ನಿಮ್ಮ ಹೊಟ್ಟೆ ಕರಗಿಸಬೇಕು ಅಂದ್ರೆ ಚಹಾ ಜೊತೆ ಈ ತಿಂಡಿಗಳನ್ನು ಅಪ್ಪಿತಪ್ಪಿಯೂ ತಿನ್ನಬೇಡಿ
ಚಹಾಗೆ ಅಭಿಮಾನಿಗಳು ಹೆಚ್ಚು.. ಇದು ಕೇವಲ ಪಾನೀಯವಲ್ಲ ಇದೊಂದು ರೀತಿಯ ಎಮೋಷನ್. ಹಾಗಾಗಿಯೇ ಅನೇಕರಿಗೆ ಇದನ್ನು ಕುಡಿಯುವುದಕ್ಕೆ ತುಂಬಾ ಇಷ್ಟ. ಆದರೆ ಕೆಲವರು ಮಾತ್ರ ಚಹಾ ಜೊತೆ, ಕೆಲವು ಆಹಾರಗಳನ್ನು ಸೇವನೆ ಮಾಡಲು ಇಷ್ಟಪಡುತ್ತಾರೆ. ಚಹಾದ ಜೊತೆಗೆ ಮಿಕ್ಚರ್, ಟೋಸ್ಟ್, ಬ್ರೆಡ್ ಮತ್ತು ಬಿಸ್ಕತ್ತುಗಳನ್ನು ತಿನ್ನುತ್ತಾರೆ. ಆದರೆ ಫಿಟ್‌ನೆಸ್ ಕೋಚ್ ಅಂಕುಶ್ ರೈನಾ ಅವರು ಹೇಳುವ ಪ್ರಕಾರ ಈ ರೀತಿ ಅಭ್ಯಾಸ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಚಹಾ ಜೊತೆ ಯಾವ ಆಹಾರಗಳ ಸೇವನೆ ಮಾಡಬಾರದು ಮತ್ತು ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಚಹಾ… ಕೇವಲ ಒಂದು ಪಾನೀಯ ಮಾತ್ರವಲ್ಲ ಅದೊಂದು ರೀತಿಯ ಭಾಂದವ್ಯ. ಚಳಿಗಾಲವಾಗಿರಲಿ, ಮಳೆಗಾಲವಾಗಿರಲಿ ಅಥವಾ ಬೇಸಿಗೆಯೇ ಆಗಿರಲಿ, ಚಹಾ (Tea) ಕುಡಿಯುವುದನ್ನು ಜನ ಆನಂದಿಸುತ್ತಾರೆ. ಅದರಲ್ಲಿಯೂ ಕೆಲವರಿಗೆ, ಚಹಾ ಕುಡಿಯದೆ ದಿನ ಪ್ರಾರಂಭವಾಗುವುದೇ ಇಲ್ಲ. ಕೆಲವರಿಗೆ ಬೆಳಿಗ್ಗೆ ಈ ಪಾನೀಯವನ್ನು ಕುಡಿಯುವುದರಿಂದ ತಕ್ಷಣವೇ ಒಂದು ರೀತಿಯ ತಾಜಾತನ ಸಿಗುತ್ತದೆ. ಬೇಗ ಬೇಗ ಕೆಲಸ ಮಾಡಲು ಅನುಕೂಲ ಮಾಡಿಕೊಡುತ್ತದೆ ಎಂದು ನಂಬುತ್ತಾರೆ. ಆದರೆ ಕೆಲವರು ಮಾತ್ರ ತಿಂಡಿಗಳಿಲ್ಲದೆ ಚಹಾ ಕುಡಿಯುವುದಿಲ್ಲ ಚಹಾದ ಜೊತೆಗೆ ಮಿಕ್ಚರ್, ಟೋಸ್ಟ್, ಬ್ರೆಡ್ ಮತ್ತು ಬಿಸ್ಕತ್ತುಗಳನ್ನು ತಿನ್ನುತ್ತಾರೆ. ಇವು ತಿನ್ನುವುದಕ್ಕೆ ಬಹಳ ರುಚಿಕರವಾಗಿದ್ದರೂ ಕೂಡ ಇವುಗಳಿಂದ ಆರೋಗ್ಯ ಸಮಸ್ಯೆಗಳು ಬರುವುದು ಹೆಚ್ಚಾಗುತ್ತದೆ. ಜೊತೆಗೆ ಈ ರೀತಿ, ಚಹಾದ ಜೊತೆಗೆ ತಿನ್ನುವ ಆಹಾರಗಳಿಂದ ನಮ್ಮ ಆರೋಗ್ಯ ಹದಗೆಡಬಹುದು ಎಂದು ತಜ್ಞರು ಹೇಳುತ್ತಾರೆ. ಇದಕ್ಕೆ ಪೂರಕವೆಂಬಂತೆ ಫಿಟ್‌ನೆಸ್ ಕೋಚ್ ಆಗಿರುವ ಅಂಕುಶ್ ರೈನಾ (Ankush Raina) ಎನ್ನುವವರು ತಮ್ಮ ಫೇಸ್ಬುಕ್ ಖಾತೆಯಲ್ಲಿ, ಚಹಾ ಜೊತೆ ಸೇವನೆ ಮಾಡಬಾರದ ಆಹಾರಗಳ ಬಗ್ಗೆ ಮಾಹಿತಿ ನೀಡಿದ್ದು ಅವುಗಳನ್ನು ಸೇವನೆ ಮಾಡಿದರೆ ಉಂಟಾಗುವ ಆರೋಗ್ಯ (Health) ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. ಹಾಗಾದರೆ ಚಹಾ ಜೊತೆ ಯಾವ ಆಹಾರಗಳ ಸೇವನೆ ಮಾಡಬಾರದು ಮತ್ತು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.
ಮಿಕ್ಚರ್ ಅಥವಾ ನಮ್ಕಿನ್ ಜೊತೆ ಚಹಾ
ಅಂಕುಶ್ ರೈನಾ ತಿಳಿಸಿರುವ ಮಾಹಿತಿ ಪ್ರಕಾರ, ಮಿಕ್ಚರ್ ಅಥವಾ ನಮ್ಕಿನ್ (ಚುಡುವಾಗಳ ಮಿಶ್ರಣ, ಮುರುಕ್ಕು ಮತ್ತು ಚಿವ್ಡಾಗಳಿಂದ ತಯಾರಿಸಿದ ತಿಂಡಿಗಳು) ಸಾಮಾನ್ಯವಾಗಿ ಇವುಗಳಲ್ಲಿ ಉಪ್ಪು ಮತ್ತು ಖಾರ ಚೆನ್ನಾಗಿ ಮಿಶ್ರಣವಾಗಿರುವುದರಿಂದ ಎಲ್ಲರೂ ಈ ರುಚಿಯನ್ನು ಇಷ್ಟಪಡುತ್ತಾರೆ. ಮಾತ್ರವಲ್ಲ ಉಪ್ಪು, ಮಸಾಲೆಗಳ ಜೊತೆಗೆ ಎಣ್ಣೆಗಳನ್ನು ಬಳಸಿರುತ್ತಾರೆ ಹಾಗಾಗಿ ಇಂತಹ ಆಹಾರಗಳನ್ನು ಚಹಾದ ಜೊತೆ ಸೇವಿಸುವುದರಿಂದ ಹೊಟ್ಟೆ ಉಬ್ಬುವುದು, ಅನಿಲ ಮತ್ತು ಆಮ್ಲೀಯತೆ ಮುಂತಾದ ಸಮಸ್ಯೆಗಳು ಉಂಟಾಗಬಹುದು. ಈಗಾಗಲೇ ಇಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಈ ರೀತಿ ಆಹಾರ ಪದ್ಧತಿ ಅನುಸರಿಸಿದರೆ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.
ಫಿಟ್‌ನೆಸ್ ಕೋಚ್ ಅಂಕುಶ್ ರೈನಾ ಅವರ ವಿಡಿಯೋ ಇಲ್ಲಿದೆ ನೋಡಿ:
ಚಹಾದೊಂದಿಗೆ ಬ್ರೆಡ್
ಬಿಳಿ ಬ್ರೆಡ್ ಮೈದಾ ಸೇರಿಸಿರುವಂತಹ ಆಹಾರ ಪದಾರ್ಥ. ಇದು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವುದಲ್ಲದೆ ಕಡಿಮೆ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ. ಇದು ಇನ್ಸುಲಿನ್ ಸ್ಪೈಕ್‌ಗಳಿಗೆ ಕಾರಣವಾಗುತ್ತದೆ. ಕೊಬ್ಬು, ವಿಶೇಷವಾಗಿ ಹೊಟ್ಟೆಯ ಕೊಬ್ಬು ಸಂಗ್ರಹವಾಗುವುದಕ್ಕೆ ಮುಖ್ಯವಾಗಿ ಕಾರಣವಾಗುತ್ತದೆ. ಆದ್ದರಿಂದ, ಹೊಟ್ಟೆಯ ಕೊಬ್ಬು ಹೆಚ್ಚಾಗುವುದನ್ನು ತಪ್ಪಿಸಲು ಬಯಸುವವರು ಚಹಾ ಜೊತೆ ಬ್ರೆಡ್ ಗಳ ಸೇವನೆಯನ್ನು ಮಾಡಬಾರದು. ಮಾತ್ರವಲ್ಲ ಇದು ಎಸಿಡಿಟಿ ಸಮಸ್ಯೆ ಇರುವವರಿಗೆ ಕೂಡ ಒಳ್ಳೆಯದಲ್ಲ.
ಸಮೋಸಾ ಅಥವಾ ಪಕೋಡಾ ಜೊತೆ ಟೀ
ಸಾಮಾನ್ಯವಾಗಿ ಸಮೋಸಾ ಅಥವಾ ಪಕೋಡಾ ಜೊತೆ ಟೀ ಕುಡಿಯುವುದು ನಾಲಿಗೆಗೆ ಒಳ್ಳೆಯ ರುಚಿ ಕೊಡುತ್ತದೆ. ಆದರೆ, ಇದು ಡೀಪ್- ಫ್ರೈಡ್ ಕಾರ್ಬೋಹೈಡ್ರೇಟ್- ಲೋಡ್ಡ್ ಐಟಂ ಆಗಿದೆ. ಇದನ್ನು ಸೇವಿಸುವುದರಿಂದ ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಇದು ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಮತ್ತು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ. ಜೊತೆಗೆ ನಿಮ್ಮ ಲಿವರ್ ಗೆ ಹಾನಿ ಮಾಡುತ್ತದೆ. ಆದ್ದರಿಂದ, ಈ ಸಂಯೋಜನೆಯನ್ನು ಸಹ ತಪ್ಪಿಸುವುದು ಉತ್ತಮ.
ಚಹಾ ಜೊತೆ ಬಿಸ್ಕತ್ತುಗಳು
ಬಿಸ್ಕತ್ತುಗಳನ್ನು ಸಾಮಾನ್ಯವಾಗಿ ಚಹಾದೊಂದಿಗೆ ತಿನ್ನಲಾಗುತ್ತದೆ. ಆದರೆ ಬಿಸ್ಕತ್ತುಗಳನ್ನು ಹೆಚ್ಚಾಗಿ ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಟ್ರಾನ್ಸ್ ಕೊಬ್ಬಿನಂತಹ ಪದಾರ್ಥಗಳಿಂದ ತಯಾರಿಸಲಾಗುತ್ತದೆ. ಅವುಗಳನ್ನು ನಿಯಮಿತವಾಗಿ ತಿನ್ನುವುದರಿಂದ ನಮ್ಮ ದೇಹದಲ್ಲಿ ಹೆಚ್ಚುವರಿ ಕ್ಯಾಲೊರಿಗಳು ಸಂಗ್ರಹವಾಗುತ್ತವೆ, ಇದು ಸೊಂಟದ ಸುತ್ತ ಕೊಬ್ಬನ್ನು ಹೆಚ್ಚಿಸುತ್ತದೆ. ಇದರಿಂದ ತೂಕ ಹೆಚ್ಚಾಗುತ್ತದೆ.
ಇದನ್ನೂ ಓದಿ: ಪ್ರತಿ ರಾತ್ರಿ ಎರಡು ಬೆಳ್ಳುಳ್ಳಿ ಎಸಳು ತಿಂದರೆ, ಈ ಎಲ್ಲಾ ಕಾಯಿಲೆಗಳು ಕೇವಲ 10 ದಿನದಲ್ಲಿ ಮಾಯವಾಗುತ್ತೆ!
ಚಹಾ ಜೊತೆ ಟೋಸ್ಟ್
ಅನೇಕರು ಚಹಾದೊಂದಿಗೆ ಟೋಸ್ಟ್ ತಿನ್ನುವುದನ್ನು ಇಷ್ಟಪಡುತ್ತಾರೆ. ಈ ಟೋಸ್ಟ್ ಗರಿಗರಿಯಾಗಿ ಸಿಹಿಯಾಗಿರುವುದರಿಂದ ತುಂಬಾ ರುಚಿಕರವಾಗಿರುತ್ತದೆ. ಅದಕ್ಕಾಗಿಯೇ ಜನ ಇದನ್ನು ತಿನ್ನಲು ಹೆಚ್ಚಿನ ಆಸಕ್ತಿ ತೋರಿಸುತ್ತಾರೆ. ಆದರೆ ಟೋಸ್ಟ್ ಗಳಲ್ಲಿ ಪ್ರೋಟೀನ್ ಮತ್ತು ಫೈಬರ್ ನಂತಹ ಪೋಷಕಾಂಶಗಳ ಕೊರತೆ ಇರುತ್ತದೆ. ಹೆಚ್ಚುವರಿಯಾಗಿ, ಇದರಲ್ಲಿ ಬಹಳಷ್ಟು ಸಕ್ಕರೆ ಅಂಶ ಇರುವುದರಿಂದ. ಇದನ್ನು ಸೇವಿಸಿದ ಸ್ವಲ್ಪ ಸಮಯದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಕೆಗೆ ಕಾರಣವಾಗುತ್ತದೆ. ಜೊತೆಗೆ ಬೇಗನೆ ದಣಿದಂತೆ ಭಾಸವಾಗುತ್ತದೆ. ಮಾತ್ರವಲ್ಲ ಬಿಪಿ ಹೆಚ್ಚಾಗುತ್ತದೆ. ಆದ್ದರಿಂದ, ಅವುಗಳನ್ನು ತಿನ್ನುವುದನ್ನು ತಪ್ಪಿಸುವುದು ಉತ್ತಮ.
ಚಹಾದೊಂದಿಗೆ ಏನು ತಿನ್ನಬೇಕು?
ಮೇಲೆ ಹೇಳಿರುವ ಆಹಾರಗಳನ್ನು ಚಹಾ ಜೊತೆ ಸೇವನೆ ಮಾಡಬಾರದು ಎಂದರೆ, ಏನು ತಿನ್ನಬಹುದು? ಚಹಾದೊಂದಿಗೆ ಧಾನ್ಯ, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ಹೊಂದಿರುವ ಆಹಾರಗಳನ್ನು ಸೇವಿಸಬಹುದು. ಇದು ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ







