ಚುನಾವಣೆ ಹೊಸಿಲಲ್ಲಿ ಫೀಲ್ಡ್​ಗೆ ಇಳಿದ ಸಿಬಿಐ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಗೆ ನೋಟಿಸ್​

|

Updated on: Feb 21, 2021 | 4:36 PM

ವೆಸ್ಟರ್ನ್​ ಕೋಲ್​ಫೀಲ್ಡ್​ ಲಿಮಿಟೆಡ್​ ಕಂಪನಿಯ ನಿರ್ವಹಣೆಯಡಿ ಬರುವ ಹಲವಾರು ಗಣಿಗಳಿಂದ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಕಳವು ಮಾಡಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.

ಚುನಾವಣೆ ಹೊಸಿಲಲ್ಲಿ ಫೀಲ್ಡ್​ಗೆ ಇಳಿದ ಸಿಬಿಐ; ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಂಬಂಧಿ ಅಭಿಷೇಕ್​ ಬ್ಯಾನರ್ಜಿಗೆ ನೋಟಿಸ್​
ಅಭಿಷೇಕ್​ ಬ್ಯಾನರ್ಜಿ
Follow us on

ಕೋಲ್ಕತ್ತ: ಪಶ್ಚಿಮ ಬಂಗಾಳದ ಚುನಾವಣೆ (west bengal assembly election 2021) ಗೆ ಒಂದೆರಡು ತಿಂಗಳಷ್ಟೇ ಬಾಕಿ ಇರುವಾಗ ಸಿಎಂ ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್​ ಬ್ಯಾನರ್ಜಿಯವರಿಗೆ ಕಲ್ಲಿದ್ದಲು ಸ್ಮಗ್ಲಿಂಗ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ (CBI) ನೋಟಿಸ್​ ನೀಡಿದ್ದು, ಕೂಡಲೇ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. ಅವರ ಪತ್ನಿಗೂ ಸಹ ಸಮನ್ಸ್ ನೀಡಲಾಗಿದೆ. ಅಲ್ಲದೆ, ಸಿಬಿಐ ಅಧಿಕಾರಿಗಳು ದಕ್ಷಿಣ ಕೋಲ್ಕತ್ತದಲ್ಲಿರುವ ಅಭಿಷೇಕ್​ ಬ್ಯಾನರ್ಜಿಯವರ ಮನೆಗೇ ಹೋಗಿ ನೋಟಿಸ್​ ನೀಡಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಕಲ್ಲಿದ್ದಲು ಸ್ಮಗ್ಲಿಂಗ್ ಪ್ರಕರಣದ ತನಿಖೆ ಕಳೆದ ವರ್ಷ ಸೆಪ್ಟೆಂಬರ್​ನಿಂದ ಶುರುವಾಗಿದೆ.

ವೆಸ್ಟರ್ನ್​ ಕೋಲ್​ಫೀಲ್ಡ್​ ಲಿಮಿಟೆಡ್​ ಕಂಪನಿಯ ನಿರ್ವಹಣೆಯಡಿ ಬರುವ ಹಲವಾರು ಗಣಿಗಳಿಂದ ಹಲವು ಸಾವಿರ ಕೋಟಿ ರೂಪಾಯಿ ಮೌಲ್ಯದ ಕಲ್ಲಿದ್ದಲನ್ನು ಕಳವು ಮಾಡಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಡಿ ಸಿಬಿಐ ಡಿಸೆಂಬರ್ 31ರಂದು ತೃಣಮೂಲ ಕಾಂಗ್ರೆಸ್ ಯುವ ನಾಯಕ ವಿನಯ್ ಮಿಶ್ರಾ ಮತ್ತು ಉದ್ಯಮಿಗಳಾದ ಅಮಿತ್ ಸಿಂಗ್​, ನೀರಜ್​ ಸಿಂಗ್​ ನಿವಾಸದ ಮೇಲೆ ದಾಳಿ ನಡೆಸಿತ್ತು. ನೋಟಿಸ್​ ಕೂಡ ನೀಡಿತ್ತು. ಅಲ್ಲದೆ, ಡಿಸೆಂಬರ್ ಪ್ರಾರಂಭದಲ್ಲಿ ಕೋಲ್ಕತ್ತ ಮೂಲದ ಚಾರ್ಟರ್ಡ್​ ಅಕೌಂಟೆಂಟ್​ ಗಣೇಶ್​ ಬಗೇರಿಯಾ ಮನೆ ಹಾಗೂ ಕಚೇರಿಯ ಮೇಲೆ ಕೂಡ ಸಿಬಿಐ ದಾಳಿಯಾಗಿತ್ತು. ಈ ದಂಧೆಯಲ್ಲಿ ಟಿಎಂಸಿ ಯುವ ಮುಖಂಡ, ಸಿಎಂ ಮಮತಾ ಬ್ಯಾನರ್ಜಿಯವರ ಸೋದರಳಿಯ ಅಭಿಷೇಕ್ ಬ್ಯಾನರ್ಜಿ ಪಾತ್ರವೂ ಇದೆ. ಅವರೂ ಸಹ ತುಂಬ ಲಾಭ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿತ್ತು.

ಅಮಿತ್​ ಶಾಗೆ ಸಮನ್ಸ್​​ ಹೋದ ಒಂದೇ ದಿನದಲ್ಲಿ ನೋಟಿಸ್​!
ಈ ಅಕ್ರಮ ಕಲ್ಲಿದ್ದಲು ಮಾರಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಕಳೆದ ಎರಡು ದಿನಗಳ ಹಿಂದೆ 5 ಜಿಲ್ಲೆಗಳ 13 ಪ್ರದೇಶಗಳ ಮೇಲೆ ದಾಳಿ ನಡೆಸಿ, ಪರಿಶೀಲನೆ ನಡೆಸಿತ್ತು. ಇದೀಗ ಅಭಿಷೇಕ್​ ಬ್ಯಾನರ್ಜಿಯವರಿಗೆ ನೋಟಿಸ್ ನೀಡಿದೆ. 2018ರ ಆಗಸ್ಟ್​ನಲ್ಲಿ ಕೋಲ್ಕತ್ತದಲ್ಲಿರ‍್ಯಾಲಿಯಲ್ಲಿ ಅಮಿತ್ ಶಾ ಭಾಷಣ ಮಾಡಿದ ವೇಳೆ ತಮ್ಮ ಮೇಲೆ ಸುಳ್ಳು ಆರೋಪ ಹೊರಿಸಿದ್ದಾರೆ ಎಂದು ಅಭಿಷೇಕ್​ ಬ್ಯಾನರ್ಜಿಯವರು ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಈ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಸಂಬಂಧಪಟ್ಟಂತೆ ಫೆ.22ರ ಬೆಳಗ್ಗೆ 10ಗಂಟೆಗೆ ವೈಯಕ್ತಿಕವಾಗಿಯಾದರೂ ಅಥವಾ ವಕೀಲರ ಮೂಲಕವಾದರೂ ಹಾಜರಾಗಬೇಕು ಎಂದು ನಿನ್ನೆ (ಫೆ.20)ರಂದು ಪಶ್ಚಿಮಬಂಗಾಳದ ನಿಯೋಜಿತ ಸಂಸದ/ಶಾಸಕರ ನ್ಯಾಯಾಲಯ ಅಮಿತ್​ ಶಾ ಅವರಿಗೆ ಸಮನ್ಸ್​ ನೀಡಿದೆ. ಅದಾದ ಒಂದೇ ದಿನದಲ್ಲಿ ಅಭಿಷೇಕ್​ ಬ್ಯಾನರ್ಜಿಯವರಿಗೆ ಸಿಬಿಐ ನೋಟಿಸ್​ ನೀಡಿದೆ.

ಮಮತಾ ಬ್ಯಾನರ್ಜಿಯವರು ಕೇಂದ್ರ ಸರ್ಕಾರದ ವಿರುದ್ಧ ಸದಾ ಇದೇ ವಿಚಾರಕ್ಕೆ ವಾಗ್ದಾಳಿ ನಡೆಸುತ್ತಿರುತ್ತಾರೆ. ಯಾವುದೇ ಚುನಾವಣೆ ಬರಲಿ, ಬಿಜೆಪಿ ಕೇಂದ್ರ ಸರ್ಕಾರ ತನಿಖಾ ದಳಗಳಿಂದ ದಾಳಿ ಮಾಡಿಸುತ್ತದೆ. ಈ ಮೂಲಕ ಚುನಾವಣೆ ಗೆಲ್ಲಲು ನೋಡುತ್ತದೆ ಎಂದು ಹಿಂದೆಯೂ ಅನೇಕ ಬಾರಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ರಾಜಕೀಯ ವೈಷಮ್ಯವೇ ಕಾರಣ: ರೈಲ್ವೆ ಅಧಿಕಾರಿ