ಮಹಾರಾಷ್ಟ್ರದಲ್ಲಿ ಝಿಕಾ  ವೈರಸ್ ಪತ್ತೆ: ವೈದ್ಯಕೀಯ ತಜ್ಞರ ತಂಡ ಕಳುಹಿಸಿದ ಕೇಂದ್ರ ಸರ್ಕಾರ

| Updated By: ರಶ್ಮಿ ಕಲ್ಲಕಟ್ಟ

Updated on: Aug 02, 2021 | 9:39 PM

Zika Virus: ಕಳೆದ ತಿಂಗಳ ಆರಂಭದಲ್ಲಿ ಪುರಂದರ ಹಳ್ಳಿಯಿಂದ ಹಲವಾರು ಜ್ವರ ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ಹೇಳಿದೆ. ಪರೀಕ್ಷೆಗೆ ಪುಣೆಗೆ ಕಳುಹಿಸಿದ ಮೂರು ಮಾದರಿಗಳು ಚಿಕೂನ್ ಗುನ್ಯಾ ಇರುವುದಾಗಿ ದೃಢಪಟ್ಟಿದೆ.

ಮಹಾರಾಷ್ಟ್ರದಲ್ಲಿ ಝಿಕಾ  ವೈರಸ್ ಪತ್ತೆ: ವೈದ್ಯಕೀಯ ತಜ್ಞರ ತಂಡ ಕಳುಹಿಸಿದ ಕೇಂದ್ರ ಸರ್ಕಾರ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಝಿಕಾ ವೈರಸ್ ಸೋಂಕಿನ ಮೊದಲ ಪ್ರಕರಣ ವರದಿ ಆದ ನಂತರ ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ವೈದ್ಯಕೀಯ ತಜ್ಞರ ತಂಡವನ್ನು ಕಳುಹಿಸಿದೆ. ದೆಹಲಿಯ ಲೇಡಿ ಹಾರ್ಡಿಂಜ್ ಮೆಡಿಕಲ್ ಕಾಲೇಜಿನ ಸ್ತ್ರೀರೋಗ ತಜ್ಞರು ಮತ್ತು ನಗರದ ರಾಷ್ಟ್ರೀಯ ಮಲೇರಿಯಾ ಸಂಶೋಧನಾ ಸಂಸ್ಥೆಯ ಕೀಟಶಾಸ್ತ್ರಜ್ಞರನ್ನು ಒಳಗೊಂಡ ತಂಡವು ರಾಜ್ಯದ ವೈರಸ್ ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಿದೆ. ಅದೇ ವೇಳೆ ಕೇಂದ್ರ ಆರೋಗ್ಯ ಸಚಿವಾಲಯದ ಝಿಕಾ ನಿರ್ವಹಣೆಗಾಗಿರುವ ಕ್ರಿಯಾ ಯೋಜನೆ ಅಳವಡಿಸಲಾಗುವುದು.

ಇತ್ತೀಚಿನವರೆಗೂ ಭಾರತದಲ್ಲಿ ಕೊವಿಡ್-19 ಸಾಂಕ್ರಾಮಿಕದ ಕೇಂದ್ರಬಿಂದುವಾಗಿದ್ದ ಮಹಾರಾಷ್ಟ್ರದಲ್ಲಿ ಭಾನುವಾರ ಇದೇ ಮೊದಲ ಬಾರಿ ಝಿಕಾ ವೈರಸ್ ಪ್ರಕರಣವನ್ನು ವರದಿ ಮಾಡಿದೆ. ಪುಣೆ ಜಿಲ್ಲೆಯ ಪುರಂದರ್ ಪ್ರದೇಶದ 50 ವರ್ಷದ ಮಹಿಳೆಗೆ ಈ ರೋಗ ತಗುಲಿದ್ದು, ಇವರಿಗೆ ಚಿಕುನ್ ಗುನ್ಯಾ ಕೂಡಾ ಇದೆ. ಆಕೆ ಸೋಂಕಿನಿಂದ ಚೇತರಿಸಿಕೊಂಡಿದ್ದಾಳೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಕಳೆದ ತಿಂಗಳ ಆರಂಭದಲ್ಲಿ ಪುರಂದರ ಹಳ್ಳಿಯಿಂದ ಹಲವಾರು ಜ್ವರ ಪ್ರಕರಣಗಳು ವರದಿಯಾಗಿವೆ ಎಂದು ಇಲಾಖೆ ಹೇಳಿದೆ. ಪರೀಕ್ಷೆಗೆ ಪುಣೆಗೆ ಕಳುಹಿಸಿದ ಮೂರು ಮಾದರಿಗಳು ಚಿಕೂನ್ ಗುನ್ಯಾ ಇರುವುದಾಗಿ ದೃಢಪಟ್ಟಿದೆ.

ಆ ಹಳ್ಳಿಯ ನಿವಾಸಿಗಳಿಗೆ ಮತ್ತು ಆ ಪ್ರದೇಶದಲ್ಲಿ ಇರುವವರಿಗೆ ಹೆಚ್ಚಿನ ಪರೀಕ್ಷೆಗಳನ್ನು ನಡೆಸಲಾಯಿತು. ಚಿಕೂನ್ ಗುನ್ಯಾದ 25 ಪ್ರಕರಣಗಳು, ಮೂರು ಡೆಂಗ್ಯೂ ಮತ್ತು ಒಂದು ಝಿಕಾ ವೈರಸ್ ಸೋಂಕು ಪತ್ತೆಯಾಗಿದೆ.ಮಹಾರಾಷ್ಟ್ರ ಆರೋಗ್ಯ ಇಲಾಖೆಯ ತ್ವರಿತ ಪ್ರತಿಕ್ರಿಯೆ ತಂಡವು ಶನಿವಾರ ಈ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳೀಯ ನಿವಾಸಿಗಳೊಂದಿಗೆ ಅವರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಕುರಿತು ಮಾತನಾಡಿದ್ದಾರೆ.

ಈ ಮೊದಲು, ಕೇರಳದಲ್ಲಿ ಮಾತ್ರ ಈ ವರ್ಷ ಝಿಕಾ ವೈರಸ್ ಪ್ರಕರಣಗಳು ವರದಿಯಾಗಿವೆ. ಕೇರಳ ರಾಜ್ಯದಲ್ಲಿ ಇದುವರೆಗೆ 63 ಪ್ರಕರಣಗಳು ವರದಿ ಆಗಿವೆ .

ಝಿಕಾ ವೈರಸ್ ಈಡಿಸ್ ಸೊಳ್ಳೆಯಿಂದ ಹರಡುತ್ತದೆ. ಇದು ಡೆಂಗ್ಯೂ ಮತ್ತು ಚಿಕೂನ್ ಗುನ್ಯಾವನ್ನು ಕೂಡಾ ಹರಡುತ್ತದೆ.

ಜ್ವರ, ದೇಹದ ನೋವು, ದದ್ದು, ಕಾಂಜಂಕ್ಟಿವಿಟಿಸ್, ಸ್ನಾಯು ಮತ್ತು ಕೀಲು ನೋವು ಮತ್ತು ಅಸ್ವಸ್ಥತೆ ಅಥವಾ ತಲೆನೋವು ಕೆಲವು ಸಾಮಾನ್ಯ ಲಕ್ಷಣಗಳಾಗಿವೆ. ರೋಗಲಕ್ಷಣಗಳು ಸಾಮಾನ್ಯವಾಗಿ ಎರಡು ಮತ್ತು ಏಳು ದಿನಗಳ ನಡುವೆ ಇರುತ್ತದೆ, ಆದರೂ ಸೋಂಕಿತರಲ್ಲಿ ಹೆಚ್ಚಿನವರು ರೋಗಲಕ್ಷಣಗಳನ್ನು ಕಾಣಿಸುವುದಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಎಚ್ಚರಿಸಿದೆ.

ಝಿಕಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ವೈದ್ಯಕೀಯ ತಜ್ಞರು ಅತಿಯಾದ ಕಳವಳ ವ್ಯಕ್ತಪಡಿಸಿದ್ದಾರೆ ಮಹಾರಾಷ್ಟ್ರ ಮತ್ತು ಕೇರಳದಲ್ಲಿ ಕೊರೊನಾವೈರಸ್‌ ಹೆಚ್ಚುತ್ತಿರುವುದು ಕೂಡಾ ಈ ಆತಂಕಕ್ಕೆ ಕಾರಣವಾಗಿದೆ.
ಕೊರೊನಾವೈರಸ್‌ನಂತೆ ಝಿಕಾ ವೈರಸ್ ಕೂಡ (ಇನ್ನೂ) ಅಜ್ಞಾತ ರೂಪಗಳನ್ನು ಹೊಂದಿರಬಹುದು ಮತ್ತು ಸಾಧ್ಯವಾದಷ್ಟು ಬೇಗ ಸೋಂಕುಗಳನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಪರೀಕ್ಷೆಯನ್ನು ಹೆಚ್ಚಿಸುವಂತೆ ಅಧಿಕಾರಿಗಳನ್ನು ಒತ್ತಾಯಿಸಿರುವುದಾಗಿ ದೆಹಲಿಯ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ನಿರ್ದೇಶಕರಾದ ಡಾ.ನರೇಶ್ ಗುಪ್ತಾ ಅವರು ಎಎನ್ಐ ಸುದ್ದಿಸಂಸ್ಥೆಗೆ ಹೇಳಿದ್ದಾರೆ.

ಝಿಕಾ ಗಂಭೀರ ಕಾಳಜಿಯ ವೈರಸ್. ಇದು ಸ್ಥಳೀಯವಾಗಿ ಏಕಾಏಕಿ ಹರಡುತ್ತದೆ. ಹಾಗಾಗಿ,ಇದು ಒಂದು ನಿರ್ದಿಷ್ಟ ರಾಜ್ಯ ಅಥವಾ ಸ್ಥಳದಲ್ಲಿ ಸಂಭವಿಸುತ್ತಿದ್ದರೆ ಕಣ್ಗಾವಲಿಡಬೇಕು ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಸಾಲುಸಾಲು ವೈರಸ್​ಗಳು; ಮೊದಲ ಝಿಕಾ ಪ್ರಕರಣ ಪತ್ತೆ, 25 ಮಂದಿಯಲ್ಲಿ ಚಿಕೂನ್​ಗುನ್ಯಾ, ಡೆಂಘೆ ಆತಂಕ

(Centre sent team of medical experts to Maharashtra to support the state in Zika Virus Case)