ದೆಹಲಿ: APMC ಕಮಿಷನ್ ದಲ್ಲಾಳಿಗಳ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸುವ ಮೂಲಕ ಕೇಂದ್ರ ಸರ್ಕಾರ ರೈತರ ಚಳವಳಿಯನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಆದರೆ, ಇಡೀ ದೇಶವೇ ರೈತರ ಜೊತೆಗಿರುವಾಗ ಎಷ್ಟು ಜನರ ಮೇಲೆ ತಾನೇ ದಾಳಿ ನಡೆಸುತ್ತೀರಿ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೇಂದ್ರ ಸರ್ಕಾರವನ್ನು ದೂರಿದ್ದಾರೆ.
ಭಾನುವಾರ, ನೂತನ ಕೃಷಿ ಕಾಯ್ದೆಗಳ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಅರವಿಂದ್ ಕೇಜ್ರಿವಾಲ್, ಆದಾಯ ತೆರಿಗೆ ಇಲಾಖೆಯನ್ನು ಕೇಂದ್ರ ದುರ್ಬಳಕೆ ಮಾಡುತ್ತಿದೆ ಎಂದು ಹರಿಹಾಯ್ದರು.
ಕೆಲ ದಿನಗಳಿಂದ ದೆಹಲಿ ಚಲೋ ಚಳವಳಿಯನ್ನು ಬೆಂಬಲಿಸಿರುವ ಪಂಜಾಬ್ನ APMC ದಲ್ಲಾಳಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸುತ್ತಿದೆ. ಅಲ್ಲದೇ ಪದೇ ಪದೇ ದಲ್ಲಾಳಿಗಳಿಗೆ ಅಲ್ಪ ಸಮಯದ ಸುತ್ತೋಲೆ ನೀಡುತ್ತಿದೆ. ಈ ಮೂಲಕ ದಲ್ಲಾಳಿಗಳನ್ನು ಬೆದರಿಸುವ ಕೆಳಮಟ್ಟದ ತಂತ್ರವನ್ನು ಕೇಂದ್ರ ಸರ್ಕಾರ ಅನುಸರಿಸುತ್ತಿದೆ. ಇದೀಗ ಇಡೀ ದೇಶವೇ ರೈತರ ಜೊತೆಗಿರುವಾಗ ಯಾರ ಮೇಲೆ ದಾಳಿ ಮಾಡುತ್ತೀರಿ ಎಂದು ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದರು.
ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್, ಆದಾಯ ಇಲಾಖೆಯ ದಾಳಿಗಳ ಕುರಿತು ಕೇಂದ್ರ ಸರ್ಕಾರದ ಮೇಲೆ ನಿನ್ನೆಯಷ್ಟೇ ಹರಿಹಾಯ್ದಿದ್ದರು. ಸುತ್ತೋಲೆ ನೀಡಿದ ನಾಲ್ಕು ದಿನಕ್ಕೇ 14ಕ್ಕೂ ಹೆಚ್ಚು APMC ದಲ್ಲಾಳಿಗಳ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ನೀಡಿರುವ ಪ್ರತಿಭಟನೆಯ ಹಕ್ಕನ್ನು ಕೇಂದ್ರ ಸರ್ಕಾರ ಹತ್ತಿಕ್ಕುತ್ತಿದೆ ಎಂದು ಅವರು ಟೀಕಿಸಿದ್ದರು.
ಕೃಷಿ ಕಾಯ್ದೆಗಳ ಪ್ರತಿಯನ್ನು ವಿಧಾನಸಭೆಯಲ್ಲಿ ಹರಿದುಹಾಕಿದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
Published On - 6:54 pm, Sun, 20 December 20