ಫೀಲ್ಡ್ ಆಸ್ಪತ್ರೆಗಳ ನಿರ್ಮಾಣಕ್ಕೆ ಕೇಂದ್ರ ಸಂಸ್ಥೆಗಳು ಅಥವಾ ಖಾಸಗಿಯವರ ನೆರವು ಪಡೆಯಲು ರಾಜ್ಯ ಸರ್ಕಾರಗಳಿಗೆ ಸಲಹೆ

|

Updated on: Apr 24, 2021 | 8:18 PM

ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ ಹಾಕುವುದಕ್ಕೆ ಫೀಲ್ಡ್ ಆಸ್ಪತ್ರೆಗಳನ್ನು ನಿರ್ಮಾಣ ಮಾಡಲು ಸರ್ಕಾರಿ ಸಂಸ್ಥೆಗಳು ಅಥವಾ ಖಾಸಗಿಯಿಂದ ನೆರವು ಪಡೆಯುವಂತೆ ಕೇಂದ್ರದಿಂದ ರಾಜ್ಯಗಳಿಗೆ ಸಲಹೆ ನೀಡಲಾಗಿದೆ.

ಫೀಲ್ಡ್ ಆಸ್ಪತ್ರೆಗಳ ನಿರ್ಮಾಣಕ್ಕೆ ಕೇಂದ್ರ ಸಂಸ್ಥೆಗಳು ಅಥವಾ ಖಾಸಗಿಯವರ ನೆರವು ಪಡೆಯಲು ರಾಜ್ಯ ಸರ್ಕಾರಗಳಿಗೆ ಸಲಹೆ
ಕೊವಿಡ್ ಲಸಿಕೆ (ಸಾಂದರ್ಭಿಕ ಚಿತ್ರ)
Follow us on

ನವದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್-19 ಲಸಿಕೆ ಹಾಕುವುದಕ್ಕೆ ಸಿದ್ಧತೆ ನಡೆದಿರುವುದರಿಂದ ಸರ್ಕಾರಿ ಸಂಶೋಧನಾ ಸಂಸ್ಥೆಗಳು ಅಥವಾ ಖಾಸಗಿ ವಲಯದವರ ಸಹಾಯ ಪಡೆದು, ಫೀಲ್ಡ್ ಆಸ್ಪತ್ರೆಗಳನ್ನು ಆರಂಭಿಸುವ ಬಗ್ಗೆ ರಾಜ್ಯ ಸರ್ಕಾರಗಳು ಆಲೋಚಿಸಬೇಕು ಎಂದು ಕೇಂದ್ರ ಸರ್ಕಾರವು ಕೇಳಿದೆ. ಭಾರತದಲ್ಲಿ ಲಸಿಕೆ ಹಾಕುವ ಪ್ರಕ್ರಿಯೆಗೆ ಕೇಂದ್ರ ಸರ್ಕಾರದಿಂದ ವ್ಯೂಹಾತ್ಮಕವಾಗಿ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ಈ ಶಿಫಾರಸು ಕೂಡ ಒಂದಾಗಿದೆ. ರಾಜ್ಯಗಳು ಡಿಫೆನ್ಸ್ ರೀಸರ್ಚ್ ಅಂಡ್ ಡೆವಲಪ್​ಮೆಂಟ್ ಆರ್ಗನೈಸೇಷನ್ (ಡಿಆರ್​ಡಿಒ) ಮತ್ತು ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರೀಸರ್ಚ್ (ಸಿಎಸ್​ಐಆರ್) ಮತ್ತು ಈ ರೀತಿಯ ಖಾಸಗಿ ವಲಯದ ಸಂಸ್ಥೆಗಳ ನೆರವು ಪಡೆದು, ಫಿಲ್ಡ್ ಆಸ್ಪತ್ರೆಗಳ ನಿರ್ಮಾಣವನ್ನು ಮಾಡುವಂತೆ ಕೇಂದ್ರ ಹೇಳಿದೆ.

ಅಭಿಯಾನದ ರೀತಿಯಲ್ಲಿ ಹೆಚ್ಚೆಚ್ಚು ಖಾಸಗಿ ಲಸಿಕೆ ಕೇಂದ್ರಗಳನ್ನು ರಾಜ್ಯ ಸರ್ಕಾರಗಳು ನೋಂದಣಿ ಮಾಡುವುದಕ್ಕೆ ಪ್ರಯತ್ನಿಸಬೇಕು ಎಂದು ಕೇಂದ್ರ ತಿಳಿಸಿದೆ. “CoWIN ಪ್ಲಾಟ್​ಫಾರ್ಮ್ ಈಗ ಸ್ಥಿರತೆ ಕಂಡಿದೆ ಮತ್ತು ಈಗ ಯಾವುದೇ ಸಮಸ್ಯೆ ಇಲ್ಲದೆ ಕೆಲಸ ಮಾಡುತ್ತಿದೆ. ಮೇ 1ರಿಂದ ಆರಂಭವಾಗುವ ಹೊಸ ಹಂತದ ಲಸಿಕೆ ಹಾಕುವ ಕಾರ್ಯಕ್ರಮದಲ್ಲಿ ಸಂಕೀರ್ಣತೆಯನ್ನು ಎದುರಿಸಲು ಸಂಸಿದ್ಧಗೊಂಡಿದೆ,” ಎಂದು ಕೋವಿಡ್- 19 ಟೆಕ್ನಾಲಜಿ ಅಂಡ್ ಡೇಟಾ ಮ್ಯಾನೇಜ್​ಮೆಂಟ್ ಎಂಪವರ್ ಗ್ರೂಪ್​ನ ಅಧ್ಯಕ್ಷ ಡಾ.ಆರ್​.ಎಸ್​. ಶರ್ಮಾ ಹೇಳಿದ್ದಾರೆ.

ಶರ್ಮಾ ಮಾತನಾಡಿ, ರಾಜ್ಯಗಳು ಸಮಯಕ್ಕೆ ಸರಿಯಾದ ಮಾಹಿತಿಯನ್ನು ಅಪ್​ಲೋಡ್ ಮಾಡುವುದು ಬಹಳ ಮುಖ್ಯ. ಯಾವುದೇ ತಪ್ಪಾದ ದತ್ತಾಂಶದಿಂದ ಇಡೀ ವ್ಯವಸ್ಥೆಯ ಸಮಗ್ರತೆಗೆ ಧಕ್ಕೆ ಆಗುತ್ತದೆ ಎಂದಿದ್ದಾರೆ. ಇನ್ನು ಕೇಂದ್ರ ಸರ್ಕಾರದಿಂದ ಸೂಚನೆ ನೀಡಿ, ಆರೋಗ್ಯ ಸಿಬ್ಬಂದಿಗೆ ನ್ಯಾಯಸಮ್ಮತ ಮತ್ತು ಸಲ್ಲಬೇಕಾದ ಸಂಭಾವನೆ ನೀಡುವಂತೆ ತಿಳಿಸಲಾಗಿದೆ.

ಕೇಂದ್ರ ಸರ್ಕಾರದ ಈಚಿನ ಶಿಫಾರಸುಗಳು:
* ಲಸಿಕೆಗಳನ್ನು ಖರೀದಿ ಮಾಡಿರುವ ಆಸ್ಪತ್ರೆಗಳ ಸಂಖ್ಯೆ ಮತ್ತು ಘೋಷಿತ ದಾಸ್ತಾನು ಹಾಗೂ CoWIN ದರದ ನಿಗಾ ಮಾಡಬೇಕು
* 18ರಿಂದ 45 ವರ್ಷದೊಳಗಿನವರಿಗೆ ಇರುವ ಆನ್​ಲೈನ್ ನೋಂದಣಿ ಬಗ್ಗೆ ಪ್ರಚಾರ ಮಾಡಬೇಕು
* ಲಸಿಕೆ ಕೇಂದ್ರದಲ್ಲಿ ಗುಂಪುಗೂಡದಂತೆ ನೋಡಿಕೊಳ್ಳಲು ಕಾನೂನು- ಸುವ್ಯವಸ್ಥೆ ಕಾಪಾಡುವ ಅಧಿಕಾರಿಗಳ ಜತೆಗೆ ಸಂವಹನದೊಂದಿಗೆ ನಿರ್ವಹಣೆ ಮಾಡಿ
* ಸೋಂಕು ಲಕ್ಷಣ ಇರದ ಮತ್ತು ಸಾಧಾರಣವಾದ ಲಕ್ಷಣಗಳಿರುವ ರೋಗಿಗಳಿಗೆ ಪ್ರತ್ಯೇಕವಾಗಿ ಇರಿಸಲು ಕೋವಿಡ್- 19 ಕಾಳಜಿ ವ್ಯವಸ್ಥೆ ವಿಸ್ತರಣೆ ಸೂಚಿಸಲಾಗಿದೆ. ಅಂಥ ಸನ್ನಿವೇಶಲ್ಲಿ ಯಾರಿಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಲು ಆಗುವುದಿಲ್ಲವೋ ಅಂಥವರು ಸಾಂಸ್ಥಿಕ ಪ್ರತ್ಯೇಕವಾಗಿ ಇರಬಹುದು, ಅವರಿಗೆ ಸ್ಥಳ ಮತ್ತು ಕಾಳಜಿ ಸಿಗುತ್ತದೆ.

ಕೊರೊನಾ ಎರಡನೇ ಅಲೆ ಎಂದು ಕರೆಯುತ್ತಿರುವ ಈಗಿನ ಸನ್ನಿವೇಶದಲ್ಲಿ ಸೋಂಕಿತ ಪ್ರಕರಣಗಳು ಸಿಕ್ಕಾಪಟ್ಟೆ ಹೆಚ್ಚಾಗಿವೆ. ಸ್ನೇಹಿತರು, ಕುಟುಂಬದವರಿಗೆ ಆಮ್ಲಜನಕ ದೊರೆಯುತ್ತಿಲ್ಲ, ಆಸ್ಪತ್ರೆಯ ಬೆಡ್ ದೊರೆಯುತ್ತಿಲ್ಲ ಎಂದು ದೂರಿ, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕುತ್ತಿರುವವರ ಸಂಖ್ಯೆ ಕೂಡ ದೊಡ್ಡ ಮಟ್ಟದಲ್ಲಿ ಕಂಡುಬರುತ್ತಿದೆ. ಈ ಬಾರಿ ಹೆಚ್ಚಿನ ಸಂಖ್ಯೆಯ ಜನ ಉಸಿರಾಟದ ಸಮಸ್ಯೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಕಾರಣಕ್ಕೆ ಬೇಡಿಕೆ ಹೆಚ್ಚಾಗಿದ್ದು, ಆಕ್ಸಿಜನ್ ಪೂರೈಕೆ ಬಹಳ ಕಡಿಮೆ ಆಗಿದೆ.

ಇದನ್ನೂ ಓದಿ: ಸಮಾಧಾನಕರ ಸುದ್ದಿ: ಮತ್ತೊಂದು ಕೊರೊನಾ ಲಸಿಕೆಯ ವೈದ್ಯಕೀಯ ಪ್ರಯೋಗಕ್ಕೆ ಒಪ್ಪಿಗೆ ನೀಡಿದ ಡಿಸಿಜಿಐ

(Centre asks state governments to take help of govt and private agencies to set up field hospitals for vaccination of 18 years and above from May 1st)