬ್ರಿಟಿಷರಿಂದ ಪಿಂಚಣಿ ಪಡೆದು ಕಾಂಗ್ರೆಸ್ ವಿರುದ್ಧ ಕೆಲಸ ಮಾಡುತ್ತಿದ್ದರು ಎಂದು ಟೀಕಿಸಿದ್ದರು. ಈ ಹಿನ್ನೆಲೆಯಲ್ಲಿ ರಂಜಿತ್ ಸಾವರ್ಕರ್ ಆಕ್ರೋಶ ಹೊರಹಾಕಿದ್ದಾರೆ.

ಅಂಡಮಾನ್ ಜೈಲಿನಲ್ಲಿ ವೀರ್ ಸಾವರ್ಕರ್ ಇದ್ದಾಗ ಬ್ರಿಟಿಷರಿಗೆ ಪತ್ರ ಬರೆದು, ತಮ್ಮನ್ನು ಕ್ಷಮಿಸಿ ಜೈಲಿನಿಂದ ಬಿಡುಗಡೆ ಮಾಡಲು ಹೇಳಿದರು. ವೀರ್ ಸಾವರ್ಕರ್ ಅವರು ಬ್ರಿಟಿಷರಿಂದ ಪಿಂಚಣಿ ಪಡೆದರು. ಅವರು ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದರು. ಜೈಲಿನಿಂದ ಹೊರಬಂದ ನಂತರ ಅವರು ಬ್ರಿಟಿಷರ ಪ್ರಸ್ತಾಪವನ್ನು ಒಪ್ಪಿಕೊಂಡು ಅವರ ಕಡೆಗೆ ಸೇರಿದರು. ಸಾವರ್ಕರ್ ಮತ್ತು ಬಿರ್ಸಾ ಮುಂಡಾ ನಡುವಿನ ವ್ಯತ್ಯಾಸವೆಂದರೆ ಬಿರ್ಸಾ ಮುಂಡಾ 24 ವರ್ಷದವರಾಗಿದ್ದಾಗ ಬ್ರಿಟಿಷರ ವಿರುದ್ಧ ಹೋರಾಡಿದರು ಎಂದು ರಾಹುಲ್ ಗಾಂಧಿ ಹೇಳಿದ್ದರು.

ಇದನ್ನೂ ಓದಿ: ಸಾವರ್ಕರ್ ಸಾಮ್ರಾಜ್ಯ ಕಾರ್ಯಕ್ರಮ: ವಾಹನಗಳ ಜಖಂ ಗೊಳಿಸಿದ ಆರೋಪದಡಿ ಮೃತ ಹರ್ಷ ಸಹೋದರಿ ಸೇರಿದಂತೆ 15 ಮಂದಿ ವಿರುದ್ಧ ಎಫ್​ಐಆರ್

ಬುಡಕಟ್ಟು ನಾಯಕ ಬಿರ್ಸಾ ಮುಂಡಾ ಅವರು ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಅವರ ಸಿದ್ಧಾಂತದ ಮೇಲೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಮತ್ತು ಭಾರತೀಯ ಜನತಾ ಪಕ್ಷ (ಬಿಜೆಪಿ) ದಾಳಿ ನಡೆಸುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟೀಕಿಸಿದ್ದರು.

ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆ ಮಂಗಳವಾರ ಮಹಾರಾಷ್ಟ್ರದ ವಿದರ್ಭ ಪ್ರದೇಶದ ವಾಶಿಮ್ ಜಿಲ್ಲೆಗೆ ತಲುಪಿತು. ಭಾರತ್ ಜೋಡೋ ಯಾತ್ರೆ ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾಯಿತು. ಇದು ಮುಂದಿನ ವರ್ಷ ಕಾಶ್ಮೀರದಲ್ಲಿ ಕೊನೆಗೊಳ್ಳಲಿದೆ. ಭಾರತದ ಇತಿಹಾಸದಲ್ಲಿ ಇದುವರೆಗೂ ಭಾರತೀಯ ರಾಜಕಾರಣಿಗಳು ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಮೆರವಣಿಗೆಯಾಗಿದೆ ಎಂದು ಕಾಂಗ್ರೆಸ್ ಈ ಹಿಂದೆ ಹೇಳಿಕೆಯಲ್ಲಿ ಹೇಳಿಕೊಂಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ