ಪುತ್ತೂರು: ಯುವತಿಯ ಗರ್ಭಿಣಿ ಮಾಡಿ ಪರಾರಿಯಾಗಿದ್ದ ಬಿಜೆಪಿ ಮುಖಂಡನ ಪುತ್ರ ಕೊನೆಗೂ ಅರೆಸ್ಟ್, ಮೈಸೂರಿನಲ್ಲಿ ಸಿಕ್ಕಿಬಿದ್ದ ಆರೋಪಿ
ಮದುವೆಯಾಗುವುದಾಗಿ ನಂಬಿಸಿ ಯುವತಿಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ಆಕೆಗೆ ಮಗು ಜನಿಸಿದ ನಂತರ ಮದುವೆ ನಿರಾಕರಿಸಿದ ಆರೋಪದ ಮೇಲೆ ಪುತ್ತೂರಿನ ಬಿಜೆಪಿ ಮುಖಂಡನ ಮಗ ಕೃಷ್ಣ ಜೆ.ರಾವ್ನನ್ನು ಕೊನೆಗೂ ಬಂಧಿಸಲಾಗಿದೆ. ಯುವತಿ ನೀಡಿದ್ದ ದೂರಿನ ಮೇರೆಗೆ ಕ್ರಮ ಕೈಗೊಂಡ ಪುತ್ತೂರು ಮಹಿಳಾ ಠಾಣೆ ಪೊಲೀಸರು ಆರೋಪಿಯನ್ನು ಮೈಸೂರಿನಿಂದ ವಶಕ್ಕೆ ಪಡೆದಿದ್ದಾರೆ.

ಮಂಗಳೂರು, ಜುಲೈ 5: ಪ್ರೀತಿಯ ನಾಟಕವಾಡಿ ಮದುವೆಯಾಗುವುದಾಗಿ ನಂಬಿಸಿ ಯುವತಿ ಜತೆ ದೈಹಿಕ ಸಂಪರ್ಕ ಬೆಳೆಸಿ ನಂತರ ವಿವಾಹ ನಿರಾಕರಿಸಿ ಪರಾರಿಯಾಗಿದ್ದ, ಬಿಜೆಪಿ ಮುಖಂಡನ ಪುತ್ರ (Puttur BJP leader Son) ಕೃಷ್ಣ ಜೆ.ರಾವ್ನನ್ನು (21) (Krishna J Rao) ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಮಹಿಳಾ ಠಾಣೆ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು ಮೈಸೂರಿನ ಟಿ ನರಸೀಪುರ ಎಂಬಲ್ಲಿ ವಶಕ್ಕೆ ಪಡೆದ ಪೊಲೀಸರು ಪುತ್ತೂರಿಗೆ ಕರೆದುಕೊಂಡು ಬಂದಿದ್ದಾರೆ. ಪುತ್ತೂರಿನ ಪ್ರಭಾವಿ ಮುಖಂಡ, ನಗರಸಭಾ ಸದಸ್ಯ ಜಗನ್ನಿವಾಸ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ಎಫ್ಐಆರ್ ದಾಖಲಾದ ಬೆನ್ನಲ್ಲೇ ನಾಪತ್ತೆಯಾಗಿದ್ದ. ಆತನನ್ನು ವಶಕ್ಕೆ ಪಡೆಯಲು ಕಳೆದ ಕೆಲವು ದಿನಗಳಿಂದ ಪೊಲೀಸರು ಹುಡುಕಾಟ ನಡೆಸುತ್ತಿದ್ದರು.
ಬಿಜಪಿ ಮುಖಂಡನ ಮಗನ ಕಾಮಕಾಂಡದ ಹಿನ್ನೆಲೆ
ಸಂತ್ರಸ್ತೆಯು ಪುತ್ತೂರು ಮಹಿಳಾ ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ ಪ್ರಕಾರ, ಬಿಜೆಪಿ ಮುಖಂಡ ಜಗನ್ನಿವಾಸ ರಾವ್ ಮಗ ಕೃಷ್ಣ ಜೆ.ರಾವ್ ಹೈಸ್ಕೂಲ್ನಿಂದಲೇ ಪರಿಚಿತರು. ಸದ್ಯ ಎಂಜಿನಿಯರಿಂಗ್ ಓದುತ್ತಿರುವ ಆರೋಪಿ ಕೃಷ್ಣ ಜೆ ರಾವ್ ಮದುವೆಯಾಗುವುದಾಗಿ ಭರವಸೆ ನೀಡಿ ಹಲವು ಬಾರಿ ಸಂತ್ರಸ್ತೆ ಜತೆ ದೈಹಿಕ ಸಂಪರ್ಕ ಬೆಳೆಸಿದ್ದ. 2024 ಅಕ್ಟೋಬರ್ 11 ರಂದು ಕೃಷ್ಣ ರಾವ್ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದು ದೈಹಿಕ ಸಂಪರ್ಕ ಬೆಳೆಸಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ, ಮದುವೆಯಾಗುತ್ತೇನೆ ಎಂದು ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. 2025ರ ಜನವರಿಯಲ್ಲೂ ಮತ್ತೆ ದೈಹಿಕ ಸಂಪರ್ಕ ಮಾಡಿದ್ದ. ಆ ಬಳಿಕ ಯುವತಿ ಗರ್ಭವತಿಯಾಗಿರುವ ವಿಚಾರ ಬೆಳಕಿಗೆ ಬಂದಿತ್ತು. ಆದರೆ, ಆರೋಪಿ ಶ್ರೀಕೃಷ್ಣ ಮದುವೆಯಾಗಲು ನಿರಾಕರಿಸಿದ್ದ. ಈ ಹಿನ್ನಲೆ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಲು ಸಂತ್ರಸ್ತೆ ಮುಂದಾಗಿದ್ದಳು. ಆದರೆ, ಆರೋಪಿ ಯುವಕನ ಮನೆಯವರು ಯುವತಿ ಮನೆಯವರ ಜತೆ ಮಾತನಾಡಿ, ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಆರೋಪಿ ಯುವಕನಿಗೆ 21 ವರ್ಷ ವಯಸ್ಸಾಗಿಲ್ಲ. ಆದ ಕೂಡಲೇ ರಿಜಿಸ್ಟರ್ ಮ್ಯಾರೇಜ್ ಮಾಡುವುದಾಗಿ ಯುವಕನ ಮನೆಯವರು ಭರವಸೆ ನೀಡಿದ್ದರು. ಹೀಗಾಗಿ ದೂರು ಹಿಂಪಡೆಯಲಾಗಿತ್ತು. ಆದರೆ, ಯುವತಿಯ ಹೆರಿಗೆ ಸಮಯ ಸಮೀಪಿಸುತ್ತಿದ್ದಂತೆಯೇ ಆರೋಪಿ ಮದುವೆಗೆ ನಿರಾಕರಿಸಿದ್ದ. ಹೀಗಾಗಿ ಸಂತ್ರಸ್ತೆ ದೂರು ನೀಡಿದ್ದಳು. ಅಷ್ಟರಲ್ಲಿ, ಆರೋಪಿ ಪರಾರಿಯಾಗಿದ್ದ.
ಜೂನ್ 23 ಕ್ಕೆ ಆರೋಪಿಗೆ ವಿವಾಹದ ವಯಸ್ಸು ಭರ್ತಿಯಾಗಿದೆ. ನಂತರ ಮದುವೆಗೆ ಹಿಂದೇಟು ಹಾಕಿದ್ದ ಆತ, ಪಿತೃತ್ವ ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದ.
ಇದನ್ನೂ ಓದಿ: ಯುವತಿಯನ್ನು ಗರ್ಭಿಣಿ ಮಾಡಿ ಕೈಕೊಟ್ಟ ಬಿಜೆಪಿ ಮುಖಂಡನ ಪುತ್ರ, ಪ್ರೀತಿ ಹೆಸರಲ್ಲಿ ಮೋಸ
ನಂತರ ಯುವತಿಗೆ ಹೆರಿಗೆಯಾಗಿ ಗಂಡುಮಗು ಜನಿಸಿದೆ. ಇದರ ಬೆನ್ನಲ್ಲೇ ಪ್ರಕರಣ ರಾಜಕೀಯ ಸ್ವರೂಪವನ್ನೂ ಪಡೆದುಕೊಂಡಿತ್ತು. ಆರೋಪಿಯ ಬಂಧನಕ್ಕೆ ಪೊಲೀಸರಿಗೆ ಒತ್ತಡ ಹೆಚ್ಚಾಗಿತ್ತು. ಸದ್ಯ ಆರೋಪಿಯನ್ನು ಮೈಸೂರಿನಿಂದ ಪುತ್ತೂರಿಗೆ ಕರೆತಂದಿರುವ ಪೊಲೀಸರು, ವೈದ್ಯಕೀಯ ತಪಾಸಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.
ಮಗನ ರಕ್ಷಣೆಗೆ ನಿಂತಿದ್ದ ಬಿಜೆಪಿ ಮುಖಂಡನ ಬಂಧನ
ಮಗ ತಪ್ಪಿಸಿಕೊಳ್ಳಲು ಸಹಕರಿಸಿದ್ದ ಆರೋಪದ ಮೇಲೆ, ಪ್ರಕರಣದ ಆರೋಪಿ ಕೃಷ್ಣ.ಜೆ.ರಾವ್ ತಂದೆ, ಪುತ್ತೂರು ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ನನ್ನು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೃಷ್ಣ. ಜೆ.ರಾವ್ ಒಂದು ವಾರದಿಂದ ತಲೆ ಮರೆಸಿಕೊಂಡಿದ್ದನು. ಮಗ ಕೃಷ್ಣ. ಜೆ.ರಾವ್ ತಪ್ಪಿಸಿಕೊಳ್ಳಲು ಸಹಕಾರ ನೀಡಿದ ಆರೋಪದ ಮೇಲೆ ಜಗನ್ನಿವಾಸ್ ರಾವ್ನನ್ನು ಬಂಧಿಸಿದ್ದಾರೆ.
ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಎಸ್.ಪಿ ಡಾ.ಅರುಣ್ ಕೆ ಮಾತನಾಡಿ, “ಸಂತ್ರಸ್ಥೆ ನೀಡಿದ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಪ್ರಕರಣ ದಾಖಲಾಗುತ್ತಿದ್ದಂತೆ ಆರೋಪಿ ಶ್ರೀಕೃಷ್ಣ.ಜೆ.ರಾವ್ ತಲೆಮರೆಸಿಕೊಂಡಿದ್ದನು. ಸಮಗ್ರ ತನಿಖೆ ಮಾಡಿ ಆರೋಪಿಯನ್ನು ವಶಕ್ಕೆ ಪಡೆದು ಬಂಧಿಸಿದ್ದೇವೆ. ಇಷ್ಟು ದಿನ ತಲೆಮರೆಸಿಕೊಳ್ಳಲು ಆರೋಪಿಯ ತಂದೆ ಸಹಕರಿಸಿದ್ದರು. ಈ ಹಿನ್ನೆಲೆಯಲ್ಲಿ ಆರೋಪಿಯ ತಂದೆ ಜಗನ್ನಿವಾಸ್ ರಾವ್ ಅವರನ್ನು ಕೂಡ ಬಂಧಿಸಿದ್ದೇವೆ. ಮುಂದೆ ನ್ಯಾಯಾಲಯಕ್ಕೆ ಹಾಜರುಪಡಿಸಿ ಕಾನೂನು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:16 pm, Sat, 5 July 25