ದೆಹಲಿ: ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಕೊರೊನಾ ಹೆಚ್ಚುತ್ತಿರುವ ರಾಜ್ಯಗಳಾದ ಮಹಾರಾಷ್ಟ್ರ, ಪಂಜಾಬ್, ಚತ್ತೀಸ್ಗಢ ರಾಜ್ಯಗಳಿಗೆ ಕೇಂದ್ರದಿಂದ ವೈದ್ಯಕೀಯ ತಜ್ಞರನ್ನು ಕಳುಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಸಂಪುಟ ಕಾರ್ಯದರ್ಶಿ, ಪ್ರಧಾನಿಯವರ ಮುಖ್ಯ ಕಾರ್ಯದರ್ಶಿ ಮತ್ತು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಸೇರಿದಂತೆ ಇನ್ನಿತರ ಹಿರಿಯ ಅಧಿಕಾರಿಗಳು ಈ ಉನ್ನತ ಮಟ್ಟದ ಸಭೆಯಲ್ಲಿ ಪಾಲ್ಗೊಂಡಿದ್ದರು.
ಸಾಮಾಜಿಕ ಅಂತರ ಮತ್ತು ಕೊವಿಡ್ ತಡೆಯ ಇತರ ನಿಯಮಾವಳಿಗಳನ್ನು ಪಾಲಿಸದ ಕಾರಣ ಸೋಂಕು ವೇಗವಾಗಿ ಹೆಚ್ಚುತ್ತಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಅಲ್ಲದೇ, ರೂಪಾಂತರಗೊಂಡ ಕೊರೊನಾ ತಳಿಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ. ಸದ್ಯ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಹಿಂದೆ ರೂಪಾಂತರಿ ಕೊರೊನಾ ವೈರಾಣುವಿನ ಪಾತ್ರವಿದೆ ಎಂದು ಉನ್ನತ ಮಟ್ಟದ ಸಭೆ ತೀರ್ಮಾನಿಸಿದೆ.
ಇಂದಷ್ಟೇ ಮಹಾರಾಷ್ಟ್ರದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯ ಲಾಕ್ಡೌನ್ ಘೋಷಣೆ ಮಾಡಲಾಗಿದೆ. ನಿನ್ನೆಯ ಕೊರೊನಾ ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ ಒಂದೇ ದಿನ 47,913 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿವೆ. ದೇಶದ ಇಡೀ ದೇಶದ ದೇಶದ ಶೇ 91.4 ರಷ್ಟು ಕೊರೊನಾ ಪ್ರಕರಣಗಳು 10 ರಾಜ್ಯಗಳಿಂದಲೇ ದಾಖಲಾಗುತ್ತಿವೆ. ಅಲ್ಲದೇ ಕೊರೊನಾದಿಂದ ಮೃತಪಡುತ್ತಿರುವವರ ಪೈಕಿ ಶೇ 90.9ರಷ್ಟು ಜನರು ಈ 10 ರಾಜ್ಯಗಳಲ್ಲಿ ಮೃತಪಡುತ್ತಿದ್ದಾರೆ.
ಭಾರತದಲ್ಲಿ ಹೆಚ್ಚುತ್ತಿದೆ ಕೊರೊನಾ ಸೋಂಕು
ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 93,249 ಜನರಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಪೀಡಿತರ ಸಂಖ್ಯೆ 1,24,85,509ಕ್ಕೆ ಏರಿಕೆಯಾದಂತಾಗಿದೆ. ಕಳೆದ 24 ಗಂಟೆಯಲ್ಲಿ ಕೊರೊನಾಗೆ 513 ಜನರು ಬಲಿಯಾಗಿದ್ದಾರೆ. ಈ ಮೂಲಕ ಈವರೆಗೆ ಕೊರೊನಾ ಸೋಂಕು ತಗುಲಿ ಮೃತಪಟ್ಟ ಭಾರತೀಯರ ಸಂಖ್ಯೆ 1,64,623ನ್ನು ತಲುಪಿದೆ. ಕೊವಿಡ್ನಿಂದ 1,16,29,289 ಜನರು ಹುಷಾರಾಗಿದ್ದು, ಸದ್ಯ ದೇಶದಲ್ಲಿ ಇರುವ ಸಕ್ರಿಯ ಪ್ರಕರಣಗಳ ಸಂಖ್ಯೆ 6,91,597. ಕೊವಿಡ್ ಲಸಿಕೆ ವಿತರಣೆ ತೀವ್ರಗತಿಯಲ್ಲಿ ನಡೆಯುತ್ತಿದ್ದು, ಭಾರತದಲ್ಲಿ ಈವರೆಗೆ 7,59,79,651 ಜನರಿಗೆ ಕೊವಿಡ್ ಲಸಿಕೆ ನೀಡಲಾಗಿದೆ.
2020ರ ಸೆಪ್ಟೆಂಬರ್ ನಂತರ ಕಳೆದ 24 ಗಂಟೆಯಲ್ಲಿ ಹೆಚ್ಚಳವಾದ ಕೊರೊನಾ ಸೋಂಕಿತರ ಸಂಖ್ಯೆಯೇ ಈವರೆಗೆ ಒಂದೇ ದಿನದಲ್ಲಿ ಹೆಚ್ಚು ಸೋಂಕಿತರು ಪತ್ತೆಯಾದ ದಿನವಾಗಿದೆ. ಅಲ್ಲದೇ 2020ರ ಅಕ್ಟೋಬರ್ ನಂತರ ಅತಿ ಹೆಚ್ಚು ಜನರು ಕೊರೊನಾಕ್ಕೆ ಬಲಿಯಾದ ದಿನವೂ ನಿನ್ನೆಯೇ ಆಗಿದೆ. ಕೊರೊನಾದಿಂದ ಗುಣಮುಖರಾಗುವ ರಾಷ್ಟ್ರೀಯ ಶೇಕಡಾ ಪ್ರಮಾಣ 93.14ಕ್ಕೆ ಕುಸಿದಿದೆ. ದೇಶದ 8 ರಾಜ್ಯಗಳಲ್ಲಿ ಕೊರೊನಾ ಸೋಂಕು ಪ್ರಕರಣಗಳು ತೀವ್ರಗತಿಯಲ್ಲಿ ಏರುತ್ತಿದ್ದು ಅವುಗಳ ಪೈಕಿ ಕರ್ನಾಟಕವೂ ಇದೆ ಎಂಬುದು ಕಳವಳದ ಸಂಗತಿಯಾಗಿದೆ. ಕೊರೊನಾ ಹೆಚ್ಚುತ್ತಿರುವ ಇನ್ನುಳಿದ ರಾಜ್ಯಗಳಲ್ಲಿ ಮಹಾರಾಷ್ಟ್ರ, ತಮಿಳುನಾಡು,ಚತ್ತೀಸ್ಗಢ, ದೆಹಲಿ, ಉತ್ತರ ಪ್ರದೇಶ, ಮಧ್ಯಪ್ರದೇಶ, ಪಂಜಾಬ್ ರಾಜ್ಯಗಳು ಸೇರಿವೆ.
ಮಹಾರಾಷ್ಟ್ರದಲ್ಲಿ ಬಿಗಿ ನಿಯಮ
ಗಣನೀಯ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಕೊರೊನಾ ಸೋಂಕಿಗೆ ತಡೆಯೊಡ್ಡಲು ಸಂಪೂರ್ಣ ಮಹಾರಾಷ್ಟ್ರ ರಾಜ್ಯದಲ್ಲಿ ರಾತ್ರಿ ಕರ್ಫ್ಯೂ ಮತ್ತು ವಾರಾಂತ್ಯದ ಲಾಕ್ಡೌನ್ ವಿಧಿಸಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಹೆಚ್ಚುತ್ತಿರುವ ಕೊರೊನಾ ಸೋಂಕಿನ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾತ್ರಿ 8 ಗಂಟೆಯಿಂದ ಬೆಳಗ್ಗೆ 7 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮಹಾರಾಷ್ಟ್ರ ಸರ್ಕಾರ ತಿಳಿಸಿದೆ.
ಕೇವಲ ಅನಿವಾರ್ಯ ಸೇವೆಗಳು ಮಾತ್ರ ರಾತ್ರಿ ಸಮಯದಲ್ಲಿ ಕರ್ತವ್ಯ ನಿರ್ವಹಿಸಬಹುದು. ಚಿತ್ರಮಂದಿರಗಳು, ಗಾರ್ಡನ್, ಮತ್ತು ಆಟದ ಅಂಗಣಗಳನ್ನು ತೆರೆಯುವಂತಿಲ್ಲ. ಸರ್ಕಾರಿ ಕಚೇರಿಗಳನ್ನು ಅರ್ಧದಷ್ಟು ಸಿಬ್ಬಂದಿಗಳ ಮೂಲಕ ತೆರೆಯಬಹುದು. ಕಟ್ಟಡ ನಿರ್ಮಾಣ, ಮಾರುಕಟ್ಟೆ ಮತ್ತು ಕಾರ್ಖಾನೆಗಳ ಚಟುವಟಿಕೆಗಳು ಕೊರೊನಾ ತಡೆ ಮಾರ್ಗಸೂಚಿಯ ಪ್ರಕಾರ ಕಾರ್ಯನಿರ್ವಹಿಸಬಹುದು ಎಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ.
ಇದನ್ನು ಓದಿ: ಕೊರೊನಾ ಹೆಚ್ಚಳದ ಮಧ್ಯೆ ರಾಜ್ಯಕ್ಕೆ ಗುಡ್ ನ್ಯೂಸ್: ಕರ್ನಾಟಕಕ್ಕೆ ತುರ್ತಾಗಿ 15.25 ಲಕ್ಷ ಕೊರೊನಾ ಲಸಿಕೆ ರವಾನೆ
ಕೊವಿಡ್ ಹಾವಳಿ ಶಾಂತವಾದ ನಂತರ ಹುಟ್ಟಿಕೊಳ್ಳಲಿವೆಯೇ ಸೂಪರ್ ಬ್ಯಾಕ್ಟೀರಿಯಾಗಳು?
Published On - 8:54 pm, Sun, 4 April 21