ದೆಹಲಿ: ಮೇ 1ರಿಂದ 18 ವರ್ಷ ಮೇಲ್ಪಟ್ಟ ಎಲ್ಲರೂ ಕೊವಿಡ್-19 ಲಸಿಕೆ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಸೂಚಿಸಿದ ಬೆನ್ನಲ್ಲೇ, ಸೋಷಿಯಲ್ ಮೀಡಿಯಾಗಳಲ್ಲಿ ವಿಚಾರವೊಂದು ಹರಿದಾಡುತ್ತಿದೆ. ಮಹಿಳೆಯರು ತಿಂಗಳ ಮುಟ್ಟಿಗೆ 5 ದಿನ ಇದೆ ಎನ್ನುವಾಗ.. ಅಥವಾ ಮುಟ್ಟಾಗಿ 5 ದಿನಗಳವರೆಗೆ ಕೊವಿಡ್ ಲಸಿಕೆ ತೆಗೆದುಕೊಳ್ಳಬಾರದು ಎಂಬರ್ಥದ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಸಾಮಾನ್ಯವಾಗಿ ಮಹಿಳೆಯರಿಗೆ ತಮ್ಮ ಋತುಚಕ್ರಗೊತ್ತಿರುತ್ತದೆ. ಆ ದಿನಾಂಕ ಹತ್ತಿರ ಬಂದು ಇನ್ನೇನು ಐದು ದಿನ ಇರಬಹುದು ಎಂದಾಗ ಲಸಿಕೆ ತೆಗೆದುಕೊಳ್ಳಬಾರದು. ಹಾಗೇ ಮುಟ್ಟು ಮುಗಿದು ಐದು ದಿನಗಳವರೆಗೂ ಕೊವಿಡ್ ಲಸಿಕೆ ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಮುಟ್ಟಿನ ದಿನಗಳು ಹತ್ತಿರಬಂದಾಗ.. ಮುಗಿದ 5-6ದಿನಗಳವರೆಗೆ ಮಹಿಳೆಯರಲ್ಲಿ ರೋಗನಿರೋಧರ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಮುಟ್ಟಿನ ಸಂದರ್ಭದಲ್ಲಿ ಕೊವಿಡ್-19 ಲಸಿಕೆ ಹಾಕಿಸಿಕೊಳ್ಳದೆ ಇರುವುದು ಉತ್ತಮ ಎಂದು ವ್ಯಾಪಕ ಚರ್ಚೆಯಾಗುತ್ತಿದೆ. ಇನ್ನು ಕೆಲವು ಮಹಿಳೆಯರಂತೂ, ತಮಗೆ ಲಸಿಕೆ ತೆಗೆದುಕೊಂಡ ಮೇಲೆ ಮುಟ್ಟಿನ ಸಮಯದಲ್ಲಿ ಏರುಪೇರಾಗಿದೆ, ಮುಗಿದು ಹೋಗಿದ್ದ ಮುಟ್ಟು ಮತ್ತೆ ಕಾಣಿಸಿಕೊಂಡಿದೆ ಎಂಬಿತ್ಯಾದಿ ಅನುಭವಗಳನ್ನೂ ಹಂಚಿಕೊಂಡಿದ್ದರು.
ಆದರೆ ನಿಜಕ್ಕೂ ಇದು ಸತ್ಯವಾ? ಮುಟ್ಟಿನ ಸಂದರ್ಭದಲ್ಲಿ ಲಸಿಕೆ ಹಾಕಿಸಿಕೊಳ್ಳಬಾರದಾ? ಈ ಪ್ರಶ್ನೆಗೆ ಕೇಂದ್ರ ಸರ್ಕಾರ ಉತ್ತರಿಸಿದೆ. ಕೇಂದ್ರದ ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ ಈ ಬಗ್ಗೆ ವರದಿ ಪ್ರಕಟಿಸಿದ್ದು, ಹೀಗೆ ಮುಟ್ಟಾಗಲು 5ದಿನ ಇರುವಾಗ, ಮುಗಿದ 5 ದಿನಗಳವರೆಗೆ ಲಸಿಕೆ ತೆಗೆದುಕೊಳ್ಳಬಾರದು ಎಂಬ ವಿಚಾರದಲ್ಲಿ ಹುರುಳಿಲ್ಲ. ಮುಟ್ಟಿನ ವೇಳೆಯಲ್ಲಿ ಲಸಿಕೆ ತೆಗೆದುಕೊಳ್ಳುವುದರಿಂದ ಯಾವ ಅಪಾಯವೂ ಇಲ್ಲ. ಮೇ 1ರ ನಂತರ 18 ವರ್ಷ ಮೇಲ್ಪಟ್ಟ ಎಲ್ಲರೂ ಯಾವುದೇ ಅಂಜಿಕೆಯಿಲ್ಲದೆ ಲಸಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದೆ.
ಈ ಬಗ್ಗೆ ಡಾ. ಮುಂಜಾಲ್ ವಿ.ಕಪಾಡಿಯಾ ಎಂಬುವರು ಸಹ ಈ ಊಹಾಪೋಹಗಳನ್ನು ನಂಬಬೇಡಿ ಎಂದು ಮಹಿಳೆಯರಲ್ಲಿ ಮನವಿ ಮಾಡಿದ್ದಾರೆ. ಕೊವಿಡ್-19 ಲಸಿಕೆಗೂ, ಮಹಿಳೆಯರ ಮುಟ್ಟಿಗೂ ಯಾವುದೇ ಸಂಬಂಧವಿಲ್ಲ. ಧೈರ್ಯವಾಗಿ ಲಸಿಕೆ ಪಡೆಯಿರಿ ಎಂದಿದ್ದಾರೆ.
ಇನ್ನು ಮೇ 1ರಿಂದ ಲಸಿಕೆ ಪಡೆಯಲು ಏಪ್ರಿಲ್ 28ರಿಂದ CoWIN ಆ್ಯಪ್ ಅಥವಾ ಆರೋಗ್ಯ ಸೇತು ಆ್ಯಪ್ನಲ್ಲಿ ನೋಂದಣಿ ಮಾಡಿಕೊಳ್ಳಬಹುದಾಗಿದೆ. ದೇಶದಲ್ಲಿ ಜನವರಿ 16ರಿಂದ ಮೊದಲ ಹಂತದ ವ್ಯಾಕ್ಸಿನೇಶನ್ ಶುರುವಾಗಿದೆ. ಮೊದಲ ಹಂತದಲ್ಲಿ ಕೊರೊನಾ ವಾರಿಯರ್ಸ್ಗೆ ನೀಡಲಾಗಿದೆ. ಎರಡನೇ ಹಂತದಲ್ಲಿ 65 ವರ್ಷ ಮತ್ತು 45 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಾಗಿದೆ.
#Fake post circulating on social media claims that women should not take #COVID19Vaccine 5 days before and after their menstrual cycle.
Don’t fall for rumours!
All people above 18 should get vaccinated after May 1. Registration starts on April 28 on https://t.co/61Oox5pH7x pic.twitter.com/JMxoxnEFsy
— PIB Fact Check (@PIBFactCheck) April 24, 2021
Published On - 6:50 pm, Sat, 24 April 21