ಚಾರ್ ಧಾಮ್ ಯಾತ್ರೆ: ಉತ್ತರಾಖಂಡದ ಹಲವು ಭಾಗಗಳಲ್ಲಿ ಭಾರೀ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಇಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಹಲವೆಡೆ ಭೂಕುಸಿತವಾಗಿರುವ ವರದಿಗಳು ಬರುತ್ತಿವೆ. ಬದರಿನಾಥಕ್ಕೆ ತೆರಳುವ ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ಬಂದ್ ಆಗಿದೆ. ಉತ್ತರಾಖಂಡ ಸರ್ಕಾರವು ಚಾರ್ ಧಾಮ್ ಯಾತ್ರಾರ್ಥಿಗಳಿಗೆ ಮಳೆ ನಿಲ್ಲುವವರೆಗೂ ಮುಂದೆ ಹೋಗದಂತೆ ಮನವಿ ಮಾಡಿದೆ.
ಚಾರ್ ಧಾಮ ಯಾತ್ರೆಯನ್ನು ಏಕೆ ನಿಲ್ಲಿಸಲಾಯಿತು?:
ಧಾರಾಕಾರ ಮಳೆಯಾಗುತ್ತಿದ್ದರಿಂದ ಚಾರ್ ಧಾಮ್ ಯಾತ್ರೆಯನ್ನು ಒಂದು ದಿನದ ಮಟ್ಟಿಗೆ ನಿಲ್ಲಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕಾರ್ಯದರ್ಶಿ ವಿನೋದ್ ಕುಮಾರ್ ಸುಮನ್ ತಿಳಿಸಿದ್ದಾರೆ. ಈಗ ನಮ್ಮ ಚಾರ್ ಧಾಮ್ ಯಾತ್ರೆ ಸುಗಮವಾಗಿ ಸಾಗುತ್ತಿದ್ದು, ಅದನ್ನು ನಿಲ್ಲಿಸುವುದಿಲ್ಲ. ಆದರೆ, ಮಳೆಯಾದರೆ ಜನರು ಯಾತ್ರೆ ಅಥವಾ ಪ್ರಯಾಣಕ್ಕೆ ಹೋಗದಂತೆ ಸೂಚಿಸಲಾಗಿದೆ. ಭಾರೀ ಮಳೆಯಿಂದಾಗಿ ಕಲ್ಲು ಬೀಳುವ ಭೀತಿ ಎದುರಾಗಿದೆ. ಇದರಿಂದ ಅವಶೇಷಗಳು ಬೀಳುವ ಭೀತಿ ಎದುರಾಗಿದೆ. ಮಳೆಗಾಲದಲ್ಲಿ ಪ್ರಯಾಣ ಮಾಡುವುದು ಸೂಕ್ತವಲ್ಲ. ಅದರಲ್ಲಿ ಬಹಳ ಅಪಾಯವಿರುತ್ತದೆ.
ಇದನ್ನೂ ಓದಿ: ಉಡುಪಿಯಲ್ಲಿ ಭಾರೀ ಮಳೆ: ನೀರಿನಲ್ಲಿ ಕೊಚ್ಚಿ ಹೋದ ಕಾರು, ನಾಳೆ ಶಾಲಾ-ಕಾಲೇಜುಗಳಿಗೆ ರಜೆ
ಉತ್ತರಾಖಂಡ ಸರ್ಕಾರದ ಪರಿಹಾರ ಮತ್ತು ರಕ್ಷಣಾ ಕಾರ್ಯ:
ಹೃಷಿಕೇಶದ ಘಾಟ್‌ಗಳು ಸಂಪೂರ್ಣ ಜಲಾವೃತವಾಗಿವೆ. ಉತ್ತರಾಖಂಡದ ರುದ್ರಾಪುರದ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಇಲ್ಲಿ ಸಿಲುಕಿರುವ ಜನರನ್ನು ರಕ್ಷಿಸಲು 4 SDRF ತಂಡಗಳನ್ನು ನಿಯೋಜಿಸಲಾಗಿದೆ. ಅನೇಕ ಜನರನ್ನು ರಕ್ಷಿಸಲು ದೋಣಿಗಳನ್ನು ಬಳಸಲಾಯಿತು. ಬನ್‌ಬಾಸಾ ಪ್ರದೇಶದಲ್ಲಿ ಎಸ್‌ಡಿಆರ್‌ಎಫ್ ತಂಡದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಉಧಮ್ ಸಿಂಗ್ ನಗರ ಮತ್ತು ಚಂಪಾವತ್ ಜಿಲ್ಲೆಗಳಲ್ಲಿಯೂ ಪರಿಹಾರ ಮತ್ತು ರಕ್ಷಣಾ ಕಾರ್ಯ ನಡೆಯುತ್ತಿದೆ. ಪ್ರವಾಹ ಅಥವಾ ಭೂಕುಸಿತದಿಂದ ಹಾನಿಗೊಳಗಾದ ಜನರಿಗೆ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಳನ್ನು ವೇಗಗೊಳಿಸಲು ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಮತ್ತು ಹೆಚ್ಚು ಜಾಗರೂಕರಾಗಿರಲು ಉತ್ತರಾಖಂಡ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಸೂಚನೆಗಳನ್ನು ನೀಡಿದೆ.
ಇದನ್ನೂ ಓದಿ: ಉಡುಪಿಯಲ್ಲಿ ಪ್ರವಾಹ; ಹೆಗಲ ಮೇಲೆ ಹೊತ್ತು ನಾಯಿಯನ್ನು ರಕ್ಷಿಸಿದ ವಿಡಿಯೋ ವೈರಲ್
ಬದರಿನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ವಿಷ್ಣು ಪ್ರಯಾಗದ ಮುಂದೆ ಬಲ್ದೌಡಾ ಸೇತುವೆಯ ಬಳಿ ರಸ್ತೆಯನ್ನು ಈಗಾಗಲೇ ನಿರ್ಬಂಧಿಸಲಾಗಿದೆ. ಅದೇ ರೀತಿ, ರುದ್ರಪ್ರಯಾಗ ಗೌರಿಕುಂಡ್ ರಾಷ್ಟ್ರೀಯ ಹೆದ್ದಾರಿ-107 ಡೋಲಿಯಾ ದೇವಿ (ಫಟಾ) ಪ್ರದೇಶದಲ್ಲಿ ನಿರಂತರ ಭಾರಿ ಮಳೆಯಿಂದಾಗಿ ಅಡಚಣೆಯಾಗಿದೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು IMD ಯ ಮುನ್ಸೂಚನೆಗಳಿಗೆ ಪ್ರತಿಕ್ರಿಯೆಯಾಗಿ ಹೆಚ್ಚಿನ ಜಾಗರೂಕತೆಯನ್ನು ಕಾಪಾಡಿಕೊಳ್ಳಲು ಪೀಡಿತ ಪ್ರದೇಶಗಳಲ್ಲಿನ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ನಿರ್ದೇಶನ ನೀಡಿದ್ದಾರೆ. ರಾಜ್ಯ ಸರ್ಕಾರವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಅಗತ್ಯವಿದ್ದರೆ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಿದ್ಧವಾಗಿದೆ ಎಂದಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ