ಉತ್ತರ ಪ್ರದೇಶ ಭಾರತದ ರಕ್ಷಣಾ ಉಪಕರಣಗಳ ಉತ್ಪಾದನಾ ಹಬ್ ಆಗುವತ್ತ ದಾಪುಗಾಲು ಹಾಕುತ್ತಿದೆ. ರಕ್ಷಣಾ ಕ್ಷೇತ್ರದ ಸ್ವಾವಲಂಬನೆಗೆ ಉತ್ತೇಜನ ಕೊಡುವ ಪ್ರಯತ್ನದ ಭಾಗವಾಗಿ, ಅಮೇಠಿಯ ಕೊರ್ವಾದಲ್ಲಿ 5 ಲಕ್ಷಕ್ಕೂ ಅಧಿಕ ಎಕೆ-203 ಅಸಾಲ್ಟ್ ರೈಫಲ್ಸ್ ಉತ್ಪಾದನೆ ಮಾಡುವ ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ. ರಷ್ಯಾದ ಸಹಭಾಗಿತ್ವದಲ್ಲಿ ಈ ಪ್ರಯತ್ನಕ್ಕೆ ಕೈಹಾಕಲಾಗಿದ್ದು, ರಕ್ಷಣಾ ಕ್ಷೇತ್ರದಲ್ಲಿ ಭಾರತ ಮತ್ತು ರಷ್ಯಾ ನಡುವಿನ ಪಾಲುದಾರಿಕೆ ಎಷ್ಟು ಆಳವಾಗಿದೆ ಎಂಬುದರ ಪ್ರತಿಬಿಂಬಕವಾಗಿದೆ.
ಈ ಅಸಾಲ್ಟ್ ರೈಫಲ್ಸ್ ಉತ್ಪಾದನೆ ಯೋಜನೆ ಅನೇಕ ಕಚ್ಚಾವಸ್ತು ಪೂರೈಕೆ ಮತ್ತು ಕಂಪೋನೆಂಟ್ಗಳ ಪೂರೈಕೆ ಮಾಡುವ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಮಟ್ಟದ ಉದ್ಯಮ (MSMEs)ಗಳಿಗೆ ಮತ್ತು ರಕ್ಷಣಾ ಕೈಗಾರಿಕೆಗಳಿಗೆ ವ್ಯಾಪಾರ ಅವಕಾಶ ಒದಗಿಸುವ ಜತೆಗೆ, ಅನೇಕ ಉದ್ಯೋಗಾವಕಾಶ ಸೃಷ್ಟಿಸುತ್ತದೆ. ಭಾರತ ರಕ್ಷಣಾ ಕ್ಷೇತ್ರದಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಗೆ ಜಾಸ್ತಿ ಒತ್ತು ಕೊಡುತ್ತಿದ್ದು, ದೇಶೀಯ ಉತ್ಪನ್ನಗಳ ಬಳಕೆಯನ್ನು ಹೆಚ್ಚಿಸುತ್ತಿದೆ. ಕೇಂದ್ರ ಸರ್ಕಾರದ ಈ ಪ್ರಯತ್ನಕ್ಕೆ ಯುಪಿ ಈ ಮೂಲಕ ಪ್ರಮುಖ ಕೊಡುಗೆ ನೀಡುತ್ತಿದೆ.
ಇದೀಗ ರಕ್ಷಣಾ ವಲಯದಲ್ಲಿ ಬಳಕೆಯಲ್ಲಿರುವ ಐಎನ್ಎಸ್ಎಎಎಸ್ ರೈಫಲ್ಗಳ ಬದಲಿಗೆ ಇದೀಗ ಅಮೇಠಿಯಲ್ಲಿ ಉತ್ಪಾದನೆಯಾಗುವ 7.62×39 ಎಂಎಂ ಸಾಮರ್ಥ್ಯದ ಎಕೆ-203 ರೈಫಲ್ಗಳನ್ನು ಬಳಸಲಾಗುವುದು. ಈ ಅಸಾಲ್ಟ್ ರೈಫಲ್ಗಳು ಹಗುರವಾಗಿದ್ದು, ದೃಢವಾಗಿರುತ್ತವೆ. ಇವುಗಳ ಪರಿಣಾಮಕಾರಿ ವ್ಯಾಪ್ತಿ 300 ಮೀಟರ್ಗಳಷ್ಟು ದೂರ. ಹಾಗೇ, ಆಧುನಿಕವಾಗಿ ತಯಾರಿಸಲ್ಪಟ್ಟಿದ್ದು, ಯೋಧರಿಗೆ ಸುಲಭವಾಗಿ ಬಳಸಲು ಸಾಧ್ಯವಾಗುತ್ತದೆ. ರಕ್ಷಣಾ ಕ್ಷೇತ್ರದಲ್ಲಿ ಈಗಿರುವ ಸವಾಲುಗಳನ್ನು ಅಂದರೆ, ಅಂತಾರಾಷ್ಟ್ರೀಯ ಭಯೋತ್ಪಾದಕ ಉಪಟಳ, ದೇಶದೊಳಗಿನ ನಕ್ಸಲರ ದಾಳಿ, ಹೀಗೆ ಹಲವು ವಿಧದ ಕಾರ್ಯಾಚರಣೆಯನ್ನು ಸಮರ್ಪಕವಾಗಿ ನಡೆಸಲು ಅನುಕೂಲವಾಗುವಂತೆ ಇವುಗಳನ್ನು ತಯಾರಿಸಲಾಗಿದೆ. ಇದೀಗ ಅಮೇಠಿಯಲ್ಲಿ ಎಕೆ-203 ಅಸಾಲ್ಟ್ ರೈಫಲ್ಸ್ ಉತ್ಪಾದನೆ ಮಾಡುವ ಸುಮಾರು 5100ಕೋಟಿ ರೂ. ವೆಚ್ಚದ ಯೋಜನೆಯನ್ನು ಇಂಡೋ-ರಷ್ಯನ್ ರೈಫಲ್ಸ್ ಪೈವೇಟ್ ಲಿಮಿಟೆಡ್ (ಐಆರ್ಆರ್ಪಿಎಲ್) ಎಂಬ ಜಂಟಿ ಇಂಡಸ್ಟ್ರಿ ಅನುಷ್ಠಾನಕ್ಕೆ ತರುತ್ತಿದೆ.
To provide a big boost to self-reliance in defence manufacturing in India, the government has approved the plan for the production of over five lakh AK-203 assault rifles at Korwa, Amethi in Uttar Pradesh: GoI sources pic.twitter.com/QxPHQXNJRs
— ANI (@ANI) December 4, 2021
ಇದನ್ನೂ ಓದಿ: Shivaram Obituary: ಗುಬ್ಬಿ ವೀರಣ್ಣ ನಾಟಕಗಳಿಂದ ಸ್ಫೂರ್ತಿ ಪಡೆದಿದ್ದ ಶಿವರಾಂ; ಚಿತ್ರರಂಗಕ್ಕೆ ಅವರು ನೀಡಿದ ಕೊಡುಗೆ ಅಪಾರ
Published On - 2:57 pm, Sat, 4 December 21