ರಾಜಸ್ಥಾನದ ರೆಸ್ಟೋರೆಂಟ್‌ ಸಿಬ್ಬಂದಿ ಜತೆ ಐಎಎಸ್, ಐಪಿಎಸ್ ಅಧಿಕಾರಿಗಳ ಜಗಳ; ಐವರು ಅಮಾನತು

|

Updated on: Jun 14, 2023 | 5:01 PM

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಧಿಕಾರಿಗಳು ಐಪಿಎಸ್ ಅಧಿಕಾರಿಯ ಹೊಸ ಪೋಸ್ಟಿಂಗ್ ಅನ್ನು ಆಚರಿಸಲು ಆಯೋಜಿಸಲಾಗಿದ್ದ ಬೀಳ್ಕೊಡುಗೆ ಪಾರ್ಟಿಯಿಂದ ಹಿಂತಿರುಗುತ್ತಿದ್ದರು. ಅವರು ವಾಶ್‌ರೂಮ್​​ಗೆ ಹೋಗಬೇಕಾಗಿದ್ದರಿಂದ ಅವರು ರೆಸ್ಟೋರೆಂಟ್‌ನ ಹೊರಗೆ ನಿಲ್ಲಿಸಿದರು

ರಾಜಸ್ಥಾನದ ರೆಸ್ಟೋರೆಂಟ್‌ ಸಿಬ್ಬಂದಿ ಜತೆ ಐಎಎಸ್, ಐಪಿಎಸ್ ಅಧಿಕಾರಿಗಳ ಜಗಳ; ಐವರು ಅಮಾನತು
ಸಿಸಿಟಿವಿ ದೃಶ್ಯ
Follow us on

ಜೈಪುರ: ರಾಜಸ್ಥಾನದ (Rajasthan) ಜೈಪುರ-ಅಜ್ಮೀರ್ ಹೆದ್ದಾರಿಯಲ್ಲಿರುವ ರೆಸ್ಟೋರೆಂಟ್‌ನಲ್ಲಿ ನಡೆದ ಜಗಳಕ್ಕೆ ಸಂಬಂಧಿಸಿದಂತೆ ಭಾರತೀಯ ಆಡಳಿತ ಸೇವೆ (IAS) ಮತ್ತು ಭಾರತೀಯ ಪೊಲೀಸ್ ಸೇವೆ (IPS) ಅಧಿಕಾರಿ ಸೇರಿದಂತೆ ಐವರನ್ನು ಅಮಾನತುಗೊಳಿಸಲಾಗಿದೆ. ಭಾನುವಾರ ತಡರಾತ್ರಿ ನಡೆದ ಈ ಹೊಡೆದಾಟ ರೆಸ್ಟೋರೆಂಟ್‌ನಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜನರು ಪರಸ್ಪರ ಹೊಡೆದಾಡಿಕೊಳ್ಳುತ್ತಿರುವುದನ್ನು, ಕಲ್ಲು ಎಸೆಯುತ್ತಿರುವುದು ಈ ದೃಶ್ಯದಲ್ಲಿದೆ.

ಐಎಎಸ್ ಅಧಿಕಾರಿ ಮತ್ತು ಅಜ್ಮೀರ್ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಗಿರಿಧರ್ ಮತ್ತು ಐಪಿಎಸ್ ಅಧಿಕಾರಿ ಸುಶೀಲ್ ಕುಮಾರ್ ಬಿಷ್ಣೋಯ್ ಅವರನ್ನು ವಿಶೇಷ ಕರ್ತವ್ಯದ ಅಧಿಕಾರಿಯಾಗಿ (ಗಂಗಾಪುರ ನಗರ ಪೊಲೀಸ್) ಅಮಾನತುಗೊಳಿಸಲಾಗಿದೆ.

ರಾಜಸ್ಥಾನ ಪೊಲೀಸರು ವಿವರವಾದ ವಿಚಾರಣೆ ನಡೆಸುತ್ತಿದ್ದಂತೆ ಒಬ್ಬ ಕಾನ್‌ಸ್ಟೆಬಲ್ ಮತ್ತು ಇತರ ಇಬ್ಬರು ಸರ್ಕಾರಿ ನೌಕರರು ಅಮಾನತುಗೊಂಡಿದ್ದಾರೆ. ಇನ್ನಿಬ್ಬರು ಪೊಲೀಸ್ ಸಿಬ್ಬಂದಿಯನ್ನು ಪೊಲೀಸ್ ಲೈನ್‌ಗೆ ಕಳುಹಿಸಲಾಗಿದೆ.

ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಅಧಿಕಾರಿಗಳು ಐಪಿಎಸ್ ಅಧಿಕಾರಿಯ ಹೊಸ ಪೋಸ್ಟಿಂಗ್ ಅನ್ನು ಆಚರಿಸಲು ಆಯೋಜಿಸಲಾಗಿದ್ದ ಬೀಳ್ಕೊಡುಗೆ ಪಾರ್ಟಿಯಿಂದ ಹಿಂತಿರುಗುತ್ತಿದ್ದರು. ಅವರು ವಾಶ್‌ರೂಮ್​​ಗೆ ಹೋಗಬೇಕಾಗಿದ್ದರಿಂದ ಅವರು ರೆಸ್ಟೋರೆಂಟ್‌ನ ಹೊರಗೆ ನಿಲ್ಲಿಸಿದರು. ವಾಶ್ ರೂಂ ತೆರೆಯಲು ಸಿಬ್ಬಂದಿಯನ್ನು ಕರೆದಾಗ ವಾಗ್ವಾದ ನಡೆದಿದೆ. ಒಳ ಉಡುಪಿನಲ್ಲಿ ತಿರುಗಾಡಿದ್ದಕ್ಕಾಗಿ ರೆಸ್ಟೋರೆಂಟ್ ಸಿಬ್ಬಂದಿಗೆ ಐಪಿಎಸ್ ಅಧಿಕಾರಿ ಕಪಾಳಮೋಕ್ಷ ಮಾಡಿದ ನಂತರ ಜಗಳ ಪ್ರಾರಂಭವಾಯಿತು ಎಂದು ಎಂದು ಮಾಧ್ಯಮವೊಂದು ವರದಿ ಮಾಡಿದೆ.

ರೆಸ್ಟೊರೆಂಟ್ ನೌಕರರು ತಿರುಗಿ ಹೊಡೆದಾಗ, ಐಪಿಎಸ್ ಅಧಿಕಾರಿ ಸ್ಥಳದಿಂದ ನಿರ್ಗಮಿಸಿದರು ಎಂದು ವರದಿಯಾಗಿದೆ.

ಕೆಲ ಪೊಲೀಸರೊಂದಿಗೆ ಅಧಿಕಾರಿ ಹಿಂತಿರುಗಿ ತಮ್ಮ ಸಿಬ್ಬಂದಿಗೆ ಥಳಿಸಿದ್ದಾರೆ ಎಂದು ರೆಸ್ಟೋರೆಂಟ್ ಮಾಲೀಕರು ದೂರಿನಲ್ಲಿ ಆರೋಪಿಸಿದ್ದಾರೆ. ರೆಸ್ಟೋರೆಂಟ್ ಮಾಲೀಕರ ದೂರಿನ ಮೇರೆಗೆ ಐವರು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಪೊಲೀಸರನ್ನು ಪೊಲೀಸ್ ಲೈನ್‌ಗೆ ಕಳುಹಿಸಲಾಗಿದೆ.

ಇದನ್ನೂ ಓದಿ: PM Modi US Visit Schedule: ಜೂನ್ 20ರಂದು ಅಮೆರಿಕಗೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರ ವೇಳಾಪಟ್ಟಿ ಹೀಗಿದೆ

ಈ ಬಗ್ಗೆ ವಿಜಿಲೆನ್ಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ರಾಜಸ್ಥಾನ ಪೊಲೀಸ್ ಮುಖ್ಯಸ್ಥ ಉಮೇಶ್ ಮಿಶ್ರಾ ಹೇಳಿದ್ದಾರೆ.ಐಪಿಎಸ್ ಅಧಿಕಾರಿ ಬಿಷ್ಣೋಯ್ ತಮ್ಮ ಮೇಲಿನ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ