AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಅಧಿಕಾರಿಗಳ ವರ್ಗ, ನೇಮಕಾತಿಗೆ ಪ್ರಾಧಿಕಾರ; ಸುಗ್ರೀವಾಜ್ಞೆ ಮೂಲಕ ಕೇಜ್ರಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ ಕೇಂದ್ರ

ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿ ಮೇಲೆ ದೆಹಲಿ ಸರ್ಕಾರವು ನಿಯಂತ್ರಣವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕೆಲವು ದಿನಗಳಲ್ಲಿ, ಕೇಂದ್ರ ಸರ್ಕಾರವು ಶುಕ್ರವಾರ ವಿಶೇಷ ಕಾನೂನನ್ನು ರೂಪಿಸಿದೆ.

ದೆಹಲಿ ಅಧಿಕಾರಿಗಳ ವರ್ಗ, ನೇಮಕಾತಿಗೆ ಪ್ರಾಧಿಕಾರ; ಸುಗ್ರೀವಾಜ್ಞೆ ಮೂಲಕ ಕೇಜ್ರಿ ಸರ್ಕಾರಕ್ಕೆ ಬಿಸಿಮುಟ್ಟಿಸಿದ ಕೇಂದ್ರ
ಅಮಿತ್ ಶಾ & ಕೇಜ್ರಿವಾಲ್
Ganapathi Sharma
|

Updated on: May 20, 2023 | 11:11 AM

Share

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿ ಮೇಲೆ ದೆಹಲಿ ಸರ್ಕಾರವು ನಿಯಂತ್ರಣವನ್ನು ಹೊಂದಿರಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಕೆಲವು ದಿನಗಳಲ್ಲಿ, ಕೇಂದ್ರ ಸರ್ಕಾರವು ಶುಕ್ರವಾರ ವಿಶೇಷ ಕಾನೂನನ್ನು ರೂಪಿಸಿದೆ. ಕೇಂದ್ರ ಸರ್ಕಾರದ ಪ್ರತಿನಿಧಿಯಾಗಿರುವ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿ ಅಧಿಕಾರ ನೀಡಿ ಕಾನೂನು ರೂಪಿಸಲಾಗಿದೆ.

ಅಧಿಕಾರಿಗಳ ವರ್ಗಾವಣೆ ಮತ್ತು ನೇಮಕಾತಿಗಾಗಿ ಕೇಂದ್ರವು ‘ರಾಷ್ಟ್ರ ರಾಜಧಾನಿ ನಾಗರಿಕ ಸೇವೆಗಳ ಪ್ರಾಧಿಕಾರ’ವನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿದೆ. ಮುಖ್ಯಮಂತ್ರಿ ಅಧ್ಯಕ್ಷರಾಗಿರಲಿದ್ದು, ಮುಖ್ಯ ಕಾರ್ಯದರ್ಶಿ ಮತ್ತು ಪ್ರಧಾನ ಗೃಹ ಕಾರ್ಯದರ್ಶಿ ಸದಸ್ಯರಾಗಿರಲಿದ್ದಾರೆ.

ಪ್ರಾಧಿಕಾರದ ಎಲ್ಲ ನಿರ್ಧಾರಗಳು ಸದಸ್ಯರ ಬಹುಪಾಲು ಮತಗಳಿಂದ ನಿರ್ಧರಿಸಲಾಗುತ್ತದೆ. ಭಿನ್ನಾಭಿಪ್ರಾಯವಿದ್ದಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರ ತೀರ್ಮಾನವೇ ಅಂತಿಮವಾಗಿರಲಿದೆ.

ಸಂಸತ್ತಿನ ಉಭಯ ಸದನಗಳಲ್ಲಿ ಸುಗ್ರೀವಾಜ್ಞೆ ಅಂಗೀಕಾರವಾಗಬೇಕಿದೆ. ರಾಜ್ಯಸಭೆಯಲ್ಲಿ ಬಿಜೆಪಿಗೆ ಸಂಖ್ಯಾಬಲದ ಕೊರತೆಯಿದ್ದು, ಈ ವಿಷಯದಲ್ಲಿ ವಿರೋಧ ಪಕ್ಷಗಳು ಒಟ್ಟಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಎಲ್ಲವೂ ಕೇಂದ್ರದ ಆಜ್ಞೆಯ ಮೇರೆಗೆ ನಡೆಯಬೇಕು ಎಂದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಏಕೆ ಬೇಕು: ಸುಪ್ರೀಂಕೋರ್ಟ್​

ಈ ಮಧ್ಯೆ ಕಾರ್ಯದರ್ಶಿ ಆಶಿಶ್ ಮೋರ್ ಅವರ ವರ್ಗಾವಣೆಗೆ ಸಂಬಂಧಿಸಿದ ಕಡತವನ್ನು ತೆರವುಗೊಳಿಸಲು ವಿಳಂಬ ಮಾಡಿದಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದ್ದು, ಚುನಾಯಿತ ಸರ್ಕಾರದ ಅಧಿಕಾರಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸುಗ್ರೀವಾಜ್ಞೆಯ ಮೂಲಕ ರದ್ದುಗೊಳಿಸಲು ಕೇಂದ್ರವು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಸುಗ್ರೀವಾಜ್ಞೆಯು ಸುಪ್ರೀಂ ಕೋರ್ಟ್ ಆದೇಶವನ್ನು ಸಂಪೂರ್ಣವಾಗಿ ಕಡೆಗಣಿಸಿದೆ ಎಂದು ಎಎಪಿ ಟೀಕಿಸಿದೆ.

ಎಲ್ಲವೂ ಕೇಂದ್ರದ ಆಜ್ಞೆಯಂತೆಯೇ ನಡೆಯಬೇಕು ಎಂದಾದರೆ ದೆಹಲಿಯಲ್ಲಿ ಚುನಾಯಿತ ಸರ್ಕಾರ ಏಕೆ ಬೇಕು ಎಂದು ಸುಪ್ರೀಂ ಕೋರ್ಟ್ ಇತ್ತೀಚೆಗೆ ಪ್ರಶ್ನಿಸಿತ್ತು. ಸೇವೆಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ದೆಹಲಿ ಸರ್ಕಾರ ಮತ್ತು ಕೇಂದ್ರದ ನಡುವಿನ ವಿವಾದದ ವಿಚಾರಣೆ ನಡೆಸಿದ್ದ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠದ ಅಧ್ಯಕ್ಷತೆ ವಹಿಸಿದ್ದ ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಈ ಕುರಿತು ಪ್ರಶ್ನಿಸಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ