ಕೇವಲ ಈ 5 ಆರೋಗ್ಯಕರ ಅಭ್ಯಾಸ ಪಾಲಿಸುವ ಮೂಲಕ ಹೃದಯಾಘಾತವನ್ನು ತಡೆಯಬಹುದು
ಹೃದಯಾಘಾತ ಒಮ್ಮೆಗೆ ಹೇಳದೆ ಕೇಳದೆಯೇ ಬರುವಂತದ್ದಲ್ಲ. ಅದು ನಮಗೆ ಹಲವು ಬಾರಿ ಎಚ್ಚರಿಕೆಗಳನ್ನು ನೀಡುತ್ತದೆ. ನಾವು ಅವುಗಳನ್ನು ಗಮನಿಸಿ ಎಚ್ಛೆತ್ತುಕೊಳ್ಳಬೇಕಾಗುತ್ತದೆ. ಯಾವುದೇ ರೀತಿಯ ಆರೋಗ್ಯ ಸಮಸ್ಯೆಯೇ ಆಗಲಿ ಅದನ್ನು ಕಂಟ್ರೋಲ್ ಮಾಡುವ ಶಕ್ತಿ ನಮ್ಮ ಕೈಯಲ್ಲಿರುತ್ತದೆ. ಕೆಲವೊಂದು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಮುಂಚಿತವಾಗಿ ಜಾಗರೂಕರಾಗಿದ್ದಾಗ ಈ ರೀತಿ ಬರುವಂತಹ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು. ನಿರ್ದಿಷ್ಟವಾಗಿ ಹೇಳುವುದಾದರೆ, ಕೇವಲ 5 ಅಭ್ಯಾಸಗಳಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು. ಹಾಗಾದರೆ ಅವು ಯಾವವು ಎಂಬುದನ್ನು ತಿಳಿದುಕೊಳ್ಳಿ, ನೀವು ಕೂಡ ಇವುಗಳನ್ನು ಅನುಸರಿಸಿ.

ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚುತ್ತಿವೆ. ಕೆಲವರು ನೃತ್ಯ ಮಾಡುವಾಗ, ಇನ್ನು ಕೆಲವರು ಜಿಮ್‌ನಲ್ಲಿ ವ್ಯಾಯಾಮ (exercise) ಮಾಡುವಾಗ ಪ್ರಾಣ ಕಳೆದುಕೊಂಡವರಿದ್ದಾರೆ. ಪ್ರಸ್ತುತ ನಮ್ಮ ಜೀವನಶೈಲಿಯಿಂದಾಗಿ, ತುಂಬಾ ಚಿಕ್ಕ ವಯಸ್ಸಿಸಲ್ಲಿಯೇ ಹೃದಯಾಘಾತಕ್ಕೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ನಮ್ಮ ಆಹಾರ ಪದ್ಧತಿಯ ಬಗ್ಗೆ ಯಾವುದೇ ರೀತಿಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳದ ಕಾರಣ ಈ ರೀತಿಯ ಸಮಸ್ಯೆಗಳು ಉದ್ಭವಿಸುತ್ತಿವೆ. ಆದರೆ ಹೃದಯಾಘಾತವನ್ನು (Heart Attack) ತಡೆಗಟ್ಟಲು, ಕೆಲವು ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ತಜ್ಞರು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ಅಗತ್ಯವಾದ ಸಲಹೆಗಳನ್ನು ನೀಡಿದ್ದಾರೆ. ವಿಶೇಷವಾಗಿ ಐದು ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಈ ಸಮಸ್ಯೆಯನ್ನು ನಿವಾರಿಸಬಹುದಾಗಿದೆ. ಹಾಗಾದರೆ ಅವು ಯಾವುದು? ನಮ್ಮ ಜೀವನಶೈಲಿಯಲ್ಲಿ ಯಾವ ರೀತಿ ಬದಲಾವಣೆ ಮಾಡಿಕೊಂಡರೆ ಹೃದಯಾಘಾತ ಬರದಂತೆ ತಡೆಯಬಹುದು ಎಂಬುದನ್ನು ತಿಳಿದುಕೊಳ್ಳಿ.
ದೈಹಿಕ ಚಟುವಟಿಕೆ
ನೀವು ಎಷ್ಟೇ ಕಾರ್ಯನಿರತರಾಗಿದ್ದರೂ, ಪ್ರತಿದಿನ ಸ್ವಲ್ಪ ಹೊತ್ತಾದರೂ ದೈಹಿಕ ಚಟುವಟಿಕೆಯನ್ನು ಮಾಡಬೇಕು. ಇದರರ್ಥ ನೀವು ವ್ಯಾಯಾಮಕ್ಕಾಗಿ ಕನಿಷ್ಠ ಅರ್ಧ ಗಂಟೆಯನ್ನು ಮೀಸಲಿಡಬೇಕು. ಭಾರೀ ವ್ಯಾಯಾಮಗಳ ಅಗತ್ಯವಿಲ್ಲ. ಆರೋಗ್ಯಕ್ಕೆ ಪ್ರಯೋಜನಕಾರಿಯಾದ ಯೋಗ ಭಂಗಿಗಳನ್ನು ನೀವು ಮಾಡಬಹುದು. ವಾಕಿಂಗ್ ಹೋಗಬಹುದು. ಜೊತೆಗೆ ಜಾಗಿಂಗ್ ಕೂಡ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಸರಳ ವ್ಯಾಯಾಮಗಳು ಸಹ ಹೃದಯಾಘಾತದ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಹೃದ್ರೋಗ ತಜ್ಞರು ಹೇಳುತ್ತಾರೆ. ಸೈಕ್ಲಿಂಗ್, ನೃತ್ಯ ಮತ್ತು ತೋಟಗಾರಿಕೆಯಂತಹ ಚಟುವಟಿಕೆಗಳು ಹೃದಯವನ್ನು ಸುರಕ್ಷಿತವಾಗಿಡಲು ಸಹಾಯ ಮಾಡುತ್ತದೆ. ಹಾಗೆ ಮಾಡುವುದರಿಂದ, ಹೃದಯಾಘಾತದ ಅಪಾಯವು ಕನಿಷ್ಠ 30% ರಷ್ಟು ಕಡಿಮೆಯಾಗುವ ಸಾಧ್ಯತೆಯಿದೆ.
ಆಹಾರಕ್ರಮದ ಬಗ್ಗೆ ಎಚ್ಚರವಿರಲಿ
ಹೃದಯವು ಸರಿಯಾಗಿ ಕಾರ್ಯನಿರ್ವಹಿಸಬೇಕಾದರೆ ನಾವು ಸೇವನೆ ಮಾಡುವ ಆಹಾರ ಸರಿಯಾಗಿರಬೇಕು. ಏಕೆಂದರೆ ಆಹಾರದಿಂದಲೇ ಅನೇಕ ಸಮಸ್ಯೆಗಳು ಉದ್ಭವಿಸುತ್ತವೆ ಜೊತೆಗೆ ಈ ಸಮಸ್ಯೆಗಳಿಗೆ ಪರಿಹಾರ ಕೂಡ ನಮ್ಮ ಆಹಾರದಲ್ಲಿಯೇ ಇರುತ್ತವೆ. ಹಾಗಾಗಿ ದೈನಂದಿನ ಆಹಾರದಲ್ಲಿ ಹಣ್ಣು ಮತ್ತು ತರಕಾರಿಗಳನ್ನು ಸೇರಿಸುವುದು ಅತ್ಯಗತ್ಯ. ಮಾತ್ರವಲ್ಲ ಆರೋಗ್ಯಕರ ಕೊಬ್ಬುಗಳನ್ನು ಹೊಂದಿರುವ ಕಡಿಮೆ ಪ್ರೋಟೀನ್ ಭರಿತ ಮಾಂಸ ಮತ್ತು ಎಣ್ಣೆಗಳನ್ನು ಸಹ ಸೇವನೆ ಮಾಡಬೇಕು. ಅಡುಗೆಗೆ ಆಲಿವ್ ಎಣ್ಣೆಯನ್ನು ಬಳಸುವುದು ಉತ್ತಮ. ದ್ವಿದಳ ಧಾನ್ಯಗಳು ಕೂಡ ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ. ಈ ಎಲ್ಲಾ ಆಹಾರ ಪದಾರ್ಥಗಳನ್ನು ನಿಯಮಿತವಾಗಿ ಸೇವಿಸುವುದರಿಂದ ಹೃದಯಾಘಾತದ ಅಪಾಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಬೀಜಗಳನ್ನು ತಿನ್ನುವುದು ಹೃದಯವನ್ನು ಬಲಪಡಿಸುತ್ತದೆ. ಇನ್ನು ತರಕಾರಿಗಳು ಉತ್ಕರ್ಷಣ ನಿರೋಧಕಗಳು ಸಮೃದ್ಧವಾಗಿದ್ದು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಮನಶಾಂತಿ ಅತ್ಯಗತ್ಯ
ಒತ್ತಡ ಹೆಚ್ಚಾದಂತೆ ಹೃದಯದ ಮೇಲೆ ಒತ್ತಡ ಬೀಳುತ್ತದೆ. ಕಾರ್ಯಕ್ಷಮತೆ ಬದಲಾಗುತ್ತದೆ. ತಿಳಿಯದೆಯೇ ಇದು ಹೃದಯಾಘಾತಕ್ಕೆ ಕಾರಣವಾಗುತ್ತದೆ. ಒತ್ತಡ ಹೆಚ್ಚಾದಂತೆ ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಕೆಲವೊಮ್ಮೆ, ಒತ್ತಡವು ಅತಿಯಾಗಿ ತಿನ್ನುವುದು, ಮದ್ಯಪಾನ ಮತ್ತು ಧೂಮಪಾನದಂತಹ ಅಭ್ಯಾಸಗಳಿಗೆ ಕಾರಣವಾಗಬಹುದು. ಆದ್ದರಿಂದ, ಸಾಧ್ಯವಾದಷ್ಟು ಒತ್ತಡವನ್ನು ಕಡಿಮೆ ಮಾಡಿಕೋಳ್ಳಲು ಪ್ರಯತ್ನಿಸಿ. ಪ್ರತಿದಿನ ಕನಿಷ್ಠ 5 ನಿಮಿಷಗಳ ಆಳವಾದ ಉಸಿರಾಟದ ವ್ಯಾಯಾಮಗಳನ್ನು ಮಾಡಿ. ಪ್ರಾಣಾಯಾಮ, ಧ್ಯಾನ ಅಥವಾ ಯೋಗ ಮಾಡುವುದು ಒಳ್ಳೆಯದು. ಪ್ರೀತಿಪಾತ್ರರ ಜೊತೆ ಸಮಯ ಕಳೆಯುವುದು, ಸಂಗೀತ ಕೇಳುವುದು, ಚಲನಚಿತ್ರಗಳನ್ನು ನೋಡುವುದು ಸಹ ಒಳ್ಳೆಯದು. ಒಟ್ಟಾರೆಯಾಗಿ, ನೀವು ಸಂತೋಷವಾಗಿರುವ ಮಾರ್ಗಗಳನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ಇದು ಹೃದಯವನ್ನು ಸುರಕ್ಷಿತವಾಗಿರಿಸುತ್ತದೆ.
ಕಣ್ಣು ತುಂಬಾ ನಿದ್ದೆ
ಚೆನ್ನಾಗಿ ನಿದ್ರೆ ಮಾಡುವ ವ್ಯಕ್ತಿಗೆ ಯಾವುದೇ ರೀತಿಯ ಸಮಸ್ಯೆ ಬರುವುದಿಲ್ಲ. ಆದರೆ ನಿದ್ರಾಹೀನತೆಯಿಂದ ಬಳಲುತ್ತಿದ್ದವರಿಗೆ, ಹೃದಯಾಘಾತದ ಅಪಾಯವೂ ಹೆಚ್ಚಾಗುತ್ತದೆ. ಇದು ದೇಹದ ಮೇಲೆ ಬಹಳ ನಕಾರಾತ್ಮಕ ಪರಿಣಾಮ ಬೀರುತ್ತದೆ, ವಿಶೇಷವಾಗಿ ಇದು ಹೃದಯದ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತದೆ. ಪರಿಣಾಮವಾಗಿ ಅಧಿಕ ರಕ್ತದೊತ್ತಡ, ಹೃದಯ ಬಡಿತದಲ್ಲಿನ ಬದಲಾವಣೆಗಳು ಮತ್ತು ಹಾರ್ಮೋನುಗಳ ಅಸಮತೋಲನದಂತಹ ಸಮಸ್ಯೆಗಳು ಉದ್ಭವಿಸಬಹುದು. ಆದ್ದರಿಂದ, ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ನಿದ್ರೆ ಮಾಡುವುದು ಬಹಳ ಮುಖ್ಯ. ಹೃದಯವನ್ನು ಸುರಕ್ಷಿತವಾಗಿಡಲು ನಿದ್ರೆ ಅತ್ಯಗತ್ಯ ಎಂಬುದನ್ನು ನೆನಪಿಡಿ.
ಇದನ್ನೂ ಓದಿ: ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ
ನಿಯಮಿತ ಪರೀಕ್ಷೆ
ಹೃದಯದ ಆರೋಗ್ಯಕ್ಕಾಗಿ ಅನುಸರಿಸಬೇಕಾದ ಇನ್ನೊಂದು ಮುನ್ನೆಚ್ಚರಿಕೆ ಎಂದರೆ ಬಿಪಿ, ಕೊಲೆಸ್ಟ್ರಾಲ್ ಮತ್ತು ಸಕ್ಕರೆ ಮಟ್ಟವನ್ನು ಮುಂಚಿತವಾಗಿ ಪರಿಶೀಲಿಸುವುದು. ಇದರರ್ಥ ನೀವು ಅವುಗಳ ಸಂಖ್ಯೆಗಳನ್ನು ನಿಯಮಿತವಾಗಿ ಬರೆದಿಟ್ಟುಕೊಳ್ಳಬೇಕು. ಯಾವುದೇ ಸಮಯದಲ್ಲಿ ಅವು ಎಷ್ಟು ಬಂದಿದೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟವಾದ ತಿಳುವಳಿಕೆ ಇರಬೇಕು. ಕಾಲಕಾಲಕ್ಕೆ ನಿಮ್ಮ ತೂಕವನ್ನು ಪರಿಶೀಲಿಸುವುದು ಸಹ ಒಳ್ಳೆಯದು. ಅಧಿಕ ಕೊಲೆಸ್ಟ್ರಾಲ್ ಮತ್ತು ಅಧಿಕ ಬಿಪಿಯ ಲಕ್ಷಣಗಳು ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳಬಹುದು. ಆದ್ದರಿಂದ, ಇವುಗಳನ್ನು ನಿಯಮಿತವಾಗಿ ಪರಿಶೀಲಿಸಲು ಮತ್ತು ಅದಕ್ಕೆ ತಕ್ಕಂತೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದು ಕೈ ಮೀರಿದರೆ, ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








