ಹಳದಿ ಲೈನ್ ಮೆಟ್ರೋ ಮತ್ತಷ್ಟು ವಿಳಂಬ: ಬಿಎಂಆರ್ಸಿಎಲ್ಗೆ ಸಾಲು ಸಾಲು ಪ್ರಶ್ನೆ ಕೇಳಿದ ತೇಜಸ್ವಿಸೂರ್ಯ
ನಮ್ಮ ಮೆಟ್ರೋ ಹಳದಿ ಲೈನ್ ಕಾಮಗಾರಿ ಮತ್ತಷ್ಟು ವಿಳಂಬ ಖಂಡಿಸಿ ಬೆಂಗಳೂರಿನ ಲಾಲ್ಬಾಗ್ನಿಂದ BMRCL ಎಂಡಿ ಕಚೇರಿವರೆಗೆ ಇಂದು ಬಿಜೆಪಿ ಪ್ರತಿಭಟನಾ ರ‍್ಯಾಲಿ ಮಾಡಿದ್ದು, ಶಾಸಕರು, ಸಂಸದರು ಭಾಗಿಯಾಗಿದ್ದರು. ಈ ವೇಳೆ ಮಾತನಾಡಿದ ಸಂಸದ ತೇಜಸ್ವಿಸೂರ್ಯ, ಬಿಎಂಆರ್ಸಿಎಲ್ಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರು, ಜುಲೈ 05: ಯಲ್ಲೋ ಲೈನ್ ಮೆಟ್ರೋಗಾಗಿ (Yellow Line Metro) ಜನರು ಕಾದು ಕಾದು ಸುಸ್ತಾಗಿದ್ದಾರೆ. ಬಿಎಂಆರ್‌ಸಿಎಲ್ ಯಲ್ಲೋ ಲೈನ್ ಆರಂಭಿಸಲು ಮತ್ತಷ್ಟು ವಿಳಂಬ ಮಾಡುತ್ತಿದೆ. ಶೀಘ್ರ ಆರಂಭಿಸುವಂತೆ ಪ್ರಯಾಣಿರು ಸೇರಿದಂತೆ ರಾಜಕೀಯ ನಾಯಕರಿಂದ ಒತ್ತಾಯಿಸಲಾಗಿತ್ತು. ಆದರೆ ಇಂದು ಹಳದಿ ಮೆಟ್ರೋ ಲೈನ್ ವಿಳಂಬ ವಿರುದ್ಧ ಬಿಜೆಪಿ ಪ್ರತಿಭಟನೆ (BJP protest) ಮಾಡಿದೆ. ಲಾಲ್ ಬಾಗ್ ಪೂರ್ವದ್ವಾರದ ಬಳಿ ಬಿಜೆಪಿ ಶಾಸಕರು, ಸಂಸದರು ಮತ್ತು ಬೆಂಬಲಿಗರಿಂದ ಜಮಾಯಿಸಿ ಪ್ರತಿಭಟಿಸಿದ್ದು, ಇದೇ ವೇಳೆ ಮಾತನಾಡಿದ ಸಂಸದ ತೇಜಸ್ವಿಸೂರ್ಯ ಬಿಎಂಆರ್‌ಸಿಎಲ್ ಎಂಡಿಗೆ ಸಾಲು ಸಾಲು ಪ್ರಶ್ನೆ ಮಾಡಿದ್ದಾರೆ.
ತೇಜಸ್ವಿಸೂರ್ಯ ಸಾಲು ಸಾಲು ಪ್ರಶ್ನೆ
ಈ ವೇಳೆ ಮಾತನಾಡಿದ ಸಂಸದ ತೇಜಸ್ವಿಸೂರ್ಯ, ಈಗಾಗಲೇ ಲಕ್ಷಾಂತರ ಜನ ಮೆಟ್ರೋ ಬಳಸುತ್ತಿದ್ದಾರೆ. ಹಳದಿ ಲೈನ್ ಆರಂಭವಾದರೆ ಟ್ರಾಫಿಕ್ ಸಮಸ್ಯೆ ತಗ್ಗಲಿದೆ. ಹಲವು ಭಾರೀ ಡೆಡ್ ಲೈನ್ ಕೊಟ್ಟರೂ ಕೆಲಸ ಆಗಿಲ್ಲ. ಯಾವಾಗ ಓಪನ್ ಆಗುತ್ತೆ ಅಂತಾ ಯಾರಿಗೂ ಗೊತ್ತಿಲ್ಲ. ಜನ ನಂಬಿಕೆ ಇಡುವ ಹಾಗೇ, ಓಪನ್ ಆಗುವ ತರ ಮಾಡೋಣ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜು.6ರಂದು ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ವ್ಯತ್ಯಯ, ಎಲ್ಲಿಂದ ಎಲ್ಲಿಗೆ
ಎರಡು ತಿಂಗಳ ಹಿಂದೆ ಮೆಟ್ರೋ ದರ ಏರಿಕೆ ಮಾಡಿದ್ದಾರೆ. ನಾವೆಲ್ಲಾ ಇದರ ವಿರುದ್ಧ ಸಂಸತ್ನಲ್ಲಿ ಧ್ವನಿ ಎತ್ತಿದ್ವಿ. ಮೆಟ್ರೋ ದರ ಏರಿಕೆಗೆ ಮೊದಲ ಬಿಎಂಆರ್‌ಸಿಎಲ್ ಸಮಿತಿ ಬೇರೆ ಕಡೆ ಅಧ್ಯಯನ ಮಾಡಿದೆ. ಯಾವ ಆಧಾರದಲ್ಲಿ ಮೆಟ್ರೋ ದರ ಏರಿಕೆ ಮಾಡಿದ್ದಾರೆ ಅನ್ನೋದಕ್ಕೆ ಉತ್ತರ ಕೊಟ್ಟಿಲ್ಲ. ದರ ಹೆಚ್ಚಾದ ಮೇಲೆ ಪ್ರಯಾಣಿಕರ ಓಡಾಟ ತಗ್ಗಿದೆ. ಮೆಟ್ರೋ ದರ ಏರಿಕೆಯ ವರದಿ ಹೇಗೆ ಆಯ್ತು, ಯಾವ ಆಧಾರದಲ್ಲಿ ದರ ಏರಿಕೆ ಆಯ್ತು ಬಯಲು ಮಾಡಿ ಎಂದಿದ್ದಾರೆ.
ಮೆಟ್ರೋ ಫೇಸ್ 3 ವೆಗಾಸಿಟಿ ಮಾಲ್ನಿಂದ ಆರಂಭವಾಗುತ್ತೆ. ಅದು ಆರಂಭವಾದರೆ 8 ರಿಂದ 10 ಲಕ್ಷ ಜನ ಓಡಾಡಬಹುದು. ನಾವೆಲ್ಲ ಪ್ರಯತ್ನ ಪಟ್ಟು ಅದಕ್ಕೆ ಪರ್ಮಿಷನ್ ಕೊಡಿಸಿದ್ದೇವೆ. ಆದರೆ ಇನ್ನೂ ಕೂಡ ನೀವು ಟೆಂಡರ್ ಕರೆದಿಲ್ಲ. ಅದನ್ನ ಯಾವಾಗ ಪ್ರಾರಂಭ ಮಾಡುತ್ತೀರಾ. ಕೇಂದ್ರ ಅನುಮತಿ ಕೊಟ್ಟು ವರ್ಷವಾದರೂ ಕೆಲಸ ಏಕೆ ಶುರುವಾಗಿಲ್ಲ. ಡಬಲ್ ಡೆಕ್ಕರ್ ಮಾಡುವುದಕ್ಕೆ ಹೊರಟಿರುವ ಡಿಸಿಎಂ ಡಿಕೆ ಶಿವಕುಮಾರ್ ಕೆಲಸ ಇದಕ್ಕೆ ಅಡ್ಡಿ ಆಗುತ್ತಿದ್ದೀಯಾ ಎಂದು ಟನಲ್ ರಸ್ತೆ ವಿರುದ್ಧ ತೇಜಸ್ವಿಸೂರ್ಯ ಕಿಡಿ ಕಾರಿದರು.
ಮೆಟ್ರೋ ಲೇನ್ ಬಳಿಯೇ ಟನಲ್ ಮಾಡುವುದಕ್ಕೆ ಸರ್ಕಾರ ಹೊರಟಿದೆ. ಮೆಟ್ರೋ ಬಂದರೆ ಏನಾಗುತ್ತೆ ಅನ್ನೋ ಬಗ್ಗೆ ಅಧ್ಯಯನ ನಡಿದಿದೆಯಾ? ಏನೇನು ಸಮಸ್ಯೆಯಾಗುತ್ತೆ ಅಂತಾ ಚಿಂತನೆ ಆಗಿದೆಯಾ ಅನ್ನೋ ಮಾಹಿತಿ ಕೊಡಿ ಎಂದು ಕೇಳಿದ್ದಾರೆ.
ಇದನ್ನೂ ಓದಿ: ಈ ಮಾರ್ಗದ ವಿಶೇಷ ಎಕ್ಸ್ಪ್ರೆಸ್ ರೈಲು ಸೇವೆಗಳ ವಿಸ್ತರಣೆ: ಇಲ್ಲಿದೆ ವೇಳಾಪಟ್ಟಿ
ಬೆಂಗಳೂರಿಗೆ ಮೆಟ್ರೋ ಮಾಡಿ ಅಂದರೆ ತುಮಕೂರಿಗೆ ಮಾಡುವುದಕ್ಕೆ ಹೊರಟಿದ್ದಾರೆ. ವೈಟ್ ಫೀಲ್ಡ್ ಕಡೆ ಮೆಟ್ರೋ ಮಾಡಿದರೆ ಟ್ರಾಫಿಕ್ ಬಗೆಹರಿಯುತ್ತೆ. ಸಾರ್ವಜನಿಕರ ದುಡ್ಡಲ್ಲಿ ಓಡಾಡುತ್ತಿರುವ ಮೆಟ್ರೋಗೆ ದರ ಹೆಚ್ಚಿಸಿದ್ದೀರಿ. ಈ ಎಲ್ಲಾ ಪ್ರಶ್ನೆಗಳಿಗೆ BMRCL ಉತ್ತರ ಕೊಡಬೇಕು ಎಂದಿದ್ದಾರೆ.
ಆಗಸ್ಟ್ 15 ರೊಳಗೆ ಹಳದಿ ಲೈನ್ ಓಪನ್: ಮಹೇಶ್ವರ ರಾವ್
ಇನ್ನು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಮಹೇಶ್ವರ ರಾವ್ಗೆ ಪ್ರತಿಭಟನಾಕಾರರಿಂದ ಮನವಿ ಪತ್ರ ನೀಡಲಾಯಿತು. ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಮಹೇಶ್ವರ ರಾವ್, ಆಗಸ್ಟ್ 15 ರೊಳಗೆ ಹಳದಿ ಲೈನ್ ಓಪನ್ ಆಗುವ ವಿಶ್ವಾಸವಿದೆ. ಮೇಕ್ ಇನ್ ಇಂಡಿಯಾ ಷರತ್ತಿನಿಂದಾಗಿ ರೈಲು ಪೂರೈಕೆಯಲ್ಲಿ ತೊಂದರೆ ಉಂಟಾಗಿದ್ದರಿಂದ ವಿಳಂಬವಾಗಿದೆ. ಹಳದಿ ಲೈನ್ ಓಪನ್ ಮಾಡಲು ಸಿಎಂಆರ್ಎಸ್ ಅನುಮೋದನೆ ಮುಖ್ಯವಾಗಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:45 am, Sat, 5 July 25







