ಕೋಲಾರ ಹಾಲು ಒಕ್ಕೂಟ ಚುನಾವಣೆ: ಮೂರನೇ ಬಾರಿಗೆ ಅಧ್ಯಕ್ಷರಾದ ಕೆವೈ ನಂಜೇಗೌಡ
ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರಾಗಿ ಶಾಸಕ ಕೆವೈ ನಂಜೇಗೌಡ ಮೂರನೆ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇಬ್ಬರು ಕಾಂಗ್ರೆಸ್ ಶಾಸಕರಿಗೆ ಪ್ರತಿಷ್ಠೆಯಾಗಿದ್ದ ಅಧ್ಯಕ್ಷ ಸ್ಥಾನ ಕೊನೆಗೂ ವರಿಷ್ಠರ ನಿರ್ದೇಶನದಂತೆ ಕೆವೈ ನಂಜೇಗೌಡ ಪಾಲಾಗಿದೆ. ಈ ಮಧ್ಯೆ ಕೆಎಂಎಫ್ ಅಧ್ಯಕ್ಷ ಸ್ಥಾನದ ಆಸೆಯನ್ನೂ ಶಾಸಕ ನಂಜೇಗೌಡ ವ್ಯಕ್ತಪಡಿಸಿದ್ದಾರೆ.

ಕೋಲಾರ, ಜುಲೈ 5: ಕೋಲಾರ ರಾಜಕಾರಣದ ಮಟ್ಟಿಗೆ ಸಖತ್ ಸದ್ದು ಮಾಡಿದ್ದ, ಕಾಂಗ್ರೆಸ್ ಹೈ ಕಮಾಂಡ್‌ಗೂ ತಲೆ ನೋವಾಗಿದ್ದ ಕೋಮುಲ್ (ಕೋಲಾರ ಹಾಲು ಒಕ್ಕೂಟ) ಅಧ್ಯಕ್ಷರಾಗಿ ಶಾಸಕ ನಂಜೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕೋಲಾರ ಹಾಲು ಒಕ್ಕೂಟದ (Kolar District Cooperative Milk Producers Union Ltd) ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡ (KY Nanjegowda) ಹಾಗೂ ಬಂಗಾರಪೇಟೆ ಶಾಸಕ ನಾರಾಯಣಸ್ವಾಮಿ ಆಕಾಂಕ್ಷಿಯಾಗಿದ್ದರು. ಆದರೆ ಸಿಎಂ ಹಾಗೂ ಡಿಸಿಎಂ ಸೂಚನೆ ಮೇರೆಗೆ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಚುನಾವಣೆಯಿಂದ ದೂರ ಉಳಿದ ಹಿನ್ನೆಲೆ ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು.
ಸರ್ಕಾರದ ನಾಮನಿರ್ದೇಶಿತರು ಸೇರಿ ಒಟ್ಟು 13 ನಿರ್ದೇಶಕರಿದ್ದು, ಒಬ್ಬ ನಾಮ ನಿರ್ದೇಶಿತ ನಿರ್ದೇಶಕ ಹಾಗೂ ನಾಲ್ಕು ಜನ ಅಧಿಕಾರಿಗಳು ಸೇರಿ ಒಟ್ಟು 18 ಜನರಿಗೆ ಮತದಾನಕ್ಕೆ ಅವಕಾಶವಿತ್ತು. ಅಧ್ಯಕ್ಷ ಸ್ಥಾನ ಗೆಲ್ಲಲು 10 ನಿರ್ದೇಶಕರ ಬೆಂಬಲ ಬೇಕಿತ್ತು. ಅದರಂತೆ 13 ನಿರ್ದೇಶಕರು ಚುನಾಯಿತರಾಗಿದ್ದು ಈ ಪೈಕಿ ಕೆ.ಆರ್.ರಮೇಶ್ ಕುಮಾರ್ ಬಣದ ಬೆಂಬಲಿತ, ಅಂದರೆ ನಂಜೇಗೌಡ ಪರವಾಗಿ ಎಂಟು ನಿರ್ದೇಶಕರು ಇದ್ದರು. ಮುನಿಯಪ್ಪ ಬಣದ ಇಬ್ಬರು ನಿರ್ದೇಶಕರು ಚುನಾವಣೆ ಪ್ರಕ್ರಿಯೆಯಿಂದ ದೂರ ಉಳಿದಿದ್ದರಿಂದ ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು. ತಮ್ಮ ಪರವಾದ ಸುಮಾರು 8 ನಿರ್ದೇಶಕರು ಹಾಗೂ ಶಾಸಕರು, ಕಾಂಗ್ರೆಸ್ ಮುಖಂಡರೊಂದಿಗೆ ಕೋಮುಲ್ ಕಚೇರಿಗೆ 12.30 ನಿಮಿಷಕ್ಕೆ ಆಗಮಿಸಿದ ನಂಜೇಗೌಡ ತಮ್ಮ ನಾಮಪತ್ರ ಸಲ್ಲಿಸಿದರು. ಅದರಂತೆ, ಒಬ್ಬರೇ ನಾಮಪತ್ರ ಸಲ್ಲಿಕೆ ಮಾಡಿದ ಕಾರಣ ಅವಿರೋಧವಾಗಿ ಆಯ್ಕೆಯಾದರು.
ಬಳಿಕ ಮಾತನಾಡಿದ ನಂಜೇಗೌಡ, ನಾವು ರೈತರ ಪರವಾದ ಕೆಲಸ ಮಾಡಿದ್ದರಿಂದಲೇ ನನಗೆ ಇಂಥ ಅವಕಾಶ ಸಿಕ್ಕಿದೆ ಎಂದರು. ನಮ್ಮ ಮುಂದೆ, ಬಾಕಿ ಇರುವ ಕೆಲಸಗಳನ್ನು ಪೂರ್ತಿ ಮಾಡುವ ಕೆಲಸ, ಜೊತೆಗೆ ಹಾಲು ಉತ್ಪಾದನೆಯನ್ನು ಹೆಚ್ಚಿಸುವ ಹಾಗೂ ಅದರ ಮಾರಾಟಕ್ಕೆ ಹೊಸ ಮಾರುಕಟ್ಟೆ ಪ್ರದೇಶವನ್ನು ವಿಸ್ತರಣೆ ಮಾಡುವ ಜವಾಬ್ದಾರಿ ಇದೆ ಎಂದರು.
ಇದನ್ನೂ ಓದಿ: ಕೋಲಾರ ಜಿಲ್ಲಾ ಕಾಂಗ್ರೆಸ್ ಗುಂಪುಗಾರಿಕೆ ಮಧ್ಯೆ ಕೋಮುಲ್ ಅಧ್ಯಕ್ಷ ಗಾದಿಗೆ ದಲಿತ ಕಾರ್ಡ್ ಗೇಮ್!
ಒಟ್ಟಿನಲ್ಲಿ, ಕಾಂಗ್ರೆಸ್ಸ್ ವರಿಷ್ಠರ ಪಾಲಿಗೆ ಕೋಲಾರದ ಡಿಸಿಸಿ ಬ್ಯಾಂಕ್ ಹಾಗೂ ಕೋಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ ಗಜ ಪ್ರಸವವಾಗಿತ್ತು. ಸದ್ಯ ಕೋಮುಲ್ ಚುನಾವಣೆ ಗೊಂದಲಗಳಿಲ್ಲದೆ ಮುಗಿದಿದ್ದು, ಇನ್ನು ಡಿಸಿಸಿ ಬ್ಯಾಂಕ್ ಅಧ್ಯಕ್ ಚುನಾವಣೆ ಬಾಕಿ ಇದೆ. ಅದನ್ನು ಕಾಂಗ್ರೆಸ್ ಹೈಕಮಾಂಡ್ ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.