ಕೊರೊನಾ ನಿಯಂತ್ರಿಸಲು ಹೋಗಿ ಹೊಸ ವೈರಸ್​ಗೆ ಆಹ್ವಾನ ನೀಡುತ್ತಿದ್ದೇವಾ? ಅತಿಯಾದ ಸ್ಯಾನಿಟೈಸರ್​ ಬಳಕೆಯೇ ತಿರುಗುಬಾಣವಾಗಬಹುದು ಎಚ್ಚರ!

ಕೊರೊನಾ ವೈರಸ್​ನಿಂದ ಪಾರಾಗಲು ಸ್ಯಾನಿಟೈಸರ್​ ಬಳಸಬೇಕೆಂಬುದೇನೋ ಮೇಲ್ನೋಟಕ್ಕೆ ಸರಿ. ಆದರೆ, ಕೊವಿಡ್​ ನಿಯಂತ್ರಣಕ್ಕೆ ಬಂದರೂ ಸ್ಯಾನಿಟೈಸರ್​ನಿಂದ ಮುಂದೆ ಭವಿಷ್ಯದಲ್ಲಿ ಬೇರೇನಾದರೂ ಅಪಾಯ ಕಾದಿದೆಯೇ ಎಂಬ ಜಿಜ್ಞಾಸೆ ವೈದ್ಯಕೀಯ ಲೋಕದಲ್ಲಿ ಮೂಡಿಬರುತ್ತಿದೆ.

ಕೊರೊನಾ ನಿಯಂತ್ರಿಸಲು ಹೋಗಿ ಹೊಸ ವೈರಸ್​ಗೆ ಆಹ್ವಾನ ನೀಡುತ್ತಿದ್ದೇವಾ? ಅತಿಯಾದ ಸ್ಯಾನಿಟೈಸರ್​ ಬಳಕೆಯೇ ತಿರುಗುಬಾಣವಾಗಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us
|

Updated on:Apr 01, 2021 | 7:01 PM

ಕಳೆದ 2020ರ ವರ್ಷಾರಂಭದಲ್ಲಿ ಜಗತ್ತಿಗೆ ಮುತ್ತಿಗೆ ಹಾಕಿದ ಕೊವಿಡ್ ಇನ್ನೂ ಅಟ್ಟಹಾಸಗೈಯುತ್ತ ಭಾರತವೂ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಎರಡನೇ ಅಲೆಯ ರೂಪದಲ್ಲಿ ಭಯಂಕರವಾಗಿ ಮನುಕುಲವನ್ನು ಕಾಡುತ್ತಿದೆ. ಮಹಾರಾಷ್ಟ್ರದಲ್ಲಿ ದಿನಕ್ಕೆ ಮೂವತ್ತು ಸಾವಿರಕ್ಕೂ ಹೆಚ್ಚು ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಆರಂಭದಲ್ಲಿ ಕೊವಿಡ್ ನಿಯಂತ್ರಣಕ್ಕೆ ಬೇಕಾಗಿ ಆರೋಗ್ಯ ವ್ಯವಸ್ಥೆಯನ್ನು ಸಜ್ಜುಗೊಳಿಸಲು ಹಾಗೂ ಇನ್ನಿತರ ತಯಾರಿಗಳಿಗಾಗಿ ಸುಮಾರು ಒಂದುವರೆ ತಿಂಗಳು ಲಾಕ್​ಡೌನ್ ವಿಧಿಸಲಾಗಿತ್ತು. ಕೊವಿಡ್​ನಿಂದ ರಕ್ಷಣೆ ಪಡೆಯಲು ಜನರು ಮನೆಯೊಳಗೇ ಉಳಿದರು. ವೈರಸ್ ಗಾಳಿಯಲ್ಲಿ ಹರಡುವುದರಿಂದ ಎಲ್ಲ ಸಮಯದಲ್ಲೂ ಜನರು ಮಾಸ್ಕ್ ಹಾಕಿಕೊಂಡು ಓಡಾಡುವಂತೆ ಸೂಚಿಸಲಾಯಿತು. ಪದೇ ಪದೇ ಕೈಗಳನ್ನು ಸಾಬೂನಿನಿಂದ ತೊಳೆಯಿರಿ, ಸ್ಯಾನಿಟೈಸರ್ ಬಳಸಿ ಎಂದು ಜಾಗೃತಿ ಮೂಡಿಸಲಾಯಿತು. ಪರಿಣಾಮ ಈಗ ಎಲ್ಲಿ ನೋಡಿದರೂ ಸ್ಯಾನಿಟೈಸರ್​ ಬಾಟಲಿಗಳು ಕಣ್ಣಿಗೆ ಬೀಳುತ್ತವೆ. ಕೊರೊನಾ ವೈರಸ್​ನಿಂದ ಪಾರಾಗಲು ಸ್ಯಾನಿಟೈಸರ್​ ಬಳಸಬೇಕೆಂಬುದು ಉದ್ದೇಶವಾದರೂ ಇದೇ ಸ್ಯಾನಿಟೈಸರ್​ ನಮಗೆ ಬೇರೊಂದು ರೀತಿಯ ತೊಂದರೆಗೆ ಕಾರಣವಾಗಬಹುದು ಎನ್ನುವುದು ವೈದ್ಯಕೀಯ ಲೋಕದ ಸದ್ಯದ ಆತಂಕ.

ಪ್ರಾಣಾಪಾಯವನ್ನು ಉಂಟು ಮಾಡುವ ವೈರಾಣುವಿನ ಬಗ್ಗೆ ತುಂಬ ಎಚ್ಚರದಿಂದ ಇರಬೇಕಾದ್ದು ಅತೀ ಅವಶ್ಯಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಅದಕ್ಕಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಸುವುದು ಎಲ್ಲವೂ ವೇದ್ಯವೇ. ಆದರೆ ಮನೆಯಲ್ಲಿ ಒಬ್ಬರೇ ಇರುವ ವೇಳೆ, ನಾಲ್ಕೈದು ಜನರಿರುವ ದೊಡ್ಡದಾದ ಮನೆಯಲ್ಲಿ, ಸೂಕ್ತ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುವೆಡೆ, ಕಡಿಮೆ ಜನಸಂದಣಿಯಿರುವೆಡೆ ಸ್ಯಾನಿಟೈಸರ್ ಬಳಸಬೇಕಾದ್ದು ಅನಿವಾರ್ಯವೇ? ಇದರಿಂದ ಕೊರೊನಾ ವೈರಸ್ ಹರಡುವುದು ನಿಯಂತ್ರಣಕ್ಕೆ ಬಂದರೂ ಮುಂದೆ ಭವಿಷ್ಯದಲ್ಲಿ ಬೇರೇನಾದರೂ ಅಪಾಯ ಕಾದಿದೆಯೇ ಎಂಬ ಜಿಜ್ಞಾಸೆ ವೈದ್ಯಕೀಯ ಲೋಕದಲ್ಲಿ ಮೂಡಿಬರುತ್ತಿದೆ.

ಎಲ್ಲರಿಗೂ ತಿಳಿದಿರುವಂತೆ ಕೊರೊನಾ ವೈರಸ್ ಸಾಮಾನ್ಯವಾಗಿ ಗಾಳಿಯಲ್ಲಿ ಪಸರಿಸುವ ವೈರಸ್. ಅಂದರೆ Droplet spread. ವೈರಾಣುವಿನಿಂದ ಸೋಂಕಿಗೊಳಗಾದ ವ್ಯಕ್ತಿಯ ಕಫ, ಎಂಜಲು, ಆತ ಉಸಿರಾಡಿ ಹೊರಬಿಟ್ಟ ಗಾಳಿ ಬಾಹ್ಯ ಸಂಪರ್ಕಕ್ಕೆ ಬಂದರೆ ಅದರ ಜೊತೆ ವೈರಾಣುವೂ ಬರುತ್ತದೆ. ಇಂಥ ವೈರಾಣು ಯಾವ ವಸ್ತುಗಳ ಮೇಲೆ ಬೇಕಾದರೂ ಕುಳಿತುಕೊಳ್ಳಬಹುದು. ನಂತರ ಆ ವಸ್ತುಗಳನ್ನು ಮುಟ್ಟಿದ ವ್ಯಕ್ತಿಗಳ ಶ್ವಾಸಕೋಶಕ್ಕೆ ವೈರಾಣು ಹೋದರೆ ಆ ವ್ಯಕ್ತಿಗಳೂ ಕೊವಿಡ್​ಗೆ ತುತ್ತಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದಲೇ ಗಾಳಿಯಲ್ಲಿ ಹರಡಿದ ವೈರಸ್ ನಮ್ಮೊಳಗೆ ಹೋಗದಂತೆ ತಡೆಯಲು ಮಾಸ್ಕ್, ನಾವು ಮುಟ್ಟುವ ವಸ್ತುಗಳ ಮೇಲಿರುವ ವೈರಾಣುವನ್ನು ನಾಶಪಡಿಸಲು ಸ್ಯಾನಿಟೈಸರ್, ಕೈಯಲ್ಲಿ ಸಿಕ್ಕಿಕೊಂಡ ವೈರಸ್ಸನ್ನು ಕೊಲ್ಲಲು ಸಾಬೂನಿನಿಂದ ಕೈತೊಳೆಯುವುದೆಲ್ಲ ಕೊರೊನಾ ನಿಯಂತ್ರಣಕ್ಕೆ ಜನರು ಬಳಸುತ್ತಿರುವ ಮುನ್ನೆಚ್ಚರಿಕಾ ಕ್ರಮಗಳು. ಆದರೆ ಸ್ಯಾನಿಟೈಸರ್ ಬಳಸುವುದರಿಂದ, ಸಾಬೂನಿನಿಂದ ಪದೇ ಪದೇ ಕೈ ತೊಳೆಯುವುದರಿಂದ ಸಾಯುವುದು ಬರೀ ಕೊರೊನಾ ವೈರಸ್ ಮಾತ್ರವಲ್ಲ ಎಷ್ಟೋ ಸಂಖ್ಯೆಯಲ್ಲಿರುವ ಇತರ ಬ್ಯಾಕ್ಟೀರಿಯಾ, ಫಂಗಸ್ ಮುಂತಾದ ಸೂಕ್ಷ್ಮಾಣು ಜೀವಿಗಳೂ ಕೂಡ ಎಂದು ಎಷ್ಟು ಜನರಿಗೆ ಗೊತ್ತಿದೆ?

ಪ್ರಪಂಚದಲ್ಲಿ ಲೆಕ್ಕಕ್ಕೆ ನಿಲುಕದಷ್ಟು ಸೂಕ್ಷ್ಮಾಣು ಜೀವಿಗಳಿವೆ. ಬ್ಯಾಕ್ಟೀರಿಯಾ, ವೈರಸ್, ಫಂಗೈ ಎಲ್ಲ ಕಡೆಯೂ ಹಬ್ಬಿಕೊಂಡಿವೆ. ಇಂಥ ಅಸಂಖ್ಯಾತ ಸೂಕ್ಷ್ಮ ಜೀವಿಗಳಲ್ಲಿ ಮನುಷ್ಯರಿಗೆ ಹಾಗೂ ಇತರ ಪ್ರಾಣಿಗಳಿಗೆ ರೋಗವನ್ನುಂಟು ಮಾಡುವ ಜೀವಿಗಳು (Pathogenic organisms) ಕೆಲವೇ ಕೆಲವು ಮಾತ್ರ. ಉಳಿದ ಬಹಳಷ್ಟು ಸೂಕ್ಷ್ಮಾಣು ಜೀವಿಗಳು ಯಾವುದೇ ರೋಗವನ್ನುಂಟು ಮಾಡದೇ ಬದುಕುವಂಥವು. (Nonpathogenic organisms). ಇವುಗಳಿಂದ ಮನುಷ್ಯರಿಗೆ ಹಾಗೂ ಬೇರೆ ಜೀವಿಗಳಿಗೆ ಯಾವುದೇ ಅಪಾಯವಿಲ್ಲ. ಹೆಚ್ಚಿನ ಕಡೆ ಇಂಥ ರೋಗವನ್ನುಂಟುಮಾಡದ ಜೀವಿಗಳ ಸಂಖ್ಯೆ ರೋಗ ತರುವ ಸೂಕ್ಷ್ಮಾಣುಗಳಿಂದ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತದೆ. ನಿಸರ್ಗದತ್ತವಾಗಿ ಬಂದಿರುವ ಜೀವ ನಿಯಮದಂತೆ ಈ ಹೆಚ್ಚಿನ ಸಂಖ್ಯೆಯಲ್ಲಿರುವ ಒಳ್ಳೆಯ ಸೂಕ್ಷ್ಮಾಣುಗಳು ಅಪಾಯಕಾರಿಯಾದ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಕುಂಠಿತಗೊಳಿಸಿ ರೋಗ ಬರದಂತೆ ತಡೆಯುತ್ತವೆ. ಹೊರಗಿನ ಪರಿಸರಕ್ಕೆ, ನಮ್ಮ ಮನೆಗಳಲ್ಲಿ ಈ ನಿಯಮವಾದರೆ ಆಸ್ಪತ್ರೆಗಳಲ್ಲಿ ಹಾಗೂ ದವಾಖಾನೆಯ ಸುತ್ತಮುತ್ತ ರೋಗವನ್ನುಂಟು ಮಾಡುವ ಅಪಾಯಕಾರಿ ಸೂಕ್ಷ್ಮಜೀವಿಗಳು ಜಾಸ್ತಿ ಸಂಖ್ಯೆಯಲ್ಲಿದ್ದು ನಿರುಪದ್ರವಿ ಸೂಕ್ಷ್ಮಜೀವಿಗಳು ಕಡಿಮೆ ಸಂಖ್ಯೆಯಲ್ಲಿರುತ್ತವೆ. ಇಲ್ಲಿ Pathogenic organisms ಜಾಸ್ತಿಯಾಗಿ Nonpathogenic organismsಗಳನ್ನು ಕುಂಠಿತಗೊಳಿಸುತ್ತವೆ. ಇಂಥ ಕಡೆಗಳಲ್ಲಿ ಶುಚಿತ್ವ ಕಾಪಾಡಬೇಕಾದ್ದು, ಸ್ಯಾನಿಟೈಸರ್ ಬಳಸಬೇಕಾದ್ದು ಅನಿವಾರ್ಯ. ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿರುವ ಅಪಾಯಕಾರಿ ಸೂಕ್ಷ್ಮಜೀವಿಗಳು ಸಾಯಲ್ಪಟ್ಟು ರೋಗ ಹರಡುವುದು ಕಡಿಮೆಯಾಗುತ್ತದೆ. Nonpathogenic organisms ಜಾಸ್ತಿಯಿರುವ ಕಡೆಗಳಲ್ಲಿ ಅಂದರೆ ನಮ್ಮ ಮನೆ ಹಾಗೂ ಇತರ ಶುದ್ಧವಾಗಿರುವ ಸ್ಥಳಗಳಲ್ಲೂ ಪದೇ ಪದೇ ಸ್ಯಾನಿಟೈಸರ್ ಬಳಸಿದರೆ ರೋಗವನ್ನುಂಟು ಮಾಡದ ಸೂಕ್ಷ್ಮಜೀವಿಗಳು ಸಾಯುತ್ತವೆ. ಇದರಿಂದ ರೋಗವನ್ನುಂಟು ಮಾಡುವ Pathogenic organisms ಮೇಲಿನ ಅವುಗಳ ನಿಯಂತ್ರಣ ತಪ್ಪಿ ಹೋಗಿ ರೋಗಾಣುಗಳು ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧಿಯಾಗುವ ಸಾಧ್ಯತೆಯಿದೆ.

ಒಳ್ಳೆಯ ಬ್ಯಾಕ್ಟೀರಿಯಾಗಳೂ ನಮ್ಮೊಂದಿಗಿರುತ್ತವೆ ಅಷ್ಟೇ ಆದರೆ ಪರವಾಗಿಲ್ಲ. ಆದರೆ, ಮನುಷ್ಯನ ಬಾಯಿ, ಮೂಗು, ಗಂಟಲು, ಶ್ವಾಸನಾಳ, ಜಠರ, ಕರುಳಿನಲ್ಲಿ ಬಹಳಷ್ಟು ಬ್ಯಾಕ್ಟೀರಿಯಾಗಳಿವೆ. ಅವು ಯಾವುವೂ ಆರೋಗ್ಯವಂತ ಮನುಷ್ಯನಿಗೆ ಯಾವ ತೊಂದರೆಯನ್ನೂ ಉಂಟು ಮಾಡುವುದಿಲ್ಲ. ಇವುಗಳಿಗೆ Commensal Organisms ಎನ್ನುತ್ತಾರೆ. ದೇಹದೊಳಗಿರುವ ಜೀವಕೋಶಗಳಿಂದಲೇ ಇವು ತಮಗೆ ಬೇಕಾದ ಆಹಾರವನ್ನು, ಶಕ್ತಿಯನ್ನು ಹೀರಿಕೊಂಡು ಬದುಕುತ್ತವೆ. ಯಾವುದಾದರೂ ಕಾರಣದಿಂದ ಮನುಷ್ಯನ ರೋಗನಿರೋಧಕ ಶಕ್ತಿ ಕಡಿಮೆಯಾದಾಗ ಕೆಲವು ಬ್ಯಾಕ್ಟೀರಿಯಾಗಳು ರೋಗವನ್ನುಂಟು ಮಾಡಿದರೆ ಇನ್ನು ಕೆಲವು Commensal Organismಗಳು ರೋಗನಿರೋಧಕ ಶಕ್ತಿ ಕುಂಠಿತವಾದವರಲ್ಲೂ ಯಾವುದೇ ರೋಗವನ್ನುಂಟು ಮಾಡುವುದಿಲ್ಲ. ನಮ್ಮ ದೇಹದೊಳಗಿರುವ ಇಂಥ ಅನೇಕ ಸೂಕ್ಷ್ಮಾಣುಜೀವಿಗಳು ಕೆಲವೇ ಸಂಖ್ಯೆಯಲ್ಲಿರುವ ರೋಗವನ್ನುಂಟು ಮಾಡುವ ಸೂಕ್ಷ್ಮಜೀವಿಗಳನ್ನು ನಿಯಂತ್ರಿಸುತ್ತವೆ. ಎರಡು ಜೀವಿಗಳು ಹತ್ತಿರ ಬಂದಾಗ ನಡೆಯುವ ಸಂಪರ್ಕಕ್ಕೆ, Interactionಗೆ ಜೀವಶಾಸ್ತ್ರದಲ್ಲಿ ‘ಸಿಂಬಯಾಸಿಸ್’ (Symbiosis)ಎನ್ನುತ್ತಾರೆ. ಅಪಾಯಕಾರಿಯಲ್ಲದ ಸೂಕ್ಷ್ಮಜೀವಿಗಳು ಹಾಗೂ ರೋಗಾಣುಗಳ ನಡುವೆ ಒಂದು ರೀತಿಯ ಸಮತೋಲನ ಏರ್ಪಟ್ಟು ಆರೋಗ್ಯವಂತ ಸ್ಥಿತಿಯನ್ನು ಕಾಪಾಡಲು ಈ Symbiosis ಅನಿವಾರ್ಯ. ಯಾವುದೇ ಕಾರಣದಿಂದ Symbiosis ಹಾಳಾದರೆ ಮನುಷ್ಯ ರೋಗಿಯಾಗುವ ಸಾಧ್ಯತೆಯಿದೆ. ಇದನ್ನು ಇನ್ನೂ ಸುಲಭವಾಗಿ ವಿವರಿಸುವುದಾದರೆ ಬಹಳಷ್ಟು ರೋಗಗಳಿಗೆ ನಾವು ತೆಗೆದುಕೊಳ್ಳುವ Antibioticsಗಳಿಂದ ನಮ್ಮ ಕರುಳಿನಲ್ಲಿರುವ ಕೆಲವು ಒಳ್ಳೆಯ ಬ್ಯಾಕ್ಟೀರಿಯಾಗಳೂ ನಾಶವಾಗಿ Symbiosis disturb ಆಗುತ್ತದೆ.ಆಗ ಕರುಳಿನಲ್ಲಿರುವ ರೋಗವನ್ನುಂಟುಮಾಡುವ ಬ್ಯಾಕ್ಟೀರಿಯಾಗಳು ವೃದ್ಧಿಸಿ ಹೊಟ್ಟೆನೋವು, ವಾಂತಿ, ಭೇದಿ ಉಂಟಾಗಬಹುದು. ಆಗ ವೈದ್ಯರು Antibiotic ನಿಲ್ಲಿಸಿ ಒಳ್ಳೆಯ ಬ್ಯಾಕ್ಟೀರಿಯಾಗಳ ಸಂಖ್ಯೆ ಹೆಚ್ಚಾಗಲು ಅವುಗಳ ಬೆಳವಣಿಗೆಗೆ ಪೂರಕವಾದ Probiotics ಎಂಬ ಔಷಧಿಯನ್ನು ಕೊಡುತ್ತಾರೆ. ಈ Probioticsಗಳಿಂದ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಾಗಿ ಮತ್ತೆ Symbiosis ಸಮತೋಲನಕ್ಕೆ ಬರುತ್ತದೆ.

ಹೊರಗಿನ ಪರಿಸರದಲ್ಲಿ, ನಮ್ಮೆಲ್ಲರ ಮನೆಗಳಲ್ಲಿ ಲೆಕ್ಕವಿಲ್ಲದಷ್ಟು ಬ್ಯಾಕ್ಟೀರಿಯಾಗಳು, ವೈರಸ್, ಫಂಗಸ್​ಗಳು ಇವೆ. ಇವುಗಳಲ್ಲಿ ರೋಗವನ್ನುಂಟು ಮಾಡುವ ಸೂಕ್ಷ್ಮಾಣುಜೀವಿಗಳು ಕೆಲವೇ ಕೆಲವಾದರೆ ರೋಗಾಣುಗಳನ್ನು ನಿಯಂತ್ರಿಸಿ Symbiosis ಅನ್ನು ಸಮತೋಲನದಲ್ಲಿಡುವ ಒಳ್ಳೆಯ ಸೂಕ್ಷ್ಮಾಣುಜೀವಿಗಳ ಸಂಖ್ಯೆ ಹಲವು. ನಾವು ಸ್ಯಾನಿಟೈಸರ್ ಬಳಸಿದಾಗ ರೋಗಾಣುಗಳ ಜೊತೆ ಒಳ್ಳೆಯ ಸೂಕ್ಷ್ಮಜೀವಿಗಳೂ ಸಾಯಲ್ಪಟ್ಟು Symbiosis disturb ಆದರೆ ನಮಗೇ ನಷ್ಟ. ಜೀವವಿಕಾಸದ ನಿಯಮದಂತೆ ಯಾವುದೇ ಜೀವಿಯ ಮೇಲೆ ಪದೇ ಪದೇ ದಾಳಿ, ಪ್ರಹಾರ ಉಂಟಾದಾಗ ಹಲವು ವರ್ಷಗಳ ನಂತರ ಜೀವಿಯ ವಂಶವಾಹಿಯಲ್ಲಾಗುವ ಬದಲಾವಣೆಯಿಂದ ದಾಳಿಯನ್ನು, ಪ್ರಹಾರವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಜೀವಿ ಕ್ರಮೇಣ ಪಡೆದುಕೊಳ್ಳಬಹುದು. ಅದರ ರೂಪದಲ್ಲಿ, ಜೈವಿಕ ಗುಣಲಕ್ಷ್ಮಣಗಳಲ್ಲಿ ಯಾವುದಾದರೂ ಮಾರ್ಪಾಡಾಗಬಹುದು. ಜೀವಿಯ ವಂಶವಾಹಿಯಲ್ಲಿ ಅಂದರೆ DNAಯಲ್ಲಿ ಆಗುವ ಬದಲಾವಣೆಯಿಂದ ಸಂಭವಿಸುವ ಈ ವಿದ್ಯಮಾನಕ್ಕೆ ಮ್ಯುಟೇಷನ್ (Mutation) ಎಂದು ಹೆಸರು. Mutations ಉಂಟಾಗಲು ಕಾರಣವಾಗುವ ಜೀವಿಗಳು, ವಸ್ತುಗಳಿಗೆ Mutagens ಎಂದು ಕರೆಯುತ್ತಾರೆ. ಈ ರೀತಿಯ ಮ್ಯುಟೇಷನ್​ನಿಂದಾಗಿ ರೋಗಾಣು ಬ್ಯಾಕ್ಟೀರಿಯಾಗಳ ವಂಶವಾಹಿಯಲ್ಲಿ ಬದಲಾವಣೆಯಾಗಿ ವೈದ್ಯರು ಕೊಡುವ Antibiotics ಅನ್ನು ಅವುಗಳು ತಡೆದುಕೊಂಡು ಬದುಕಿದರೆ ಅದನ್ನು Bacterial Resistance ಎಂದೂ ಅಂಥ ಬ್ಯಾಕ್ಟೀರಿಯಾವನ್ನು ಸೂಪರ್ ಬ್ಯಾಕ್ಟೀರಿಯಾ ಅಥವಾ Super Bug ಎನ್ನುತ್ತಾರೆ.

ಮುಂದುವರೆಯುತ್ತದೆ…

ಲೇಖಕರು – ಡಾ.ಲಕ್ಷ್ಮೀಶ ಜೆ. ಹೆಗಡೆ ಪೂರಕ ಮಾಹಿತಿ – ಡಾ. ಮುಕೇಶ್ ಎಂ

ಲೇಖಕರ ಪರಿಚಯ: ಲೇಖಕ ಡಾ.ಲಕ್ಷ್ಮೀಶ ಜೆ. ಹೆಗಡೆ ಪರಿಚಯ ಹುಟ್ಟಿದ್ದು ಮಂಗಳೂರಿನಲ್ಲಿ. ಹತ್ತನೆಯ ತರಗತಿಯವರೆಗೆ ಸರ್ಕಾರಿ ಕನ್ನಡ ಮಾಧ್ಯಮದಲ್ಲಿ ಕಲಿತು ಮುಂದೆ ವೈದ್ಯನಾಗುವ ಹಂಬಲದಿಂದ ಸಾಂಸ್ಕೃತಿಕ ನಗರಿಯ ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್​ ವ್ಯಾಸಂಗ ಮಾಡಿದರು. ನಂತರ ಮುಂಬೈನ ಲೋಕಮಾನ್ಯ ತಿಲಕ್ ಮೆಡಿಕಲ್ ಕಾಲೇಜಿನಲ್ಲಿ ಅನಸ್ತೇಷಿಯಾದಲ್ಲಿ ಸ್ನಾತಕೋತ್ತರ ಪದವಿ ಪಡೆದು ಪ್ರಸ್ತುತ ಮಹಾರಾಷ್ಟ್ರದ ಒಸ್ಮಾನಾಬಾದ್ ಜಿಲ್ಲಾ ಆಸ್ಪತ್ರೆಯ ಕೊವಿಡ್ ಐಸಿಯುನಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ರೋಗಿಗಳ ನೋವು ಶಮನ ಮಾಡುವುದನ್ನು ವೃತ್ತಿಯಾಗಿ ಹಾಗೂ ಬರವಣಿಗೆಯನ್ನು ಪ್ರವೃತ್ತಿಯಾಗಿ ಅಳವಡಿಸಿಕೊಂಡಿದ್ದಾರೆ.

ಇದನ್ನೂ ಓದಿ: Health Tips: ಬೊಜ್ಜು ಕರಗಿಸಲು ಮೆಂತ್ಯ ಉಪಯೋಗಿಸಿ; ಆರೋಗ್ಯಕರ ಜೀವನಕ್ಕೆ ಮನೆಯಲ್ಲೇ ಮದ್ದು 

ಕೊರೊನಾ ಅಡ್ಡಪರಿಣಾಮಗಳ ಗಂಭೀರತೆ ಬಗ್ಗೆ ಯೋಚಿಸಿದ್ದೀರಾ? ಲಸಿಕೆ ಇದ್ದರೂ ಮೈಮರೆಯಬೇಡಿ

Published On - 1:55 pm, Thu, 1 April 21

ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ದೆಹಲಿಯ ದೇವಸ್ಥಾನದಲ್ಲಿ ಕರೆಂಟ್ ಶಾಕ್ ಹೊಡೆದು 9ನೇ ತರಗತಿ ವಿದ್ಯಾರ್ಥಿ ಸಾವು
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ನಿವೃತ್ತರಾದ ತಹಸೀಲ್ದಾರ್ ಬೀಳ್ಕೊಡುಗೆ ವೇಳೆ ಬಾರ್​ ಡ್ಯಾನ್ಸರ್​ಗಳ ನೃತ್ಯ
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿಯಾದ ಕ್ರಿಸ್ ಗೇಲ್
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
ಹೆಚ್​ಡಿ ಕುಮಾರಸ್ವಾಮಿ ಆರೋಪ‌ಕ್ಕೆ ಎಡಿಜಿಪಿ ಚಂದ್ರಶೇಖರ್ ಮತ್ತೆ ತಿರುಗೇಟು
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
‘ಮನೆ ಕೆಲಸದವರಿಗೂ ನಾನು ಇಂಥ ಮಾತು ಹೇಳಲ್ಲ’: ಕಣ್ಣೀರು ಹಾಕಿದ ಐಶ್ವರ್ಯಾ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ದರ್ಶನ್ ನೋಡಲು ಜೈಲಿಗೆ ಬಂದ ವಿನೀಶ್: ವಿಡಿಯೋ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ರಾತ್ರೋರಾತ್ರಿ ಪುಷ್ಪಗಿರಿ ವೇರ್​ಹೌಸ್ ಶೆಡ್ ನಿರ್ಮಾಣ: HDR ತನಿಖೆಗೆ ಆಗ್ರಹ
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ಐಶ್ವರ್ಯಾ, ಧರ್ಮ, ಅನುಷಾ: ಬಿಗ್ ಬಾಸ್ ಮನೆಯಲ್ಲಿ ತ್ರಿಕೋನ ಪ್ರೇಮ ಶುರು?
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನಾನು ಇರುವುದನ್ನೇ ಹೇಳಿದ್ದೇನೆ: ಕುಮಾರಸ್ವಾಮಿಗೆ ಜಿಟಿಡಿ ಪರೋಕ್ಷ ಟಾಂಗ್
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ
ನವರಾತ್ರಿ: ದುರ್ಗಾ ದೇವಿಗೆ 2.5 ಕೋಟಿ ಮೌಲ್ಯದ ಚಿನ್ನದ ಕಿರೀಟ ಉಡುಗೊರೆ