ಭಾರತದ ಭದ್ರತೆಗೆ ಹೆಚ್ಚಿನ ಅಪಾಯವನ್ನುಂಟು ಮಾಡುವ ಚೀನಾದ 54 ಮೊಬೈಲ್ ಆ್ಯಪ್ಗಳನ್ನು (54 Chinese Apps Ban) ನಿಷೇಧಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. 2020ರಲ್ಲಿ ಚೀನಾದ 118 ಮೊಬೈಲ್ ಆ್ಯಪ್ಗಳ (Mobile Apps) ಬಳಕೆಯನ್ನು ಭಾರತದಲ್ಲಿ ನಿಷೇಧಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೆ 54 ಆ್ಯಪ್ಗಳನ್ನು ನಿಷೇಧಿಸಲಿದೆ. ಇದೀಗ ನಿಷೇಧಿಸಲ್ಪಟ್ಟ ಆ್ಯಪ್ಗಳಲ್ಲಿ, ಬ್ಯೂಟಿ ಕ್ಯಾಮರಾ, ಸ್ವೀಟ್ ಸೆಲ್ಫೀ ಎಚ್ಡಿ, ಬ್ಯೂಟಿ ಕ್ಯಾಮರಾ-ಸೆಲ್ಫಿ ಕ್ಯಾಮರಾ, ಈಕ್ವಲೈಜರ್ ಮತ್ತು ಬಾಸ್ ಬೂಸ್ಟರ್ (Equalizer & Bass Booster), ಕ್ಯಾಮ್ ಕಾರ್ಡ್ ಫಾರ್ ಸೇಲ್ಸ್ ಫೋರ್ಸ್ ಎಂಟ್, ಐಸೊಲ್ಯಾಂಡ್ 2: ಆಶಸ್ ಆಫ್ ಟೈಮ್ ಲೈಟ್, ವಿವಾ ವಿಡಿಯೋ ಎಡಿಟರ್, ಆ್ಯಪ್ಲಾಕ್, ಡ್ಯುಯೆಲ್ ಸ್ಪೇಸ್ ಲೈಟ್, Tencent Xriver, Onmyoji Chess, Onmyoji Arena ಗಳು ಕೂಡ ಸೇರಿವೆ.
ಈ ಮೇಲಿನ ಪ್ರಮುಖ ಆ್ಯಪ್ಗಳು ಸೇರಿ 54 ಚೀನಾದ ಮೊಬೈಲ್ ಅಪ್ಲಿಕೇಶನ್ಗಳನ್ನು ಭಾರತದಲ್ಲಿ ನಿರ್ಬಂಧಿಸುವಂತೆ ಕೇಂದ್ರ ಎಲೆಕ್ಟ್ರಾನಿಕ್ ಮತ್ತು ಐಟಿ ಸಚಿವಾಲಯ ಆ್ಯಪ್ ಸ್ಟೋರ್ ಮತ್ತು ಪ್ಲೇ ಸ್ಟೋರ್ಗಳಿಗೆ ಸೂಚನೆ ನೀಡಿದೆ. ಇವು ಭಾರತೀಯರ ಮಾಹಿತಿ ರಕ್ಷಣೆ ಸರಿಯಾಗಿ ಮಾಡುತ್ತಿಲ್ಲ. ಈ ಮೂಲಕ ಭಾರತೀಯರ ಭದ್ರತೆಗೆ ಧಕ್ಕೆ ತರುತ್ತಿವೆ. ಹಾಗಾಗಿ ಕೂಡಲ ಈ ಎಲ್ಲ ಆ್ಯಪ್ಗಳನ್ನೂ ಭಾರತದಲ್ಲಿ ನಿಷೇಧಿಸಲಾಗುವುದು ಎಂದು ಕೇಂದ್ರ ಇಲಾಖೆ ಹೇಳಿದೆ.
2020ರಲ್ಲಿ ಪಬ್ ಜೀ, ಟಿಕ್ಟಾಕ್, ಶೇರ್ಇಟ್, ಹೀರೋಸ್ ವಾರ್, ಮೇಪೈ, ಏರ್ಬ್ರಷ್, ವಿ ಚಾಟ್, ಹೆಲೋ, ಲೈಕೀ, ಯುಸಿ ನ್ಯೂಸ್, ಸ್ನ್ಯಾಕ್ ವಿಡಿಯೋ, ಅಲಿ ಎಕ್ಸ್ಪ್ರೆಸ್, ಅಲಿ ಪೇ ಕ್ಯಾಷಿಯರ್ ಸೇರಿ ಒಟ್ಟು 118 ಆ್ಯಪ್ಗಳನ್ನು ಭಾರತ ಸರ್ಕಾರ ಬ್ಯಾನ್ ಮಾಡಿತ್ತು. 2020ರ ಜುಲೈನಿಂದ ಸೆಪ್ಟೆಂಬರ್ವರೆಗೆ ಹಂತಹಂತವಾಗಿ ಚೀನಾದ ಹಲವು ಮೊಬೈಲ್ ಅಪ್ಲಿಕೇಶನ್ಗಳನ್ನು ತೆಗೆದುಹಾಕಲಾಗಿದೆ. ಅದರಲ್ಲಿ ಪಬ್ ಜಿ ಮತ್ತು ಟಿಕ್ಟಾಕ್ ಆ್ಯಪ್ಗಳನ್ನು ನಿಷೇಧಿಸಿದಾಗ ಭಾರತದ ಬಳಕೆದಾರರಿಗೆ ಸ್ವಲ್ಪ ನಿರಾಸೆಯಾಯಿತಾದರೂ ಚಿನಾದ ಮೇಲಿನ ದ್ವೇಷದಿಂದಾಗಿ ಯಾರೂ ವಿರೋಧ ವ್ಯಕ್ತಪಡಿಸಿಲಿಲ್ಲ. ಆದರೆ ಭಾರತದಲ್ಲಿ ತಮ್ಮ ದೇಶದ ಆ್ಯಪ್ಗಳನ್ನು ಬ್ಯಾನ್ ಮಾಡಿದ್ದಕ್ಕೆ ಚೀನಾ ವಿರೋಧ ವ್ಯಕ್ತಪಡಿಸಿತ್ತು. ನಿಷೇಧದ ಮೂಲಕ ಭಾರತ ಹೂಡಿಕೆದಾರರ ನಿಯಮ ಉಲ್ಲಂಘನೆ ಮಾಡುತ್ತಿದೆ ಎಂದು ಹೇಳಿತ್ತು.
2020ರ ಜೂನ್ 15-16ರಂದು ಗಲ್ವಾನ್ ಕಣಿವೆಯಲ್ಲಿ ಚೀನಾ-ಭಾರತ ಯೋಧರ ನಡುವೆ ಸಂಘರ್ಷ ನಡೆದು, ಭಾರತ ಸೇನೆಯ 20ಕ್ಕೂ ಹೆಚ್ಚು ಸೈನಿಕರು ಹುತಾತ್ಮರಾಗಿದ್ದರು. ಇದು ಚೀನಾ ದ ಪೀಪಲ್ಸ್ ಲಿಬರೇಶನ್ ಆರ್ಮಿ ಯುದ್ಧ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಆಕ್ರಮಣವಾಗಿತ್ತು. ಅದಾದ ಮೇಲೆ ಗಡಿಯಲ್ಲಿ ಅದರ ಉಪಟಳ ನಿರಂತರವಾಗಿ ಮುಂದುವರಿದಿದೆ. ಹೀಗೆ ಗಲ್ವಾನ್ ಸಂಘರ್ಷದ ಬೆನ್ನಲ್ಲೇ ಭಾರತ ಚೀನಾ ವಿರುದ್ಧ ಡಿಜಿಟಲ್ ಸಮರವನ್ನು ಮುಂದುವರಿಸಿದೆ. ಇಲ್ಲಿಯವರೆಗೆ ಚೀನಾದ 220ಕ್ಕೂ ಅಧಿಕ ಮೊಬೈಲ್ ಆ್ಯಪ್ಗಳನ್ನು ಬ್ಯಾನ್ ಮಾಡಿದೆ.
ಇದನ್ನೂ ಓದಿ: Online Gaming: ಕರ್ನಾಟಕದಲ್ಲಿ ಆನ್ಲೈನ್ ಗೇಮಿಂಗ್ಗೆ ಗ್ರೀನ್ ಸಿಗ್ನಲ್ ನೀಡಿದ ಹೈಕೋರ್ಟ್
Published On - 10:51 am, Mon, 14 February 22