Amit Shah: ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ಮೀಸಲಾತಿ: ಪಶ್ಚಿಮ ಬಂಗಾಳ ರ‍್ಯಾಲಿಯಲ್ಲಿ ಅಮಿತ್ ಶಾ

ಈ ಬಾರಿಯ ವಿಧಾನಸಭೆ ಚುನಾವಣೆಯ ಹೋರಾಟ ಬೂತ್​ ಮಟ್ಟದ ನಮ್ಮ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳದ ಟಿಎಂಸಿಯ ದೊಡ್ಡ ನಾಯಕರ ನಡುವೆ ನಡೆಯಲಿದೆ ಎಂದು ನುಡಿದರು.

Amit Shah: ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ಮೀಸಲಾತಿ: ಪಶ್ಚಿಮ ಬಂಗಾಳ ರ‍್ಯಾಲಿಯಲ್ಲಿ ಅಮಿತ್ ಶಾ
ಪಶ್ಚಿಮ ಬಂಗಾಳದಲ್ಲಿ ಅಮಿತ್ ಶಾ. ಕೊಲ್ಕತ್ತಾದ ಭಾರತ ಸೇವಾಶ್ರಮ ಸಂಘ ಆಶ್ರಮದಲ್ಲಿ ಸ್ವಾಮಿ ಪ್ರಣವಾನಂದ ಸ್ವಾಮೀಜಿ ಗದ್ದುಗೆಗೆ ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ನಮನ ಸಲ್ಲಿಸಿದರು.
Follow us
Ghanashyam D M | ಡಿ.ಎಂ.ಘನಶ್ಯಾಮ
| Updated By: Lakshmi Hegde

Updated on:Feb 18, 2021 | 3:45 PM

ಕೊಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಶೇ 33 ಮೀಸಲಾತಿ, ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ, ಅಂಫನ್ ಚಂಡಮಾರುತ ಪರಿಹಾರ ಕಾಮಗಾರಿಗಳಲ್ಲಿ ನಡೆದಿರುವ ಅಕ್ರಮಗಳ ಸಮಗ್ರ ತನಿಖೆ ನಡೆಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು. 24 ದಕ್ಷಿಣ ಪರಗಣ ಜಿಲ್ಲೆಯ ಕಾಕದ್ವೀಪದಲ್ಲಿ ಬಿಜೆಪಿಯ 5ನೇ ಮತ್ತು ಅಂತಿಮ ಪರಿವರ್ತನಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಸೋನಾರ್ ಬಾಂಗ್ಲಾ’ ಕನಸಿನ ಸಾಕಾರಕ್ಕಾಗಿ ಬಿಜೆಪಿ ಶ್ರಮಿಸುತ್ತಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯ ಹೋರಾಟ ಬೂತ್​ ಮಟ್ಟದ ನಮ್ಮ ಕಾರ್ಯಕರ್ತರು ಹಾಗೂ ಪಶ್ಚಿಮ ಬಂಗಾಳದ ಟಿಎಂಸಿಯ ದೊಡ್ಡ ನಾಯಕರ ನಡುವೆ ನಡೆಯಲಿದೆ ಎಂದು ನುಡಿದರು.

ಮಮತಾ ಬ್ಯಾನರ್ಜಿ ಸರ್ಕಾರವನ್ನು ತೆರವುಗೊಳಿಸಿ ಆ ಜಾಗದಲ್ಲಿ ಬಿಜೆಪಿ ಸರ್ಕಾರ ತರುವುದಷ್ಟೇ ನಮ್ಮ ಉದ್ದೇಶವಲ್ಲ. ಪಶ್ಚಿಮ ಬಂಗಾಳದ ಒಟ್ಟಾರೆ ಪರಿಸ್ಥಿತಿ ಬದಲಿಸಬೇಕು. ಬಡವರು, ಮಹಿಳೆಯರ ಬದುಕಿನಲ್ಲಿ ಬದಲಾವಣೆ ತರುವುದು ನಮ್ಮ ಉದ್ದೇಶ. ಬಂಗಾಳದಲ್ಲಿ ಅಧಿಕಾರದ ಬದಲಾವಣೆಯ ಬಗ್ಗೆ ನಾವು ಮಾತನಾಡುತ್ತಿಲ್ಲ. ಗಂಗಾಸಾಗರಕ್ಕೆ ಗೌರವ ತರುವ ಬಗ್ಗೆ, ಇಲ್ಲಿನ ಮೀನುಗಾರರ ಬದುಕಿನಲ್ಲಿ ಬದಲಾವಣೆ ತರುವ ಬಗ್ಗೆ ನಾವು ಮಾತನಾಡುತ್ತಿದ್ದೇವೆ. ಮಮತಾ ಬ್ಯಾನರ್ಜಿ ಸರ್ಕಾರ ಅಧಿಕಾರದಲ್ಲಿರುವವರೆಗೆ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿರಲು ಸಾಧ್ಯವೇ? ಬಂಗಾಳ ಪ್ರಗತಿಯ ದಿಕ್ಕಿನಲ್ಲಿ ಮುನ್ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಇದಕ್ಕೂ ಮುನ್ನ ಗಂಗಾಸಾಗರದ ಕಪಿಲ ಮುನಿ ಆಶ್ರಮಕ್ಕೆ ಭೇಟಿ ನೀಡಿದ ಅಮಿತ್ ಶಾ ಅಲ್ಲಿನ ಸಂತರ ಕುಶಲ ವಿಚಾರಿಸಿದರು. ಭಾರತ ಸೇವಾಶ್ರಮ ಸಂಘದ ಸಂಸ್ಥಾಪಕ ಸ್ವಾಮಿ ಪ್ರಣವಾನಂದರ 125ನೇ ವರ್ಧಂತಿಯಲ್ಲಿ ಮಾತನಾಡಿ, ಭಾರತ ಸೇವಾಶ್ರಮ ಸಂಘವು ಹಾಕಿಕೊಟ್ಟಿರುವ ಮಾರ್ಗವು ಭಾರತವನ್ನು ಸ್ವಾವಲಂಬಿ ಆಗಿಸಲು ನೆರವಾಗುತ್ತದೆ. ಹೊಸ ಭಾರತ ರೂಪಿಸಲು ಇದು ಅತ್ಯಗತ್ಯ ಎಂದು ಹೇಳಿದರು.

ದೇಶಕ್ಕೆ ಅತ್ಯಂತ ಅಗತ್ಯವಿದ್ದ ಸಂದರ್ಭದಲ್ಲಿ ಈ ಸಂಘಟನೆ ರೂಪುಗೊಂಡಿತು ಎಂದು ಹೇಳಿದರು. ಜನರಲ್ಲಿ ಸ್ವಾತಂತ್ರ್ಯದ ಬಗ್ಗೆ ಜಾಗೃತಿ ಮೂಡಿಸಲು ಈ ಸಂಘಟನೆ ನೆರವಾಯಿತು. ಜನಸಂಘ ಸ್ಥಾಪಕರಾದ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ಸ್ವಾಮಿ ಪ್ರಣವಾನಂದರು ಒಂದೇ ಸಿದ್ಧಾಂತ ಹೊಂದಿದ್ದರು. ಪಶ್ಚಿಮ ಬಂಗಾಳ ಇಂದು ಭಾರತದ ಭಾಗವಾಗಿ ಉಳಿದಿದೆ ಎಂದರೆ ಅದಕ್ಕೆ ಶ್ಯಾಮ ಪ್ರಸಾದ್ ಮುಖರ್ಜಿ ಅವರೇ ಕಾರಣ. ಇಲ್ಲದಿದ್ದರೆ ಇದು ಬಾಂಗ್ಲಾದೇಶಕ್ಕೆ ಹೋಗುತ್ತಿತ್ತು ಎಂದು ಹೇಳಿದರು.

ಒಂದೇ ವಾರದಲ್ಲಿ 2ನೇ ಭೇಟಿ

ಒಂದು ವಾರದಲ್ಲಿ ಬಂಗಾಳಕ್ಕೆ ಅಮಿತ್​ ಶಾ ಅವರ 2ನೇ ಭೇಟಿಯಿದು. ದಕ್ಷಿಣ 24 ಪರಗಣ ಜಿಲ್ಲೆಯ ನಿರಾಶ್ರಿತರ ಕುಟುಂಬದಲ್ಲಿ ಶಾ ಊಟ ಮಾಡಿದರು. ನಂತರ ರೋಡ್​ ಶೋದಲ್ಲಿ ಪಾಲ್ಗೊಂಡು, ಕೊಲ್ಕತ್ತಾಗೆ ತೆರಳಿದರು. ಶುಕ್ರವಾರವೂ ಬಂಗಾಳದಲ್ಲಿಯೇ ಉಳಿಯಲಿರುವ ಅಮಿತ್​ ಶಾ ನಂತರ ದೆಹಲಿಗೆ ಹಿಂದಿರುಗಲಿದ್ದಾರೆ.

ಕೊಲ್ಕತ್ತಾದ ಬಿಜೆಪಿ ಕಚೇರಿಯಲ್ಲಿ ಸುಮಾರು 40 ನಿಮಿಷ ಅಮಿತ್ ಶಾ ಇದ್ದರು. ಈ ವೇಳೆ ಚಂಡಮಾರುತದ ವೇಳೆ ಬಿಜೆಪಿ ಕಾರ್ಯಕರ್ತರು ನಡೆಸಿದ ಪರಿಹಾರ ಚಟುವಟಿಕೆಗಳ ಮಾಹಿತಿ ಪಡೆದುಕೊಂಡರು. ಬಾಂಗ್ಲಾದಿಂದ ಬಂದಿರುವ ನಿರಾಶ್ರಿತರೊಬ್ಬರ ಮನೆಯಲ್ಲಿ ಮಧ್ಯಾಹ್ನದ ಊಟ ಮಾಡಿದರು.

ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ರಾಷ್ಟ್ರೀಯ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ, ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಇತರರು ಈ ಸಂದರ್ಭ ಉಪಸ್ಥಿತರಿದ್ದರು.

ಜಿದ್ದಾಜಿದ್ದಿ ರಾಜಕಾರಣ

ಅಮಿತ್ ಶಾ ಅವರ ರ‍್ಯಾಲಿ ನಡೆಯುತ್ತಿರುವಾಗಲೇ ಮತ್ತೊಂದೆಡೆ ಅದೇ ಸಮಯಕ್ಕೆ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಸಂಸದ ಅಭಿಷೇಕ್ ಬ್ಯಾನರ್ಜಿ ಸಹ ಬಹಿರಂಗ ಸಭೆ ಆಯೋಜಿಸಿದ್ದರು. ಅಮಿತ್ ಶಾ ಮತ್ತು ಮಮತಾ ಬ್ಯಾನರ್ಜಿ ಅವರ ಬಹಿರಂಗ ಸಭೆಗಳು ಒಂದೇ ಜಿಲ್ಲೆಯಲ್ಲಿ ಮತ್ತು ತುಸುವೇ ಅಂತರದಲ್ಲಿ ನಡೆಯುತ್ತಿರುವುದು ಗಮನಾರ್ಹ ಸಂಗತಿ.

ಮುಂದಿನ ಮಾರ್ಚ್​-ಏಪ್ರಿಲ್ ತಿಂಗಳಲ್ಲಿ ಪಶ್ಚಿಮ ಬಂಗಾಳದ ಚುನಾವಣೆ ನಡೆಯಲಿದೆ. 294 ಸದಸ್ಯ ಬಲದ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 200 ಸ್ಥಾನ ಗೆಲ್ಲುವ ಗುರಿ ಹೊಂದಿದೆ. ಬಿಜೆಪಿ ಕನಿಷ್ಠ 10 ಕ್ಷೇತ್ರದಲ್ಲಿಯೂ ಗೆಲ್ಲುವುದಿಲ್ಲ ಎಂದು ಟಿಎಂಸಿ ಸವಾಲು ಹಾಕಿದೆ.

ಅಮಿತ್ ಶಾ ಪಶ್ಚಿಮ ಬಂಗಾಳ ಭೇಟಿಯ ಚಿತ್ರಗಳು ಇಲ್ಲಿವೆ..

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ಐದು ರೂಪಾಯಿ ಊಟ, ‘ಮಾ’ ಯೋಜನೆ ಜಾರಿಗೆ ತಂದ ಮಮತಾ

ಇದನ್ನೂ ಓದಿ: ಪಶ್ಚಿಮ ಬಂಗಾಳದಲ್ಲಿ ಆ್ಯಪ್​ ಫೈಟ್​! ಬಿಡುಗಡೆ ಆಯ್ತು ಮೋದಿ-ಮಮತಾ ಅಪ್ಲಿಕೇಶ್​​ನಗಳು!

Published On - 3:41 pm, Thu, 18 February 21