ದೆಹಲಿ: ರಾಷ್ಟ್ರರಾಜಧಾನಿಯ ಹಲವು ಆಸ್ಪತ್ರೆಗಳು ವೈದ್ಯಕೀಯ ಆಮ್ಲಜನಕ ಅಭಾವದಿಂದ ಕಂಗೆಟ್ಟಿವೆ. ಈಗಾಗಲೇ ಎರಡು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆಯಿಂದ ರೋಗಿಗಳು ಮೃತಪಟ್ಟಿದ್ದಾರೆ. ಈ ಮಧ್ಯೆ ಕೆಲವು ಆಸ್ಪತ್ರೆಗಳು ಹೈಕೋರ್ಟ್ ಮೆಟ್ಟಿಲೇರಿದ್ದು, ತಮ್ಮ ಸಮಸ್ಯೆಗಳಿಗೆ ಪರಿಹಾರ ಕೊಡುವಂತೆ ಮನವಿ ಮಾಡಿದ್ದಾರೆ. ಅದರ ವಿಚಾರಣೆ ಕೈಗೆತ್ತಿಕೊಂಡಿರುವ ಹೈಕೋರ್ಟ್, ಆಮ್ಲಜನಕ ಪೂರೈಕೆಗೆ ಅಡ್ಡಿಯಾಗುತ್ತಿರುವವರನ್ನು ನೇಣಿಗೇರಿಸುತ್ತೇವೆ ಎಂದು ಖಡಕ್ ವಾರ್ನಿಂಗ್ ಮಾಡಿದೆ.
ಹಾಗೇ, ಆಸ್ಪತ್ರೆಗಳಲ್ಲಿ ಕೊವಿಡ್ 19ನಿಂದ ಸಾಯುತ್ತಿರುವವರ ಸಂಖ್ಯೆ ಏರುತ್ತಿರುವ ಬೆನ್ನಲ್ಲೇ ಕೆಲವು ಆಸ್ಪತ್ರೆಗಳಿಗೆ ಪೊಲೀಸ್ ಕಾವಲು ನೀಡಲು ಹೈಕೋರ್ಟ್ ಸೂಚನೆ ನೀಡಿದೆ. ಆಕ್ಸಿಜನ್ ಅಭಾವದಿಂದ ಹೀಗೆ ಗುಂಪಾಗಿ ರೋಗಿಗಳು ಸತ್ತಾಗ, ಅವರ ಕುಟುಂಬದವರು, ಸಂಬಂಧಿಗಳು ಹೇಗೆ ವರ್ತಿಸುತ್ತಾರೆ ಎಂದು ಹೇಳಲಾಗದು. ಆಸ್ಪತ್ರೆಯಲ್ಲಿ ಗಲಾಟೆ ಶುರುವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಕೆಲವು ಆಸ್ಪತ್ರೆಗಳ ಕೋರಿಕೆಯ ಮೇರೆಗೆ ಪೊಲೀಸ್ ರಕ್ಷಣೆ ನೀಡಲಾಗಿದೆ ಎಂದು ಹೈಕೋರ್ಟ್ ತಿಳಿಸಿದೆ.
ಕೊವಿಡ್ 19 ಸಾವಿನ ಸಂಖ್ಯೆಯಲ್ಲಿ ಮಹಾರಾಷ್ಟ್ರವಾದ ನಂತರ ಮುಂದಿರುವುದು ದೆಹಲಿ. ಇಲ್ಲಿ ಕೊರೊನಾ ಸೋಂಕಿನಿಂದ ಸಾಯುತ್ತಿರುವವರು ಒಂದೆಡೆಯಾದರೆ, ಇನ್ನೊಂದೆಡೆ ಆಕ್ಸಿಜನ್ ಇಲ್ಲದೆ ಸಾಯುವವರ ಸಂಖ್ಯೆಯೂ ಹೆಚ್ಚುತ್ತಿದೆ. ದಿನೇದಿನೆ ಹೆಚ್ಚುತ್ತಿರುವ ಕೊವಿಡ್ ಸೋಂಕಿತರಿಂದಾಗಿ ಕಳೆದ ಒಂದು ವಾರದಿಂದಲೂ, ವೈದ್ಯಕೀಯ ಆಮ್ಲಜನಕದ ಅಭಾವ ಭಯಂಕರವಾಗಿ ಕಾಡುತ್ತಿದೆ.
ಇಂದು ಆಸ್ಪತ್ರೆಗಳ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ನಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಆಕ್ಸಿಜನ್ ಪೂರೈಕೆಗೆ ಯಾರೇ ಅಡ್ಡಿಪಡಿಸಿದರೂ, ಅವರು ಕೇಂದ್ರ, ರಾಜ್ಯ ಅಥವಾ ಸ್ಥಳೀಯ ಆಡಳಿತಗಳ ಅಧಿಕಾರಿಗಳೇ ಆಗಿರಲಿ. ಅವರನ್ನು ಸುಮ್ಮನೆ ಬಿಡುವುದಿಲ್ಲ. ನೇಣಿಗೆ ಹಾಕುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನೂ ನೀಡಿದೆ.
ದೆಹಲಿಗೆ ಅಗತ್ಯವಿರುವ 480 ಮೆಟ್ರಿಕ್ ಟನ್ಗಳಷ್ಟು ಆಮ್ಲಜನಕವನ್ನು ಯಾವಾಗ ಪೂರೈಕೆ ಮಾಡುತ್ತೀರಿ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿರುವ ಹೈಕೋರ್ಟ್, ದೆಹಲಿಯನ್ನು ಕಾಡುತ್ತಿರುವ ಆಕ್ಸಿಜನ್ ಅಭಾವದ ಕೊರತೆ ನೀಗುವುದು ಯಾವಾಗ ಎಂದು ಪ್ರಶ್ನಿಸಿದೆ. ದೆಹಲಿಗೆ ದಿನಕ್ಕೆ 480 ಮೆಟ್ರಿಕ್ ಟನ್ ಆಕ್ಸಿನ್ ಪೂರೈಕೆಯಾಗಬೇಕು ಎಂದು ಇಲ್ಲಿನ ಸರ್ಕಾರ ಹೇಳಿದೆ. ಯಾವಾಗ ಇದು ಆಗುತ್ತದೆ ಎಂದು ನೀವು ನಮಗೆ ಒಂದು ದಿನಾಂಕವನ್ನು ಕೊಡಬೇಕು. ಆಕ್ಸಿಜನ್ ಇಲ್ಲದೆ ಜನರು ಸಾಯಲು ನಾವು ಬಿಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.
ಇದು ಅಲೆಯಲ್ಲ, ಸುನಾಮಿ
ಎರಡನೇ ಬಾರಿಗೆ ಅಪ್ಪಳಿಸಿರುವ ಸೋಂಕು ಅಲೆಯ ರೂಪದಲ್ಲಿ ಇಲ್ಲ. ಬದಲಿಗೆ ಇದು ಸುನಾಮಿಯಂತೆ ಗೋಚರವಾಗುತ್ತಿದೆ ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ. ಈಗಾಗಲೇ ಕೊರೊನಾ ಉಲ್ಬಣಿಸಿದೆ. ಅದಿನ್ನೂ ಉತ್ತುಂಗಕ್ಕೆ ಹೋಗದಂತೆ ತಡೆಯಬೇಕು. ಆದರೆ ಮೇ ಎರಡನೇ ವಾರದಲ್ಲಿ ಕೊರೊನಾ ಇನ್ನಷ್ಟು ಹೆಚ್ಚು ಉತ್ತುಂಗಕ್ಕೆ ಹೋಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಅದನ್ನು ನಿರ್ವಹಣೆ ಮಾಡಲು ಏನೆಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೀರಿ ಎಂದು ಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ. ಜನರು ಗಾಬರಿಯಾಗಲು ಬಿಡದೆ, ಸೂಕ್ಷ್ಮವಾಗಿ ಎದುರಿಸಬೇಕಾಗಿದೆ ಎಂದು ಸಲಹೆಯನ್ನೂ ನೀಡಿದೆ.
ಇದನ್ನೂ ಓದಿ: Vaarada Kathe Kicchana Jothe: ಈ ವಾರವೂ ಬಿಗ್ ಬಾಸ್ ಶೋ ಹೋಸ್ಟ್ ಮಾಡಲ್ಲ ಕಿಚ್ಚ ಸುದೀಪ್
ಉಪ ಚುನಾವಣೆ ಮತ ಎಣಿಕೆಗೆ ಒಂದು ವಾರ: ಬಿಜೆಪಿ ಒಳ ಲೆಕ್ಕಾಚಾರ -ಎರಡು ಗೆಲುವು ನಿಶ್ಚಿತ, ಇನ್ನೊಂದರಲ್ಲಿ ಫೋಟೋ ಫಿನಿಶ್