Fact Check: ಆಕೆಯ ಹೆಸರು ದಿಶಾ ರವಿ, ದಿಶಾ ರವಿ ಜೋಸೆಫ್ ಅಲ್ಲ
Disha Ravi: ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ದಿಶಾ ರವಿ ಅವರ ಸಹಪಾಠಿ ಹಾಗೂ ಸ್ನೇಹಿತೆಯ ಪ್ರಕಾರ ಆಕೆಯ ಹೆಸರು ದಿಶಾ ರವಿ ಅಷ್ಟೇ. ಆಕೆ ಸಿರಿಯನ್ ಕ್ರಿಶ್ಚಿಯನ್ ಅಲ್ಲ. ದಿಶಾ ರವಿ ಅವರ ಪೂರ್ತಿ ಹೆಸರು ದಿಶಾ ಅಣ್ಣಪ್ಪ ರವಿ.
ಟೂಲ್ಕಿಟ್ ಪ್ರಕರಣದಲ್ಲಿ ಬಂಧಿತರಾಗಿರುವ ಬೆಂಗಳೂರು ಮೂಲದ ಪರಿಸರವಾದಿ ದಿಶಾ ರವಿ ಬಂಧನವಾದ ಬೆನ್ನಲ್ಲೇ ಆಕೆಯ ಹೆಸರು, ಧರ್ಮದ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಲೇ ಇದೆ. ದಿಶಾ ರವಿ ಅವರ ನಿಜವಾದ ಹೆಸರು ದಿಶಾ ರವಿ ಜೋಸೆಫ್, ಆಕೆ ಕ್ರೈಸ್ತ ಮತದವಳು ಎಂಬ ವೈರಲ್ ಪೋಸ್ಟ್ ಹರಿದಾಡುತ್ತಿದ್ದು, ಇದು ಸುಳ್ಳು ಎಂದು ದಿಶಾ ಅವರ ಸ್ನೇಹಿತರು ಹೇಳಿದ್ದಾರೆ.
ವೈರಲ್ ಪೋಸ್ಟ್ನಲ್ಲೇನಿದೆ? ಟೂಲ್ಕಿಟ್ ತಯಾರಿಸಿದ್ದಾರೆ ಎಂಬ ಆರೋಪದಲ್ಲಿ ದೆಹಲಿ ಪೊಲೀಸರು ಬಂಧಿಸಿರುವ 22ರ ಹರೆಯದ ದಿಶಾ ರವಿ ಜೋಸೆಫ್ ಕೇರಳ ಮೂಲದ ಸಿರಿಯನ್ ಕ್ರಿಶ್ಚನ್ ಸಮುದಾಯಕ್ಕೆ ಸೇರಿದವರು. ಈ ಸಮುದಾಯದವರು ಸದಾ ಭಾರತವನ್ನು ವಿಭಜನೆಗೊಳಿಸುವ ಚಳವಳಿಯಲ್ಲಿ ಮುಂಚೂಣಿಯಲ್ಲಿರುತ್ತಾರೆ.
ಫೇಕ್ ಪೋಸ್ಟ್ ವೈರಲ್ ದಿಶಾ ರವಿ ಅವರ ಧರ್ಮದ ಬಗ್ಗೆ ತಪ್ಪು ಮಾಹಿತಿ ಇರುವ ಪೋಸ್ಟ್ ನ್ನು ಹಲವಾರು ಟ್ವೀಟಿಗರು ಟ್ವೀಟ್ ಮಾಡಿದ್ದಾರೆ.
Disha Ravi is a Syrian Christian from Kerala. Why are members of this community always at the forefront of #BreakingIndia movements? Reposting my article on why Christianity poses a clear threat to India.https://t.co/e2NbhdkaWE
— Rakesh Thiyya (@ByRakeshSimha) February 16, 2021
Fraud activist… Rice Bag Disha Ravi JOSEPH. Does the name ring a bell?
They are always part of Break India Gang. pic.twitter.com/KB3nFZg2wk
— Oxomiya Jiyori ?? (@SouleFacts) February 17, 2021
That which has been cleverly hidden from us all this while:
Full Name: Disha Ravi Joseph.
Now the picture is clear.#DishaRaviArrest
— विष्णुगुप्त उवाच (@vishnuguptuvach) February 16, 2021
ಆಕೆಯ ಸಹಪಾಠಿಗಳು ಏನಂತಾರೆ? ವೈರಲ್ ಪೋಸ್ಟ್ನಲ್ಲಿ ಹೇಳಿರುವಂತೆ ದಿಶಾ ಅವರ ನಿಜವಾದ ಹೆಸರು ಏನು ಎಂದು ತಿಳಿಯಲು ಬೂಮ್ ಲೈವ್ ಬೆಂಗಳೂರಿನ ಮೌಂಟ್ ಕಾರ್ಮಲ್ ಕಾಲೇಜಿನ ಆಕೆಯ ಸ್ನೇಹಿತರು ಮತ್ತು ಸಹಪಾಠಿಗಳನ್ನು ಮಾತನಾಡಿಸಿದೆ. ದಿಶಾ ರವಿ ಹೆಸರು ದಿಶಾ ರವಿ ಜೋಸೆಫ್ ಎಂಬುದು ಸುಳ್ಳು. ಆಕೆಯ ಅಪ್ಪನ ಹೆಸರು ರವಿ, ಆಕೆ ಹಿಂದೂ ಎಂದು ಹೆಸರು ಹೇಳಲಿಚ್ಛಿಸದ ಸಹಪಾಠಿಯೊಬ್ಬರು ಹೇಳಿದ್ದಾರೆ.
Fridays for Future ಸಂಸ್ಥೆಯ ಭಾರತದ ಅಂಗಸಂಸ್ಥೆಯ ಸಹ ಸಂಸ್ಥಾಪಕಿಯಾಗಿದ್ದಾರೆ ದಿಶಾ. ಸ್ವೀಡನ್ನ ಪರಿಸರವಾದಿ ಗ್ರೇಟಾ ಥನ್ಬರ್ಗ್ ರೈತರ ಪ್ರತಿಭಟನೆಗೆ ಸಂಬಂಧಿಸಿದ ಟೂಲ್ಕಿಟ್ ಟ್ವೀಟ್ ಮಾಡಿದ್ದು, ಆ ಟೂಲ್ ಕಿಟ್ ತಯಾರು ಮಾಡಿದ ಆರೋಪದಲ್ಲಿ ಫೆಬ್ರವರಿ 13ರಂದು ದಿಶಾ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಫೆಬ್ರವರಿ 14ರಂದು ಆಕೆಯನ್ನು 5 ದಿನ ವಶದಲ್ಲಿರಿಸಿಕೊಳ್ಳುವಂತೆ ದೆಹಲಿ ಕೋರ್ಟ್ ಆದೇಶಿಸಿತ್ತು. ಟೂಲ್ಕಿಟ್ನ್ನು ಎಡಿಟ್ ಮಾಡಿದ್ದಾರೆ ಎಂಬ ಆರೋಪ ದಿಶಾ ರವಿ ಮೇಲಿದೆ.
ಫ್ಯಾಕ್ಟ್ಚೆಕ್ ಮೌಂಟ್ ಕಾರ್ಮಲ್ ಕಾಲೇಜಿನಲ್ಲಿ ದಿಶಾ ರವಿ ಅವರ ಸಹಪಾಠಿ ಹಾಗೂ ಸ್ನೇಹಿತೆಯ ಪ್ರಕಾರ ಆಕೆಯ ಹೆಸರು ದಿಶಾ ರವಿ ಅಷ್ಟೇ. ಆಕೆ ಸಿರಿಯನ್ ಕ್ರಿಶ್ಚಿಯನ್ ಅಲ್ಲ. ದಿಶಾ ರವಿ ಅವರ ಪೂರ್ತಿ ಹೆಸರು ದಿಶಾ ಅಣ್ಣಪ್ಪ ರವಿ, ದಿಶಾ.ಎ.ರವಿ ಎಂದು ಬರೆಯುತ್ತೇವೆ. ಇಲ್ಲಿ ಎ- ಅಣ್ಣಪ್ಪ ಎಂದು ಹೇಳಿದ್ದಾರೆ. ದಿಶಾ ಅವರ ಇನ್ನೊಬ್ಬ ಸ್ನೇಹಿತರಲ್ಲಿ ಈ ಬಗ್ಗೆ ಕೇಳಿದಾಗ ಅವರು ದಿಶಾ ಅವರ ಪೂರ್ತಿ ಹೆಸರು ದಿಶಾ ಅಣ್ಣಪ್ಪ ರವಿ. ಆಕೆ ಕನ್ನಡತಿ ಎಂದಿದ್ದಾರೆ.
ದಿಶಾ ರವಿ ಕೇರಳ ಮೂಲದ ಸಿರಿಯನ್ ಕ್ರಿಶ್ಚಿಯನ್ ಎಂಬ ವಾದದ ಬಗ್ಗೆ ಸ್ನೇಹಿತೆಯೊಬ್ಬರಲ್ಲಿ ಕೇಳಿದಾಗ, ದಿಶಾ ಅವರ ಊರು ತುಮಕೂರಿನ ತಿಪಟೂರು, ಅವರು ಲಿಂಗಾಯತರು ಎಂದಿದ್ದಾರೆ. ದಿಶಾ ರವಿ ಅವರ ಅಮ್ಮ ಮಂಜುಳಾ ನಂಜಯ್ಯಾ ಗೃಹಿಣಿ. ಅಪ್ಪ ರವಿ ಅವರು ಕಂಠೀರವ ಸ್ಟೇಡಿಯಂನಲ್ಲಿರುವ ಕರ್ನಾಟಕ ಕ್ರೀಡಾ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಅಮ್ಮನ ಆರೈಕೆಯಲ್ಲಿಯೇ ದಿಶಾ ಬೆಳೆದದ್ದು ಎಂದಿದ್ದಾರೆ.
ಮೌಂಟ್ ಕಾರ್ಮಲ್ ಕಾಲೇಜಿನ ದಾಖಲೆಗಳಲ್ಲಿ ದಿಶಾ ಹೆಸರು ಹುಡುಕಿದಾಗ 2018ರ ಬ್ಯಾಚ್ನ ವಾರ್ಷಿಕೋತ್ಸವದ ವರದಿ ಬೂಮ್ ಲೈವ್ಗೆ ಸಿಕ್ಕಿದೆ. ಈ ವರದಿಯಲ್ಲಿ ಕಾಲೇಜಿನಲ್ಲಿ ನಡೆದ ಎಲ್ಲ ಸಮಾರಂಭಗಳ ಮಾಹಿತಿ ಇದೆ. ಡಿಪಾರ್ಟ್ಮೆಂಟ್ ಆಫ್ ಬ್ಯುಸಿನೆಸ್ ಸ್ಟಡೀಸ್ ಆಯೋಜಿಸಿದ ಬ್ಯುಸಿನೆಸ್ ಮ್ಯಾನೇಜ್ ಮೆಂಟ್ ಫೆಸ್ಟ್ Carpe Diem ಅನುಭವದ ಬಗ್ಗೆ ದಿಶಾ ರವಿಯ ಅಭಿಪ್ರಾಯಗಳು ಈ ದಾಖಲೆಯಲ್ಲಿದೆ. ದಾಖಲೆ ಪ್ರಕಾರ ದಿಶಾ ಹೆಸರು ದಿಶಾ.ಎ.ರವಿ ಎಂದಿದೆ. ಬ್ಯುಸಿಸೆನ್ ಅಡ್ಮಿನಿಸ್ಟ್ರೇಷನ್ ಪದವಿ ತರಗತಿಯಲ್ಲಿ ದಿಶಾ ರವಿಯ ಸಹಪಾಠಿಯಾಗಿದ್ದ ವ್ಯಕ್ತಿಯ ಪ್ರಕಾರ ಕಾಲೇಜು ಫೆಸ್ಟ್ ನಲ್ಲಿ ಆಕೆ ಫೈನಾನ್ಸ್ ಟೀಂನಲ್ಲಿದ್ದಳು. ಆಕೆ ಇಲ್ಲಿ ಕಲಿತಿದ್ದಳು ಎಂಬುದರ ಸಾಕ್ಷ್ಯವೇ ಈ ವಾರ್ಷಿಕ ವರದಿ. ಆಕೆ ಹಿಂದೂ ಅಥವಾ ಕ್ರೈಸ್ತ ಎಂಬುದು ಯಾಕೆ ಇಲ್ಲಿ ಚರ್ಚೆಯಾಗಬೇಕು? ಆಕೆಯ ಹೆಸರು ದಿಶಾ ರವಿ. ಆಕೆ ಪರಿಸರವಾದಿ. ಇದರಲ್ಲಿ ಆಕೆಯ ಧರ್ಮವನ್ನು ಎಳೆದು ತರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: Fact Check | ರೈತರ ಪ್ರತಿಭಟನಾ ಸ್ಥಳದಲ್ಲಿ ಇದ್ದದ್ದು ಜೀಪ್, ₹1.5 ಕೋಟಿ ಮೌಲ್ಯದ ಬೆಂಜ್ ಕಾರು ಅಲ್ಲ