ಚಾರ್ಧಾಮ್ ಯಾತ್ರೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ ಉತ್ತರಾಖಂಡ ಸರ್ಕಾರ ಆದೇಶ ನೀಡಿದೆ. ಮುಂದಿನ ಸೂಚನೆಯವರೂ ಚಾರ್ ಧಾಮ್ ಯಾತ್ರೆ ರದ್ದಾಗಿರಲಿದೆ ಎಂದು ಹೇಳಿದೆ. ಕೊವಿಡ್ 19 ಕಾರಣದಿಂದ ಚಾರ್ ಧಾಮ್ ಯಾತ್ರೆಗೆ ಅವಕಾಶ ಕೊಡುವುದಿಲ್ಲ ಎಂದು ಹಿಂದೆಯೇ ಹೇಳಿದ್ದ ಉತ್ತರಾಖಂಡ ಸರ್ಕಾರ ಬಳಿಕ ಸ್ಥಳೀಯ ಮೂರು ಜಿಲ್ಲೆಗಳಾದ ಚಮೋಲಿ, ರುದ್ರಪ್ರಯಾಗ ಮತ್ತು ಉತ್ತರಕಾಶಿ ಜನರಿಗಾಗಿ ಜುಲೈ 1ರಿಂದ ಚಾರ್ ಧಾಮ್ ಯಾತ್ರೆಗೆ ಅವಕಾಶ ಮಾಡಿಕೊಡಲು, ಜೂನ್ 25ರಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಿತ್ತು. ಆದರೆ ಸರ್ಕಾರ ಈ ನಿರ್ಧಾರಕ್ಕೆ ಉತ್ತಾರಖಂಡ ಹೈಕೋರ್ಟ್ ನಾಲ್ಕು ವಾರಗಳ ತಾತ್ಕಾಲಿಕ ತಡೆ ನೀಡಿತ್ತು. ಈ ನಾಲ್ಕೂ ದೇವಸ್ಥಾನಗಳ ಗರ್ಭಗುಡಿಯೊಳಗೆ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಭಕ್ತರಿಗೆ ನೇರಪ್ರಸಾರದ ಮೂಲಕ ವೀಕ್ಷಣೆಗೆ ಅವಕಾಶ ಮಾಡಿಕೊಡುವಂತೆ ನಿರ್ದೇಶನ ನೀಡಿತ್ತು.
ಆದರೆ ಹೈಕೋರ್ಟ್ ತಡೆ ನೀಡಿದ್ದರೂ ಸರ್ಕಾರ ತಲೆ ಕೆಡಿಸಿಕೊಳ್ಳದೆ, ಮೂರು ಜಿಲ್ಲೆಗಳ ಚಾರ್ಧಾಮ್ ಯಾತ್ರಿಕರಿಗಾಗಿ ಹೊಸ ಮಾರ್ಗಸೂಚಿಯನ್ನೂ ಬಿಡುಗಡೆ ಮಾಡಿತ್ತು. ಈ ಜಿಲ್ಲೆಗಳಿಂದ ಬರುವ ಯಾತ್ರಿಕರು ಮೊದಲೇ ನೋಂದಣಿ ಮಾಡಿಕೊಳ್ಳಬೇಕು. ಆರ್ಟಿಪಿಸಿಆರ್/ಟ್ರ್ಯೂನ್ಯಾಟ್/ರ್ಯಾಪಿಡ್ ಟೆಸ್ಟ್ ನೆಗೆಟಿವ್ ರಿಪೋಟ್ನ್ನು ಕಡ್ಡಾಯವಾಗಿ ತರಬೇಕು. ಮೊದಲ ಹಂತದ ಯಾತ್ರೆ ಜುಲೈ 1ರಿಂದ ಮತ್ತು 2ನೇ ಹಂತದ ಯಾತ್ರೆ ಜುಲೈ 11ರಿಂದ ಪ್ರಾರಂಭವಾಗುತ್ತದೆ ಎಂದು ರಾಜ್ಯ ಸರ್ಕಾರ ಹೇಳಿತ್ತು.
ಅದಕ್ಕೆ ಪ್ರತಿಕ್ರಿಯಿಸಿದ್ದ ಉತ್ತರಾಖಂಡ ಸರ್ಕಾರದ ವಕ್ತಾರ ಸುಬೋಧ್ ಉನಿಯಲ್, ಹೈಕೋರ್ಟ್ ಆದೇಶವನ್ನು ಒಮ್ಮೆ ನಾವೂ ಪರಾಮರ್ಶಿಸುತ್ತೇವೆ. ಅಗತ್ಯ ಬಿದ್ದರೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ಹೇಳಿದ್ದರು. ಕೇದಾರನಾಥ, ಬದ್ರಿನಾಥ, ಯಮುನೋತ್ರಿ ಮತ್ತು ಗಂಗೋತ್ರಿ ಪವಿತ್ರ ಕ್ಷೇತ್ರಗಳ ಭೇಟಿಗೆ ಚಾರ್ಧಾಮ್ ಯಾತ್ರೆ ಎಂದು ಹೆಸರು ಬಂದಿದೆ. ಈ ನಾಲ್ಕೂ ದೇವಸ್ಥಾನಗಳು ಚಮೋಲಿ, ರುದ್ರಪ್ರಯಾಗ, ಉತ್ತರಕಾಶಿ ಜಿಲ್ಲೆಗಳಲ್ಲಿ ಇದ್ದು, ಅಲ್ಲಿನ ನಿವಾಸಿಗಳಿಗೆ ಮಾತ್ರ ಅವಕಾಶ ನೀಡಲೆಂದು ಸರ್ಕಾರ ಪ್ರಯತ್ನ ಮಾಡಿತ್ತು.
ಇದನ್ನೂ ಓದಿ: ಸಂಸತ್ ಮುಂಗಾರು ಅಧಿವೇಶನ ಜುಲೈ 19ರಿಂದ ನಡೆಸುವಂತೆ ಸಂಸದೀಯ ವ್ಯವಹಾರಗಳ ಸಮಿತಿ ಶಿಫಾರಸು
(Char Dham Yatra 2021 suspends by Uttarakhand Government)