ಅಯೋಧ್ಯಾ: ಬಿಜೆಪಿ ಸರ್ಕಾರ ಇರುವ 12 ರಾಜ್ಯಗಳ ಮುಖ್ಯಮಂತ್ರಿಗಳು ಸದ್ಯ ಕಾಶಿಯಲ್ಲಿದ್ದಾರೆ. ಡಿಸೆಂಬರ್ 13ರಂದು ಕಾಶಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ಕೊಟ್ಟು ಅಲ್ಲಿ ಕಾಶಿ ವಿಶ್ವನಾಥ ಕಾರಿಡಾರ್ ಉದ್ಘಾಟಿಸಿದ್ದಾರೆ. ಅದರ ಮರುದಿನ ಅಂದರೆ ಡಿ.14ರಂದು ಬಿಜೆಪಿ ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು, ಮಂಡಲ ಮತ್ತು ಜಿಲ್ಲಾಧ್ಯಕ್ಷರ ಜತೆ ಪ್ರಧಾನಿ ಮೋದಿ ಸಭೆ ನಡೆಸಿದ್ದಾರೆ. ಅದೇ ದಿನ ಮಧ್ಯಾಹ್ನ ಮುಖ್ಯಮಂತ್ರಿಗಳ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ನರೇಂದ್ರ ಮೋದಿಯವರು ದೆಹಲಿಗೆ ವಾಪಸ್ ಆಗಿದ್ದರೂ ಕೂಡ, ಬಿಜೆಪಿಯ ಮುಖ್ಯಮಂತ್ರಿಗಳು ಉತ್ತರಪ್ರದೇಶದಲ್ಲಿಯೇ ಇದ್ದಾರೆ. ಅವರಿಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. 2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಇದು ತುಂಬ ಮಹತ್ವ ಪಡೆದುಕೊಂಡಿದೆ.
ಅಂದಹಾಗೆ ಇಂದು ಹಿಮಾಚಲಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಅಸ್ಸಾಂ, ಮಣಿಪುರ, ತ್ರಿಪುರ, ಗುಜರಾತ್, ಹರ್ಯಾಣ, ಗೋವಾ, ಬಿಹಾರ, ನಾಗಾಲ್ಯಾಂಡ್ ಮತ್ತು ಅರುಣಾಚಲಪ್ರದೇಶಗಳ ಮುಖ್ಯಮಂತ್ರಿಗಳು ಅಯೋಧ್ಯೆಗೆ ಭೇಟಿ ನೀಡಲಿದ್ದು, ಇಂದು ಸಂಜೆ ಅಲ್ಲಿಯೇ ಉಳಿಯಲಿದ್ದಾರೆ. ಹಾಗೇ, ಅವರೊಂದಿಗೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಕೂಡ ಇರಲಿದ್ದಾರೆ. ಈ ಮುಖ್ಯಮಂತ್ರಿಗಳು ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಪೂಜೆ ಸಲ್ಲಿಸುವ ಜತೆ, ವಿವಿಧ ದೇವಸ್ಥಾನಗಳಿಗೆ ಭೇಟಿ ಕೊಡಲಿದ್ದಾರೆ.
ಜೆ.ಪಿ.ನಡ್ಡಾ ಮೊದಲ ಭೇಟಿ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಇಂದು ಅಯೋಧ್ಯೆಗೆ ಭೇಟಿ ನೀಡಲಿದ್ದಾರೆ. ಹಾಗೇ, ಅಲ್ಲಿ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಸೇರಿ ಶ್ರೀರಾಮಮಂದಿರ ನಿರ್ಮಾಣದ ಕಾಮಗಾರಿ ವೀಕ್ಷಿಸಲಿದ್ದಾರೆ. ಅಂದಹಾಗೆ, ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಜೆ.ಪಿ.ನಡ್ಡಾ ಇದೇ ಮೊದಲ ಬಾರಿಗೆ ಅಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಇದನ್ನೂ ಓದಿ: 3 ವರ್ಷ ಮೇಲ್ಪಟ್ಟ ಮಕ್ಕಳಿಗಾಗಿ 6 ತಿಂಗಳಲ್ಲಿ ಕೊವಿಡ್ ಲಸಿಕೆ ಸಿದ್ಧವಾಗಲಿದೆ: ಅದಾರ್ ಪೂನಾವಲಾ
Published On - 9:55 am, Wed, 15 December 21