ಟಿಎಂಸಿ ಸಚಿವರ ಮೇಲೆ ಕಚ್ಚಾಬಾಂಬ್ ದಾಳಿ: ‘ಪಕ್ಷವೊಂದು ಜಾಕೀರ್​ ಹುಸೇನ್​ ಮೇಲೆ ತುಂಬ ಒತ್ತಡ ಹೇರುತ್ತಿತ್ತು..’ ಎಂದ ಮಮತಾ ಬ್ಯಾನರ್ಜಿ

ಟಿಎಂಸಿ ಸಚಿವರ ಮೇಲೆ ಕಚ್ಚಾಬಾಂಬ್ ದಾಳಿ: ‘ಪಕ್ಷವೊಂದು ಜಾಕೀರ್​ ಹುಸೇನ್​ ಮೇಲೆ ತುಂಬ ಒತ್ತಡ ಹೇರುತ್ತಿತ್ತು..’ ಎಂದ ಮಮತಾ ಬ್ಯಾನರ್ಜಿ
ಜಾಕೀರ್​ ಹುಸೇನ್​ ಮತ್ತು ಮಮತಾ ಬ್ಯಾನರ್ಜಿ

ಬುಧವಾರ ರಾತ್ರಿ ನಡೆದ ಕಚ್ಚಾ ಬಾಂಬ್​ ದಾಳಿಯ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಪಶ್ಚಿಮ ಬಂಗಾಳದ ಸಿಐಡಿ ತಂಡ ಗುರುವಾರ ಬೆಳಗ್ಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

Lakshmi Hegde

|

Feb 18, 2021 | 6:05 PM

ಕೋಲ್ಕತ್ತ: ಪಶ್ಚಿಮ ಬಂಗಾಳ (West Bengal) ದಲ್ಲಿ ಚುನಾವಣಾ (West Bengal Assembly Election)  ಸನ್ನಿವೇಶ ಇದೆ. ದಿನದಿನಕ್ಕೂ ರಾಜಕೀಯ ಪ್ರಮುಖರ ಪ್ರಚಾರ ಸಭೆ, ರ‍್ಯಾಲಿಗಳು ನಡೆಯುತ್ತಿವೆ. ಹೀಗಿರುವ ನಿನ್ನೆ ರಾತ್ರಿ ನಡೆದ ಘಟನೆಯೊಂದು ಆತಂಕಕ್ಕೆ ಕಾರಣವಾಗಿದೆ. ಬುಧವಾರ ರಾತ್ರಿ ಮುರ್ಷಿದಾಬಾದ್​ನ ರೈಲ್ವೆ ನಿಲ್ದಾಣದಲ್ಲಿ ಕೋಲ್ಕತ್ತಕ್ಕೆ ತೆರಳಲು ರೈಲಿಗಾಗಿ ಕಾಯುತ್ತಿದ್ದ ಟಿಎಂಸಿ ಸಚಿವ ಜಾಕಿರ್​ ಹುಸ್ಸೇನ್​​ರನ್ನು ಗುರಿಯಾಗಿಸಿಕೊಂಡು ಅಪರಿಚಿತರು ಕಚ್ಚಾಬಾಂಬ್ ದಾಳಿ ನಡೆಸಿದ್ದಾರೆ. ಈ ಘಟನೆಯನ್ನು ಖಂಡಿಸಿರುವ ಮಮತಾ ಬ್ಯಾನರ್ಜಿ (Mamata Banerjee), ಬಿಜೆಪಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಇದೊಂದು ಪಿತೂರಿ ಎಂದು ಆರೋಪಿಸಿದ್ದಾರೆ.

ತಮ್ಮ ಪಕ್ಷಕ್ಕೆ ಬರುವಂತೆ ಜಾಕೀರ್ ಹುಸೇನ್​ ಮೇಲೆ ಕೆಲವರು ತುಂಬ ಒತ್ತಡ ಹೇರುತ್ತಿದ್ದರು ಎಂದು ಹೇಳಿದ ಮಮತಾ ಬ್ಯಾನರ್ಜಿ, ಈ ಘಟನೆಯನ್ನು 1990ರಲ್ಲಿ ನಡೆದ, ಪಂಜಾಬ್​​ನ ಅಂದಿನ ಮುಖ್ಯಮಂತ್ರಿ ಬೀಂತ್​​ ಸಿಂಗ್​ ಹತ್ಯೆಗೆ ಹೋಲಿಸಿದ್ದಾರೆ. ಇದು ರೈಲ್ವೆ ನಿಲ್ದಾಣದ ಆವರಣದಲ್ಲಿ ನಡೆದ ಘಟನೆಯಾಗಿದ್ದರಿಂದ ಭಾರತೀಯ ರೈಲ್ವೆ ಇದರ ಸಂಪೂರ್ಣ ಜವಾಬ್ದಾರಿ ಹೊರಬೇಕು ಎಂದು ಆಗ್ರಹಿಸಿದ್ದಾರೆ.

ಜಾಕೀರ್​ ಹುಸೇನ್​ ಅವರು ದೊಡ್ಡ ಉದ್ಯಮಿ. ಸರಿಯಾಗಿ ಯೋಜನೆ ರೂಪಿಸಿಯೇ ಅವರ ಮೇಲೆ ಬಾಂಬ್​ ದಾಳಿ ನಡೆಸಲಾಗಿದೆ. ಇದು ಪಂಜಾಬ್​ನ ಮಾಜಿ ಮುಖ್ಯಮಂತ್ರಿ ಬೀಂತ್​ ಸಿಂಗ್​ ಹತ್ಯೆಯನ್ನು ನೆನಪಿಸುವಂತಿದೆ. ನನಗೆ ಗೊತ್ತು ಕಳೆದ ಕೆಲವು ತಿಂಗಳಿನಿಂದಲೂ ಅವರ ಮೇಲೆ ಕೆಲವರು ತಮ್ಮ ಪಕ್ಷಕ್ಕೆ ಸೇರುವಂತೆ ಒತ್ತಡ ಹೇರುತ್ತಿದ್ದರು. ಆದರೆ ಈಗ ಪ್ರಕರಣದ ತನಿಖೆ ನಡೆಯುತ್ತಿರುವ ಕಾರಣ ನಾನು ಹೆಚ್ಚೇನೂ ಹೇಳುವುದಿಲ್ಲ ಎಂದು ಮಾಧ್ಯಮಗಳಿಗೆ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದಾರೆ. ಹಾಗೇ, ಈ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರಿಗೆ 5 ಲಕ್ಷ ರೂ.ಪರಿಹಾರ ನೀಡುವುದಾಗಿ ಮತ್ತು ಕಡಿಮೆ ಪ್ರಮಾಣದಲ್ಲಿ ಗಾಯಗೊಂಡವರಿಗೆ 1 ಲಕ್ಷ ರೂ.ನೀಡುವುದಾಗಿ ಘೋಷಿಸಿದ್ದಾರೆ.

ಘಟನೆಯ ಸಂಪೂರ್ಣ ತನಿಖೆಯಾಗಬೇಕು. ಇದನ್ನು ಹತ್ತಿಕ್ಕಲು ನಮ್ಮ ಸರ್ಕಾರ ಬಿಡುವುದಿಲ್ಲ. ರೈಲ್ವೆ ನಿಲ್ದಾಣದಲ್ಲಿ ಲೈಟ್​ ಯಾಕಿಲ್ಲ ಎಂಬುದೇ ನನಗೆ ಅರ್ಥವಾಗುತ್ತಿಲ್ಲ. ಹಾಗೇ, ಅಲ್ಲಿ ಆ ಹೊತ್ತಲ್ಲಿ ಯಾವುದೇ ಅಧಿಕಾರಿಗಳೂ ಇರಲಿಲ್ಲವಾ? ಅಲ್ಲಿ ಭದ್ರತೆ ಇಲ್ಲವಾ ಎಂದೂ ಪ್ರಶ್ನಿಸಿದ್ದಾರೆ. ಹಾಗೇ, ಜಾಕೀರ್​ ಹುಸೇನ್ ದಾಖಲಾಗಿರುವ ಕೋಲ್ಕತ್ತದ ಎಸ್​ಎಸ್​ಕೆಎಂ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಜಾಕೀರ್​ ಹುಸೇನ್​ ಇನ್ನೂ ವೆಂಟಿಲೇಟರ್​ನಲ್ಲಿಯೇ ಇದ್ದಾರೆ.

ತನಿಖೆ ಶುರು ಮಾಡಿದ ಸಿಐಡಿ ಬುಧವಾರ ರಾತ್ರಿ ನಡೆದ ಕಚ್ಚಾ ಬಾಂಬ್​ ದಾಳಿಯ ತನಿಖೆಯನ್ನು ಸಿಐಡಿ ಕೈಗೆತ್ತಿಕೊಂಡಿದೆ. ಪಶ್ಚಿಮ ಬಂಗಾಳದ ಸಿಐಡಿ ತಂಡ ಗುರುವಾರ ಬೆಳಗ್ಗೆ ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡಿದ್ದು, ಅದರಲ್ಲಿ 12 ಜನರನ್ನು ಕೋಲ್ಕತ್ತ ಆಸ್ಪತ್ರೆಗಳಿಗೆ ಸ್ಥಳಾಂತರ ಮಾಡಲಾಗಿದೆ.

ಮುರ್ಷಿದಾಬಾದ್​ನಲ್ಲಿ ಏನಾಯಿತು? ಮುರ್ಷಿದಾಬಾದ್​​ನ ನಿಮ್ತಿತಾ ರೈಲ್ವೆ ನಿಲ್ದಾಣದ ಪ್ಲಾಟ್​ ಫಾರಂನಲ್ಲಿ ಬುಧವಾರ ರಾತ್ರಿ 10 ಗಂಟೆ ಹೊತ್ತಿಗೆ ಟಿಎಂಸಿ ಸಚಿವ ಜಾಕಿರ್ ಹುಸೇನ್​ ಸೇರಿ ಹಲವರು ಕೋಲ್ಕತ್ತ ರೈಲಿಗಾಗಿ ಕಾಯುತ್ತಿದ್ದರು. ಈ ವೇಳೆ ಅಪರಿಚಿತರು ಸಚಿವರನ್ನು ಗುರಿಯಾಗಿಸಿಕೊಂಡು ಕಚ್ಚಾ ಬಾಂಬ್​ ಎಸೆದಿದ್ದಾರೆ. ಸಚಿವರ ಒಂದು ಕಾಲು ಮತ್ತು ಕೈಯಿಗೆ ಗಂಭೀರ ಗಾಯವಾಗಿದೆ ಎಂದು ವೈದ್ಯರು ಹೆಲ್ತ್​ ಬುಲೆಟಿನ್​ನಲ್ಲಿ ತಿಳಿಸಿದ್ದಾರೆ. ಆದರೆ ಈ ದಾಳಿಗೆ ರಾಜಕೀಯ ದ್ವೇಷವೇ ಕಾರಣ ಎಂದು ಟಿಎಂಸಿ ಪ್ರತಿಪಾದಿಸಿದೆ. ಕಾಂಗ್ರೆಸ್​ ಅಥವಾ ಬಿಜೆಪಿ ಕೈವಾಡ ಇರಬಹುದು ಎಂದು ಮುರ್ಷಿದಾಬಾದ್​ ಟಿಎಂಸಿ ಅಧ್ಯಕ್ಷ ಅಬು ತಾಹೀರ್​ ಖಾನ್ ತಿಳಿಸಿದ್ದಾರೆ.

ಇದು ಪಕ್ಷದ ಆಂತರಿಕ ದ್ವೇಷದಿಂದಾದ ದುರ್ಘಟನೆ ಎಂದು ಮುರ್ಷಿದಾಬಾದ್ ಜಿಲ್ಲಾ ಪರಿಷತ್ ಸಭಾಧಿಪತಿ ಮುಷರಫ್​ ಹುಸೇನ್​ ಪ್ರತಿಪಾದಿಸಿದ್ದಾರೆ. ಇವರು ಇತ್ತೀಚೆಗಷ್ಟೇ ಟಿಎಂಸಿಯಿಂದ ಉಚ್ಚಾಟಿತರಾದವರು. ಹಾಗೇ, ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಬಂಗಾಳ ಉಸ್ತುವಾರಿಯೂ ಆಗಿರುವ ಕೈಲಾಶ್​ ವಿಜಯ್​ ವರ್ಗಿಯಾ, ದಾಳಿಯನ್ನು ಖಂಡಿಸಿದ್ದು, ಜಾಕೀರ್ ಹುಸೇನ್​ ಶೀಘ್ರವೇ ಗುಣಮುಖರಾಗಲಿ ಎಂದು ಹಾರೈಸಿದ್ದಾರೆ. ಪಶ್ಚಿಮಬಂಗಾಳ ಯಾರಿಗೂ ಸುರಕ್ಷಿತವಲ್ಲ. ಇಲ್ಲಿ ಸಚಿವರಿಗೂ ರಕ್ಷಣೆಯಿಲ್ಲ ಎಂಬುದು ಸಾಬೀತಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್​ ಆತಂಕ ವ್ಯಕ್ತಪಡಿಸಿದ್ದಾರೆ.

ಪಶ್ಚಿಮ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಪ್ರತಿಕ್ರಿಯಿಸಿ, ಜಾಕೀರ್​ ಹುಸೇನ್​ ಮುರ್ಷಿದಾಬಾದ್​ನ ಉಳಿದ ನಾಯಕರಂತೆ ಅಲ್ಲ. ಅವರು ತುಂಬ ಪ್ರಾಮಾಣಿಕ ನಾಯಕ. ನನಗೆ ವೈಯಕ್ತಿಕವಾಗಿ ಅವರ ಪರಿಚಯ ಇದೆ. ಆದಷ್ಟು ಶೀಘ್ರವೇ ಆರೋಪಿಗಳನ್ನು ಬಂಧಿಸಿ ಎಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: Amit Shah: ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ಮೀಸಲಾತಿ: ಪಶ್ಚಿಮ ಬಂಗಾಳ ರ‍್ಯಾಲಿಯಲ್ಲಿ ಅಮಿತ್ ಶಾ

Follow us on

Most Read Stories

Click on your DTH Provider to Add TV9 Kannada