ಇಂದಿನಿಂದ ರಾಷ್ಟ್ರಪತಿ ರಾಮನಾಥ ಕೋವಿಂದ್ ಬಾಂಗ್ಲಾದೇಶ ಪ್ರವಾಸ; 50ನೇ ವಿಜಯ ದಿನ ಸಂಭ್ರಮದಲ್ಲಿ ಭಾಗಿ
ಬಾಂಗ್ಲಾದೇಶ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಲ್ಲಿನ ಅಧ್ಯಕ್ಷ ಹಮೀದ್ ಜತೆ ನಿಯೋಗ ಮಟ್ಟದ ಸಭೆ ನಡೆಸಲಿದ್ದಾರೆ.
ರಾಷ್ಟ್ರಪತಿ ರಾಮನಾಥ ಕೋವಿಂದ್ (Ram Nath Kovind) ಅವರು ಇಂದಿನಿಂದ ಮೂರುದಿನಗಳ ಬಾಂಗ್ಲಾದೇಶ ಪ್ರವಾಸ ಹಮ್ಮಿಕೊಳ್ಳಲಿದ್ದಾರೆ. ಢಾಕಾದಲ್ಲಿ ನಡೆಯಲಿರುವ 50ನೇ ವರ್ಷದ ಬಾಂಗ್ಲಾದೇಶ ವಿಜಯ ದಿನ ಸಂಭ್ರಮದಲ್ಲಿ ಪಾಲ್ಗೊಳ್ಳುವರು. ಇಂದು ಬಾಂಗ್ಲಾದೇಶಕ್ಕೆ ತೆರಳಲಿದ್ದು, ಡಿ.17ರವರೆಗೆ ಅಲ್ಲಿಯೇ ಇರಲಿದ್ದಾರೆ. ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್ ಅವರ ಆಹ್ವಾನದ ಮೇರೆಗೆ ರಾಮನಾಥ ಕೋವಿಂದ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಾಗಿ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ಹರ್ಷವರ್ಧನ್ ತಿಳಿಸಿದ್ದಾರೆ.
ಕೊವಿಡ್ 19 ಸೋಂಕು ವಿಶ್ವಕ್ಕೆ ವ್ಯಾಪಿಸಿದ ನಂತರ ಇದೇ ಮೊದಲ ಬಾರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಬಾಂಗ್ಲಾದೇಶಕ್ಕೆ ತೆರಳುತ್ತಿದ್ದಾರೆ. ಅದರಲ್ಲೂ ಬಾಂಗ್ಲಾದೇಶ 50ನೇ ವಿಜಯೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಏಕೈಕ ವಿದೇಶೀ ಗಣ್ಯರಾಗಿದ್ದಾರೆ ಎಂದು ಹರ್ಷವರ್ಧನ್ ಮಾಹಿತಿ ನೀಡಿದ್ದಾರೆ. ಹಾಗೇ, ರಾಷ್ಟ್ರಪತಿಗಳ ಬಾಂಗ್ಲಾದೇಶ ಭೇಟಿಯಿಂದ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಬಾಂಧವ್ಯ ಹೆಚ್ಚುತ್ತದೆ ಎಂದೂ ಅವರು ಹೇಳಿದ್ದಾರೆ.
ಬಾಂಗ್ಲಾದೇಶ ಭೇಟಿಯ ಸಂದರ್ಭದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಅಲ್ಲಿನ ಅಧ್ಯಕ್ಷ ಹಮೀದ್ ಜತೆ ನಿಯೋಗ ಮಟ್ಟದ ಸಭೆ ನಡೆಸಲಿದ್ದಾರೆ. ಬಾಂಗ್ಲಾದೇಶ ಪ್ರಧಾನಂತ್ರಿ ಶೇಖ್ ಹಸೀನಾ, ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಎ.ಕೆ.ಅಬ್ದುಲ್ ಮೊಮೆನ್ ಕೂಡ ರಾಮನಾಥ್ ಕೋವಿಂದ್ರನ್ನು ಭೇಟಿ ಮಾಡಲಿದ್ದಾರೆ. ಹಾಗೇ, ಅವರು ಢಾಕಾದಲ್ಲಿರುವ ರಾಮ್ನಾ ಕಾಳಿ ದೇವಸ್ಥಾನಕ್ಕೂ ಕೂಡ ಭೇಟಿ ನೀಡುವರು. 1971ರಲ್ಲಿ ನಡೆದ ಬಾಂಗ್ಲಾದೇಶ ವಿಮೋಚನೆ ಯುದ್ಧದಲ್ಲಿ ಗೆದ್ದ ಸಂಭ್ರಮದ ದಿನ ನೆನಪಿಸಿಕೊಳ್ಳುವ ಸಲುವಾಗಿ ಪ್ರತಿವರ್ಷವೂ ಅಲ್ಲಿ ಬಾಂಗ್ಲಾದೇಶ ವಿಜಯ ದಿನ ಆಚರಣೆ ಮಾಡಲಾಗುತ್ತದೆ.
ಇದನ್ನೂ ಓದಿ: ಗರ್ಭಿಣಿ ಪತ್ನಿಯನ್ನು ಕಪಿಲಾ ನದಿಯಲ್ಲಿ ಮುಳುಗಿಸಿ ಹತ್ಯೆ; ಆರೋಪಿ ಪತಿ ಬಂಧನ
Published On - 12:16 pm, Wed, 15 December 21