ಹೃದಯಾಘಾತ ಪ್ರಕರಣ ಹೆಚ್ಚಳಕ್ಕೆ ಕಾರಣವೇನು? ಸರ್ಕಾರಕ್ಕೆ ಸಲ್ಲಿಕೆಯಾಯ್ತು ತಜ್ಞರ ವರದಿ
ಹೃದಯಾಘಾತ ಅಧ್ಯಯನ ವರದಿ: ಕಂಡ ಕಂಡಲ್ಲೇ ಜನರು, ಅದರಲ್ಲೂ ಯುವಕ ಯುವತಿಯರು ಕುಸಿದು ಬೀಳೂದ್ದಾರೆ. ನಿಂತಲ್ಲೇ ಉಸಿರು ಚೆಲ್ಲುತ್ತಿದ್ದಾರೆ. ರಾಜ್ಯದಲ್ಲಿ ಹೃದಯಾಘಾತದ ಸರಣಿ ಮುಂದುವರೆದಿದೆ. ಹೃದಯಾಘಾತಕ್ಕೆ ಕಾರಣ ಏನು ಏನು ಎಂದು ಜನ ತಲೆಕೆಡಿಸಿಕೊಂಡಿದ್ದಾರೆ. ಸರ್ಕಾರಕ್ಕೂ ಆತಂಕ ತಂದಿಟ್ಟಿದೆ. ಇದೀಗ ಕೊನೆಗೂ ತಜ್ಞರು ಅಧ್ಯಯನ ನಡೆಸಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಬೆಂಗಳೂರು, ಜುಲೈ 5: ಹೃಯಾಘಾತದಿಂದ (Heart Attack) ರಾಜ್ಯದಲ್ಲಿ ಸರಣಿ ಸಾವಿನ ಬೆನ್ನಲ್ಲೇ ಕರ್ನಾಟಕ ಆರೋಗ್ಯ ಇಲಾಖೆ (Health Department) ಎಚ್ಚೆತ್ತಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ. ರವೀಂದ್ರನಾಥ್ ನೇತೃತ್ವದಲ್ಲಿ ಅಧ್ಯಯನಕ್ಕಾಗಿ ತಾಂತ್ರಿಕ ಸಲಹಾ ಸಮಿತಿ ರಚಿಸಲಾಗಿತ್ತು. ಈ ಸಮಿತಿ ಹಠಾತ್ ಹೃದಯಾಘಾತ ಹೆಚ್ಚಳಕ್ಕೆ ಕಾರಣವೇನು ಎಂಬುದರ ಬಗ್ಗೆ ಅಧ್ಯಯನಕ್ಕಿಳಿದಿತ್ತು. ಹೃದ್ರೋಗಿಗಳನ್ನು ಅಧ್ಯಯಕ್ಕೆ ಒಳಪಡಿಸಿ ವರದಿ ತಯಾರಿಸಿ , ಇದೀಗ ಆ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಜಯದೇವ ಆಸ್ಪತ್ರೆ ನಿರ್ದೇಶಕ ರವೀಂದ್ರನಾಥ್ ನೇತೃತ್ವದ ಸಮಿತಿ, 251 ರೋಗಿಗಳನ್ನು ಅಧ್ಯಯನಕ್ಕೆ ಒಳಪಡಿಸಿತ್ತು. ಅದರಲ್ಲೂ ಮೂರು ವಯೋವರ್ಗಗಳನ್ನು ಗುರುತಿಸಿ ಅಧ್ಯಯನ ನಡೆಸಿದ್ದರು.
ಮೂರು ವಿಭಾಗಗಳಲ್ಲಿ ಹೃದ್ರೋಗಿಗಳ ಅಧ್ಯಯನ
30 ವರ್ಷಕ್ಕಿಂತ ಕಡಿಮೆ ವಯಸ್ಸಿನ 12 ಹೃದ್ರೋಗಿಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. 31 ರಿಂದ 40 ವಯಸ್ಸಿನ 66 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಜೊತೆಗೆ 41 ರಿಂದ 45 ವಯಸ್ಸಿನ 172 ಹೃದ್ರೋಗಿಗಳ ಬಗ್ಗೆ ಅಧ್ಯಯನ ಮಾಡಲಾಗಿತ್ತು.
ಹೃದಯಾಘಾತ: ತಜ್ಞರ ವರದಿಯಲ್ಲಿ ಏನಿದೆ?
ತಜ್ಞರ ವರದಿಯ ಪ್ರಕಾರ, ಒಟ್ಟು 251 ಮಂದಿಗೆ ಆರೋಗ್ಯ ತಪಾಸಣೆ ಮಾಡಲಾಗಿದೆ. 218 ಜನ ಪುರುಷರಿದ್ದು, 33 ಮಹಿಳೆಯರನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. 251 ರೋಗಿಗಳಲ್ಲಿ 87 ಮಂದಿಯಲ್ಲಿ ಮಧುಮೇಹ ಕಂಡುಬಂದಿದೆ. 102 ರೋಗಿಗಳಿಗೆ ಬಿಪಿ, 35 ಕೊಲೆಸ್ಟ್ರಾಲ್ ಇದೆ. 40 ಮಂದಿಗೆ ಹೃದಯ ಸಂಬಂಧಿ ಕಾಯಿಲೆ ಇದೆ. 111 ಮಂದಿ ಧೂಮಪಾನಿಗಳಾಗಿದ್ದಾರೆ. 19 ಮಂದಿಗೆ ಕೊವಿಡ್ ಸೋಂಕೊನ ಹಿನ್ನೆಲೆ ಇತ್ತು. ಇನ್ನುಳಿದ 77 ಮಂದಿಗೆ ಯಾವುದೇ ರೋಗಗಳು ಇರಲಿಲ್ಲ.
ಸದ್ಯ ನ್ಯೂರಾಲಜಿಕಲ್ ಸಮಸ್ಯೆಯ ಅಧ್ಯಯನ ಬಾಕಿ ಇದ್ದು, ನಿಮ್ಹಾನ್ಸ್ ತಜ್ಞರು ವರದಿ ಕೊಟ್ಟ ಬಳಿಕ ಅಂತಿಮ ವರದಿ ಸಲ್ಲಿಕೆಯಾಗಲಿದೆ.
ಜಾತ್ರೆ ಭದ್ರತೆಗೆ ನಿಯೋಜನೆಗೊಂಡಿದ್ದ ಎಐಸ್ಐ ಸಾವು
ಹುಬ್ಬಳ್ಳಿಯ ಎಪಿಎಂಸಿ ಠಾಣೆಯಲ್ಲಿ ಎಎಸ್ಐ ಆಗಿದ್ದ ಎಲ್.ಜೆ ಮೀರಾನಾಯಕ್ ಬೆಳಗಾವಿಯ ಗೋಕಾಕ್‌ನ ಲಕ್ಷ್ಮೀ ದೇವಿ ಜಾತ್ರೆಗೆ ಭದ್ರತೆಗೆ ನಿಯೋಜನೆಗೊಂಡಿದ್ದವರು ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 45 ವರ್ಷದ ಸಗೀರ್ ಅಹ್ಮದ್ ಎಂಬುವವರು ಬಲಿಯಾಗಿದ್ದಾರೆ. ಲಾರಿ ಚಾಲಕನಾಗಿದ್ದ ಸಗೀರ್, ಊಟ ಮಾಡುವಾಗಲೇ ಎದೆನೋವು ಕಾಣಿಸಿಕೊಂಡು ಕುಸಿದುಬಿದ್ದಿದ್ದಾರೆ. ಹಾವೇರಿಯ ಮೇಲ್ಮರಿ ಗ್ರಾಮದ ಬಸಪ್ಪ ಅರಳಿ ಎಂಬುವವರ ಜೀವವನ್ನು ಹೃದಯಾಘಾತ ಕಸಿದಿದೆ.
ಹಾಸನದಲ್ಲಿ ಹೃದಯದ ಆರೋಗ್ಯ ತಪಾಸಣೆ ಹೆಚ್ಚಳ
ಹೀಗೆ ಹಾಸನದಿಂದ ಶುರುವಾದ ಹೃದಯಾಘಾತದ ಸರಣಿ, ಜನರನ್ನು ಕಂಗೆಡಿಸಿದೆ. ಹಾಸನದಲ್ಲಿ ಆತಂಕಕ್ಕೊಳಾಗಿರುವ ಜನರು ಆಸ್ಪತ್ರೆಗೆ ಮುಗಿಬಿದ್ದಿದ್ದಾರೆ. ಇಸಿಜಿ, ಇಕೋ, ಟಿಎಂಟಿ ಮಾಡಿಸಲು ಆಸ್ಪತ್ರೆಗೆ ದೌಡಾಯಿಸುತ್ತಿದ್ದಾರೆ. ನಿತ್ಯ 300 ರೋಗಿಗಳು ಬರುತ್ತಿದ್ದರು. ಆದರೆ, ಹೃದಯಾಘಾತ ಪ್ರಕರಣಗಳು ಹೆಚ್ಚಾದಂತೆ 600ಕ್ಕೂ ಹೆಚ್ಚು ಜನರು ಸರದಿ ಸಾಲಿನಲ್ಲಿ ನಿಂತು ತಪಾಸಣೆ ಮಾಡಿಸಿಕೊಳ್ಳುತ್ತಿದ್ದಾರೆ ಎಂದು ಹಾಸನದ ಹಿಮ್ಸ್ ಆಡಳಿತ ವೈದ್ಯಾಧಿಕಾರಿ ಡಾ.ಪ್ರವೀಣ್ ತಿಳಿಸಿದ್ದಾರೆ.
ಇದನ್ನೂ ಓದಿ: ಹೃದಯಾಘಾತಕ್ಕೆ ಇದು ಕಾರಣ: ತಜ್ಞರ ವರದಿಯಲ್ಲಿ ಆತಂಕಕಾರಿ ಅಂಶ ಬಯಲು
ಸಾಲು ಸಾಲು ಹೃದಯಾಘಾತವಾಗುತ್ತಿದ್ದರೂ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಹಾಸನದತ್ತ ಸುಳಿಯುತ್ತಿಲ್ಲ. 3 ತಿಂಗಳಿಂದ ಹಾಸನಕ್ಕೆ ಬಾರದ ರಾಜಣ್ಣ, ಜನರು ಆತಂಕದಲ್ಲಿದ್ದರೂ ಸೌಜನ್ಯಕ್ಕಾದ್ರೂ ಬೇಟಿ ನೀಡಿಲ್ಲ. ಈ ವಿಚಾರವಾಗಿ ಕಿಡಿಕಾರಿದ ಪ್ರತಿಪಕ್ಷ ನಾಯಕ ಆರ್.ಅಶೋಕ್, ಹಾಸನದಲ್ಲಿ ಸಾವಿನ ಮರಣ ಮೃದಂಗ ಬಾರಿಸ್ತಿದ್ರೂ, ಜಿಲ್ಲಾ ಮಂತ್ರಿಗಳು ನಾಪತ್ತೆಯಾದ್ದಾರೆ ಎಂದಿದ್ದಾರೆ.