ಖಲಿಸ್ತಾನಿ ಬೆಂಬಲಿಗರ ಟ್ವಿಟ್ಟರ್ ಖಾತೆಗಳನ್ನು ಭಾರತದಲ್ಲಿ ಬ್ಲಾಕ್ ಮಾಡಲಾಗಿದೆ. ಖಲಿಸ್ತಾನಿ ಬೆಂಬಲಿಗ ಅಮೃತ್ಪಾಲ್ ಸಿಂಗ್ ಇದೀಗ ತಲೆಮರೆಸಿಕೊಂಡಿದ್ದಾರೆ. ಆತನನ್ನು ಸೆರೆ ಹಿಡಿಯಲು ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪಂಜಾಬ್‌ನಲ್ಲಿ ಖಲಿಸ್ತಾನ್ ಬೆಂಬಲಿಗ ಅಮೃತಪಾಲ್ ವಿರುದ್ಧ ನಡೆಯುತ್ತಿರುವ ಕ್ರಮದ ನಡುವೆ, ವಿದೇಶದಲ್ಲಿ ಕುಳಿತು ಖಲಿಸ್ತಾನಿ ಅಜೆಂಡಾವನ್ನು ಸಾಮಾಜಿಕ ಮಾಧ್ಯಮದಲ್ಲಿ ನಡೆಸುವವರ ವಿರುದ್ಧ ಭಾರತ ಸರ್ಕಾರವೂ ಕ್ರಮ ತೆಗೆದುಕೊಳ್ಳಲು ಪ್ರಾರಂಭಿಸಿದೆ. ಇಂತಹ ಕೆಲವು ಟ್ವಿಟ್ಟರ್ ಖಾತೆಗಳನ್ನು ಭಾರತದಲ್ಲಿ ನಿಷೇಧಿಸಲಾಗಿದ್ದು, ಇವುಗಳ ಸಹಾಯದಿಂದ ಭಾರತದ ವಿರುದ್ಧ ವಿಷ ಉಗುಳಲಾಗುತ್ತಿದೆ. ವಿಶೇಷವೆಂದರೆ ಕೆನಡಾ ಸಂಸದ ಹಾಗೂ ನ್ಯೂ ಡೆಮಾಕ್ರೆಟಿಕ್ ಪಕ್ಷದ ನಾಯಕ ಜಗ್ಮೀತ್ ಸಿಂಗ್ ಅವರ ಖಾತೆಯೂ ಸೇರಿದೆ.
ಜಗ್ಮೀತ್ ಸಿಂಗ್ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಭಾರತ ವಿರೋಧಿ ಅಜೆಂಡಾವನ್ನು ಬಹಳ ಸಮಯದಿಂದ ನಡೆಸುತ್ತಿದ್ದಾರೆ. ಕೆನಡಾದ ಸಂಸದರ ಹೊರತಾಗಿಯೂ ಈ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಕೆನಡಾದ ಕವಯಿತ್ರಿ ರೂಪಿ ಕೌರ್ , ಯುನೈಟೆಡ್ ಸಿಖ್ ಆರ್ಗನೈಸೇಷನ್ ಮತ್ತು ಕೆನಡಾದ ಗುರ್ದೀಪ್ ಸಿಂಗ್ ಸಹೋಟಾ ಅವರ ಟ್ವಿಟ್ಟರ್ ಖಾತೆಯೂ ಇದೆ.
ಮತ್ತಷ್ಟು ಓದಿ: ಅಮೆರಿಕದಲ್ಲಿ ಭಾರತದ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿಗಳ ದಾಳಿ, ಕಚೇರಿ ಧ್ವಂಸ
ಖಲಿಸ್ತಾನಿ ಬೆಂಬಲಿಗರು ಇತ್ತೀಚೆಗೆ ಬ್ರಿಟನ್ ರಾಜಧಾನಿ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಹಾಗೂ ಕಾನ್ಸುಲೇಟ್ ಮತ್ತು ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋ ನಗರದ ಮೇಲೆ ದಾಳಿ ನಡೆಸಿದ್ದರು.
ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಖಲಿಸ್ತಾನಿ ಬೆಂಬಲಿಗರು ಹೈಕಮಿಷನ್ ಕಟ್ಟಡವನ್ನು ಹತ್ತಿ ಭಾರತದ ಧ್ವಜವನ್ನು ಕೆಳಗಿಳಿಸಿದ್ದರು. ಅದೇ ಸಮಯದಲ್ಲಿ ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ಕಾನ್ಸುಲೇಟ್ ಮೇಲೆ ದಾಳಿ ನಡೆಸಿದ್ದಾರೆ.
ಪಂಜಾಬ್‌ನಲ್ಲಿ ಪ್ರತ್ಯೇಕವಾದಿಗಳ ವಿರುದ್ಧ ಕ್ರಮಗಳನ್ನು ತೆಗೆದುಕೊಂಡ ಬಳಿಕ ಈ ಬೆಳವಣಿಗೆ ಕಾಣಿಸಿಕೊಳ್ಳುತ್ತಿವೆ, ವಾಸ್ತವವಾಗಿ ಪಂಜಾಬ್‌ನಲ್ಲಿ ಖಲಿಸ್ತಾನಿ ಬೆಂಬಲಿಗ ಅಮೃತ್ ಪಾಲ್ ಸಿಂಗ್ ವಿರುದ್ಧ ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ. ಅವರ ಸುಮಾರು 112 ಬೆಂಬಲಿಗರನ್ನು ಇದುವರೆಗೆ ಬಂಧಿಸಲಾಗಿದ್ದು, ಅಮೃತ್ಪಾಲ್ ಬಂಧನದ ಭಯದಿಂದ ಪರಾರಿಯಾಗಿದ್ದಾರೆ. ಪಂಜಾಬ್ ಪೊಲೀಸರು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ