
ಮುಂಬೈ: ಇತ್ತೀಚೆಗಷ್ಟೇ ಎಮ್ಮೆಗಳು ಡಿಕ್ಕಿ ಹೊಡೆದಿದ್ದರಿಂದ ಒಂದು ವಂದೇ ಭಾರತ್ ಎಕ್ಸ್ಪ್ರೆಸ್ (Vande Bharat Express) ರೈಲಿನ ಮುಂಭಾಗ ಜಖಂ ಆಗಿತ್ತು. ಇದೀಗ ಮತ್ತೊಮ್ಮೆ ಅದೇ ರೀತಿಯ ಘಟನೆಯೊಂದು ನಡೆದಿದೆ. ಹಸುವಿಗೆ ಮುಂಬೈನಿಂದ ಅಹಮದಾಬಾದ್ಗೆ ತೆರಳುತ್ತಿದ್ದ ವಂದೇ ಭಾರತ್ ರೈಲು ಡಿಕ್ಕಿ ಹೊಡೆದಿದ್ದರಿಂದ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ.
ಗುಜರಾತ್ನ ಅಟಲ್ ಸ್ಟೇಷನ್ಗೆ ತೆರಳುವಾಗ ಈ ಘಟನೆ ನಡೆದಿದೆ. ರೈಲ್ವೆ ಹಳಿ ಮೇಲೆ ನಿಂತಿದ್ದ ಹಸುವಿಗೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದ ಪರಿಣಾಮ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಈ ಘಟನೆ ನಡೆದ ನಂತರ ಕೆಲಕಾಲ ರೈಲನ್ನು ನಿಲ್ಲಿಸಲಾಯಿತು.
ಅತಿ ವೇಗದಲ್ಲಿ ಬರುತ್ತಿದ್ದ ವಂದೇ ಭಾರತ್ ರೈಲಿಗೆ ಹಸು ಡಿಕ್ಕಿ ಹೊಡೆದ ಪರಿಣಾಮ ಈ ಘಟನೆ ನಡೆದಿದೆ. ಇಂದು ವಂದೇ ಭಾರತ್ ರೈಲು ಗುಜರಾತ್ನ ವಲ್ಸಾದ್ನಿಂದ ಹಾದು ಹೋಗುತ್ತಿದ್ದಾಗ ಹಸುವೊಂದು ರೈಲಿಗೆ ಡಿಕ್ಕಿ ಹೊಡೆದಿದೆ. ಆದರೆ, ಇದರಿಂದ ಯಾವುದೇ ದೊಡ್ಡ ಅನಾಹುತ ಸಂಭವಿಸಿಲ್ಲ. ರೈಲಿನಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ. ಈ ಘಟನೆಯ ಬಳಿಕ ರೈಲು ಕೆಲಕಾಲ ಅದೇ ಸ್ಥಳದಲ್ಲಿ ನಿಂತಿತ್ತು. ಸ್ವಲ್ಪ ಸಮಯದ ನಂತರ ರೈಲನ್ನು ಮುಂದಕ್ಕೆ ಕಳುಹಿಸಲಾಯಿತು.
ಇದನ್ನೂ ಓದಿ: Vande Bharat Express: ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಎಮ್ಮೆಗಳ ಹಿಂಡಿಗೆ ಡಿಕ್ಕಿ, ಇಂಜಿನ್ನ ಮುಂಭಾಗಕ್ಕೆ ಹಾನಿ
ಗುಜರಾತ್ನಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು 1 ತಿಂಗಳಲ್ಲಿ ಮೂರನೇ ಬಾರಿಗೆ ಪ್ರಾಣಿಯೊಂದಕ್ಕೆ ಡಿಕ್ಕಿ ಹೊಡೆದಿದೆ. ಇದಕ್ಕೂ ಮೊದಲು ಈ ಹೈಸ್ಪೀಡ್ ರೈಲು ಅಕ್ಟೋಬರ್ 6ರಂದು ಗಾಂಧಿನಗರದಿಂದ ಮುಂಬೈಗೆ ಪ್ರಯಾಣಿಸುತ್ತಿದ್ದಾಗ ಆನಂದ್ ನಿಲ್ದಾಣದಲ್ಲಿ ಹಸುವಿಗೆ ಡಿಕ್ಕಿ ಹೊಡೆದು ರೈಲಿನ ಮುಂಭಾಗದ ಭಾಗವು ಹಾನಿಗೊಳಗಾಗಿತ್ತು. ಆನಂದ್ನಲ್ಲಿ ಹಸುವಿಗೆ ಡಿಕ್ಕಿ ಹೊಡೆಯುವ ಎರಡು ದಿನಗಳ ಹಿಂದೆ, ಈ ರೈಲು ಅಹಮದಾಬಾದ್ ಬಳಿಯ ವತ್ವಾದಲ್ಲಿ 4 ಎಮ್ಮೆಗಳಿಗೆ ಡಿಕ್ಕಿ ಹೊಡೆದಿತ್ತು. ಆಗಲೂ ರೈಲಿನ ಮುಂಭಾಗಕ್ಕೆ ಹಾನಿಯಾಗಿತ್ತು.
ಬಳಿಕ ಎಮ್ಮೆಗಳ ಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿತ್ತು. ಗುಜರಾತ್ನಲ್ಲಿ ಹಸುಗಳು ಮತ್ತು ಎಮ್ಮೆಗಳನ್ನು ಸಾಕುತ್ತಿರುವವರಿಗೆ ವಂದೇ ಭಾರತ್ ಎಕ್ಸ್ಪ್ರೆಸ್ನ ವೇಳಾಪಟ್ಟಿಯ ಬಗ್ಗೆ ತಿಳಿದಿಲ್ಲ ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ. ಇದೇ ಕಾರಣಕ್ಕೆ ಹಸು-ಎಮ್ಮೆಗಳ ಹಿಂಡು ಹಳಿಗಳ ಮೇಲೆ ಬಂದಿವೆ. ಈಗ ಅವರಲ್ಲಿ ಜಾಗೃತಿ ಮೂಡಿಸಲು ಅಭಿಯಾನ ಆರಂಭಿಸಲಾಗುವುದು ಎಂದಿದ್ದಾರೆ.
Published On - 1:30 pm, Sat, 29 October 22