ಲಂಡನ್ ಆಕ್ಸ್​ಫರ್ಡ್ ವಿದ್ಯಾರ್ಥಿ ಸಂಘಕ್ಕೆ ರಾಜೀನಾಮೆ ಸಲ್ಲಿಸಿದ ಉಡುಪಿ ಮೂಲದ ರಶ್ಮಿ ಸಾಮಂತ್! ಕಾರಣವೇನು?

ಲಂಡನ್ ಆಕ್ಸ್​ಫರ್ಡ್ ವಿದ್ಯಾರ್ಥಿ ಸಂಘಕ್ಕೆ ರಾಜೀನಾಮೆ ಸಲ್ಲಿಸಿದ ಉಡುಪಿ ಮೂಲದ ರಶ್ಮಿ ಸಾಮಂತ್! ಕಾರಣವೇನು?
ಉಡುಪಿ ಮೂಲದ ಎಂ.ಎಸ್. ರಶ್ಮಿ ಸಾಮಂತ್ ಆಕ್ಸ್​ಫರ್ಡ್ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

Rashmi Samant: ಸದ್ಯ ಆಕ್ಸಫರ್ಡ್ ವಿವಿಯ ಕಾಲೇಜಿನ ಲಿನಾಕರ್ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್​ ಇಭಾಗದಲ್ಲಿ ಎಂ.ಎಸ್ಸಿ ವ್ಯಾಸಂಗ ಓದುತ್ತಿರುವ ಅವರು ತಮಗೆ ಒದಗಿಬಂದಿದ್ದ ಅಧ್ಯಕ್ಷ ಸ್ಥಾನಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಹಳೆಯ ಪೋಸ್ಟ್​ಗಳಿಂದ ರಾಜೀನಾಮೆ ಸಲ್ಲಿಸುವಂತಾಗಿದೆ.

guruganesh bhat

| Edited By: sadhu srinath

Feb 18, 2021 | 1:08 PM

ಲಂಡನ್:ಲಂಡನ್ನಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ (Oxford Students Union) ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಉಡುಪಿಯ ಮಾಹೆ ವಿಶ್ವವಿದ್ಯಾಲಯದ ಎಂಐಟಿ ಹಳೆಯ ವಿದ್ಯಾರ್ಥಿನಿ ಎಂ.ಎಸ್. ರಶ್ಮಿ ಸಾಮಂತ್ ತಮ್ಮ ಸ್ಥಾನಕ್ಕೆ ಜನಾಂಗೀಯ ನಿಂದನೆಯ ಕಾರಣಕ್ಕಾಗಿ ರಾಜೀನಾಮೆ ಸಲ್ಲಿಸಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗುವ ಮುನ್ನವೇ ಫೇಸ್​ಬುಕ್​ನಲ್ಲಿನ ಅವರ ಪೋಸ್ಟ್​ಗಳು ಅಧ್ಯಕ್ಷ ಸ್ಥಾನಕ್ಕೆ ಉರುಳಾಗಿ ಪರಿಣಮಿಸಿವೆ. ಜನಾಂಗೀಯ ನಿಂದನೆ, ಸಂವೇದನಾ ರಹಿತ ಮತ್ತು ಹತ್ಯಾಕಾಂಡಕ್ಕೆ ಸಂಬಂಧಿಸಿ ಅವರ ಪೋಸ್ಟ್​ಗಳನ್ನು ಜನಾಂಗೀಯ ಜಾಗೃತಿ ಮತ್ತು ಸಮಾನತಾ ಸಮುದಾಯ (Racial Awareness and Equality community) ಗಂಭೀರವಾಗಿ ಪರಿಗಣಿಸಿದೆ. ಪೂರ್ವ ಏಷ್ಯಾ, ಜೂಯಿಷ್ ಮತ್ತು ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ರಶ್ಮಿ ಸಾಮಂತ್ ಅವಹೇಳನ ಮಾಡುವಂತಹ ಕಮೆಂಟ್ ಮಾಡಿದ್ದು,ಅಧ್ಯಕ್ಷ ಸ್ಥಾನವನ್ನು ತ್ಯಜಿಸುವಂತೆ ಒತ್ತಾಯಿಸಿತ್ತು.

ಭಾರತಕ್ಕೆ ಮರಳಲಿರುವ ರಶ್ಮಿ ಸಾಮಂತ್ ಈ ವಿವಾದದ ಬೆನ್ನಲ್ಲೇ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ 22 ವರ್ಷದ ರಶ್ಮಿ ಸಾಮಂತ್ ಭಾರತಕ್ಕೆ ಹಿಂತಿರುವುದಾಗಿ ಆಂಗ್ಲ ದಿನಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ. ‘ಯಾವುದೇ ಸಮುದಾಯವನ್ನೂ ನಾನು ಕೀಳಾಗಿ ಕಾಣುವುದಿಲ್ಲ. ನನ್ನ ಈ ಮೈಲ್​ಗೆ ರಾಜೀನಾಮೆಯ ಕುರಿತು ಹಲವು ಅಪರಿಚಿತ ಮೈಲ್​ಗಳು ಬಂದಿವೆ’ ಎಂದು ಅವರು ತಿಳಿಸಿದ್ದಾರೆ. ವಿದ್ಯಾರ್ಥಿ ಸಂಘದ ಚುನಾವಣೆಯ ಪ್ರಚಾರಕ್ಕೆ ನೆರವಾದ ಎಲ್ಲ ಸಾಮಾಜಿಕ ಮಾಧ್ಯಮಗಳಲ್ಲಿನ ತಮ್ಮ ಖಾತೆಗಳನ್ನು ಅಳಿಸಿಹಾಕಿದ್ದಾರೆ.

ಮುಳುವಾದ ಪೋಸ್ಟ್ ಯಾವುದು? 2017ರಲ್ಲಿ ಅವರು ಮಾಡಿದ್ದ ಒಂದು ಪೋಸ್ಟ್ ಈ ಎಲ್ಲ ವಿವಾದಗಳಿಗೆ ಕಾರಣವಾಗಿದೆ. ಜರ್ಮನಿಯ ಬರ್ಲಿನ್​ನಲ್ಲಿಯ ‘ಬರ್ಲಿನ್ ಹೊಲೋಕಾಸ್ಟ್ ಮೆಮೊರಿಯಲ್’ ಎದುರು ತೆಗೆದುಕೊಂಡ ಫೋಟೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ಅವರು, HOLLOWCASTS ಪದವನ್ನು ಒಡೆದು HOLLOW ಮತ್ತು CASTS ಪದಗಳನ್ನು ಪ್ರತ್ಯೇಕವಾಗಿ ಬರೆದುಕೊಂಡಿದ್ದರು. ಈ ಸ್ಮಾರಕವು ಸಾಮೂಹಿಕ ಹತ್ಯಾಕಾಂಡ ಮತ್ತು ದೌರ್ಜನ್ಯದ ಕನಸನ್ನು ಚಿತ್ರಿಸುತ್ತದೆ ಎಂದು ಫೋಟೊ ಕೆಳಗೆ ಬರೆದುಕೊಂಡಿದ್ದರು. ಈ ಪೋಸ್ಟ್ ಸಂವೇದನಾ ರಹಿತವಾಗಿದ್ದು ಎಂಬ ಆರೋಪ ಕೇಳಿಬಂದ ಬೆನ್ನಲ್ಲೇ ರಶ್ಮಿ ಸಾಮಂತ್ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಘಟನೆಗೆ ಪ್ರತಿಕ್ರಿಯೆ ನೀಡಿರುವ ರಶ್ಮಿ ಸಾಮಂತ್, ‘ಅದು ನನ್ನ ಮೊದಲ ಯೂರೋಪ್ ಪ್ರವಾಸವಾಗಿತ್ತು. ಅಸೂಕ್ಷ್ಮ ಅಥವಾ ಸಂವೇದನಾ ರಹಿತವಾಗಿ ವರ್ತಿಸಬೇಕೆಂಬುದು ನನ್ನ ಉದ್ದೇಶವಾಗಿರಲಿಲ್ಲ. ಅಲ್ಲದೇ, ಮೂಲದಲ್ಲಿ ನಾನು ಇಂಗ್ಲೀಷ್ ಭಾಷಿಕಳಾಗಿರಲಿಲ್ಲ. ಹೀಗಾಗಿ ಕೇವಲ ಮೋಜಿಗಾಗಿ ಹಾಗೆ ಬರೆದುಕೊಂಡಿದ್ದೆ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಶ್ಮಿ ಸಾಮಂತ್ ಅವರ ಇನ್ನೊಂದು ಪೋಸ್ಟ್ ಕುರಿತು ಸಹ ಆಕ್ಷೇಪ ಕೇಳಿಬಂದಿದೆ. ಮಲೇಷ್ಯಾದ ಬೌದ್ಧ ದೇಗುಲದ ಮುಂದಿನ ಅವರ ಚಿತ್ರಕ್ಕೆ Ching Chang ಎಂದು ಬರೆದುಕೊಂಡಿದ್ದರು. ಈ ಪೋಸ್ಟ್ ಚೀನಿ ಮೂಲದ ವಿದ್ಯಾರ್ಥಿಗಳಿಗೆ ಅವಹೇಳನಕಾರಿಯಾಗಿದೆ ಎಂದು ಆರೋಪ ಕೇಳಿಬಂದಿತ್ತು. ಸಸ್ಯಾಹಾರಿಯಾದ ತನಗೆ, ಸಸ್ಯಾಹಾರವನ್ನು ಹುಡುಕಲು ಕಷ್ಟವಾಗಿತ್ತು. Ching Chang ಎಂದರೆ ಗಿಡಗಳನ್ನು ಸೇವಿಸುವುದು ಎಂಬ ಅರ್ಥದಲ್ಲಿ ಪೋಸ್ಟ್ ಮಾಡಿದ್ದೆ ಎಂದು ಅವರು ತಿಳಿಸಿದ್ದಾರೆ.

ಒಂದು ಪೋಸ್ಟ್ ಮೂಲಕ ಅಳೆಯಲು ಸಾಧ್ಯವೇ? ರಶ್ಮಿ ಸಾಮಂತ್​ ಅವರನ್ನು ಕೇವಲ ಒಂದು ಪೋಸ್ಟ್ ಮೂಲಕ ಅಳೆಯಲು ಸಾಧ್ಯವಿಲ್ಲದಿದ್ದರೂ, ಅವರ ಹಳೆಯ ಪೋಸ್ಟ್​ನ್ನು ಪರಿಗಣಿಸದೇ ಇರಲು ಸಾಧ್ಯವಿಲ್ಲ ಎಂದು ಆಕ್ಸ್​ಫರ್ಡ್​ ವಿವಿಯ Racial Awareness and Equality community ತಿಳಿಸಿದೆ. ಸದ್ಯ ಆಕ್ಸಫರ್ಡ್ ವಿವಿಯ ಕಾಲೇಜಿನ ಲಿನಾಕರ್ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್​ ಇಭಾಗದಲ್ಲಿ ಎಂ.ಎಸ್ಸಿ ವ್ಯಾಸಂಗ ಮಾಡುತ್ತಿರುವ ಅವರು ತಮಗೆ ಒದಗಿಬಂದಿದ್ದ ಅಧ್ಯಕ್ಷ ಸ್ಥಾನಕ್ಕೆ ಸಾಮಾಜಿಕ ಜಾಲತಾಣದಲ್ಲಿನ ಹಳೆಯ ಪೋಸ್ಟ್​ಗಳಿಂದ ರಾಜೀನಾಮೆ ಸಲ್ಲಿಸುವಂತಾಗಿದೆ.

ಅವರು ಲಂಡನ್ನಿನ ಪ್ರತಿಷ್ಠಿತ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಗೆದ್ದು, ಆ ಮೂಲಕ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದರು. ಚುನಾವಣೆಯಲ್ಲಿ ಒಟ್ಟು 4 ಮಂದಿ ಸ್ಪರ್ಧಿಸಿದ್ದರೂ, ರಶ್ಮಿ ಅವರು ಒಟ್ಟು 3708 ಮತಗಳಲ್ಲಿ 1966 (ಶೇ 53) ಮತಗಳನ್ನು ಗಳಿಸಿ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು. ಅವರು ಗಳಿಸಿದ ಒಟ್ಟು ಮತಗಳು ಇತರ ಮೂರು ಮಂದಿ ಗಳಿಸಿದ ಒಟ್ಟು ಮತಗಳಿಗಿಂತಲೂ ಹೆಚ್ಚಾಗಿತ್ತು. ಆ ಮೂಲಕ ರಶ್ಮಿ ಇತಿಹಾಸ ಸೃಷ್ಟಿಸಿದ್ದರು.

ಇದನ್ನೂ ಓದಿ: ಲಂಡನ್: ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನ ಅಲಂಕರಿಸಿದ ಉಡುಪಿ ಮೂಲದ ಮಹಿಳೆ

Follow us on

Most Read Stories

Click on your DTH Provider to Add TV9 Kannada