ಬಿಕ್ಕಟ್ಟಿನ ಸಂದರ್ಭದಲ್ಲೂ ರೈತರಿಗೆ ರಸಗೊಬ್ಬರ ಕೊರತೆ ಆಗದಂತೆ ಎಚ್ಚರ: ಪುಟಿನ್ಗೆ ತಿಳಿಸಿದ ಮೋದಿ
Narendra Modi Russia visit: ಭಾರತ ಮತ್ತು ರಷ್ಯಾ ಸ್ನೇಹದ ಕಾರಣದಿಂದಾಗಿ ರೈತರಿಗೆ ಈ ಬಾರಿ ರಸಗೊಬ್ಬರ ಕೊರತೆ ಎದುರಾಗಲಿಲ್ಲ ಎಂದು ನರೇಂದ್ರ ಮೋದಿ ಹೇಳಿದರು. ಮಾಸ್ಕೋದಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ಮಾತುಕತೆ ನಡೆಸುವ ವೇಳೆ ಪ್ರಧಾನಿ ಮೋದಿ ಈ ವಿಚಾರ ಪ್ರಸ್ತಾಪಿಸಿದರು. ನರೇಂದ್ರ ಮೋದಿ ಅವರು ಎರಡು ದಿನ ರಷ್ಯಾ ಭೇಟಿಯಲ್ಲಿದ್ದಾರೆ. ನಿನ್ನೆ ಜುಲೈ 8ರಂದು ಅವರು ರಷ್ಯಾಗೆ ತೆರಳಿದ್ದರು.
ಮಾಸ್ಕೋ, ಜುಲೈ 9: ಜಾಗತಿಕವಾಗಿ ರಸಗೊಬ್ಬರ ಬಿಕ್ಕಟ್ಟು ಎದುರಾದರೂ ನನ್ನ ದೇಶದ ರೈತರಿಗೆ ಅದರ ಬಾಧೆ ತಾಕದಂತೆ ನೋಡಿಕೊಂಡಿದ್ದೇನೆ. ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸಂಬಂಧದಿಂದ ಇದು ಸಾಧ್ಯವಾಯಿತು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಷ್ಯಾ ಭೇಟಿಯ ವೇಳೆ ಅಲ್ಲಿನ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಜೊತೆ ನಡೆದ ಸಭೆಯ ವೇಳೆ ನರೇಂದ್ರ ಮೋದಿ ಈ ಮಾತುಗಳನ್ನಾಡಿದರು. ರೈತರ ಹಿತಾಸಕ್ತಿಗೋಸ್ಕರ ರಷ್ಯಾದೊಂದಿಗೆ ಸಹಕಾರವನ್ನು ಇನ್ನಷ್ಟು ಹೆಚ್ಚಿಸಲು ಬಯಸುವುದಾಗಿ ಮೋದಿ ತಿಳಿಸಿದರು.
‘ಕಳೆದ 5 ವರ್ಷ ಇಡೀ ವಿಶ್ವ ಮತ್ತು ಮನುಕುಲಕ್ಕೆ ಬಹಳ ಸವಾಲಿನ ಮತ್ತು ಆತಂಕದ ಸಂದರ್ಭವಾಗಿದೆ. ಹಲವು ಸಮಸ್ಯೆಗಳು ನಮ್ಮನ್ನು ಬಾಧಿಸಿವೆ. ಮೊದಲಿಗೆ ಕೋವಿಡ್ ಬಂತು. ಬಳಿಕ ವಿವಿಧೆಡೆ ಸಂಘರ್ಷ ಮತ್ತು ಸೂಕ್ಷ್ಮ ಸಂದರ್ಭಗಳು ಎದುರಾದವು. ಇಡೀ ಜಗತ್ತು ಆಹಾರ, ಇಂಧನ ಮತ್ತು ರಸಗೊಬ್ಬರ ಬಿಕ್ಕಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲೂ ನನ್ನ ದೇಶದ ರೈತರಿಗೆ ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಂಡಿದ್ದೇನೆ. ಇದಕ್ಕೆ ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಮತ್ತು ಸಹಕಾರ ಪ್ರಮುಖ ಪಾತ್ರ ವಹಿಸಿದೆ.
ಇದನ್ನೂ ಓದಿ: ರಷ್ಯಾದ ಇಂಧನ ಸಹಕಾರವು ಭಾರತದಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಸಹಾಯ ಮಾಡಿತು; ಪುಟಿನ್ಗೆ ಪ್ರಧಾನಿ ಮೋದಿ ಶ್ಲಾಘನೆ
‘ರೈತರ ಹಿತಾಸಕ್ತಿಗೆ ನಾವು ಬದ್ಧರಾಗಿದ್ದೇವೆ. ಮುಂಬರುವ ದಿನಗಳಲ್ಲೂ ರೈತರ ಹಿತಾಸಕ್ತಿಗಾಗಿ ರಷ್ಯಾ ಜೊತೆ ನಮ್ಮ ಸಹಕಾರವನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಿದ್ದರಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು.
#WATCH | Russia: In Moscow, PM Narendra Modi tells Russian President Vladimir Putin, “The last 5 years were very concerning, challenging for entire world, entire humankind. We had to go through several problems. First, due to COVID and later the era of conflicts and tensions in… pic.twitter.com/ZOHs16IChh
— ANI (@ANI) July 9, 2024
ಭಾರತದ ರಸಗೊಬ್ಬರ ಅವಶ್ಯಕತೆಯಲ್ಲಿ ಹೆಚ್ಚಿನ ಪಾಲನ್ನು ರಷ್ಯಾದಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಪೊಟ್ಯಾಷ್ ಮ್ಯೂರಿಯೇಟ್ ಅಥವಾ ಎಂಒಪಿ ಪೊಟ್ಯಾಷಿಯಮ್ ಗೊಬ್ಬರ ಹೆಚ್ಚಾಗಿ ರಷ್ಯಾದಿಂದ ಬರುತ್ತದೆ. ಮಧ್ಯಪ್ರಾಚೀನ ಭಾಗದಲ್ಲಿ ಹಡಗುಗಳ ಸಂಚಾರಕ್ಕೆ ವ್ಯತ್ಯಯ ಆದಾಗ ಸರಬರಾಜು ಬಿಕ್ಕಟ್ಟು ಎದುರಾಗಿತ್ತು. ಭಾರತಕ್ಕೆ ಇಂಧನ, ರಸಗೊಬ್ಬರ ಪೂರೈಕೆಗೆ ತಡೆಯಾಯಿತು. ಜೋರ್ಡಾನ್, ಇಸ್ರೇಲ್ ಸೇರಿದಂತೆ ಅರಬ್ ಭಾಗದಿಂದ ಡಿಎಪಿ ಮತ್ತು ಎಂಒಪಿ ರಸಗೊಬ್ಬರ ಆಮದು ಕಷ್ಟವಾಯಿತು. ಈ ಹಂತದಲ್ಲಿ ರಷ್ಯಾದ ಕಂಪನಿಗಳು ಕಡಿಮೆ ಬೆಲೆಗೆ ರಸಗೊಬ್ಬರವನ್ನು ಭಾರತಕ್ಕೆ ಮಾರಲು ಅಂಗೀಕರಿಸಿವೆ.
ಇದನ್ನೂ ಓದಿ: ಭಾರತ-ರಷ್ಯಾ ಸ್ನೇಹ ಯಾವಾಗಲೂ ಸಕಾರಾತ್ಮಕವಾಗಿರುತ್ತದೆ: ನರೇಂದ್ರ ಮೋದಿ
ಭಾರತಕ್ಕೆ ಸರಬರಾಜಾಗುವ ಎಂಒಪಿ ಅಥವಾ ಪೊಟ್ಯಾಷಿಯಂ ಗೊಬ್ಬರದಲ್ಲಿ ಶೇ. 60ಕ್ಕಿಂತ ಹೆಚ್ಚು ಭಾಗ ರಷ್ಯಾದಿಂದ ಬರುತ್ತವೆ. ಎಂಒಪಿ, ಡಿಎಪಿ, ಯೂರಿಯಾ ಮತ್ತು ಎನ್ಪಿಕೆ ರಸಗೊಬ್ಬರವನ್ನು ರಷ್ಯಾ ಕಂಪನಿಗಳು ರಿಯಾಯಿತಿ ಬೆಲೆಗೆ ನೀಡುತ್ತವೆ. ಈ ರೀತಿಯಲ್ಲಿ ಭಾರತದಲ್ಲಿ ರಸಗೊಬ್ಬರ ಕೊರತೆ ಉಂಟಾಗದಂತೆ ನೋಡಿಕೊಳ್ಳಲು ಸಾಧ್ಯವಾಯಿತು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ