ಸಕ್ಕರೆ ಕಾಯಿಲೆ ಇದ್ಯಾ? ನೀವು ಈ ತರಕಾರಿಗಳಿಂದ ದೂರವಿದ್ದಷ್ಟೂ ಒಳ್ಳೆಯದು!
ಮಧುಮೇಹ ಇರುವವರಿಗೆ ಏನು ತಿನ್ನಬೇಕು, ತಿನ್ನಬಾರದು ಅನ್ನೋದೇ ದೊಡ್ಡ ಸಮಸ್ಯೆಯಾಗಿರುತ್ತೆ. ಹಾಗಾಗಿ ಅವರು ತಮ್ಮ ಆಹಾರದ ಬಗ್ಗೆ ಎಷ್ಟು ಗಮನ ಹರಿಸಿದರೂ ಸಾಲುವುದಿಲ್ಲ. ಯಾವುದೇ ಆಹಾರವಾಗಲಿ ಅದರ ಸೇವನೆಯಿಂದ ಏನೆಲ್ಲಾ ಆಗಬಹುದು ಎಂಬ ವಿವೇಚನೆಯಿಲ್ಲದೆ ತಿನ್ನುವುದು ಆರೋಗ್ಯಕ್ಕೆ ಅಪಾಯವನ್ನುಂಟುಮಾಡಬಹುದು. ಹಾಗಾಗಿ ಎಷ್ಟೇ ಒಳ್ಳೆಯ ಆಹಾರವಾಗಲಿ ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ಆ ಬಳಿಕವೇ ಸೇವನೆ ಮಾಡಬೇಕು. ಅದೇ ರೀತಿ ಮಧುಮೇಹಿಗಳಿಗೆ ಸಹಾಯವಾಗಲು ದಿನನಿತ್ಯ ಯಾವ ತರಕಾರಿಗಳನ್ನು ಸೇವನೆ ಮಾಡಬಾರದು, ಅದು ಯಾಕೆ ಒಳ್ಳೆಯದಲ್ಲ ಎಂಬುದರ ಬಗ್ಗೆ ಮಾಹಿತಿ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ಅನೇಕರಲ್ಲಿ ಕಂಡು ಬರುತ್ತಿರುವ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ಇದೊಂದು ದೀರ್ಘಕಾಲದ ಕಾಯಿಲೆಯಾಗಿರುವುದರಿಂದ ಈ ಆರೋಗ್ಯ (Health) ಸಮಸ್ಯೆ ಇರುವವರು ತಮ್ಮ ಆಹಾರದ ಬಗ್ಗೆ ಬಹಳ ಜಾಗರೂಕರಾಗಿರಬೇಕು. ಮನಸ್ಸಿಗೆ ಬಂದದ್ದನ್ನು ತಿನ್ನುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಎಷ್ಟೇ ಒಳ್ಳೆಯ ಆಹಾರವಾಗಿರಲಿ ತಿನ್ನುವ ಮುಂಚೆ ಅದು ನಮ್ಮ ದೇಹಕ್ಕೆ ಒಳ್ಳೆಯದೋ? ಅಲ್ಲವೋ? ಎಂಬುದನ್ನು ಯೋಚಿಸಬೇಕಾಗುತ್ತದೆ. ಏಕೆಂದರೆ ಪ್ರಕೃತಿಯಲ್ಲಿ ಸಿಗುವಂತಹ ಹಣ್ಣು, ತರಕಾರಿಗಳೆಲ್ಲವೂ ಒಳ್ಳೆಯದೇ ಆದರೆ ಅವುಗಳಲ್ಲಿ ನಮ್ಮ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದನ್ನು ನೋಡಬೇಕಾಗುತ್ತದೆ. ಅದರಲ್ಲಿಯೂ ಮಧುಮೇಹ (Diabetes) ಇರುವವರು ಕೆಲವು ತರಕಾರಿಗಳ ಸೇವನೆಯನ್ನು ಮಿತಿಗೊಳಿಸಬೇಕು ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು ಎಂದು ತಜ್ಞರು ಹೇಳುತ್ತಾರೆ. ಏಕೆಂದರೆ ಕೆಲವು ತರಕಾರಿಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಬಹುದು. ಹಾಗಾದರೆ ಯಾವ ತರಕಾರಿಗಳು ಮಧುಮೇಹಿಗಳಿಗೆ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಆಲೂಗಡ್ಡೆ
ನಿಮಗೆ ಗೊತ್ತಾ? ಆಲೂಗಡ್ಡೆಯಲ್ಲಿ ಗ್ಲೈಸೆಮಿಕ್ ಸೂಚ್ಯಂಕವು ತುಂಬಾ ಹೆಚ್ಚಾಗಿರುತ್ತದೆ. ಇದಲ್ಲದೆ, ಅವುಗಳಲ್ಲಿ ಪಿಷ್ಟದ ಅಂಶ ಹೆಚ್ಚಾಗಿದೆ. ಆದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಆಲೂಗಡ್ಡೆಯನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಅದಲ್ಲದೆ ಆಲೂಗಡ್ಡೆ ಸುಲಭವಾಗಿ ಜೀರ್ಣವಾಗುತ್ತದೆ. ಪರಿಣಾಮವಾಗಿ, ಅವು ರಕ್ತಕ್ಕೆ ಗ್ಲೂಕೋಸ್ ಅನ್ನು ತ್ವರಿತವಾಗಿ ಬಿಡುಗಡೆ ಮಾಡುತ್ತವೆ. ಇದು ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗುವ ಅಪಾಯವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಮಧುಮೇಹ ರೋಗಿಗಳು ಆಲೂಗಡ್ಡೆ ಸೇವನೆ ಮಾಡುವುದನ್ನು ಮಿತಿಗೊಳಿಸಬೇಕು. ಇಲ್ಲದಿದ್ದರೆ, ದೂರವಿರುವುದು ಬಹಳ ಒಳ್ಳೆಯದು.
ಸ್ವೀಟ್ ಕಾರ್ನ್
ಇತ್ತೀಚಿನ ದಿನಗಳಲ್ಲಿ, ಅನೇಕರು ಸಿಹಿ ಜೋಳ ತಿನ್ನಲು ಇಷ್ಟಪಡುತ್ತಿದ್ದಾರೆ. ಇದಕ್ಕೆ ಹೆಚ್ಚಿನ ಬೇಡಿಕೆಯಿದೆ. ಸಿಹಿ ಜೋಳದ ಗ್ಲೈಸೆಮಿಕ್ ಸೂಚ್ಯಂಕ ಅಷ್ಟಾಗಿ ಇಲ್ಲದಿದ್ದರೂ ಇದರಲ್ಲಿ ಹೆಚ್ಚಿನ ಮಟ್ಟದ ಕಾರ್ಬೋಹೈಡ್ರೇಟ್‌ಗಳಿವೆ. ಆದ್ದರಿಂದ, ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ತಜ್ಞರು ಮಧುಮೇಹ ರೋಗಿಗಳು ಸಿಹಿ ಜೋಳವನ್ನು ಬಹಳ ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು ಎಂದು ಸಲಹೆ ನೀಡುತ್ತಾರೆ.
ಮರಗೆಣಸು
ಇದು ನೆಲದಡಿಯಲ್ಲಿ ಬೆಳೆಯುವ ಒಂದು ತರಕಾರಿ. ಇದನ್ನು ಹಸಿಯಾಗಿ ತಿನ್ನುವುದಿಲ್ಲ ಬೇಯಿಸಿದ ನಂತರವೇ ತಿನ್ನಲಾಗುತ್ತದೆ. ಈ ತರಕಾರಿಯಲ್ಲಿ ಸೂಕ್ತ ಪ್ರಮಾಣದ ಕ್ಯಾಲೋರಿ, ಕಾರ್ಬೋಹೈಡ್ರೇಟ್, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ಫೈಬರ್ ಇರುತ್ತದೆ. ಹಾಗಾಗಿ ಇದನ್ನು ಸೇವನೆ ಮಾಡುವುದರಿಂದ ಮಧುಮೇಹ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಇದರ ಗ್ಲೈಸೆಮಿಕ್ ಸೂಚ್ಯಂಕ ಮಧ್ಯಮವಾಗಿದ್ದರೂ, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಆದ್ದರಿಂದ, ಮಧುಮೇಹ ಇರುವವರು ಈ ತರಕಾರಿಯನ್ನು ತಿನ್ನಬಾರದು ಅಥವಾ ಅದನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಸೇವಿಸಬೇಕು.
ಸಿಹಿ ಆಲೂಗಡ್ಡೆ ಅಥವಾ ಗೆಣಸು
ಗೆಣಸು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದಕ್ಕಾಗಿಯೇ ಅನೇಕ ಜನರು ಇದನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ ಮಧುಮೇಹ ರೋಗಿಗಳಿಗೆ ಸಿಹಿ ಗೆಣಸು ಒಳ್ಳೆಯದಲ್ಲ. ಗೆಣಸು ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿದೆ. ಇದಲ್ಲದೆ, ಇದು ಹೆಚ್ಚಿನ ಪ್ರಮಾಣದ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಪರಿಣಾಮವಾಗಿ, ಇದನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ತ್ವರಿತವಾಗಿ ಹೆಚ್ಚಾಗುತ್ತದೆ.
ಕ್ಯಾರೆಟ್
ಈ ತರಕಾರಿಯ ಅತಿಯಾದ ಸೇವನೆಯು ಸಕ್ಕರೆ ಮಟ್ಟವನ್ನು ಹೆಚ್ಚಿಸಲು ಕಾರಣವಾಗಬಹುದು. ವಿಶೇಷವಾಗಿ, ಕ್ಯಾರೆಟ್ ರಸವನ್ನು ಸೇವನೆ ಮಾಡುವುದನ್ನು ಸಂಪೂರ್ಣವಾಗಿ ತಪ್ಪಿಸಬೇಕು. ಆದ್ದರಿಂದ, ಮಧುಮೇಹ ರೋಗಿಗಳು ಕ್ಯಾರೆಟ್ ನಿಂದ ದೂರವಿರುವುದು ಉತ್ತಮ.
ಇದನ್ನೂ ಓದಿ: ಮಳೆಗಾಲದಲ್ಲಿ ಮಧುಮೇಹ ರೋಗಿಗಳು ಈ ಸಲಹೆಯನ್ನು ಪಾಲಿಸಲೇಬೇಕು
ಹಸಿ ಈರುಳ್ಳಿ
ನಿಮಗೆ ತಿಳಿದಿರಲಿ ಹಸಿ ಈರುಳ್ಳಿ ಕೂಡ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುತ್ತದೆ. ಅವು ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತವೆ. ಆದ್ದರಿಂದ, ಮಧುಮೇಹ ರೋಗಿಗಳು ಅವುಗಳನ್ನು ಅತಿಯಾಗಿ ಸೇವಿಸಬಾರದು ಎಂದು ತಜ್ಞರು ಶಿಫಾರಸು ಮಾಡುತ್ತಾರೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:35 pm, Thu, 10 July 25








