ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಬಾಲ್ಯವಿವಾಹ, ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸುವವರ ಸಂಖ್ಯೆ ಶೇ.30ರಷ್ಟು ಹೆಚ್ಚು

| Updated By: ಸುಷ್ಮಾ ಚಕ್ರೆ

Updated on: Oct 20, 2022 | 12:41 PM

ಭಾರತದಲ್ಲಿ 15 ರಿಂದ 19 ವರ್ಷ ವಯಸ್ಸಿನ ಶೇ. 7ರಷ್ಟು ಯುವತಿಯರು ಗರ್ಭಿಣಿಯಾಗುತ್ತಿದ್ದಾರೆ. ಇದರ ಅನುಪಾತವು ಮುಸ್ಲಿಮರಲ್ಲಿ ಅತ್ಯಧಿಕವಾಗಿದೆ.

ಹಿಂದೂಗಳಿಗಿಂತ ಮುಸ್ಲಿಮರಲ್ಲಿ ಬಾಲ್ಯವಿವಾಹ, ಚಿಕ್ಕ ವಯಸ್ಸಿನಲ್ಲೇ ಗರ್ಭ ಧರಿಸುವವರ ಸಂಖ್ಯೆ ಶೇ.30ರಷ್ಟು ಹೆಚ್ಚು
ಬಾಲ್ಯವಿವಾಹ
Follow us on

ನವದೆಹಲಿ: ಭಾರತದಲ್ಲಿ ಕಾನೂನು ಎಷ್ಟೇ ಬಲವಾಗಿದ್ದರೂ ಬಾಲ್ಯವಿವಾಹದ (Child Marriage) ಪ್ರಮಾಣ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಭಾರತದಲ್ಲಿ ಕಳೆದ 5 ವರ್ಷಗಳಲ್ಲಿ ಬಾಲ್ಯವಿವಾಹದ ಪ್ರಕರಣಗಳು ಶೇ. 222ರಷ್ಟು ಏರಿಕೆಯಾಗಿದೆ. 2016ರಲ್ಲಿ ಬಾಲ್ಯವಿವಾಹದ 326 ಪ್ರಕರಣಗಳು ಕಂಡುಬಂದರೆ, 2021ರಲ್ಲಿ ಈ ಸಂಖ್ಯೆ 1,050ಕ್ಕೆ ಏರಿದೆ. ಈ ಹಿನ್ನೆಲೆಯಲ್ಲಿ ಅಪ್ರಾಪ್ತ ಮುಸ್ಲಿಂ ಹುಡುಗಿಯನ್ನು ಮದುವೆಯಾಗಲು ಅನುಮತಿ ನೀಡಿದ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‌ನ ಆದೇಶವನ್ನು ಪರಿಶೀಲಿಸಲು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ (ಎನ್‌ಸಿಪಿಸಿಆರ್‌) ಈ ವಾರ ಅರ್ಜಿಯನ್ನು ಸಲ್ಲಿಸಿತ್ತು. ಆ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ (Suprme Court) ಅನುಮತಿ ನೀಡಿದೆ.

ಅಪ್ರಾಪ್ತ ಮುಸ್ಲಿಂ ಯುವತಿಯನ್ನು ವಿವಾಹವಾಗಲು ಅನುಮತಿ ನೀಡಿದ ಎನ್‌ಸಿಪಿಸಿಆರ್‌ ಇದು ಪೋಕ್ಸೋ ಕಾಯ್ದೆಯ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಮತ್ತು ಅಪ್ರಾಪ್ತ ವಯಸ್ಕರ ಲೈಂಗಿಕ ದೌರ್ಜನ್ಯಕ್ಕೆ ಸಮಾನವಾಗಿದೆ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೇಳಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ-V ಪ್ರಕಾರ, 20ರಿಂದ 24 ವಯಸ್ಸಿನ ಮಹಿಳೆಯರಲ್ಲಿ ಶೇ. 23.3ರಷ್ಟು ಮಹಿಳೆಯರು 18 ವರ್ಷವನ್ನು ತಲುಪುವ ಮೊದಲು ವಿವಾಹವಾಗಿದ್ದಾರೆ. ಅಲ್ಲದೆ, NCRB-2021 ವರದಿಯ ಪ್ರಕಾರ, ಬಾಲ್ಯ ವಿವಾಹಕ್ಕೆ ಒತ್ತಾಯಿಸಲು ಪ್ರತಿದಿನ 34 ಅಪ್ರಾಪ್ತ ಬಾಲಕಿಯರನ್ನು ಅಪಹರಿಸಲಾಗುತ್ತಿತ್ತು.

ಇದನ್ನೂ ಓದಿ: ಬಾಲ್ಯ ವಿವಾಹ ತಪ್ಪಿಸಿ, ಉನ್ನತ ಶಿಕ್ಷಣ ಕೊಡಿಸಿ ಎಂದು ಅಧಿಕಾರಿಗಳಿಗೆ ಪತ್ರ ಬರೆದ ಹಾಸನ‌ ಬಾಲಕಿ

ಅಲ್ಲದೆ, ಭಾರತದಲ್ಲಿ 15 ರಿಂದ 19 ವರ್ಷ ವಯಸ್ಸಿನ ಶೇ. 7ರಷ್ಟು ಯುವತಿಯರು ಗರ್ಭಿಣಿಯಾಗುತ್ತಿದ್ದಾರೆ. ಇದರ ಅನುಪಾತವು ಮುಸ್ಲಿಮರಲ್ಲಿ ಅತ್ಯಧಿಕವಾಗಿದೆ. ಮುಸ್ಲಿಮರಲ್ಲಿ ಈ ಅನುಪಾತ ಶೇ. 8.4ರಷ್ಟಿದ್ದು, ಕ್ರಿಶ್ಚಿಯನ್ನರಲ್ಲಿ ಶೇ. 6.8 ಮತ್ತು ಹಿಂದೂಗಳಲ್ಲಿ ಶೇ. 6.5ರಷ್ಟಿದೆ. ಅಂದರೆ ಮುಸ್ಲಿಮರಲ್ಲಿ ಹದಿಹರೆಯದ ಗರ್ಭಧಾರಣೆಯು ಹಿಂದೂಗಳಿಗಿಂತ ಶೇ. 30ರಷ್ಟು ಹೆಚ್ಚಾಗಿದೆ. ಮುಸ್ಲಿಮರಲ್ಲಿ ಗರ್ಭನಿರೋಧಕಗಳ ಬಳಕೆಯು ತುಂಬಾ ಕಡಿಮೆಯಾಗಿದೆ ಎಂದು ವರದಿ ತಿಳಿಸಿದೆ.

ಹಿಂದೂಗಳಿಗೆ ಬಾಲ್ಯವಿವಾಹಕ್ಕಾಗಿ ದಂಡ ವಿಧಿಸಬಹುದಾದರೂ ಮುಸ್ಲಿಮರು ವೈಯಕ್ತಿಕ ಕಾನೂನುಗಳನ್ನು ಅನುಸರಿಸುವುದರಿಂದ ಆ ನಿಯಮ ಅವರಿಗೆ ಅನ್ವಯಿಸುವುದಿಲ್ಲ. ಹದಿಹರೆಯದ ಗರ್ಭಧಾರಣೆಯು ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಕಡಿಮೆ ಶಿಕ್ಷಣ ಮತ್ತು ಸಂಪತ್ತನ್ನು ಹೊಂದಿರುವ ವಿಭಾಗಗಳಲ್ಲಿ ಹೆಚ್ಚು. 15-19 ವಯಸ್ಸಿನ ಸುಮಾರು ಶೇ. 53ರಷ್ಟು ವಿವಾಹಿತ ಮಹಿಳೆಯರು ಈಗಾಗಲೇ ಮಗುವನ್ನು ಹೊಂದಲು ಪ್ರಾರಂಭಿಸಿದ್ದಾರೆ. ತ್ರಿಪುರಾ (22%), ಪಶ್ಚಿಮ ಬಂಗಾಳ (16%), ಆಂಧ್ರ ಪ್ರದೇಶ (13%), ಅಸ್ಸಾಂ (12%), ಬಿಹಾರ (11%) ಮತ್ತು ಜಾರ್ಖಂಡ್ (10%) ಹದಿಹರೆಯದ ಗರ್ಭಧಾರಣೆಯ ಹೆಚ್ಚಿನ ಮಟ್ಟವನ್ನು ಹೊಂದಿವೆ.

ಇದನ್ನೂ ಓದಿ: ಜಾರ್ಖಂಡ್​ನಲ್ಲೇ ನಡೆದಿವೆ ಅತಿ ಹೆಚ್ಚು ಬಾಲ್ಯ ವಿವಾಹ: ಕೇಂದ್ರ ಗೃಹ ಇಲಾಖೆ ಸಮೀಕ್ಷೆಯಿಂದ ಬಹಿರಂಗ

2016 ಮತ್ತು 2021ರ ನಡುವೆ ಅತಿ ಹೆಚ್ಚು ಬಾಲ್ಯ ವಿವಾಹ ಪ್ರಕರಣಗಳು ಕರ್ನಾಟಕ (757), ಅಸ್ಸಾಂ (577), ತಮಿಳುನಾಡು (469) ಮತ್ತು ಪಶ್ಚಿಮ ಬಂಗಾಳ (431)ದಲ್ಲಿ ವರದಿಯಾಗಿದೆ. ಎನ್​ಡಿಎ ಸರ್ಕಾರವು ಮಹಿಳೆಯರ ಕಾನೂನುಬದ್ಧ ವಿವಾಹದ ವಯಸ್ಸನ್ನು 18ರಿಂದ 21ಕ್ಕೆ ಏರಿಸಲು ಪ್ರಸ್ತಾಪಿಸಿದೆ. ಇದು ಮಹಿಳೆಯರನ್ನು ಮತ್ತಷ್ಟು ಸಬಲೀಕರಣಗೊಳಿಸುತ್ತದೆ ಎನ್ನಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ