ನವದೆಹಲಿ, ನವೆಂಬರ್ 10: ಬೆಂಗಳೂರು ಸೇರಿದಂತೆ ದೇಶದ ಹಲವೆಡೆ ಶುಕ್ರವಾರ ದಾಳಿ ನಡೆಸಿರುವ ಸಿಬಿಐ (CBI) ಅಧಿಕಾರಿಗಳು ಅಂತಾರಾಜ್ಯ ನಕಲಿ ಉದ್ಯೋಗ ದಂಧೆಯನ್ನು (Fake Job Racket) ಬಯಲಿಗೆಳೆದಿದ್ದು, ಮೂವರನ್ನು ಬಂಧಿಸಿದ್ದಾರೆ. ಸರಕಾರಿ ನೌಕರಿ ಕೊಡಿಸುವುದಾಗಿ ಕಳೆದ ಎರಡು ವರ್ಷಗಳಿಂದ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿದ್ದ ಆರೋಪದಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಿಹಾರದ ಪಾಟ್ನಾ, ಕರ್ನಾಟಕದ ಮಂಗಳೂರು, ಬೆಂಗಳೂರು ಮತ್ತು ಜಾರ್ಖಂಡ್ನ ಧನ್‌ಬಾದ್‌ನ ಒಂಬತ್ತು ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದೆ ಎಂದು ಅವರು ಹೇಳಿದ್ದಾರೆ.
ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಹುದ್ದೆಗಳಿಗೆ ಪರೀಕ್ಷೆಗೆ ತಯಾರಿ ನಡೆಸುತ್ತಿರುವ ಹತಾಶ ಉದ್ಯೋಗಾಕಾಂಕ್ಷಿಗಳನ್ನು ಸಂಪರ್ಕಿಸುವುದು ಈ ಆರೋಪಿಗಳ ತಂತ್ರವಾಗಿದೆ. ನಂತರ ಅವರನ್ನು ವಂಚಿಸುತ್ತಿದ್ದರು ಎಂದು ಆರೋಪಿಸಲಾಗಿದೆ.
ಎರಡು ವರ್ಷಗಳಿಂದ ಆರೋಪಿಗಳು ಕೃತ್ಯ ಎಸಗುತ್ತಿದ್ದು, ಸರ್ಕಾರಿ ನೌಕರಿ ನೀಡುವುದಾಗಿ ಭರವಸೆ ನೀಡಿ ಆಕಾಂಕ್ಷಿಗಳಿಂದ ಕೋಟ್ಯಂತರ ರೂಪಾಯಿ ವಸೂಲಿ ಮಾಡಿರುವುದು ಶೋಧದ ವೇಳೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ₹ 41 ಕೋಟಿ ಬೆಲೆಯ ಜಮೀನು ₹ 353 ಕೋಟಿಗೆ ಮಾರಾಟ ಮಾಡಿದ ದೆಹಲಿ ಅಧಿಕಾರಿ ವಿರುದ್ಧ ಭ್ರಷ್ಟಾಚಾರ ಆರೋಪ
ಆರೋಪಿಗಳು ಭರವಸೆ ನೀಡಿದ ಸರ್ಕಾರಿ ಉದ್ಯೋಗಗಳಿಗೆ ಆಕಾಂಕ್ಷಿಗಳು 10-15 ಲಕ್ಷ ರೂಪಾಯಿಗಳನ್ನು ನೀಡಬೇಕಾಗಿತ್ತು ಎಂದು ಅವರು ಹೇಳಿದ್ದಾರೆ. ದಂಧೆಯ ಆರೋಪಿಗಳು ಅನೇಕ ನಗರಗಳಲ್ಲಿ ಆಕಾಂಕ್ಷಿಗಳಿಗೆ ನಕಲಿ ತರಬೇತಿ ಶಿಬಿರಗಳನ್ನು ನಡೆಸಿದ್ದರು ಮತ್ತು ಇಬ್ಬರು ಪಾಟ್ನಾ ಮತ್ತು ಮುಂಬೈನ ಸಕಿನಾಕಾದಲ್ಲಿ ಕೃತ್ಯ ಎಸಗಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ