ರಾಯಪುರ: 2010ರಲ್ಲಿ ದಾಂತೇವಾಡ- ಸುಕ್ಮಾ- ಬಿಜಾಪುರ್ ಪ್ರದೇಶದ ಚಿಂತಲನಾರ್ನಲ್ಲಿ ನಡೆದ ಹತ್ಯಾಕಾಂಡ ಸೇರಿದಂತೆ ಕಳೆದ 10 ವರ್ಷಗಳಲ್ಲಿ 175 ಯೋಧರು ಮಾವೋವಾದಿಗಳ ದಾಳಿಗೆ ಹುತಾತ್ಮರಾಗಿದ್ದಾರೆ. ಚಿಂತಲನಾರ್ನಲ್ಲಿ 76 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು, ಶನಿವಾರ ಬಿಜಾಪುರ್ನಲ್ಲಿ ನಡೆದ ಮಾವೋವಾದಿಗಳ ದಾಳಿಯಲ್ಲಿ 22 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಛಸ್ತೀಸಗಡದಲ್ಲಿ ಮಾವೋವಾದಿಗಳ ದಾಳಿಯ ಅಂಕಿ ಅಂಶಗಳನ್ನು ನೋಡಿದರೆ ಮಾರ್ಚ್ ಮತ್ತು ಜುಲೈ ತಿಂಗಳ ಮಧ್ಯೆಯೇ ಅತೀ ಹೆಚ್ಚು ದಾಳಿಗಳು ನಡೆದಿವೆ.
ಸಿಪಿಐ (ಮಾವೋವಾದಿ) ಸಂಘಟನೆ ಸಾಮಾನ್ಯವಾಗಿ ಫೆಬ್ರುವರಿ ಮತ್ತು ಜೂನ್ ತಿಂಗಳ ಅಂತ್ಯದಲ್ಲಿ ಯುದ್ಧತಂತ್ರ ಯೋಜನೆ- ಆಕ್ರಮಣಕಾರಿ ಅಭಿಯಾನಗಳನ್ನು ನಡೆಸುವುದರಿಂದ ಮಾರ್ಚ್- ಜುಲೈ ತಿಂಗಳ ನಡುವೆ ದಾಳಿಗಳು ನಡೆಯುತ್ತದೆ ಎಂದು ಬಲ್ಲಮೂಲಗಳು ಹೇಳಿವೆ. ಮುಂಗಾರು ಮುಂಚೆ ಇವರು ಭದ್ರತಾ ಸಿಬ್ಬಂದಿಗಳ ವಿರುದ್ಧ ತೀವ್ರವಾದ ದಾಳಿ ನಡೆಸುತ್ತಿದ್ದು, ಈ ಹೊತ್ತಲ್ಲಿ ಪ್ರತಿದಾಳಿ ಕಷ್ಟ ಎಂಬ ಲೆಕ್ಕಾಚಾರದ ಮೇಲೆಯೇ ಮಾವೋವಾದಿಗಳ ದಾಳಿ ನಡೆಯುತ್ತದೆ. ಸುಮಾರು 15 ವರ್ಷಗಳ ಹಿಂದೆ ಪ್ರಾರಂಭವಾದ ಎಡಪಕ್ಷದ ತೀವ್ರವಾದಿ ಸಂಘಟನೆಯ ವಿರುದ್ಧ ಬಸ್ತರ್ ನಲ್ಲಿ ಭದ್ರತಾ ಪಡೆಗಳು ಹೋರಾಡುತ್ತಲೇ ಇವೆ. ದೂರ ಪ್ರದೇಶ, ದಟ್ಟ ಅರಣ್ಯ, ಆಡಳಿತದ ಅನುಪಸ್ಥಿತಿ ಮತ್ತು ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದಾಗಿ ಈ ಪ್ರದೇಶ ಅಭಿವೃದ್ಧಿ ಕಾಣುತ್ತಿಲ್ಲ.
ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲಿ ಮಾವೋ ಚಳವಳಿಗಳ ಹುಟ್ಟಡಗಿದ ನಂತರ ಬಸ್ತರ್ ಪ್ರದೇಶದಲ್ಲಿ ಚಳವಳಿ ಸುಲಭವಾಯಿತು. ರಸ್ತೆಗಳ ಕೊರತೆ, ಸಂಪರ್ಕ ಮತ್ತು ಆಡಳಿತ ವ್ಯವಸ್ಥೆಯ ಕೊರತೆ ಈ ಪ್ರದೇಶಗಳು ಮಾವೋವಾದಿಗಳ ಭದ್ರಕೋಟೆಯಾಗಲು ಕಾರಣವಾಯಿತು. ಆದಾಗ್ಯೂ, ಮಾವೋವಾದಿಗಳ ಮೇಲೆ ಹಿಡಿತ ಸಾಧಿಸಲು ಛತ್ತೀಸಗಡದ ಪೊಲೀಸರಿಗೂ ಇಷ್ಟವಿರಲಿಲ್ಲ ಎಂಬ ಮಾತು ಇಲ್ಲಿ ಕೇಳಿ ಬರುತ್ತದೆ. ಛತ್ತೀಸಗಡದ ಮಾವೋವಾದಿ ಪ್ರದೇಶಗಳಲ್ಲಿ ರಸ್ತೆ ಸಂಪರ್ಕ ಇಲ್ಲವೇ ಇಲ್ಲ ಎಂಬಂತಾಗಿದೆ. ಬಿಹಾರ ಮತ್ತು ಜಾರ್ಖಂಡ್ನಲ್ಲಿ ರಸ್ತೆ, ಸಂಪರ್ಕ ವ್ಯವಸ್ಥೆ ಚೆನ್ನಾಗಿದೆ ಎಂದು ಸಿಆರ್ಪಿಎಫ್ ಅಧಿಕಾರಿಗಳು ಹೇಳಿರುವುದಾಗಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ನಾಗರಿಕರ ಕೈಗೆ ಬಂದೂಕು ಕೊಟ್ಟ ನಕ್ಸಲರ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳುವ ವಿವಾದಾತ್ಮಕ ಸಾಲ್ವಾ ಜುದಂ ಪ್ರಯೋಗದಿಂದಾಗಿ ಗ್ರಾಮಗಳನ್ನು ಶಿಬಿರಗಳಾಗಿ ವಿಂಗಡಿಸಲಾಯಿತು. ಕೆಲವರು ಭದ್ರತಾ ಸಿಬ್ಬಂದಿಗಳೊಂದಿಗೆ ಶಿಬಿರಗಳಲ್ಲಿ ವಾಸವಾದರೆ ಇನ್ನು ಕೆಲವರನ್ನು ಮಾವೋವಾದಿಗಳ ತೆಕ್ಕೆಗೆ ಸಿಗುವಂತಾಯಿತು ಎಂದು ಮಾಜಿ ಸಿಆರ್ಪಿಎಫ್ ಮಹಾನಿರ್ದೇಶಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಸಿಆರ್ಪಿಎಫ್ನ್ನು ಮುನ್ನಡೆಸುವುದಕ್ಕಾಗಿ ಜಿಲ್ಲಾ ಮೀಸಲು ಪಡೆಗೆ (District Reserve Guard) ಅವಕಾಶ ನೀಡಲಾಗಿತ್ತು. ಅದರ ಇಲ್ಲಿಯವರೆಗೆ ಛತ್ತಿಸಗಡದಲ್ಲಿ ಸಿಆರ್ಪಿಎಫ್ ಮಾತ್ರವೇ ಮಾವೋವಾದಿಗಳ ವಿರುದ್ಧ ಹೋರಾಟ ನಡೆಸುತ್ತಿದೆ. ಇಲ್ಲಿನ ಸ್ಥಳೀಯ ಪೊಲೀಸರು ಭಾಗಿಯಾಗುವುದೇ ಕಡಿಮೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಕ್ಸಲ್ ವಿರುದ್ಧದ ಹೋರಾಟದಲ್ಲಿ ಸ್ಥಳೀಯ ರಾಜಕೀಯ ಸ್ಥಿತಿಗತಿಗಳೂ ಪ್ರಭಾವ ಬೀರುತ್ತವೆ. ಆಂಧ್ರ ಮತ್ತು ತೆಲಂಗಾಣದಲ್ಲಿ ಮಾವೋವಾದಿಗಳ ಉಪಟಳ ಜಾಸ್ತಿಯಾಗಿದ್ದ ಹೊತ್ತಿನಲ್ಲಿಯೇ ಸರ್ಕಾರ ದೂರದ ಮತ್ತು ಒಳನಾಡು ಅಭಿವೃದ್ಧಿ ಪ್ರಾಧಿಕಾರ ರಚಿಸಿತ್ತು. ಈ ಮೂಲಕ ಸರ್ಕಾರದ ಎಲ್ಲ ಯೋಜನೆಗಳನ್ನು ದೂರದ ಪ್ರದೇಶಗಳಿಗೆ ತಲುಪುವ ಉದ್ದೇಶ ಸರ್ಕಾರದ್ದಾಗಿತ್ತು ಎಂದು ಸಿಆರ್ಪಿಎಫ್ ಅಧಿಕಾರಿಗಳು ಹೇಳಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ಮಾವೋವಾದಿಗಳ ಹಿಡಿತವಿದ್ದ ಪ್ರದೇಶದಲ್ಲಿ ಆಸ್ಪತ್ರೆ, ಸೇತುವೆಗಳನ್ನು ನಿರ್ಮಿಸಲಾಗಿದೆ. ಸ್ಥಳೀಯರಿಗೆ ನೌಕರಿ ನೀಡಲಾಗಿದೆ. ಛತ್ತೀಸಗಡದ ಕೆಲವು ಭಾಗಗಳಲ್ಲಿ ಮಾತ್ರ ಈ ರೀತಿ ಸೌಲಭ್ಯಗಳನ್ನು ಒದಗಿಸಲಾಗಿದೆ. ಆದರೆ ರಸ್ತೆ, ಶಾಲೆ, ಆಸ್ಪತ್ರೆ ಮತ್ತು ಅರಣ್ಯ ಉತ್ಪನ್ನಗಳಿಗಾಗಿರುವ ಮಾರುಕಟ್ಟೆ, ಮೂಲ ಸೌಕರ್ಯಗಳು ಮಾವೋವಾದಿ ಪ್ರದೇಶಗಳಲ್ಲಿ ಇಲ್ಲ. ಈ ಪ್ರದೇಶಗಳಿಗೆ ಆಡಳಿತ ಸಂಸ್ಥೆಗಳು ಗಮನ ಹರಿಸಿದರೆ ಮಾವೋವಾದಿಗಳ ಸಮಸ್ಯೆ ಮೂರೇ ವರ್ಷದಲ್ಲಿ ಕಡಿಮೆಯಾಗಬಹುದು.
ಛತ್ತೀಸಗಡದಲ್ಲಿ ಸ್ಥಳೀಯ ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿ ಕಾರ್ಯಾಚರಣೆ ಸಕ್ರಿಯವಾಗಿದ್ದರೂ, ಸತತವಾಗಿ ಈ ರೀತಿಯ ಕಾರ್ಯಾಚರಣೆಗಳು ನಡೆಸಬೇಕಿದೆ. ಇಲ್ಲದೇ ಇದ್ದರೆ ಸಂದಿಗ್ಧ ಪರಿಸ್ಥಿತಿಯಲ್ಲಿ ಉಭಯ ತಂಡಗಳು ಆದೇಶವನ್ನು ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲವಾಗಿ ಸಾವುನೋವುಗಳ ಸಂಖ್ಯೆಯೂ ಹೆಚ್ಚಾಗುತ್ತದೆ ಎಂದು ಸಿಆರ್ಪಿಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಈ ಹಿಂದಿನ ವರ್ಷಗಳಲ್ಲಿ, ಮಾವೋವಾದಿಗಳು ಕೆಲವು ರಾಜ್ಯಗಳಲ್ಲಿ ದೂರದ ಮತ್ತು ಸರ್ಕಾರ ತಲುಪಲು ಕಷ್ಟವಿರುವ ಬುಡಕಟ್ಟು ಪ್ರದೇಶಗಳಲ್ಲಿ ತಮ್ಮ ಪ್ರಭಾವ ವಿಸ್ತರಿಸಿಕೊಳ್ಳಲು ಯಶಸ್ವಿಯಾಗಿದ್ದರು. ಇದಕ್ಕೆ ಅನುಗುಣವಾಗಿ, ರಾಜ್ಯ ಆಡಳಿತ ಸಂಸ್ಥೆಗಳು ಅಂಥ ಪ್ರದೇಶಗಳಿಂದ ಕ್ರಮೇಣ ಹಿಂದೆ ಸರಿದವು, ಇದರ ಪರಿಣಾಮವಾಗಿ ಭದ್ರತೆ ಮತ್ತು ಅಭಿವೃದ್ಧಿ ಇಲ್ಲದಾಯಿತು. ಹಾಗಾಗಿ ಮಾವೋವಾದಿಗಳು ಇಲ್ಲಿ ಸಮಾನಾಂತರ ಆಡಳಿತ ವ್ಯವಸ್ಥೆ ಸ್ಥಾಪಿಸಲು ಪೂರಕವಾಯಿತು ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: Chhattisgarh Maoist Attack: ಛತ್ತೀಸ್ಗಢಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ
ಇದನ್ನೂ ಓದಿ: ಯೋಧರ ಪ್ರಾಣತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ.. ಸೂಕ್ತ ಸಮಯದಲ್ಲಿ ನಕ್ಸಲರಿಗೆ ಕಟು ತಿರುಗೇಟು ನೀಡುತ್ತೇವೆ: ಅಮಿತ್ ಶಾ