Covid 19 Vaccine: ಭಾರತದ ಕೊರೊನಾ ಲಸಿಕೆ ವಾಪಾಸ್ ಮಾಡುವ ವಿಚಾರ ಸತ್ಯಕ್ಕೆ ದೂರ: ದಕ್ಷಿಣ ಆಫ್ರಿಕಾ
Coronavirus Vaccine: ಭಾರತದಲ್ಲಿ 4 ಮಂದಿಗೆ ಸೌತ್ ಆಫ್ರಿಕಾ ಮೂಲದ ರೂಪಾಂತರಿ ಕೊರೊನಾ ಸೋಂಕು ತಗುಲಿದ್ದು, ತಳಮಳ ಹುಟ್ಟುಹಾಕಿದೆ. ಇದು ಯುವಕರಿಗೂ ಅಪಾಯ ಉಂಟುಮಾಡುವಷ್ಟು ಶಕ್ತಿಶಾಲಿಯಾಗಿದೆ.
ಕೊರೊನಾ ಲಸಿಕೆ ವಿತರಣೆ ಆರಂಭವಾದ ನಂತರ ಕೊಂಚ ತಹಬದಿಗೆ ಬಂದಿದ್ದ ಕೊವಿಡ್ 19 ಇದೀಗ ಮತ್ತೆ ಸದ್ದು ಮಾಡುತ್ತಿದೆ. ದಕ್ಷಿಣಾ ಆಫ್ರಿಕಾದಲ್ಲಿ ಹೊಸ ಬಗೆಯ ಕೊರೊನಾ ವೈರಾಣು ಪತ್ತೆಯಾಗಿದ್ದು, ಅದು ಮೊದಲಿದ್ದ ವೈರಾಣುಗಳಿಗಿಂತಲೂ ತುಸು ಅಪಾಯಕಾರಿ ಎಂಬ ವಿಷಯ ಆತಂಕ ಸೃಷ್ಟಿಸಿದೆ. ಏತನ್ಮಧ್ಯೆ ದಕ್ಷಿಣ ಆಫ್ರಿಕಾ ದೇಶವು ಭಾರತದಿಂದ ಆಮದು ಮಾಡಿಕೊಂಡ ಕೊವಿಶೀಲ್ಡ್ ಲಸಿಕೆಯನ್ನು ಹಿಂತಿರುಗಿಸುತ್ತಿದೆ ಎಂಬುದಾಗಿ ಹಲವು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ, ಇದೀಗ ಈ ವಿಷಯದ ಬಗ್ಗೆ ದಕ್ಷಿಣ ಆಫ್ರಿಕಾದ ಆರೋಗ್ಯ ಸಚಿವ ಡಾ.ಜ್ವೇಲಿ ಕೈಜ್ ಪ್ರತಿಕ್ರಿಯೆ ನೀಡಿದ್ದಾರೆ.
ಆಕ್ಸ್ಫರ್ಡ್-ಆಸ್ಟ್ರಾಜೆನೆಕಾ ಸಂಸ್ಥೆ ಅಭಿವೃದ್ಧಿಪಡಿಸಿದ, ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸಿದ ಕೊವಿಶೀಲ್ಡ್ ಲಸಿಕೆಯನ್ನು ನಾವು ಭಾರತಕ್ಕೆ ಹಿಂತಿರುಗಿಸುತ್ತಿದ್ದೇವೆ ಎಂಬ ಸುದ್ದಿ ಸತ್ಯಕ್ಕೆ ದೂರವಾಗಿದೆ. ಭಾರತ ಲಸಿಕೆಯನ್ನು ಆಫ್ರಿಕನ್ ಒಕ್ಕೂಟಕ್ಕೆ ಕಳುಹಿಸಿಕೊಟ್ಟಿದ್ದು, ನಾವು ಅದರಲ್ಲೊಂದು ಭಾಗವಷ್ಟೇ. ಆದ್ದರಿಂದ ಕೊವಿಶೀಲ್ಡ್ ಲಸಿಕೆಯನ್ನು ಒಕ್ಕೂಟದ ಸದಸ್ಯರ ಅವಶ್ಯಕತೆಗೆ ಅನುಸಾರವಾಗಿ ಹಂಚಲಾಗುತ್ತದೆಯೇ ವಿನಃ ವಾಪಾಸು ಕಳಿಸುವ ಪ್ರಮೇಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇದರ ನಡುವೆ ಭಾರತದಲ್ಲಿ 4 ಮಂದಿಗೆ ಸೌತ್ ಆಫ್ರಿಕಾ ಮೂಲದ ರೂಪಾಂತರಿ ಕೊರೊನಾ ಸೋಂಕು ತಗುಲಿದ್ದು, ತಳಮಳ ಹುಟ್ಟುಹಾಕಿದೆ. ಈ ಹೊಸ ಬಗೆಯ ಸೋಂಕು ಯುವಕರಿಗೂ ಅಪಾಯ ಉಂಟುಮಾಡುವಷ್ಟು ಶಕ್ತಿಶಾಲಿಯಾಗಿದೆ ಎನ್ನುವುದು ಜನರ ಭಯಕ್ಕೆ ಕಾರಣವಾಗಿದೆ. ಆದರೆ, ತಜ್ಞರು ಹೇಳುವ ಪ್ರಕಾರ ಬೆರಳೆಣಿಕೆಯಷ್ಟು ಸೋಂಕಿತರಿರುವಾಗಲೇ ಸರಿಯಾಗಿ ನಿಯಂತ್ರಣ ಮಾಡಬೇಕಿದೆ. ಸೋಂಕು ವ್ಯಾಪಿಸದಂತೆ ತಡೆಗಟ್ಟುವ ಬಗ್ಗೆ ಯೋಚಿಸಬೇಕೇ ವಿನಃ ಭಯಪಡುವುದು ಬೇಕಿಲ್ಲ. ಆದರೆ, ಒಂದುವೇಳೆ ನಿಯಂತ್ರಣ ತಪ್ಪಿ ದೇಶಾದ್ಯಂತ ಹಬ್ಬಿದರೆ ಮಾತ್ರ ಈಗಿರುವ ಕೊವಿಶೀಲ್ಡ್, ಕೊವ್ಯಾಕ್ಸಿನ್ ಲಸಿಕೆ ಉಪಯೋಗಿಸಿ ತಡೆಗಟ್ಟುವುದೂ ಕಷ್ಟವಾಗಬಹುದು.
ಇದನ್ನೂ ಓದಿ: ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಹೆಚ್ಚುತ್ತಲೇ ಇದೆ ಕೊರೊನಾ ಸೋಂಕಿತರ ಸಂಖ್ಯೆ; ಆನೇಕಲ್‌ನಲ್ಲಿಯೂ ಕಾಲಿಟ್ಟಿದೆ!
ಈ ಹಿಂದೆ ಭಾರತ್ ಬಯೋಟೆಕ್ ಸಂಸ್ಥೆ ತಾನು ತಯಾರಿಸಿದ ಕೊವ್ಯಾಕ್ಸಿನ್ ಲಸಿಕೆ ಬ್ರಿಟನ್ ದೇಶದ ರೂಪಾಂತರಿ ಕೊರೊನಾ ವಿರುದ್ಧ ಹೋರಾಡಲು ಶಕ್ಯವಾಗಿದೆ ಎಂದು ಹೇಳಿಕೆ ನೀಡಿತ್ತು. ಆದರೆ, ಅದೇ ಲಸಿಕೆ ದಕ್ಷಿಣ ಆಫ್ರಿಕಾದ ರೂಪಾಂತರಿ ವೈರಾಣುವನ್ನೂ ಮಣಿಸಬಲ್ಲದಾ? ಎನ್ನುವ ಬಗ್ಗೆ ಸಂಸ್ಥೆಯಿಂದಾಗಲೀ, ತಜ್ಞರಿಂದಾಗಲೀ ಯಾವುದೇ ಬಗೆಯ ಮಾಹಿತಿ ಲಭಿಸಿಲ್ಲ.