ಉತ್ತರಾಖಂಡ: ಉತ್ತರಾಖಂಡದಲ್ಲಿ ನಡೆಯುತ್ತಿರುವ ಚಾರ್ ಧಾಮ್ ಯಾತ್ರೆಯಲ್ಲಿ (Char Dham Yatra) ಇದುವರೆಗೆ 200ಕ್ಕೂ ಹೆಚ್ಚು ಭಕ್ತರು ಸಾವನ್ನಪ್ಪಿದ್ದಾರೆ ಎಂದು ಉತ್ತರಾಖಂಡ ಸರ್ಕಾರ (Uttarakhand Government) ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ. ಅನಾರೋಗ್ಯವೇ ಈ ಯಾತ್ರೆಯ ವಯಸ್ಸಾದ ಭಕ್ತರ ಸಾವಿಗೆ ಪ್ರಮುಖ ಕಾರಣವಾಗಿದೆ ಎಂದು ತಿಳಿಸಲಾಗಿದೆ.
ಭಾರೀ ಮಳೆಯಿಂದ ಭೂಕುಸಿತಗಳು ಸಂಭವಿಸುತ್ತಿರುವುದರಿಂದ ಚಾರ್ ಧಾಮ ಯಾತ್ರೆಯನ್ನು ಸುಗಮವಾಗಿ ನಡೆಸುವುದು ರಾಜ್ಯ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ಈ ಚಾರ್ ಧಾಮ ಯಾತ್ರೆಯು ಮೇ 3ರಂದು ಪ್ರಾರಂಭವಾಯಿತು. ಅಕ್ಟೋಬರ್ ಅಂತ್ಯದಲ್ಲಿ ಈ ಯಾತ್ರೆ ಮುಕ್ತಾಯಗೊಳ್ಳಲಿದೆ. ಇಲ್ಲಿಯವರೆಗೆ, ಚಾರ್ ಧಾಮ ಯಾತ್ರೆ ಕೈಗೊಂಡ ಯಾತ್ರಾರ್ಥಿಗಳ ಸಂಖ್ಯೆ 2,50,000 ದಾಟಿದೆ. ಆದರೆ ಕಳೆದ ಒಂದು ವಾರದಿಂದ ಭಕ್ತರ ಸಂಖ್ಯೆ ಇಳಿಮುಖವಾಗಿದೆ.
ಡೆಹ್ರಾಡೂನ್‌ನ ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ಬಿಡುಗಡೆ ಮಾಡಿದ ಅಂಕಿ-ಅಂಶಗಳ ಪ್ರಕಾರ, ಕೇದಾರನಾಥ ಯಾತ್ರೆಯ ಮಾರ್ಗದಲ್ಲಿ 95, ಬದರಿನಾಥ ಧಾಮದಲ್ಲಿ 51, ಗಂಗೋತ್ರಿಯಲ್ಲಿ 13 ಮತ್ತು ಯಮುನೋತ್ರಿಯಲ್ಲಿ 42 ಭಕ್ತರು ಸಾವನ್ನಪ್ಪಿದ್ದಾರೆ.
ಉತ್ತರಾಖಂಡದ ಮಹಾನಿರ್ದೇಶಕಿ (ಆರೋಗ್ಯ) ಶೈಲಜಾ ಭಟ್ ಈ ಬಗ್ಗೆ ಮಾತನಾಡಿ, ಇಲಾಖೆಯು ಮೊದಲ ಬಾರಿಗೆ 9 ಸ್ಥಳಗಳಲ್ಲಿ ಪ್ರಯಾಣಿಕರ ಆರೋಗ್ಯ ತಪಾಸಣೆ ನಡೆಸಿದೆ. ಕರಪತ್ರಗಳು ಮತ್ತು ಇತರ ವಿಧಾನಗಳ ಮೂಲಕ ನಿಯಮಿತವಾಗಿ ಆರೋಗ್ಯ ಸಲಹೆಗಳನ್ನು ನೀಡಲಾಗುತ್ತಿದೆ. ಯಾತ್ರಾರ್ಥಿಗಳಿಗೆ, ವಿಶೇಷವಾಗಿ ವೃದ್ಧರಿಗೆ ಯಾತ್ರೆಯಲ್ಲಿನ ಅಪಾಯಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.
ಚಾರ್ ಧಾಮ್ ಮಾರ್ಗಗಳಲ್ಲಿ 12 ವೈದ್ಯರನ್ನು ನಿಯೋಜಿಸಲಾಗಿದೆ. ಅಸ್ವಸ್ಥ ಯಾತ್ರಾರ್ಥಿಗಳನ್ನು ತುರ್ತು ಸಂದರ್ಭದಲ್ಲಿ ಸಕಾಲಿಕ ಚಿಕಿತ್ಸೆಗಾಗಿ ಹೆಲಿ- ಆ್ಯಂಬುಲೆನ್ಸ್ ಮೂಲಕ ಉನ್ನತ ವೈದ್ಯಕೀಯ ಕೇಂದ್ರಗಳಿಗೆ ಧಾವಿಸಲಾಗುತ್ತಿದೆ. ಇಲ್ಲಿಯವರೆಗೆ ಸಾವಿಗೆ ಪ್ರಮುಖವಾಗಿ ಹೃದಯ ಸಂಬಂಧಿ ಕಾಯಿಲೆಗಳು ಕಾರಣ. ವೈದ್ಯಕೀಯ ಇತಿಹಾಸ ಹೊಂದಿರುವ ಯಾತ್ರಾರ್ಥಿಗಳಿಗೆ ಮುಂದಿನ ಪ್ರಯಾಣವನ್ನು ಕೈಗೊಳ್ಳದಂತೆ ಮನವೊಲಿಸಲಾಗುತ್ತಿದೆ. ಅವರು ತಮ್ಮ ಪ್ರಯಾಣವನ್ನು ಮುಂದುವರಿಸಲು ಅಚಲವಾಗಿದ್ದರೆ ಅವರಿಂದ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಶೈಲಜಾ ಭಟ್ ಅವರ ಪ್ರಕಾರ, ಚಾರ್ ಧಾಮ ಯಾತ್ರೆಯ ಮಾರ್ಗಗಳಲ್ಲಿ 20 ತಾತ್ಕಾಲಿಕ ಆರೋಗ್ಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಅಲ್ಲಿ 178 ಹೆಚ್ಚಿನ ವೈದ್ಯರನ್ನು ನಿಯೋಜಿಸಲಾಗಿದೆ.