ದೆಹಲಿ ಆಗಸ್ಟ್ 29: ಜಾತಿ ಸಮೀಕ್ಷೆ ನಡೆಸುವ (Bihar Caste Survey)ಬಿಹಾರ ಸರ್ಕಾರದ ನಿರ್ಧಾರದ ಕುರಿತು ಸುಪ್ರೀಂಕೋರ್ಟ್‌ನಲ್ಲಿ (Supreme Court) ಕೇಂದ್ರದ ಅಫಿಡವಿಟ್ ಮತ್ತು ಗಂಟೆಗಳ ನಂತರ ತಿದ್ದುಪಡಿ ಮಾಡಿರುವುದು ಸಮೀಕ್ಷೆಯನ್ನು ತಡೆಯುವ ಬಿಜೆಪಿಯ (BJP) ಉದ್ದೇಶವನ್ನು ಬಯಲು ಮಾಡಿವೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ನಿನ್ನೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರ “ಜನಗಣತಿ ಅಥವಾ ಜನಗಣತಿಗೆ ಹೋಲುವ ಯಾವುದೇ ಕ್ರಮ” ನಡೆಸಬಹುದು ಎಂದು ಹೇಳಿದ್ದ ಬೆನ್ನಲ್ಲೇ ಈ ಆರೋಪವನ್ನು ಪ್ರತಿಪಕ್ಷಗಳು ಮಾಡಿವೆ. ಗಂಟೆಗಳ ನಂತರ, ಕೇಂದ್ರವು ಹೊಸ ಅಫಿಡವಿಟ್ ಅನ್ನು ಸಲ್ಲಿಸಿದ್ದು ಆ ಪ್ಯಾರಾಗ್ರಾಫ್ “ಅಚಾತುರ್ಯದಿಂದ ನುಸುಳಿದೆ” ಎಂದಿದೆ.
ಒಂದರ ಹಿಂದೆ ಮತ್ತೊಂದು ಅಫಿಡವಿಟ್ ಸಲ್ಲಿಸಿದ ಕೇಂದ್ರದ ವಿರುದ್ಧ ಜನತಾದಳ ಯುನೈಟೆಡ್ (ಜೆಡಿಯು) ಮತ್ತು ಅದರ ಮಿತ್ರಪಕ್ಷವಾದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಟೀಕಾ ಪ್ರಹಾರ ಮಾಡಿದೆ. ಜಾತಿ ಸಮೀಕ್ಷೆಯನ್ನು ತಡೆಯಲು ಪ್ರಧಾನಿ ಕಾರ್ಯಾಲಯವು ಪುಸ್ತಕದಲ್ಲಿರುವ ಎಲ್ಲ ತಂತ್ರಗಳನ್ನು ಪ್ರಯತ್ನಿಸುತ್ತಿದೆ ಎಂದು ಆರ್‌ಜೆಡಿಯ ರಾಜ್ಯಸಭಾ ಸಂಸದ ಮನೋಜ್ ಕುಮಾರ್ ಝಾ ಆರೋಪಿಸಿದ್ದಾರೆ. ಇಷ್ಟು ದೊಡ್ಡ ಪ್ರಮಾಣದ ಜನಸಂಖ್ಯೆಯ ಹಕ್ಕುಗಳನ್ನು ಕಸಿದುಕೊಳ್ಳುವುದು ಬಿಜೆಪಿ ಮತ್ತು ಸಂಘಪರಿವಾರಕ್ಕೆ ಅತಿಮುಖ್ಯ ಎಂಬುದನ್ನು ಇದು ಸಾಬೀತುಪಡಿಸುತ್ತದೆ ಎಂದಿದ್ದಾರೆ ಝಾ.
ಕೇಂದ್ರವು ಸಲ್ಲಿಸಿರುವ ಅಫಿಡವಿಟ್‌ಗಳನ್ನು ಪ್ರಸ್ತಾಪಿಸಿದ ಸಂಸದರು, “ಇದು ಅಚಾತುರ್ಯವಲ್ಲ, ಇದು ಉದ್ದೇಶಪೂರ್ವಕವಾಗಿದೆ, ನಾನು ಸರ್ಕಾರಕ್ಕೆ ಎಚ್ಚರಿಕೆ ನೀಡುತ್ತೇನೆ. ನೀವು ಈ ವಿಭಾಗದ ಹಕ್ಕುಗಳನ್ನು ಹಿಂಬಾಗಿಲಿನಿಂದ ಅಥವಾ ಮುಂಬಾಗಿನಿಂದ ತಡೆಯಲು ಪ್ರಯತ್ನಿಸಿದರೆ ನೀವು ಜ್ವಾಲಾಮುಖಿಯನ್ನೇ ಆಹ್ವಾನಿಸುತ್ತಿದ್ದೀರಿ. ನಿಮಗೆ ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದು ನಿಮ್ಮನ್ನು ಬಯಲು ಮಾಡುತ್ತದೆ ಎಂದು ಗುಡುಗಿದ್ದಾರೆ.
ಉಪಮುಖ್ಯಮಂತ್ರಿ ಮತ್ತು ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಅವರು ಬಿಜೆಪಿಯ ನಿಜವಾದ ಮುಖ ಬಯಲಾಗಿದೆ ಎಂದು ಹೇಳಿದ್ದಾರೆ. ಇದು ಬಿಜೆಪಿಗೆ ಭಯವಾಗಿದೆ ಎಂಬುದನ್ನು ತೋರಿಸುತ್ತದೆ. ಜಾತಿ ಆಧಾರಿತ ಸಮೀಕ್ಷೆ ನಡೆಯುವುದನ್ನು ಅವರು ಎಂದಿಗೂ ಬಯಸಲಿಲ್ಲ ಎಂದು ಅವರು ಹೇಳಿದರು.
ಜೆಡಿಯು ನಾಯಕ ಮತ್ತು ಬಿಹಾರ ಸಂಸದೀಯ ವ್ಯವಹಾರಗಳ ಸಚಿವ ವಿಜಯ್ ಕುಮಾರ್ ಚೌಧರಿ, ಜನಗಣತಿ ನಡೆಸುವ ಹಕ್ಕು ಅವರಿಗಿದೆ ಎಂದು ಕೇಂದ್ರ ಹೇಳುತ್ತಿದೆ ಎಂದು ಹೇಳಿದ್ದಾರೆ. “ಇದು ಹಾಸ್ಯಾಸ್ಪದವಾಗಿದೆ. ಬಿಹಾರ ಸರ್ಕಾರವು ಮೊದಲಿನಿಂದಲೂ ಇದನ್ನು ಹೇಳುತ್ತಿದೆ, ನಾವು ನಡೆಸುತ್ತಿರುವುದು ಜನಗಣತಿಯಲ್ಲ, ಆದರೆ ಸಮೀಕ್ಷೆ” ಎಂದು ಹೇಳಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.
ಇದು ಕೇಂದ್ರದ ಮುಖವಾಡವನ್ನು ಬಿಚ್ಚಿಟ್ಟಿದೆ. ಇದು ಅವರ ಹತಾಶೆಯನ್ನು ತೋರಿಸುತ್ತದೆ. ಬಿಜೆಪಿ ನಾಯಕರೂ ಗೊಂದಲಕ್ಕೊಳಗಾಗಿದ್ದಾರೆ. ಬಿಹಾರದ ಸರ್ವಪಕ್ಷ ಸಭೆಯಲ್ಲಿ ಬಿಜೆಪಿ ಸಮೀಕ್ಷೆಗೆ ಬೆಂಬಲ ವ್ಯಕ್ತಪಡಿಸಿದೆ. ಈಗ ಅದರ ಬಗ್ಗೆಯೂ ಪ್ರಶ್ನಾರ್ಥಕ ಚಿಹ್ನೆ ಇದೆ. ಇದು ಜನಗಣತಿ ಅಲ್ಲ. ಜನಗಣತಿ ನಡೆಸುವ ಹಕ್ಕನ್ನು ಯಾರು ಪ್ರಶ್ನಿಸಿದ್ದಾರೆ ಎಂದು ಕೇಳಿದ್ದಾರೆ.
ಬಿಹಾರ ಪಕ್ಷದ ಘಟಕವು ಜಾತಿ ಸಮೀಕ್ಷೆಯನ್ನು ಬೆಂಬಲಿಸುತ್ತದೆ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಒತ್ತಿ ಹೇಳಿದರು.
ಅಫಿಡವಿಟ್ ವಿವಾದದ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಗೃಹ ಸಚಿವಾಲಯವು ಅದನ್ನು ವಿವರಿಸಲು ಸಾಧ್ಯವಾಗುತ್ತದೆ ಸಮೀಕ್ಷೆಯನ್ನು ತಡೆಯುವ ಯಾವುದೇ ಪ್ರಯತ್ನವನ್ನು ಕೇಂದ್ರ ಮಾಡಿಲ್ಲ ಎಂದು ಅವರು ಹೇಳಿದರು. “ನಮ್ಮದು ಒಂದೇ ಒಂದು ಬೇಡಿಕೆ, ನಿತೀಶ್ ಕುಮಾರ್ ಸರ್ಕಾರ ಸಮೀಕ್ಷೆಯನ್ನು ಪೂರ್ಣಗೊಳಿಸಿದ್ದರೆ, 24 ಗಂಟೆಗಳಲ್ಲಿ ವರದಿಯನ್ನು ಬಿಡುಗಡೆ ಮಾಡಬೇಕು” ಎಂದು ಎನ್‌ಡಿಟಿವಿ ಜತೆ ಮಾತನಾಡಿದ ಅವರು ಹೇಳಿದ್ದಾರೆ.
ಇದನ್ನೂ ಓದಿ: ಮಾನನಷ್ಟ ಪ್ರಕರಣ: ಬಿಹಾರದ ಉಪಮುಖ್ಯಮಂತ್ರಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ಗೆ ನ್ಯಾಯಾಲಯ ಸಮನ್ಸ್
ಸಾಲು ಸಾಲು ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮ್ಮ ಸರ್ಕಾರ ಜನಗಣತಿ ನಡೆಸುತ್ತಿಲ್ಲ, ಸಮೀಕ್ಷೆ ನಡೆಸುತ್ತಿದೆ ಎಂದು ಪುನರುಚ್ಚರಿಸಿದರು. “ನಾವು ವಿವಿಧ ಜಾತಿಗಳ ಜನರನ್ನು ಲೆಕ್ಕಿಸುತ್ತಿಲ್ಲ, ನಾವು ಅವರ ಆರ್ಥಿಕ ಸ್ಥಿತಿಯನ್ನು ಸಹ ಸಮೀಕ್ಷೆ ಮಾಡುತ್ತಿದ್ದೇವೆ ಆದ್ದರಿಂದ ನಮ್ಮಲ್ಲಿ ಸರಿಯಾದ ಡೇಟಾ ಇದೆ. ನಾವು ಜನರ ಕಲ್ಯಾಣಕ್ಕಾಗಿ ಕೆಲಸ ಮಾಡುತ್ತಿದ್ದೇವೆ” ಎಂದು ಹೇಳಿದ್ದು, ಬಹುತೇಕ ಕಾರ್ಯಗಳು ಮುಗಿದಿವೆ ಎಂದಿದ್ದಾರೆ.
ಕಳೆದ ವರ್ಷ ಜೂನ್ 2 ರಂದು ಜಾತಿ ಸಮೀಕ್ಷೆ ನಡೆಸಲು ಬಿಹಾರ ಸರ್ಕಾರ ನಿರ್ಧರಿಸಿತ್ತು. ಸಮೀಕ್ಷೆಯು ಸುಮಾರು 12.70 ಕೋಟಿ ಜನಸಂಖ್ಯೆಯನ್ನು ಒಳಗೊಳ್ಳುವ ಗುರಿಯನ್ನು ಹೊಂದಿದ್ದು ಈ ವರ್ಷ ಮೇ 31 ರೊಳಗೆ ಪೂರ್ಣಗೊಳ್ಳಬೇಕಿತ್ತು. ಮೇ ತಿಂಗಳಲ್ಲಿ ಪಾಟ್ನಾ ಹೈಕೋರ್ಟ್ ಸಮೀಕ್ಷೆಗೆ ತಡೆ ನೀಡಿತ್ತು. ಆದರೆ ಈ ತಿಂಗಳ ಆರಂಭದಲ್ಲಿ, ಈ ಸಮೀಕ್ಷೆಯ ಸಮಯದಲ್ಲಿ ಸಂಗ್ರಹಿಸಿದ ಮಾಹಿತಿಯ ರಕ್ಷಣೆಯ ಬಗ್ಗೆ ಭರವಸೆ ನೀಡಿದ ನಂತರ ಹೈಕೋರ್ಟ್ ನಿತೀಶ್ ಕುಮಾರ್ ಸರ್ಕಾರಕ್ಕೆ ಅನುಮತಿ ನೀಡಿತು. ಹೈಕೋರ್ಟ್ ಗ್ರೀನ್ ಸಿಗ್ನಲ್ ಅನ್ನು ಈಗ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ