UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ

| Updated By: ರಶ್ಮಿ ಕಲ್ಲಕಟ್ಟ

Updated on: Feb 05, 2021 | 6:12 PM

ನಾಗರಿಕ ಸೇವಾ ಪರೀಕ್ಷೆಗಳಲ್ಲಿ (Civil Service Examination - CSE) ಪಾಲ್ಗೊಳ್ಳಲು 2020 ಕೊನೆಯ ಅವಕಾಶವಾಗಿದ್ದ, ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅನುಮತಿ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಕೊಂಡಿದೆ.

UPSC CSE ನಾಗರಿಕ ಸೇವಾ ಪರೀಕ್ಷೆ; ಇನ್ನೊಂದು ಅವಕಾಶ ನೀಡಲು ಕೇಂದ್ರ ಸಮ್ಮತಿ
UPSC Recruitment 2021
Follow us on

ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (Union Public Service Commission – UPSC) ನಡೆಸುವ ನಾಗರಿಕ ಸೇವಾ ಪರೀಕ್ಷೆಗಳಲ್ಲಿ (Civil Service Examination – CSE) ಪಾಲ್ಗೊಳ್ಳಲು 2020 ಕೊನೆಯ ಅವಕಾಶವಾಗಿದ್ದ, ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅನುಮತಿ ನೀಡಲು ಕೇಂದ್ರ ಸರ್ಕಾರ ಶುಕ್ರವಾರ ಒಪ್ಪಿಕೊಂಡಿದೆ. ಕೋವಿಡ್-19 ಪಿಡುಗಿನಿಂದಾಗಿ ಪರೀಕ್ಷೆಗೆ ಸರಿಯಾಗಿ ಸಿದ್ಧತೆ ಮಾಡಿಕೊಳ್ಳಲು ಸಾಧ್ಯವಾಗದ ಸಾವಿರಾರು ಮಂದಿಯ ಉತ್ತಮ ನೌಕರಿ ಕನಸಿಗೆ ಇದರಿಂದ ಮರುಜೀವ ಬಂದಂತೆ ಆಗಿದೆ.

ಈ ನಿಯಮ ಸಡಿಲಿಕೆಯು ನಾಗರಿಕ ಸೇವಾ ಪರೀಕ್ಷೆಗಳನ್ನು ತೆಗೆದುಕೊಳ್ಳಲು ಅರ್ಹ ಅಭ್ಯರ್ಥಿಗಳಿಗೆ ಇನ್ನೊಂದು ಅವಕಾಶ ಒದಗಿಸಲು ಮಾತ್ರ ಸೀಮಿತವಾಗಿರುತ್ತದೆ. CSE-2021ಕ್ಕೆ ಮಾತ್ರ ಈ ಸಡಿಲಿಕೆ ಊರ್ಜಿತದಲ್ಲಿರುತ್ತದೆ. ನಾಗರಿಕ ಸೇವಾ ಪರೀಕ್ಷೆ ತೆಗೆದುಕೊಳ್ಳಲು 2020 ಕೊನೆಯ ಅವಕಾಶವಾಗಿದ್ದ ಮತ್ತು ವಯೋಮಿತಿ ಮೀರದ ಅಭ್ಯರ್ಥಿಗಳಿಗೆ ಮಾತ್ರ ಈ ವಿನಾಯ್ತಿ ಅನ್ವಯವಾಗುತ್ತದೆ ಎಂದು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್​ ನೇತೃತ್ವದ ನ್ಯಾಯಪೀಠಕ್ಕೆ ಮಾಹಿತಿ ನೀಡಿತು.

CSE-2021ರಲ್ಲಿ ಪರೀಕ್ಷೆ ಬರೆಯಲು ನಿಯಮಾನುಸಾರ ಅವಕಾಶವಿರುವವರಿಗೆ ಮತ್ತು ವಿವಿಧ ಕ್ಯಾಟಗರಿ ನಿಯಮಗಳ ಅನ್ವಯ ವಯೋಮಿತಿ ಮೀರುವವರಿಗೆ ಈ ವಿನಾಯ್ತಿ ಅನ್ವಯಿಸುವುದಿಲ್ಲ. ವಿಶೇಷ ಪ್ರಕರಣದ ಸಂದಿಗ್ಧತೆಗಳನ್ನು ಪರಿಗಣಿಸಿ ನೀಡಿರುವ ಈ ವಿನಾಯ್ತಿಯನ್ನು ಮೇಲ್ಪಂಕ್ತಿ (precedent) ಎಂದು ಪರಿಗಣಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯವು ಫೆ.8ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರ ಇದೀಗ ಪ್ರಸ್ತಾಪಿಸಿರುವ ವಿನಾಯ್ತಿಯನ್ನು ನ್ಯಾಯಾಲಯ ಒಪ್ಪಿಕೊಂಡರೆ ಸುಮಾರು 3,300 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಕಳೆದ ಅಕ್ಟೋಬರ್ 4ರಂದು ನಡೆದಿದ್ದ ಕೇಂದ್ರ ನಾಗರಿಕ ಸೇವಾ ಪರೀಕ್ಷೆಗಳಲ್ಲಿ ಒಟ್ಟು 4,86,952 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅಭ್ಯರ್ಥಿಗಳ ಹಿತ ಕಾಪಾಡಲು ಕೇಂದ್ರ ಲೋಕಸೇವಾ ಆಯೋಗವು ಎಲ್ಲ ಅಗತ್ಯ ಕ್ರಮ ತೆಗೆದುಕೊಂಡಿತ್ತು ಎಂದು ಕೇಂದ್ರ ಸರ್ಕಾರ ಹೇಳಿತು.

Published On - 6:07 pm, Fri, 5 February 21