ಹತ್ರಾಸ್ ಅತ್ಯಾಚಾರ ವರದಿಯನ್ನು ಹೈಕೋರ್ಟ್ಗೆ ನೀಡಿದ ಸಿಬಿಐ
ಹತ್ರಾಸ್ ತರಹದ ಪ್ರಕರಣಗಳಲ್ಲಿ ಸತ್ತವರ ಅಂತ್ಯಕ್ರಿಯೆಗಾಗಿ ಮಾರ್ಗಸೂಚಿ ರೂಪಿಸಲು ನಿಗದಿಪಡಿಸಿದ್ದ ಸಮಯವನ್ನು ನ್ಯಾಯಪೀಠ ತುಸು ವಿಸ್ತರಿಸಿತು.
ಲಖನೌ: ಹತ್ರಾಸ್ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ವರದಿಯನ್ನು ಅಲಹಾಬಾದ್ ಹೈಕೋರ್ಟ್ನ ಲಖನೌ ನ್ಯಾಯಪೀಠಕ್ಕೆ ನೀಡಿದ ಸಿಬಿಐ, ಡಿಸೆಂಬರ್ 10ರೊಳಗೆ ತನಿಖೆ ಮುಗಿಯಲಿದೆ ಎಂದು ತಿಳಿಸಿದೆ. ವಿಧಿ ವಿಜ್ಞಾನ ವರದಿಗಳಿಗೆ ಕಾಯುತ್ತಿರುವುದರಿಂದ ತನಿಖೆ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಎಂದು ಸಿಬಿಐ ವಕೀಲ ಅನುರಾಗ್ ಸಿಂಗ್ ಹೈಕೋರ್ಟ್ಗೆ ಸ್ಪಷ್ಟಪಡಿಸಿದ್ದಾರೆ.
ನ್ಯಾಯಮೂರ್ತಿಗಳಾದ ಪಂಕಜ್ ಮಿಥಾಲ್ ಮತ್ತು ರಾಜನ್ ರಾಯ್ ಅವರಿದ್ದ ನ್ಯಾಯಪೀಠ ವಾದವನ್ನು ಆಲಿಸಿತು.
ಹತ್ರಾಸ್ ಮ್ಯಾಜಿಸ್ಟ್ರೇಟ್ ಅವರನ್ನು ಸ್ಥಳಾಂತರಿಸದಿರುವ ರಾಜ್ಯ ಸರ್ಕಾರದ ನಿಲುವಿನ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು. ಹತ್ರಾಸ್ ಪರಿಸ್ಥಿತಿಯನ್ನು ಜಿಲ್ಲಾಧಿಕಾರಿ ಉತ್ತಮ ರೀತಿಯಲ್ಲಿ ನಿಭಾಯಿಸಿದ್ದಾರೆಂದು ಈ ಹಿಂದೆ ಅಫಿಡವಿಟ್ ಸಲ್ಲಿಸಿದ ಹಿರಿಯ ವಕೀಲ ಎಸ್.ವಿ ರಾಜು ಮತ್ತು ಹೆಚ್ಚುವರಿ ಅಡ್ವೋಕೇಟ್ ಜನರಲ್ ವಿಕೆ ಸಾಹಿ ಕೋರ್ಟ್ಗೆ ಮನವವರಿಕೆ ಮಾಡಿಕೊಡಲು ಯತ್ನಿಸಿದರು.
ಹತ್ರಾಸ್ ತರಹದ ಪ್ರಕರಣಗಳಲ್ಲಿ ಸತ್ತವರ ಅಂತ್ಯಕ್ರಿಯೆಗಾಗಿ ಮಾರ್ಗಸೂಚಿ ರೂಪಿಸಲು ನಿಗದಿಪಡಿಸಿದ್ದ ಸಮಯವನ್ನು ನ್ಯಾಯಪೀಠ ತುಸು ವಿಸ್ತರಿಸಿತು. ಡಿ.16ರಂದು ಪ್ರಕರಣದ ವಿಚಾರಣೆಯನ್ನು ಮುಂದೂಡಿತು.