ಕೊವಿಡ್ ಹಾವಳಿ ಶಾಂತವಾದ ನಂತರ ಹುಟ್ಟಿಕೊಳ್ಳಲಿವೆಯೇ ಸೂಪರ್ ಬ್ಯಾಕ್ಟೀರಿಯಾಗಳು?

ವೈರಾಣುಗಳ, ರೋಗಾಣುಗಳ ಸಂಖ್ಯೆ ಕಡಿಮೆಯಿರುವ ಕಡೆಯೆಲ್ಲ ಮಿತಿಮೀರಿ ಸ್ಯಾನಿಟೈಸರ್ ಬಳಸಿ ಒಳ್ಳೆಯ ಸೂಕ್ಷ್ಮಜೀವಿಗಳ ನಾಶಕ್ಕೆ ಕಾರಣರಾಗಿ, ಮುಂದೊಮ್ಮೆ ಆ ಸೂಕ್ಷ್ಮಜೀವಿಗಳಲ್ಲಿ ಮ್ಯುಟೇಷನ್ ಉಂಟಾಗಲು ನಾವು ಕಾರಣರಾಗದಿರೋಣ.

ಕೊವಿಡ್ ಹಾವಳಿ ಶಾಂತವಾದ ನಂತರ ಹುಟ್ಟಿಕೊಳ್ಳಲಿವೆಯೇ ಸೂಪರ್ ಬ್ಯಾಕ್ಟೀರಿಯಾಗಳು?
ಪ್ರಾತಿನಿಧಿಕ ಚಿತ್ರ
Follow us
| Updated By: guruganesh bhat

Updated on: Apr 02, 2021 | 10:44 AM

ಕೊರೊನಾ ನಿಯಂತ್ರಿಸಲು ಹೋಗಿ ಹೊಸ ವೈರಸ್​ಗೆ ಆಹ್ವಾನ ನೀಡುತ್ತಿದ್ದೇವಾ? ಅತಿಯಾದ ಸ್ಯಾನಿಟೈಸರ್​ ಬಳಕೆಯೇ ತಿರುಗುಬಾಣವಾಗಬಹುದು ಎಚ್ಚರ! ಎಂಬ ಲೇಖನದಲ್ಲಿ ನಿನ್ನೆ ಸೂಪರ್​ ಬ್ಯಾಕ್ಟೀರಿಯಾಗಳ ಕುರಿತು, ಅತಿಯಾದ ಸ್ಯಾನಿಟೈಸರ್ ಬಳಕೆಯಿಂದ ಅವು ನಮ್ಮ ಮೇಲೆ ಬೀರಬಹುದಾದ ಅಡ್ಡಪರಿಣಾಮದ ಕುರಿತು ತಿಳಿದುಕೊಳ್ಳಲಾಗಿತ್ತು. ಇಂದು ಅದರ ಮುಂದುವರೆದ ಭಾಗವಾಗಿ ರೂಪಾಂತರಿ ವೈರಾಣುಗಳು ಮತ್ತು ಅವುಗಳ ಅಪಾಯದ ಕುರಿತು ತಿಳಿದುಕೊಳ್ಳೋಣ.

ಸ್ಟ್ಯಾಫೈಲೋಕಾಕಸ್ ಆರಿಯಸ್ (Staphylococcus aureus) ಎಂಬ ಬ್ಯಾಕ್ಟೀರಿಯಾದ ಉದಾಹರಣೆಯ ಮೂಲಕ ಈ ಮ್ಯುಟೇಷನ್, ಬ್ಯಾಕ್ಟೀರಿಯಲ್ ರೆಸಿಸ್ಟೆನ್ಸ್ ಎಲ್ಲವನ್ನೂ ಸ್ವಲ್ಪ ಸುಲಭವಾಗಿ ತಿಳಿದುಕೊಳ್ಳಬಹುದು. ಸ್ಟ್ಯಾಫೈಲೋಕಾಕಸ್ ಆರಿಯಸ್ ಎಂಬುದು ಎಲ್ಲ ಕಡೆ ಇರುವ ಸಾಮಾನ್ಯವಾದ ರೋಗಾಣು ಬ್ಯಾಕ್ಟೀರಿಯಾವಾಗಿದ್ದು ಕೆಲವೊಂದಿಷ್ಟು ಚರ್ಮದ ಖಾಯಿಲೆಗಳನ್ನು, ಶ್ವಾಸಕೋಶದ ಸೋಂಕನ್ನು, ಸ್ತ್ರೀಯರಲ್ಲಿ ಜನನಾಂಗದ ಸೋಂಕನ್ನು ಉಂಟು ಮಾಡುತ್ತದೆ. ಸರ್ ಅಲೆಕ್ಸಾಂಡರ್ ಫ್ಲೆಮಿಂಗ್ ಎನ್ನುವ ವಿಜ್ಞಾನಿ ಕಂಡುಹಿಡಿದ ಜಗತ್ತಿನ ಮೊಟ್ಟಮೊದಲ Antibiotic ಪೆನ್ಸಿಲಿನ್ ಹಾಗೂ ಬೀಟಾ ಲ್ಯಾಕ್ಟಮ್ಸ್ (Beta lactams) ಎಂಬ ಔಷಧಗಳ ಗುಂಪಿಗೆ ಸೇರಿದ ಸುಮಾರು ಆಂಟಿಬಯಾಟಿಕ್ಸ್​ಗಳಿಂದ ಸ್ಟ್ಯಾಫೈಲೋಕಾಕಸ್ ಆರಿಯಸ್​ನಿಂದಾಗಿ ಬರುವ ಬಹಳಷ್ಟು ರೋಗಗಳನ್ನು ಗುಣಪಡಿಸಬಹುದು. 1960ರಲ್ಲಿ ಒಮ್ಮೆ ಬೀಟಾ ಲ್ಯಾಕ್ಟಮ್ ಗುಂಪಿಗೆ ಸೇರಿದ ಮೆಥಿಸಿಲಿನ್ ಎಂಬ ಆಂಟಿಬಯಾಟಿಕ್ ಕೊಟ್ಟರೂ ಈ ಸ್ಟ್ಯಾಫೈಲೋಕಾಕಸ್ ಆರಿಯಸ್ ಗುಂಪಿನ ಕೆಲವು ಬ್ಯಾಕ್ಟೀರಿಯಾಗಳು ಸಾಯಲಿಲ್ಲ. ಅಂಥ ಬ್ಯಾಕ್ಟೀರಿಯಾಗಳ ವಂಶವಾಹಿಯನ್ನು ಅಧ್ಯಯನ ಮಾಡಿದಾಗ ಅವುಗಳ DNAಯಲ್ಲಿ ಆದ ಬದಲಾವಣೆ ಅಂದರೆ ಮ್ಯುಟೇಷನ್​ನಿಂದಾಗಿ ಸ್ಟ್ಯಾಫೈಲೋಕಾಕಸ್ ಆರಿಯಸ್ ಗುಂಪಿನ ಕೆಲವು ಬ್ಯಾಕ್ಟೀರಿಯಾಗಳು ಮೆಥಿಸಿಲಿನ್ ಎಂಬ ಆಂಟಿಬಯಾಟಿಕ್ ಅನ್ನು ತಡೆದುಕೊಂಡು ಬದುಕುವ ಸಾಮರ್ಥ್ಯವನ್ನು ಪಡೆದಿದ್ದವು ಎನ್ನುವುದು ತಿಳಿದುಬಂದಿತ್ತು.

ಇವುಗಳಿಗೆ Methicillin Resistant Staphylococcus Aureus (MRSA) ಎಂದು ಕರೆಯಲಾಯಿತು. ಎಲ್ಲ ಬ್ಯಾಕ್ಟೀರಿಯಾಗಳೂ ಮೆಥಿಸಿಲಿನ್​ನಿಂದ ಸಾಯದೇ ಬದುಕುಳಿಯುತ್ತವೆ ಅಂತಲ್ಲ. ವಂಶವಾಹಿಯಲ್ಲಿ ಬದಲಾವಣೆಯಾಗಿ Resistance ಪಡೆದುಕೊಂಡ ಕೆಲವು ಬ್ಯಾಕ್ಟೀರಿಯಾಗಳು ಈ ಆಂಟಿಬಯಾಟಿಕ್​ನಿಂದ ಸಾಯುವುದಿಲ್ಲ. MRSA ಬ್ಯಾಕ್ಟೀರಿಯಾಗಳನ್ನು ಕೊಲ್ಲಲು ನಂತರ ವ್ಯಾಂಕೋಮೈಸಿನ್(Vancomycin) ಎಂಬ ಮತ್ತೊಂದು ಆಂಟಿಬಯಾಟಿಕ್ ಬಳಸಲಾಯಿತು. ಕಾಲಕ್ರಮೇಣ ಕೆಲವು MRSAಗಳು ಮತ್ತೊಂದು ಬಲವಾದ ಮ್ಯುಟೇಷನ್​ಗೆ ಒಳಗಾಗಿ ವ್ಯಾಂಕೋಮೈಸಿನ್ ಅನ್ನು ಕೂಡ ತಡೆದುಕೊಂಡು ಬದುಕುವ ಶಕ್ತಿಯನ್ನು ಪಡೆದವು. ಅವುಗಳಿಗೆ Vancomycin Resistant Staphylococcus Aureus(VRSA) ಎಂದು ಕರೆಯಲಾಯಿತು. ಈ VRSA ಗುಂಪಿಗೆ ಸೇರಿದ ಸೂಪರ್ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಲು ಸದ್ಯಕ್ಕೆ ನಮ್ಮಲ್ಲಿರುವುದು ಬೆರಳೆಣಿಕೆಯ ಆಂಟಿಬಯಾಟಿಕ್​ಗಳು ಮಾತ್ರ. ಹಾಗಂತ ಈ MRSA, VRSA ಬ್ಯಾಕ್ಟೀರಿಯಾಗಳು ಎಲ್ಲ ಕಡೆಗಳಲ್ಲಿ, ಎಲ್ಲ ಆಸ್ಪತ್ರೆಗಳಲ್ಲಿ ಇಲ್ಲ. ಆದರೆ ಇರುವ ಕಡೆ ಅವು ಬಹು ಅಪಾಯಕಾರಿ.

Over use of Sanitizer may lead to the creation of super bacterias

ಪ್ರಾತಿನಿಧಿಕ ಚಿತ್ರ

ಮೇಲಿನ ಉದಾಹರಣೆಯಲ್ಲಿ ಹೇಳಲಾದ ಮ್ಯುಟೇಷನ್​ನಲ್ಲಿ Mutagen ಆಗಿ ವರ್ತಿಸಿದ್ದು ಮೆಥಿಸಿಲೀನ್ ಮತ್ತು ವ್ಯಾಂಕೋಮೈಸಿನ್ ಎಂಬ ಆಂಟಿಬಯಾಟಿಕ್​ಗಳು. ಅದೇ ರೀತಿ ನಾವು ಬಳಸುವ ಸ್ಯಾನಿಟೈಸರ್​ನಿಂದಾಗಿ ಬರೀ ಕೊರೊನಾ ವೈರಸ್ ಮಾತ್ರವಲ್ಲದೆ, ರೋಗವನ್ನುಂಟು ಮಾಡುವ, ಮಾಡದ ಎಷ್ಟೋ ಬ್ಯಾಕ್ಟೀರಿಯಾ, ಫಂಗಸ್​ಗಳು ಕೂಡಾ ಸಾಯುತ್ತವೆ. ಆಂಟಿಬಯಾಟಿಕ್​ಗಳಿಗೆ resistance ಪಡೆದುಕೊಳ್ಳುವ ಬ್ಯಾಕ್ಟಿರೀಯಾಗಳಂತೆ ಕ್ರಮೇಣವಾಗಿ ಹಲವು ವರ್ಷಗಳ ನಂತರ ದೀರ್ಘಕಾಲೀನ ಸ್ಯಾನಿಟೈಸರ್ ಬಳಕೆಯಿಂದಾಗಿ ಬ್ಯಾಕ್ಟೀರಿಯಾಗಳಲ್ಲಿ ಹಾಗೂ ಇತರ ರೋಗಾಣುಗಳಲ್ಲಿ ಮ್ಯುಟೇಷನ್ ಉಂಟಾಗಿ ಅವುಗಳ ವಂಶವಾಹಿಯಲ್ಲಿ ಬದಲಾವಣೆಯಾದರೆ ಕಷ್ಟ. ನಿರುಪದ್ರವಿಯಾದ ಸೂಕ್ಷ್ಮಜೀವಿಗಳಲ್ಲಿ ಇಂಥ ಮ್ಯುಟೇಷನ್ ಉಂಟಾದರೆ ಅಷ್ಟು ತೊಂದರೆಯಿಲ್ಲ. ಆದರೆ ರೋಗವನ್ನುಂಟು ಮಾಡುವ ಸಾಮರ್ಥ್ಯವುಳ್ಳ Pathogenic organisms ಮ್ಯುಟೇಷನ್​​ಗೆ ಒಳಗಾಗಿ ಅವುಗಳ ವಂಶವಾಹಿಯಲ್ಲಾಗುವ ಬದಲಾವಣೆಯಿಂದ ಯಾವಾಗಲೂ ಅವುಗಳ ವಿರುದ್ಧ ಕೆಲಸ ಮಾಡುವ ಆಂಟಿಬಯಾಟಿಕ್​ಗಳು ಹಾಗೂ ಇತರ ಔಷಧಿಗಳು ನಿರುಪಯುಕ್ತವಾದರೆ ಅಪಾಯ ಕಟ್ಟಿಟ್ಟ ಬುತ್ತಿ. ಇಂಥ ರೋಗಾಣುಗಳನ್ನು ನಿಯಂತ್ರಿಸುವ ಸಾಮರ್ಥ್ಯವುಳ್ಳ ಒಳ್ಳೆ ಬ್ಯಾಕ್ಟೀರಿಯಾಗಳೂ ಕೂಡಾ ಮ್ಯುಟೇಷನ್​ಗೆ ಒಳಗಾಗಿ ರೋಗಾಣುಗಳ ಮೇಲೆ ತಮ್ಮ ನಿಯಂತ್ರಣವನ್ನು ಕಳೆದುಕೊಂಡು Symbiosis ಎನ್ನುವುದು ಇಲ್ಲವಾದರೆ ಮನುಕುಲ ಹಲವಾರು ಹೊಸ ಹೊಸ ರೀತಿಯ ಗಂಭೀರ ಖಾಯಿಲೆಗಳಿಗೆ ತುತ್ತಾಗುವ ಅಪಾಯವಿದೆ.ಈಗ ಎಗ್ಗಿಲ್ಲದಂತೆ ನಾವೆಲ್ಲರೂ ಬಳಸುತ್ತಿರುವ ಆಂಟಿಬಯಾಟಿಕ್​ಗಳನ್ನು ಕಂಡುಹಿಡಿಯಲು ವಿಜ್ಞಾನಿಗಳು ಹಿಂದೆ ಹತ್ತು ಹಲವು ವರ್ಷ ಪ್ರಯತ್ನಿಸಿದ್ದಾರೆ. ಬರಿಗಣ್ಣಿಗೆ ಕಾಣದ ಸೂಕ್ಷ್ಮಜೀವಿಯನ್ನು ಕೊಲ್ಲಲು ಬೇಕಾಗುವ ಹೊಸ ಔಷಧಿಗಳನ್ನು ಕಂಡುಹಿಡಿಯಲು ಆಗುವ ವೆಚ್ಚ ಬಲು ದುಬಾರಿಯಾದದ್ದು.

Over use of Sanitizer may lead to the creation of super bacterias

ಪ್ರಾತಿನಿಧಿಕ ಚಿತ್ರ

ಈ ಹಿನ್ನೆಲೆಯಲ್ಲಿ ರೋಗವನ್ನು ಹರಡುವ ಸೂಕ್ಷ್ಮಾಣುಜೀವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇರದ ಸ್ಥಳಗಳಲ್ಲೆಲ್ಲ ಅಂದರೆ ನಮ್ಮ ಮನೆಯಲ್ಲಿ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಸರ್ ಬಳಸುವುದರಿಂದ ಆ ಸ್ಯಾನಿಟೈಸರ್ ಮ್ಯೂಟಾಜೆನ್ ಆಗಿ ಸೂಕ್ಷ್ಮಾಣುಜೀವಿಗಳಲ್ಲಿ ಮ್ಯುಟೇಷನ್ ಉಂಟು ಮಾಡಿ ವಂಶವಾಹಿಯಲ್ಲಾಗುವ ಬದಲಾವಣೆಯಿಂದ ಈಗಿರುವ ಔಷಧಿಗಳು ರೋಗಾಣುಗಳ ಮೇಲೆ ಕೆಲಸ ಮಾಡದ ಸ್ಥಿತಿ ಉಂಟಾದರೆ ಸೂಪರ್ ಬ್ಯಾಕ್ಟೀರಿಯಾಗಳು ಹೊಸ ಹೊಸ ರೋಗಗಳ ಮೂಲಕ ಜಗತ್ತನ್ನು ಆಳುತ್ತವೆ. ಅವುಗಳನ್ನು ತಡೆಯಲು ನಮ್ಮ ಬಳಿ ಔಷಧಿಗಳು ಇಲ್ಲವಾಗಬಹುದು. ಸಂಶೋಧನೆ ನಡೆದು ಸೂಪರ್ ಬ್ಯಾಕ್ಟೀರಿಯಾಗಳನ್ನೂ ಕೊಲ್ಲುವ ಆಂಟಿಬಯಾಟಿಕ್ಸ್​ಗಳನ್ನು ತಯಾರಿಸುವ ಹೊತ್ತಿಗೆ ಸಾಕಷ್ಟು ಪ್ರಾಣಹಾನಿಯಾಗುವ ಸಾಧ್ಯತೆಯಿರುತ್ತದೆ.

ಸದ್ಯಕ್ಕೆ ನಮ್ಮನ್ನು ಕಾಡುತ್ತಿರುವುದು ಕೊರೊನಾ ವೈರಸ್ ಮಾತ್ರ. ಅದರ ವಿರುದ್ಧ ರಕ್ಷಣೆ ಪಡೆಯಬೇಕಾಗಿರುವುದೂ ಅನಿವಾರ್ಯ. ಆದರೆ ವೈರಾಣು ಹರಡುವುದನ್ನು ನಿಯಂತ್ರಿಸಲು ಎಲ್ಲಿ ಅಗತ್ಯವಿದೆಯೋ ಅಲ್ಲಿ ಮಾತ್ರ ಸ್ಯಾನಿಟೈಸರ್ ಬಳಸುವ ಬುದ್ಧಿವಂತಿಕೆಯನ್ನು ತೋರಿಸೋಣ. ವೈರಾಣುಗಳ ಸಂಖ್ಯೆ ಜಾಸ್ತಿ ಇರುವ ಆಸ್ಪತ್ರೆ, ಅದರ ಸುತ್ತಮುತ್ತಲಿನ ಪ್ರದೇಶ, ಜನಸಂದಣಿ ಹೆಚ್ಚಾಗಿರುವ ಸ್ಥಳಗಳಲ್ಲಿ ಅಗತ್ಯವಾಗಿ ಸ್ಯಾನಿಟೈಸರ್ ಬಳಸಿ ಉತ್ಕೃಷ್ಟ ಮಟ್ಟದ ಶುಚಿತ್ವವನ್ನು ಕಾಪಾಡೋಣ. ವೈರಾಣುಗಳು ಹೆಚ್ಚಾಗಿ ಇಲ್ಲದ, ರೋಗಾಣುಗಳ ಮೇಲೆ ನಿಯಂತ್ರಣ ಹೊಂದಿರುವ ಒಳ್ಳೆಯ ಸೂಕ್ಷ್ಮಾಣುಜೀವಿಗಳು ಹೆಚ್ಚಾಗಿರುವ ನಮ್ಮ ಮನೆಗಳಲ್ಲಿ ಅಗತ್ಯ ಮೀರಿ ಸ್ಯಾನಿಟೈಸರ್ ಬಳಸುವುದನ್ನು ಸ್ವಲ್ಪ ನಿಯಂತ್ರಿಸೋಣ. ವೈರಾಣುಗಳ, ರೋಗಾಣುಗಳ ಸಂಖ್ಯೆ ಕಡಿಮೆಯಿರುವ ಕಡೆಯೆಲ್ಲ ಮಿತಿಮೀರಿ ಸ್ಯಾನಿಟೈಸರ್ ಬಳಸಿ ಒಳ್ಳೆಯ ಸೂಕ್ಷ್ಮಜೀವಿಗಳ ನಾಶಕ್ಕೆ ಕಾರಣರಾಗಿ, ಮುಂದೊಮ್ಮೆ ಆ ಸೂಕ್ಷ್ಮಜೀವಿಗಳಲ್ಲಿ ಮ್ಯುಟೇಷನ್ ಉಂಟಾಗಲು ನಾವು ಕಾರಣರಾಗದಿರೋಣ.

ಈಗ ಬರೀ ಕೊರೊನಾ ವಿರುದ್ಧ ಮಾತ್ರ ಸೆಣೆಸುತ್ತಿದ್ದೇವೆ. ಆದರೆ ಅದನ್ನು ಹಿಮ್ಮೆಟ್ಟಿಸುವ ಭರದಲ್ಲಿ ಮ್ಯುಟೇಷನ್ ಆದ ಹೊಸ ಹೊಸ ಶಕ್ತಿಶಾಲಿ ಬ್ಯಾಕ್ಟೀರಿಯಾಗಳು, ವೈರಾಣುಗಳು ಸೃಷ್ಟಿಯಾದರೆ ಆ ಅನಾಹುತವನ್ನು ನಿಯಂತ್ರಿಸುವುದು ಸುಲಭವಲ್ಲ. ಒಂದು ವೇಳೆ ರೋಗಾಣುಗಳ ಮ್ಯುಟೇಷನ್​ ಶುರುವಾದರೆ ಹಲವಾರು ವರ್ಷಗಳ ನಂತರ ನಮ್ಮ ಮುಂದಿನ ಪೀಳಿಗೆ ಹತ್ತು ಹಲವು ಹೊಸ ಭಯಂಕರ ರೋಗಗಳಿಂದ ನಲುಗಬೇಕಾಗಬಹುದು. ಈ ಕುರಿತಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸಾಕಷ್ಟು ಸಂಶೋಧನೆಗಳು ನಡೆದು ಇದಮಿತ್ತಂ ಎಂಬ ಅಭಿಪ್ರಾಯ ಆದಷ್ಟು ಬೇಗ ಬಂದರೆ ಒಳ್ಳೆಯದು. ಉಳಿದಂತೆ ಸದ್ಯಕ್ಕೆ ಕೊವಿಡ್​ನಿಂದ ಬಚಾವಾಗಲು ಸದಾ ಮಾಸ್ಕ್ ಧರಿಸೋಣ. ಸಾರ್ವಜನಿಕ ಸ್ಥಳಗಳಲ್ಲಿ ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ.

ಲೇಖಕರು – ಡಾ.ಲಕ್ಷ್ಮೀಶ ಜೆ. ಹೆಗಡೆ ಪೂರಕ ಮಾಹಿತಿ – ಡಾ. ಮುಕೇಶ್ ಎಂ

ಲೇಖಕರ ಪರಿಚಯ: ಲೇಖಕ ಡಾ.ಲಕ್ಷ್ಮೀಶ ಜೆ. ಹೆಗಡೆ ಪರಿಚಯ ಹುಟ್ಟಿದ್ದು ಮಂಗಳೂರಿನಲ್ಲಿ. ಹತ್ತನೆಯ ತರಗತಿಯವರೆಗೆ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ವೈದ್ಯನಾಗುವ ಹಂಬಲದಿಂದ ಸಾಂಸ್ಕೃತಿಕ ನಗರಿಯ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡಿದರು. ನಂತರ ಮುಂಬೈನ ಲೋಕಮಾನ್ಯ ತಿಲಕ್ ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲಾ ಆಸ್ಪತ್ರೆಯ ಕೊವಿಡ್ ಐಸಿಯುನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ನೋವು ಶಮನ ಮಾಡುವುದನ್ನು ವೃತ್ತಿಯಾಗಿ ಹಾಗೂ ಬರವಣಿಗೆಯನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೊರೊನಾ ನಿಯಂತ್ರಿಸಲು ಹೋಗಿ ಹೊಸ ವೈರಸ್​ಗೆ ಆಹ್ವಾನ ನೀಡುತ್ತಿದ್ದೇವಾ? ಅತಿಯಾದ ಸ್ಯಾನಿಟೈಸರ್​ ಬಳಕೆಯೇ ತಿರುಗುಬಾಣವಾಗಬಹುದು ಎಚ್ಚರ!

ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದೆ, ಪರಿಸ್ಥಿತಿ ಹದಗೆಡುತ್ತಿದೆ: ಕೇಂದ್ರ ಆರೋಗ್ಯ ಸಚಿವಾಲಯ

ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಉದಾಹರಣೆ ಮೂಲಕ ಇಕ್ಕಟ್ಟಿನ ಪರಿಸ್ಥಿತಿ ವಿವರಿಸಿದ ರಮೇಶ್ ಅರವಿಂದ್
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಗೋಡೌನ್‌ನಲ್ಲಿ ಮೂಟೆಗಳ ಅಡಿ ಸಿಲುಕಿದ ಕಾರ್ಮಿಕರು; ಓರ್ವ ಸಾವು
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಹಬ್ಬ ಮುಗಿಯುತ್ತಿದ್ದಂತೆಯೇ ಗಣೇಶನಿಗೆ ಹೀಗಾ ಅವಮಾನ ಮಾಡುವುದು..!
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಸ್ಫೋಟಕ್ಕೆ ಉಗ್ರರ ಸಂಚು: ಕರ್ನಾಟಕ ಬಿಜೆಪಿ ಮುಖ್ಯ ಕಚೇರಿಗೆ ಭದ್ರತೆ ಹೆಚ್ಚಳ
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಧ್ರುವ ಸರ್ಜಾ ಮ್ಯಾನೇಜರ್​ ಬಂಧನದ ಬಗ್ಗೆ ಮಾಹಿತಿ ನೀಡಿದ ಪೊಲೀಸ್ ಕಮಿಷನರ್​
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಮದ್ಯ ಸೇವಿಸಿ ಆಸ್ಪತ್ರೆಗೆ ಬಂದ ವೈದ್ಯ; ಕುಡಿದ ಮತ್ತಿನಲ್ಲಿ ಬಿದ್ದು ಹೊರಳಾಟ
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ಗೃಹಲಕ್ಷ್ಮಿ ಯೋಜನೆಗೆ ನೀಡಲು ಸರ್ಕಾರದ ಬಳಿ ಹಣ ಇಲ್ವಾ?
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ವಿವೋ ಹೊಸ ಸ್ಮಾರ್ಟ್​​ಫೋನ್ ಕ್ಯಾಮೆರಾದ ಫೋಟೊ ಕ್ಲಾರಿಟಿ ಸೂಪರ್ಬ್
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ಮೈಸೂರು ದಸರಾ ಆನೆಗಳ ಮಾವುತ, ಕಾವಾಡಿಗರಿಗೆ ಹಾಟ್​​ ಬಾಕ್ಸ್​​ ಗಿಫ್ಟ್​​
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ
ವಿದ್ಯಾರ್ಥಿಗಳ ಮುಂದೆ ಮಾದಕ ಮೈಮಾಟ ತೋರಿಸಿಕೊಂಡು ನೃತ್ಯ ಮಾಡಿದ ಶಿಕ್ಷಕಿ