Rail Roko: ಮೈಸೂರಲ್ಲಿ ರೈತರನ್ನ ಬಂಧಿಸಲು ಸರ್ಕಾರಿ ಬಸ್ ವ್ಯವಸ್ಥೆ! ರೈಲು ನಿಲ್ದಾಣಕ್ಕೆ ನುಗ್ಗಲು ಯತ್ನಿಸಿದ ರೈತರ ಬಂಧನ
Rail Roko: ದೇಶದ ಹಲವು ಪ್ರಮುಖ ನಗರಗಳಲ್ಲೂ ರೈಲು ತಡೆ ಆರಂಭಗೊಂಡಿದ್ದು, ಹರ್ಯಾಣ, ಪಶ್ಚಿಮ ಬಂಗಾಳ, ಪಂಜಾಬ್, ಬಿಹಾರಗಳಲ್ಲಿ ರೈತ ಸಂಘಟನೆಗಳು ರೈಲು ನಿಲ್ದಾಣಗಳಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿವೆ.
ಮೈಸೂರು: ದೇಶದ ಹಲವು ನಗರಗಳಲ್ಲಿ ರೈಲು ತಡೆ ಹೋರಾಟ (Rail Roko) ನಡೆಯುತ್ತಿದ್ದು, ರೈತ ಸಂಘಟನೆಗಳು ರೈಲು ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿವೆ. ಅಂತೆಯೇ ಕರ್ನಾಟಕದ ಕೆಲ ನಗರಗಳ ರೈಲು ನಿಲ್ದಾಣಗಳಲ್ಲೂ ರೈತರು ಜಮಾಯಿಸಿದ್ದು, ಕೃಷಿ ಕಾಯ್ದೆ ವಿರೋಧಿಸಿ ಮೈಸೂರಿನಲ್ಲಿ ರೈಲು ನಿಲ್ದಾಣಕ್ಕೆ ನುಗ್ಗಲು ರೈತರ ಪ್ರಯತ್ನಿಸಿದ್ದಾರೆ. ಆದರೆ, ಹೋರಾಟಗಾರರನ್ನು ಪೊಲೀಸರು ತಡೆದಿದ್ದು, ಪೊಲೀಸರು ಹಾಗೂ ರೈತರ ಮಧ್ಯೆ ಮಾತಿನ ಚಕಮಕಿ ನಡೆದಿದೆ. ರೈಲು ತಡೆಯಲು ಯತ್ನಿಸಿದ ರೈತರ ಪ್ರಯತ್ನ ಮೈಸೂರಿನಲ್ಲಿ ವಿಫಲಗೊಂಡಿದ್ದು, ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರು ರೈತರನ್ನ ಬಂಧಿಸಲು ಸರ್ಕಾರಿ ಬಸ್ ವ್ಯವಸ್ಥೆ ಮಾಡಿಕೊಂಡಿದ್ದರು. ಬಸ್ ಮೇಲಿದ್ದ ಪ್ರಧಾನಿ ನರೇಂದ್ರ ಮೋದಿ, ಸಿಎಂ ಬಿಎಸ್ ಯಡಿಯೂರಪ್ಪ ಅವರ ಭಾವಚಿತ್ರಗಳನ್ನು ಕಂಡು ಆಕ್ರೋಶಗೊಂಡ ರೈತರು, ಅವರ ಭಾವಚಿತ್ರಗಳಿಗೆ ಶೂವಿನಿಂದ ಹೊಡೆಯಲು ಯತ್ನ ನಡೆಸಿದ್ದಾರೆ. ತಕ್ಷಣವೇ ಪೊಲೀಸರು ರೈತರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಸರ್ಕಾರದ ವಿರುದ್ಧ ರೈತರು ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ್ದಾರೆ.
ವಿವಿದೆಡೆ ರೈತರ ಬಂಧನ ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ್ ನೇತೃತ್ವದಲ್ಲಿ ಬೆಳಗಾವಿಯ ರೈಲು ನಿಲ್ದಾಣದ ಮುಂಭಾಗದಲ್ಲಿ ರೋಕೋ ಚಳುವಳಿ ನಡೆಸಲಾಗುತ್ತಿದೆ. ರೈಲು ಮುಂಭಾಗದಲ್ಲೇ ಬ್ಯಾರಿಕೇಡ್ ಹಾಕಿ ರೈತರು ಒಳಪ್ರವೇಶಿಸದಂತೆ ಪೊಲೀಸರು ತಡೆದಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ರೈಲು ರೋಕೊ ನಡೆಸಲು ರೈಲ್ವೆ ನಿಲ್ದಾಣದ ಒಳಗೆ ನುಗ್ಗಲು ಯತ್ನಿಸಿದ 40ಕ್ಕೂ ಹೆಚ್ಚು ಧರಣಿ ನಿರತರನ್ನು ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗದ ರೈಲು ನಿಲ್ದಾಣದ ಆವರಣದೊಳಗೆ ರೈತ ಮುಖಂಡ ಕೆ.ಟಿ. ಗಂಗಾಧರ್ ಮತ್ತು ಬಸವರಾಜಪ್ಪ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡದಲ್ಲೂ ರೈತರು ಪ್ರತಿಭಟನೆ ನಡೆಸಲು ರೈಲು ನಿಲ್ದಾಣಕ್ಕೆ ಆಗಮಿಸಿದ್ದು ಪೊಲೀಸರು-ರೈತರ ನಡುವೆ ಮಾತಿನ ಚಕಮಕಿ ನಡೆದಿದೆ.
ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವ ರೈಲು ತಡೆ ಹೋರಾಟದಲ್ಲಿ ಪಾಲ್ಗೊಂಡ ಸಂಯುಕ್ತ ಹೋರಾಟ ಸಮಿತಿಯ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಕೋಲಾರದಲ್ಲಿ ರೈಲ್ ರೊಕೊ ಚಳವಳಿ ಹಿನ್ನೆಲೆಯಲ್ಲಿ ಬಂಗಾರಪೇಟೆ ರೈಲ್ವೇ ನಿಲ್ದಾಣಕ್ಕೆ ಮುತ್ತಿಗೆ ಹಾಕಿದ ವಿವಿಧ ಸಂಘಟನೆಗಳ ಮುಖಂಡರನ್ನು ಬಂಗಾರಪೇಟೆ ಪೊಲೀಸರು ಬಂಧಿಸಿದ್ದಾರೆ.ಬೀದರ್ನಲ್ಲಿ ಬೆಂಗಳೂರು-ನಾಂದೇಡ್ ಎಕ್ಸ್ಪ್ರೆಸ್ ರೈಲು ತಡೆದು ರೈತರು ಧರಣಿ ಮಾಡಲು ಮುಂದಾಗಿದ್ದು, ಕೇಂದ್ರ, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೇಶದಲ್ಲಿ ಎಲ್ಲೆಲ್ಲಿ? ದೇಶದ ಹಲವು ಪ್ರಮುಖ ನಗರಗಳಲ್ಲೂ ರೈಲು ತಡೆ ಆರಂಭಗೊಂಡಿದ್ದು, ಹರ್ಯಾಣ, ಪಶ್ಚಿಮ ಬಂಗಾಳ, ಪಂಜಾಬ್, ಬಿಹಾರಗಳಲ್ಲಿ ರೈತ ಸಂಘಟನೆಗಳು ರೈಲು ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ಪ್ರಯತ್ನಿಸುತ್ತಿವೆ. ಈಗಾಗಲೇ 80 ಕ್ಕೂ ಹೆಚ್ಚು ದಿನಗಳಿಂದ ನಡೆಯುತ್ತಿರುವ ದೆಹಲಿ ಚಲೋ ವಿವಿಧ ತಿರುವುಗಳನ್ನು ಪಡೆದಿದೆ. ದೆಹಲಿ ಚಲೋವನ್ನು ಇಲ್ಲಿಯವರೆಗೂ ಮುಂದುವರೆಸಿಕೊಂಡು ಬರುತ್ತಿರುವ 40 ರೈತ ಸಂಭಟನೆಗಳ ಸಂಯುಕ್ತ ಮಂಡಳಿ ‘ಸಂಯುಕ್ತ ಕಿಸಾನ್ ಮೋರ್ಚಾ’ ಈ ರೈಲು ತಡೆಗೆ ಕರೆ ಕೊಟ್ಟಿದೆ. ಯಾವುದೇ ಕ್ಷಣ ರೈಲು ತಡೆ ಚಳುವಳಿ ತೀವ್ರವಾಗುವ ಹಿನ್ನೆಲೆಯಲ್ಲಿ ಪಂಜಾಬ್, ಉತ್ತರ ಪ್ರದೇಶ, ಹರಿಯಾಣ ಮತ್ತು ಪಶ್ಚಿಮ ಬಂಗಾಳಗಳ ರಾಜ್ಯಗಳಲ್ಲಿ ಭದ್ರತೆಯಲ್ಲಿ ನಿಟ್ಟಿನಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನೇಮಿಸಲಾಗಿದೆ.
ರೈಲು ತಡೆ ಪ್ರತಿಭಟನೆಯನ್ನು ಶಾಂತಿಯುವಾಗಿ ನಡೆಸಿ, ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ಸಹಕರಿಸಿ ಎಂದು ರೈಲ್ವೇ ಇಲಾಖೆಯ ಮಾಧ್ಯಮ ವಕ್ತಾರರೋರ್ವರು ತಿಳಿಸಿದ್ದಾರೆ. ‘ಪ್ರತಿಭಟನಾಕಾರರು ಯಾವುದೇ ಕಾರಣಕ್ಕೂ ಶಾಂತಿಯನ್ನು ಕದಡಬಾರದು, ಈಗಾಗಲೇ ಜಿಲ್ಲಾಡಳಿತಗಳ ಜತೆ ಚರ್ಚಿಸಿ ಜಿಲ್ಲಾಕೇಂದ್ರಗಳಲ್ಲಿ ನಿಯಂತ್ರಣಾ ಕೊಠಡಿಯನ್ನು ತೆರೆಯಲು ಸಿದ್ಧತೆ ನಡೆಸಿದ್ದೇವೆ. ಪ್ರತಿಭಟನೆಯ ಕುರಿತು ಗುಪ್ತಚರ ವಿಭಾಗದಿಂದ ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳಿಂದ ಮಾಹಿತಿ ಕಲೆಹಾಕಿದ್ದೇವೆ ಎಂದು ರೈಲ್ವೇ ಸುರಕ್ಷತಾ ದಳದ ನಿರ್ದೇಶಕ ಅರುಣ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.
ಇದನ್ನೂ ಓದಿ:Rail Roko: ರೈಲು ಪ್ರಯಾಣಿಕರೇ.. ಎಚ್ಚರ! ಇಂದಿನ ಪ್ರಯಾಣವನ್ನು ಒಂದು ದಿನ ಮುಂದೂಡಿ
Farmer’s Protest: ಫೆ.18ಕ್ಕೆ ದೇಶಾದ್ಯಂತ ರೈಲು ತಡೆಗೆ ಸಂಯುಕ್ತ ಕಿಸಾನ್ ಮೋರ್ಚಾ ಕರೆ