Chhattisgarh Maoist Attack: ಛತ್ತೀಸ್​ಗಢಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ

ಜಗದಲ್​ಪುರ್ ವಿಮಾನ ನಿಲ್ದಾಣಕ್ಕೆ 10.35ಕ್ಕೆ ತಲುಪಿದ ಅಮಿತ್ ಶಾ,  ಅಲ್ಲಿಂದ ಪೊಲೀಸ್ ಲೇನ್​ಗೆ ತೆರಳಿ ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.

Chhattisgarh Maoist Attack: ಛತ್ತೀಸ್​ಗಢಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ, ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ
ಸಭೆ ನಡೆಸುತ್ತಿರುವ ಅಮಿತ್ ಶಾ
Follow us
ರಶ್ಮಿ ಕಲ್ಲಕಟ್ಟ
|

Updated on:Apr 05, 2021 | 12:16 PM

ಜಗದಲ್​ಪುರ್: ಛತ್ತೀಸ್​ಗಢ​ದ ಸುಕ್ಮಾ ಜಿಲ್ಲೆಯಲ್ಲಿ ನಕ್ಸಲ್ ದಾಳಿ ನಡೆದ ಸ್ಥಳಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಸೋಮವಾರ ಬೆಳಗ್ಗೆ ಭೇಟಿ ನೀಡಿದ್ದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ. ಭಾನುವಾರ ಬಸ್ತಾರ್ ಪ್ರದೇಶದಲ್ಲಿ ನಕ್ಸಲರ ಜತೆಗಿನ ಗುಂಡಿನ ಚಕಮಕಿಯಲ್ಲಿ 22 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದರು. ಜಗದಲ್​ಪುರ್ ವಿಮಾನ ನಿಲ್ದಾಣಕ್ಕೆ 10.35ಕ್ಕೆ ತಲುಪಿದ ಅಮಿತ್ ಶಾ,  ಅಲ್ಲಿಂದ ಪೊಲೀಸ್ ಲೇನ್​ಗೆ ತೆರಳಿ  ಹುತಾತ್ಮ ಯೋಧರಿಗೆ ಅಂತಿಮ ನಮನ ಸಲ್ಲಿಸಿದ್ದಾರೆ. ಕೇಂದ್ರ ಗೃಹ ಸಚಿವರಾದ ನಂತರ ಅಮಿತ್ ಶಾ ಅವರು ಮೊದಲ ಬಾರಿ ಬಸ್ತಾರ್ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ.

ಬಿಜಾಪುರ್ ಮತ್ತು ಸುಕ್ಮಾ ಜಿಲ್ಲೆಯ ಗಡಿಭಾಗದಲ್ಲಿ ಮಾವೊವಾದಿಗಳು ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಿದ ಜಾಗಕ್ಕೆ ಅಮಿತ್ ಶಾ ಭೇಟಿ ನೀಡಿದ್ದಾರೆ. ಛತ್ತೀಸ್​ಗಢಕ್ಕೆ ಬಂದಿಳಿದ ಶಾ ಅವರನ್ನು ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸ್ವಾಗತಿಸಿದ್ದಾರೆ. ನಕ್ಸಲರ ವಿರುದ್ಧ ನಮ್ಮ ಹೋರಾಟವು ಶಕ್ತಿ, ಪರಿಶ್ರಮ ಮತ್ತು ಮತ್ತಷ್ಟು ತೀವ್ರವಾಗಿ ಮುಂದುವರಿಯಲಿದ್ದು, ನಾವು ಅದಕ್ಕೊಂದು ಅಂತ್ಯ ಕಾಣಿಸುತ್ತೇವೆ ಎಂದು ಮಾಧ್ಯಮದವರಲ್ಲಿ ಮಾತನಾಡಿದ ಅಮಿತ್ ಶಾ ಹೇಳಿದ್ದಾರೆ.

ಬಿಜಾಪುರ್ ಎನ್​ಕೌಂಟರ್ ಬಗ್ಗೆ ಅಮಿತ್ ಶಾ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದು, ಗೃಹ ಸಚಿವಾಲಯದ ಕಾರ್ಯದರ್ಶಿ ಅಜಯ್ ಭಲ್ಲಾ, ಇಂಟೆಲಿಜೆನ್ಸ್ ಬ್ಯೂರೋ ನಿರ್ದೇಶಕ ಅರವಿಂದ್ ಕುಮಾರ್ ಮತ್ತು ಸಿಆರ್​ಪಿಎಫ್ ಹಿರಿಯ ಅಧಿಕಾರಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಇದಾದನಂತರ ಅಮಿತ್ ಶಾ ಬಿಜಾಪುರ್​ನಲ್ಲಿರುವ ಸಿಆರ್​ಪಿಎಫ್ ಬಸಗುಡ ಶಿಬಿರಕ್ಕೆ ಭೇಟಿ ನೀಡಿ ಅಲ್ಲಿ ಸಿಆರ್​ಪಿಎಫ್ ಮತ್ತು ರಾಜ್ಯ ಪೊಲೀಸ್ ಸಿಬ್ಬಂದಿಗಳನ್ನು ಭೇಟಿ ಮಾಡಲಿದ್ದಾರೆ. ಅಲ್ಲಿಂದ ರಾಯ್​ಪುರ್​ಗೆ ತೆರಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಯೋಧರನ್ನು ಭೇಟಿ ಮಾಡಲಿದ್ದಾರೆ.

ಆದಾಗ್ಯೂ , ಈ ದಾಳಿ ಗುಪ್ತಚರ ಇಲಾಖೆಯ ವೈಫಲ್ಯ ಆಗಿರಲಿಲ್ಲ ಎಂದು ಸಿಆರ್​ಪಿಎಫ್ ಮುಖ್ಯಸ್ಥರ ಹೇಳಿಕೆಯನ್ನು ಖಂಡಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಗುಪ್ತಚರ ಇಲಾಖೆಯ ವೈಫಲ್ಯ ಅಲ್ಲ ಎಂದಾದರೆ ಸಾವಿನ ಪ್ರಮಾಣ 1:1 ಇದೆ. ಇದು ಕಳಪೆ ಮತ್ತು ಅಸಮರ್ಥ ರೀತಿಯಲ್ಲಿ ನಡೆದ ಕಾರ್ಯಾಚರಣೆಯಾಗಿದೆ. ನಮ್ಮ ಯೋಧರು ಇಚ್ಛೆಯಂತೆ ಗುಂಡಿಗೆ ಬಲಿಯಾಗಿ ಹುತಾತ್ಮರಾಗುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಸುಕ್ಮಾ ಮತ್ತು ಬಿಜಾಪುರ್ ಜಿಲ್ಲೆಯ ಗಡಿಭಾಗದಲ್ಲಿನ ಜೊನಾಗುಡ ಮತ್ತು ತೆಕಲ್ಗುಡ ಗ್ರಾಮದ ನಡುವೆ ಮಾವೋವಾದಿಗಳು ಮತ್ತು ಭದ್ರತಾ ಸಿಬ್ಬಂದಿಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾನುವಾರ 22 ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದು 31 ಮಂದಿಗೆ ಗಾಯಗಳಾಗಿತ್ತು

ಸಿಆರ್​ಪಿಎಫ್​ ಯೋಧರ ಮೇಲೆ ರಾಕೆಟ್ ಲಾಂಚರ್ ಬಳಸಿ ದಾಳಿ ನಡೆಸಿದ್ದ ನಕ್ಸಲರು ಅಟ್ಟಹಾಸ ಮೆರೆದಿದ್ದು, ಘಟನೆಯಲ್ಲಿ 30ಕ್ಕೂ ಹೆಚ್ಚು ಯೋಧರು ಗಾಯಗೊಂಡಿದ್ದಾರೆ. ಅಲ್ಲದೇ, ಓರ್ವ ನಕ್ಸಲ್​ ಯುವತಿ ಸಾವಿಗೀಡಾಗಿದ್ದು ಆಕೆಯ ಮೃತದೇಹವೂ ಪತ್ತೆಯಾಗಿದೆ. ಹುತಾತ್ಮರಾದ 22 ಯೋಧರ ಪೈಕಿ 17 ಜನರ ಮೃತದೇಹವನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿದ್ದು,  ನಾಪತ್ತೆಯಾಗಿದ್ದವರಲ್ಲಿ ಬಹುತೇಕರು ಸಾವಿಗೀಡಾಗಿರುವುದು ಈ ಮೂಲಕ ಖಚಿತವಾಗಿದೆ.

ಇದನ್ನೂ ಓದಿ: ಚತ್ತೀಸ್​ಗಡ್​ನಲ್ಲಿ ನಕ್ಸಲರ ಅಟ್ಟಹಾಸ; ಗುಂಡಿನ ಚಕಮಕಿಯಲ್ಲಿ 22 ಯೋಧರು ಹುತಾತ್ಮ

ಯೋಧರ ಪ್ರಾಣತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ.. ಸೂಕ್ತ ಸಮಯದಲ್ಲಿ ನಕ್ಸಲರಿಗೆ ಕಟು ತಿರುಗೇಟು ನೀಡುತ್ತೇವೆ: ಅಮಿತ್​ ಶಾ

(Union home minister Amit Shah visits Chhattisgarh Bastar region pays respect to the martyred person)

Published On - 11:41 am, Mon, 5 April 21