ಛತ್ತೀಸ್​ಗಢ: ಭದ್ರತಾ ಪಡೆದ ಮುಂದೆ ಶರಣಾದ 30 ನಕ್ಸಲರು

|

Updated on: May 15, 2024 | 8:32 AM

ಛತ್ತೀಸ್‌ಗಢದ ನಕ್ಸಲ್ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಮಂಗಳವಾರ ಭದ್ರತಾ ಪಡೆಗಳು ಭರ್ಜರಿ ಯಶಸ್ಸು ಕಂಡಿವೆ. ಆರು ಮಹಿಳಾ ನಕ್ಸಲೀಯರು ಸೇರಿದಂತೆ 30 ನಕ್ಸಲೀಯರು ಭದ್ರತಾ ಪಡೆಗಳ ಮುಂದೆ ಶರಣಾಗಿದ್ದಾರೆ. ಶರಣಾದ 30 ನಕ್ಸಲೀಯರ ಪೈಕಿ ಒಂಬತ್ತು ಮಂದಿಯ ತಲೆಯ ಮೇಲೆ ಒಟ್ಟು 39 ಲಕ್ಷ ರೂಪಾಯಿ ನಗದು ಬಹುಮಾನವಿತ್ತು.

ಛತ್ತೀಸ್​ಗಢ: ಭದ್ರತಾ ಪಡೆದ ಮುಂದೆ ಶರಣಾದ 30 ನಕ್ಸಲರು
ನಕ್ಸಲರು
Follow us on

ಛತ್ತೀಸ್​ಗಢದ ಬಿಜಾಪುರದಲ್ಲಿ 30 ನಕ್ಸಲರು(Naxals) ಭದ್ರತಾಪಡೆಗಳ ಮುಂದೆ ಶರಣಾಗಿದ್ದಾರೆ. ಈ ಪೈಕಿ 9 ನಕ್ಸಲರ ತಲೆ ಮೇಲೆ 39 ಲಕ್ಷ ರೂ. ಇನಾಮು ಘೋಷಿಸಲಾಗಿತ್ತು. ಆದಿವಾಸಿಗಳ ಮೇಲಿನ ದೌರ್ಜನ್ಯಗಳು ಮತ್ತು ಮಾವೋವಾದದ ಪೊಳ್ಳು ಸಿದ್ದಾಂತದಿಂದ ನಿರಾಶಗೊಂಡಿದ್ದೇವೆ ಎಂದು ನಕ್ಸಲರು ಹೇಳಿದ್ದಾರೆ. ಛತ್ತೀಸ್​ಗಢ ಪೊಲೀಸ್​ ಹಾಗೂ ಸಿಆರ್​ಪಿಎಫ್​ನ ಹಿರಿಯ ಅಧಿಕಾರಿಗಳ ಮುಂದೆ ಶರಣಾದ ನಕ್ಸಲರಲ್ಲಿ ಆರು ಮಹಿಳೆಯರೂ ಇದ್ದಾರೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ಶರಣಾದ 30 ನಕ್ಸಲೀಯರ ಪೈಕಿ ಮಿಟ್ಕಿ ಕಾಕೆಂ ಅಲಿಯಾಸ್ ಸರಿತಾ (35), ಮುರಿ ಮುಹಂದ ಅಲಿಯಾಸ್ ಸುಖಮತಿ (32) ಕೂಡ ಸೇರಿದ್ದಾರೆ. ಇಬ್ಬರ ತಲೆಯ ಮೇಲೆ ತಲಾ 8 ಲಕ್ಷ ರೂಪಾಯಿ ಬಹುಮಾನವಿದೆ. ಇತರ ನಕ್ಸಲೀಯರಾದ ರಜಿತಾ ವೆಟ್ಟಿ (24), ಕೊವಾಸಿ (24), ಆಯ್ತಾ ಸೋಧಿ (22) ಮತ್ತು ಸೀನು ಪದಂ (27) ಅವರ ತಲೆಯ ಮೇಲೆ ತಲಾ 5 ಲಕ್ಷ ರೂಪಾಯಿ ಬಹುಮಾನವಿದೆ ಎಂದು ಅವರು ಹೇಳಿದರು.

ಸೋಮವಾರ ಮುಂಜಾನೆ ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್​ಕೌಂಟರ್​ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ನಕ್ಸಲರು ಹತರಾಗಿದ್ದರು. ಗಡ್ಚಿರೋಲಿ ಪೊಲೀಸರ ವಿಶೇಷ ವಿಭಾಗದ ಕಮಾಂಡೋಗಳು ಈ ಕಾರ್ಯಾಚರಣೆ ನಡೆಸಿದ್ದರು. ಸ್ಥಳದಿಂದ ಎಕೆ47, ಕಾರ್ಬೈನ್, ಐಎನ್​ಎಸ್​ಎಎಸ್​ ರೈಫಲ್​ ಪತ್ತೆಯಾಗಿತ್ತು.

ಮತ್ತಷ್ಟು ಓದಿ: Chhattisgarh: ಕಂಕೇರ್​ನಲ್ಲಿ ಎನ್​ಕೌಂಟರ್​, ಮೂವರು ನಕ್ಸಲರ ಕೊಂದ ಯೋಧರು

ನಕ್ಸಲರು ಭಮ್ರಗಢ ತಾಲೂಕಿನ ಕಟ್ರಘಟ್ಟ ಗ್ರಾಮದ ಬಳಿ ಅರಣ್ಯದಲ್ಲಿ ಬೀಡುಬಿಟ್ಟು ವಿಧ್ವಂಸಕ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಗುಪ್ತಚರ ಮಾಹಿತಿ ಲಭಿಸಿತ್ತು. ಕಮಾಂಡೋಗಳ ತಂಡ ಶೋಧ ಕಾರ್ಯ ನಡೆಸುತ್ತಿದ್ದಾಗ ನಕ್ಸಲರು ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು.

ಈ ಎನ್​ಕೌಂಟರ್​ನಲ್ಲಿ ಮೂವರು ನಕ್ಸಲರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಕಳೆದ ವಾರ ಛತ್ತೀಸ್​ಗಢ ಬಿಜಾಪುರ ಜಿಲ್ಲೆಯ ಗಂಗಾಳೂರು ಪೊಲೀಸ್​ ಠಾಣಾ ವ್ಯಾಪ್ತಿಯ ಪೆಡಿಯಾ ಗ್ರಾಮದ ಬಳಿ ಅರಣ್ಯದಲ್ಲಿ 12 ಗಂಟೆಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಭದ್ರತಾ ಸಿಬ್ಬಂದಿ 12 ನಕ್ಸಲರನ್ನು ಹತ್ಯೆ ಮಾಡಿದ್ದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ