ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ರಾಜಕೀಯ ವೈಷಮ್ಯವೇ ಕಾರಣ: ರೈಲ್ವೆ ಅಧಿಕಾರಿ

West Bengal Minister Jakir Hossain Attacked: ಸಚಿವ ಜಕೀರ್ ಹುಸೇನ್ ಮೇಲಿನ ಬಾಂಬ್ ದಾಳಿಯು ಬೇರೆ ಪಕ್ಷಕ್ಕೆ ಹೋಗುವಂತೆ ಅವರ ಮೇಲೆ ಒತ್ತಡ ಹೇರಲಿರುವ ಕೆಲವು ವ್ಯಕ್ತಿಗಳ ಸಂಚು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

  • TV9 Web Team
  • Published On - 11:55 AM, 20 Feb 2021
ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿಗೆ ರಾಜಕೀಯ ವೈಷಮ್ಯವೇ ಕಾರಣ: ರೈಲ್ವೆ ಅಧಿಕಾರಿ
ಸಚಿವ ಜಕೀರ್ ಹುಸೇನ್

ದೆಹಲಿ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ನಿಮಿತಿತಾ ರೈಲು ನಿಲ್ದಾಣದಲ್ಲಿ ಬುಧವಾರ ಸಂಜೆ ರೈಲಿಗೆ ಕಾಯುತ್ತಿದ್ದ ವೇಳೆ ಪಶ್ಚಿಮ ಬಂಗಾಳದ ಸಚಿವ ಜಕೀರ್ ಹುಸೇನ್ ಮೇಲೆ ಕಚ್ಚಾ ಬಾಂಬ್ ದಾಳಿ ನಡೆದಿತ್ತು. ಈ ಬಾಂಬ್ ದಾಳಿಯಲ್ಲಿ ಜಕೀರ್ ಹುಸೇನ್ ಗಂಭೀರ ಗಾಯಗೊಂಡಿದ್ದು, ಟಿಎಂಸಿ ಪಕ್ಷದ ಮೇಲಿನ ರಾಜಕೀಯ ವೈಷಮ್ಯವೇ ಇದಕ್ಕೆ ಕಾರಣ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಟಿಎಂಸಿ ಪಕ್ಷದೊಳಗಿನ ವೈಷಮ್ಯ ಅಥವಾ ಆಡಳಿತಾರೂಢ ಪಕ್ಷ ಮತ್ತು ಸಿಪಿಐ ನಡುವಿನ ರಾಜಕೀಯ ದ್ವೇಷವೇ ಈ ಘಟನೆಗೆ ಕಾರಣವಾಗಿರಬಹುದು ಎಂದು ರೈಲ್ವೆ ಅಧಿಕಾರಿ ಹೇಳಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಸಿಪಿಐ ಕಳೆದ ವಾರ ನಬನ್ನಾ ಬಳಿ ಪ್ರತಿಭಟನೆ ನಡೆಸಿದ್ದು, ಗುಂಪು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದ್ದರು. ಈ ಪ್ರತಿಭಟನೆಯಲ್ಲಿ ಸಿಪಿಐ ಸದಸ್ಯರೊಬ್ಬರಿಗೆ ಗಂಭೀರ ಗಾಯವಾಗಿದ್ದು ಆ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿತ್ತು. ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಗುರುವಾರ 11 ಗಂಟೆಗೆ ಸಿಪಿಐ ರೈಲು ತಡೆ ಚಳವಳಿ ನಡೆಸಿತ್ತು.

ಟಿಎಂಸಿ ಪಕ್ಷದೊಳಗೆ ಆಂತರಿಕ ಕಲಹ?
ಟಎಂಸಿ ಪಕ್ಷದಲ್ಲಿಯೇ ಆಂತರಿಕ ಕಲಹ ನಡೆಯುತ್ತಿದೆ ಎಂಬ ಸುದ್ದಿಯೂ ಕೇಳಿ ಬಂದಿದೆ. ಇಬ್ಬರು ಟಿಎಂಸಿ ಸದಸ್ಯರು ಕೊಲೆ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಜಕೀರ್ ಹುಸೇನ್ 2017ರಲ್ಲಿ ಪೊಲೀಸ್ ದೂರು ನೀಡಿದ್ದರು ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

ಪ್ರಾಥಮಿಕ ವರದಿ ಪ್ರಕಾರ ಟಿಎಂಸಿ ಮತ್ತು ಸಿಪಿಐ ನಡುವಿನ ದ್ವೇಷ ಇಲ್ಲವೇ ಟಿಎಂಸಿ ಸದಸ್ಯರ ನಡುವಿನ ಆಂತರಿಕ ಕಲಹವೇ ಬಾಂಬ್ ದಾಳಿಗೆ ಕಾರಣ. ಈ ಬಾಂಬ್ ದಾಳಿ ಮೂಲಕ ರೈಲು ಸಂಚಾರಕ್ಕೆ ಅಡ್ಡಿ ಪಡಿಸಿ ಸಾರ್ವಜನಿಕರಿಗೆ ತೊಂದರೆಯುಂಟುಮಾಡುವುದು ಅವರ ಉದ್ದೇಶವಾಗಿರಬಹುದು ಎಂದು ಅಧಿಕಾರಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಸಚಿವ ಜಕೀರ್ ಹುಸೇನ್ ಮೇಲಿನ ಬಾಂಬ್ ದಾಳಿಯು ಬೇರೆ ಪಕ್ಷಕ್ಕೆ ಹೋಗುವಂತೆ ಅವರ ಮೇಲೆ ಒತ್ತಡ ಹೇರಲಿರುವ ಕೆಲವು ವ್ಯಕ್ತಿಗಳ ಸಂಚು ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. ಬಾಂಬ್ ದಾಳಿಯಲ್ಲಿ ಗಾಯಗೊಂಡ ಜಕೀರ್ ಅವರನ್ನು ಮಮತಾ ಬ್ಯಾನರ್ಜಿ ಎಸ್ಎಸ್​ಕೆಎಂ ಆಸ್ಪತ್ರೆಯಲ್ಲಿ ಭೇಟಿ ಮಾಡಿದ್ದು, ರೈಲ್ವೆ ಇಲಾಖೆ ವಿರುದ್ಧ ಗುಡುಗಿದ್ದಾರೆ. ಜಕೀರ್ ಹುಸೇನ್ ಅವರ ಮೇಲೆ ನಡೆದ ದಾಳಿ ಪೂರ್ವ ನಿಯೋಜಿತ. ಈ ಬಾಂಬ್ ದಾಳಿ ರಿಮೋಟ್ ಕಂಟ್ರೋಲ್​ನಲ್ಲಿ ಮಾಡಿದ್ದು ಎಂದು ಕೆಲವರು ಆರೋಪಿಸಿದ್ದಾರೆ. ಇದೊಂದು ಸಂಚು. ಕೆಲವು ಜನರು (ಪಕ್ಷ) ಕಳೆದ ಕೆಲವು ತಿಂಗಳಿನಿಂದ ಬೇರೆ ಪಕ್ಷಕ್ಕೆ ಹೋಗುವಂತೆ ಜಕೀರ್ ಹುಸೇನ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ನಾನು ಹೆಚ್ಚಿಗೇನು ಹೇಳಲಾರೆ ಎಂದು ಮಾಧ್ಯಮದವರೊಂದಿಗೆ ಮಾತನಾಡಿದ ಮಮತಾ ಬ್ಯಾನರ್ಜಿ ಹೇಳಿದ್ದರು. ಸಚಿವ ಜಕೀರ್ ಹುಸೇನ್ ಮೇಲಿನ ಬಾಂಬ್ ದಾಳಿ ಬಗ್ಗೆ ತನಿಖೆಯನ್ನು ಸಿಐಡಿ ನಡೆಸುತ್ತಿದೆ.

ದಾಳಿ ಖಂಡಿಸಿದ ರೈಲ್ವೆ
ಸಚಿವರ ಮೇಲಿನ ದಾಳಿಯನ್ನು ಖಂಡಿಸಿದ ರೈಲ್ವೆ ಇಲಾಖೆ ಘಟನೆ ನಡೆದ ತಕ್ಷಣವೇ ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದೇವೆ ಎಂದಿದೆ. ರಾಜ್ಯದ ಕಾನೂನು ವ್ಯವಸ್ಥೆಯು ರಾಜ್ಯದ ಹೊಣೆಗಾರಿಕೆಯಾಗಿದ್ದು, ರಾಜ್ಯ ಪೊಲೀಸರು ಇದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳಬೇಕಾಗುತ್ತದೆ. ರೈಲ್ವೆ ಪ್ಲಾಟ್ ಫಾರಂಗಳಲ್ಲಿನ ಸುರಕ್ಷತೆಯು ಸರ್ಕಾರದ ರೈಲ್ವೆ ಪೊಲೀಸ್ (ಜಿಆರ್​ಪಿ) ಪಡೆಯದ್ದಾಗಿದೆ. ಈ ಘಟನೆಯಲ್ಲಿ 25 ಮಂದಿ ಗಾಯಗೊಂಡಿದ್ದಾರೆ. ಈ ಪೈಕಿ 10 ಮಂದಿಯನ್ನು ಕೊಲ್ಕತ್ತಾದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ.

 ಇದನ್ನೂ ಓದಿ:  West Bengal Election 2021: ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ಐದು ರೂಪಾಯಿ ಊಟ, ‘ಮಾ’ ಯೋಜನೆ ಜಾರಿಗೆ ತಂದ ಮಮತಾ