ದೆಹಲಿ ಫೆಬ್ರುವರಿ 20: ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh mayoral polls)ಮತಪತ್ರ ತಿರುಚಿದ ಆರೋಪದ ಕುರಿತ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ (Supreme Court), ಚುನಾವಣಾ ಅಧಿಕಾರಿ ಅಸಿಂಧು ಎಂದು ಘೋಷಿಸಿದ ಮತಗಳನ್ನು ಮಾನ್ಯವೆಂದು ಪರಿಗಣಿಸಬೇಕು ಮತ್ತು ಮರುಎಣಿಕೆ ನಡೆಸಬೇಕು ಎಂದು ಹೇಳಿದೆ. ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿಯ ವಿರುದ್ಧ ಬಿಜೆಪಿ ಗೆಲುವು ಸಾಧಿಸಿತ್ತು. ಚುನಾವಣಾಧಿಕಾರಿ ಸಮ್ಮಿಶ್ರ ಪಾಲುದಾರರ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ್ದರು. ಇದರ ಬೆನ್ನಲ್ಲೇ ಚುನಾವಣಾ ಅಧಿಕಾರಿ (returning officer) ಬ್ಯಾಲೆಟ್ ಪೇಪರ್ ತಿದ್ದಿದ್ದಾರೆ ಎಂದು ಆರೋಪ ಕೇಳಿಬಂದಿತ್ತು.
ಬಿಜೆಪಿಯ ಮನೋಜ್ ಸೋಂಕರ್ ಅವರು ತಮ್ಮ ಪ್ರತಿಸ್ಪರ್ಧಿಯ 12 ಮತಗಳ ವಿರುದ್ಧ 16 ಮತಗಳೊಂದಿಗೆ ಮೇಯರ್ ಸ್ಥಾನವನ್ನು ಅಲಂಕರಿಸಿದರು, ಆದರೆ ನಂತರ ಅವರು ರಾಜೀನಾಮೆ ನೀಡಿದರು. ಇದರ ಜತೆಗೇ ಮೂವರು ಎಎಪಿ ಕೌನ್ಸಿಲರ್‌ಗಳು ಬಿಜೆಪಿಗೆ ಪಕ್ಷಾಂತರ ಮಾಡಿದ್ದರು.
Thank you SC for saving democracy in these difficult times! #ChandigarhMayorPolls
— Arvind Kejriwal (@ArvindKejriwal) February 20, 2024
ನ್ಯಾಯಾಲಯದ ಆದೇಶವನ್ನು ಆಪ್ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವಾಗತಿಸಿದ್ದು, ಸುಪ್ರೀಂ ಕೋರ್ಟ್‌ಗೆ ಧನ್ಯವಾದ ತಿಳಿಸಿದ್ದಾರೆ. “ಈ ಕಷ್ಟದ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿದ್ದಕ್ಕಾಗಿ ಸುಪ್ರೀಂಕೋರ್ಟ್ ಗೆ ಧನ್ಯವಾದಗಳು!” ಎಂದು ಕೇಜ್ರಿವಾಲ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಬರೆದಿದ್ದಾರೆ.
ಚಂಡೀಗಢ ಮೇಯರ್ ಚುನಾವಣೆಯನ್ನು ನಡೆಸಿದ್ದ ಮತ್ತು ಬ್ಯಾಲೆಟ್ ಪೇಪರ್ ತಿರುಚಿರುವ ಆರೋಪ ಹೊತ್ತಿರುವ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರನ್ನೂ ಸುಪ್ರೀಂಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. “ಮತದಾನದಲ್ಲಿನ ಮತಗಳನ್ನು ಮರು ಎಣಿಕೆ ಮಾಡಬೇಕೆಂದು ನಾವು ನಿರ್ದೇಶಿಸುತ್ತೇವೆ ಮತ್ತು ಈ 8 ಅನ್ನು ಮಾನ್ಯವೆಂದು ಪರಿಗಣಿಸಲಾಗುವುದು. ಅದರ ಆಧಾರದ ಮೇಲೆ ಫಲಿತಾಂಶಗಳನ್ನು ಘೋಷಿಸಲಾಗುವುದು ಎಂದು ಹೇಳುವ ಮೂಲಕ, ಎಎಪಿ ಮೇಯರ್ ಅಭ್ಯರ್ಥಿ ಕುಲದೀಪ್ ಕುಮಾರ್ ಪರವಾಗಿ ತೀರ್ಪು ನೀಡಿದೆ.
ಎಎಪಿ ಅಭ್ಯರ್ಥಿ ಕುಲದೀಪ್ ಕುಮಾರ್ ಪರವಾಗಿ ಬಂದ ಎಲ್ಲಾ ಎಂಟು ಮತಪತ್ರಗಳಲ್ಲಿ ಅನಿಲ್ ಮಸಿಹ್ ಒಂದು ಗೆರೆ ಹಾಕಿದ್ದಾರೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ. “ಅವರು (ರಿಟರ್ನಿಂಗ್ ಆಫೀಸರ್) ಏನು ಮಾಡುತ್ತಾರೆ ಎಂದರೆ, ಅವರು ಒಂದು ಗೆರೆ ಎಳೆಯುತ್ತಾರೆ. ವಿಡಿಯೊದಲ್ಲಿ ನೋಡಿದಂತೆ ಕೇವಲ ಒಂದು ಗೆರೆ ಎಂದು ನ್ಯಾಯಾಲಯ ಹೇಳಿದೆ.
ಅನಿಲ್ ಮಸಿಹ್ ಅವರ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ, ಚುನಾವಣಾಧಿಕಾರಿ ಮಾಡಿದ ಗುರುತುಗಳು ಸಣ್ಣ ಚುಕ್ಕೆಗಳು ಎಂದು ವಾದಿಸಿದ್ದು, “ಹೊರಗೆ ಗದ್ದಲವಿತ್ತು” ಹಾಗಾಗಿ ಅವರು ಕ್ಯಾಮರಾಗಳನ್ನು ನೋಡಿದರು ಎಂದು ಹೇಳಿದ್ದಾರೆ. ಚುನಾವಣಾಧಿಕಾರಿಯಾಗಿರುವ ಅನಿಲ್ ಮಸಿಹ್ ಸಹಿ ಹಾಕಲು ಅರ್ಹರು. “ಸ್ಪಷ್ಟವಾಗಿ ನೋಡಿದರೆ ಒಂದು ಚಿಕ್ಕ ಚುಕ್ಕೆ ಇದೆ. ಅವರು ಮಾಡಿದ್ದು ಏನೆಂದರೆ ಅದರಲ್ಲಿ ಒಂದು ಚಿಕ್ಕ ಚುಕ್ಕೆ ಇಟ್ಟಿದ್ದಾರೆ. ಕೆಲವು ಮೇಲಿನಿಂದ ಮಡಚಿಕೊಂಡಿದೆ. ಈ ಗುರುತಿನಿಂದಾಗಿ ಅದು ಅಸಿಂಧು ಎಂದು ಹೇಳಿದ್ದಾರೆ. ಅವನು ಸರಿ ಅಥವಾ ತಪ್ಪಾಗಿರಬಹುದು. ಅದು ಅವರ ಮೌಲ್ಯಮಾಪನ. ಹೊರಗೆ ಗಲಾಟೆ ಇದ್ದ ಕಾರಣ ವಿಡಿಯೊ ನೋಡಿದರು. ಕ್ಯಾಮರಾಗಳಿರುವಾಗ ಯಾರೂ ಇದನ್ನು ಮಾಡಲು ಸಾಧ್ಯವಿಲ್ಲ. ಕ್ಯಾಮೆರಾವನ್ನು ನೋಡುವ ಯಾವುದೇ ಅಪರಾಧಿ ಇಲ್ಲ, ”ಎಂದು ಮುಕುಲ್ ರೋಹಟಗಿ ಹೇಳಿದರು.
ಇದನ್ನೂ ಓದಿ: ಮೇಯರ್ ಚುನಾವಣೆಯಲ್ಲಿ ಅಕ್ರಮ; ಚಂಡೀಗಢ ಚುನಾವಣಾಧಿಕಾರಿಯನ್ನು ವಿಚಾರಣೆಗೆ ಒಳಪಡಿಸಬೇಕು: ಸುಪ್ರೀಂಕೋರ್ಟ್
ಜನವರಿ 30 ರಂದು ನಡೆದ ಚಂಡೀಗಢ ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್-ಎಎಪಿ ಮೈತ್ರಿಕೂಟದ ವಿರುದ್ಧ ಬಿಜೆಪಿ ಜಯಭೇರಿ ಬಾರಿಸಿತು. ಬಿಜೆಪಿಯ ಮನೋಜ್ ಸೋಂಕರ್ ಅವರು ಎಎಪಿಯ ಕುಲದೀಪ್ ಕುಮಾರ್ ಅವರನ್ನು ಸೋಲಿಸಿದ್ದರು. ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಲಾಯಿತು. ಸುಪ್ರೀಂ ಕೋರ್ಟ್ ನಿರ್ದೇಶನದ ಪ್ರಕಾರ ಎಂಟು “ಅಸಿಂಧು” ಮತಗಳನ್ನು ಎಣಿಸಿದರೆ, ಚಂಡೀಗಢ ಮೇಯರ್ ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಗೆಲ್ಲುತ್ತದೆ.
ಸೋಮವಾರ, ಫೆಬ್ರವರಿ 19 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಸುಪ್ರೀಂಕೋರ್ಟ್ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರು ಬ್ಯಾಲೆಟ್ ಪೇಪರ್ ತಿರುಚಿರುವುದು ಸ್ಪಷ್ಟವಾಗಿದೆ. ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಹೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:01 pm, Tue, 20 February 24