ಬಾಲ್ಯ ವಿವಾಹ ತಪ್ಪಿಸಿ, ಉನ್ನತ ಶಿಕ್ಷಣ ಕೊಡಿಸಿ ಎಂದು ಅಧಿಕಾರಿಗಳಿಗೆ ಪತ್ರ ಬರೆದ ಹಾಸನ ಬಾಲಕಿ
Child Marriage: ಬಾಲ್ಯ ವಿವಾಹ ತಪ್ಪಿಸಿ ಶಿಕ್ಷಣ ಕೊಡಿಸಿ ಎಂದು ಹಾಸನ ಮೂಲದ ಬಾಲಕಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ತನಗೆ ತಂದೆ ತಾಯಿ ಇಲ್ಲದ ಕಾರಣ ಮನೆಯಲ್ಲಿ ನನ್ನ ಸಂಬಂಧಿಕರು ಮದುವೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಸ್ಎಸ್ಎಲ್ಸಿ ಉತ್ತೀರ್ಣಳಾಗಿದ್ದೇನೆ. ನನಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಮನವಿ ಮಾಡಿದ್ದಾಳೆ.

ಮೈಸೂರು: ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿ ಜಗತ್ತಿನಾದ್ಯಂತ ಇನ್ನೂ ಚಾಲ್ತಿಯಲ್ಲಿದೆ. ಅನೇಕ ದೇಶಗಳಲ್ಲಿ ಅದನ್ನು ನಿಷೇಧಿಸಲಾಗಿದೆಯಾದರೂ ಮಾನವನ ದುರಾಸೆಯಿಂದಾಗಿ ಬಾಲ್ಯ ವಿವಾಹ ಇನ್ನೂ ನಡೆದುಬಂದಿದೆ. ಆದರೆ ಇದರ ವಿರುದ್ಧ ಆಗಾಗ ಅಲ್ಲಲ್ಲಿ ದಂಗೆಯೇಳುವುದು, ಹೆಣ್ಣುಮಕ್ಕಳು ಅದರ ವಿರುದ್ಧ ಹೋರಾಟ ನಡೆಸುವುದು ಜರುಗುತ್ತಾ ಇರುತ್ತದೆ. ಸದ್ಯಕ್ಕೆ ಹಾಸನ ಮೂಲದ ಬಾಲಕಿಯೊಬ್ಬಳು ಇದರ ವಿರುದ್ಧ ಧ್ವನಿಯೆತ್ತಿ, ನನ್ನನ್ನು ಮದುವೆ ಮಾಡಿಸಬೇಡಿ, ಬದಲಿಗೆ ನನಗೆ ಶಿಕ್ಷಣ ಕೊಡಿಸಿ. ನಾನು ಓದುತ್ತೇನೆ ಎಂದು ಅಬೋಧವಾಗಿ ಹೇಳಿದ್ದಾಳೆ.
ಬಾಲ್ಯ ವಿವಾಹ ( Child Marriage) ತಪ್ಪಿಸಿ ಶಿಕ್ಷಣ ಕೊಡಿಸಿ (Education) ಎಂದು ಹಾಸನ (Hassan) ಮೂಲದ ಬಾಲಕಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾಳೆ. ತನಗೆ ತಂದೆ ತಾಯಿ ಇಲ್ಲದ ಕಾರಣ ಮನೆಯಲ್ಲಿ ನನ್ನ ಸಂಬಂಧಿಕರು ಮದುವೆ ಮಾಡಲು ಪ್ರಯತ್ನ ಪಡುತ್ತಿದ್ದಾರೆ. ನಾನು ಎಸ್ಎಸ್ಎಲ್ಸಿ ಉತ್ತೀರ್ಣಳಾಗಿದ್ದೇನೆ. ನನಗೆ ಉನ್ನತ ಶಿಕ್ಷಣ ಕೊಡಿಸಿ ಎಂದು ಮನವಿ ಮಾಡಿದ್ದಾಳೆ.
ಸದ್ಯ ಮನೆ ಬಿಟ್ಟು ಮೈಸೂರು ಜಿಲ್ಲೆ ಪಿರಿಯಾಪಟ್ಟಣದಲ್ಲಿ ಸ್ನೇಹಿತರ ಮನೆಯಲ್ಲಿ ಬಾಲಕಿ ಉಳಿದುಕೊಂಡಿದ್ದಾಳೆ. ಈ ಮಧ್ಯೆ, ಪಿರಿಯಾಪಟ್ಟಣ ಶಿಶು ಅಭಿವೃದ್ಧಿ ಯೋಜನಾಧಿಕಾರಿಯನ್ನು (Women and Child Development) ಸಂಪರ್ಕಿಸಿ, ಬಾಲಕಿ ಮನವಿ ಪತ್ರ ನೀಡಿದ್ದಾಳೆ. ಸಕಾಲಕ್ಕೆ ಎಚ್ಚೆತ್ತ ಅಧಿಕಾರಿಗಳು ಬಾಲಕಿಗೆ ಇದೀಗ ಬಾಲಮಂದಿರಲ್ಲಿ ಆಶ್ರಯ ಕೊಡಲು ಮುಂದಾಗಿದ್ದಾರೆ.
ಬಾಲ್ಯ ವಿವಾಹ ಎಂದರೆ ಚಿಕ್ಕ ವಯಸ್ಸಿನಲ್ಲಿ ಹುಡುಗ-ಹುಡುಗಿಯನ್ನು ಎರಡು ಕುಟುಂಬಗಳು ಒಪ್ಪಿ ಮದುವೆ ಮಾಡುವುದು. ದೇಶದಲ್ಲಿ ಬಾಲ್ಯ ವಿವಾಹವನ್ನು ನಿಷೇಧಿಸಲಾಗಿದ್ದರೂ (ಬಾಲ್ಯ ವಿವಾಹ ನಿಷೇಧ ಕಾಯ್ದೆ 2006 -The Prohibition of Child Marriage Act 2006) ಸಂಪೂರ್ಣ ನಿಯಂತ್ರಣಕ್ಕೆ ತರಲು ಸಾಧ್ಯವಾಗಿಲ್ಲ. ಹುಡುಗಿಯರಿಗೆ 18 ಹಾಗೂ ಹುಡುಗರಿಗೆ 21 ವರ್ಷವೆಂದು ವಿವಾಹಕ್ಕೆ ವಯಸ್ಸನ್ನು ನಿಗದಿಪಡಿಸಲಾಗಿದ್ದರೂ ಬಾಲ್ಯ ವಿವಾಹಗಳು ನಡೆಯುತ್ತಿರುವ ಬಗ್ಗೆ ವರದಿಯಾಗುತ್ತಲೇ ಇದೆ. 19ನೇ ಶತಮಾನದಲ್ಲಿಯೇ ಮಹಿಳಾಪರ ಹೋರಾಟಗಲ್ಲಿ ಗುರುತಿಸಿಕೊಂಡಿದ್ದ ಈಶ್ವರಚಂದ್ರ ವಿದ್ಯಾಸಾಗರ ಎಂಬ ಸಂಸ್ಕೃತ ಪಂಡಿತರು ಬಾಲ್ಯ ವಿವಾಹ ಎಂಬ ಅನಿಷ್ಟ ಪದ್ಧತಿಗೆ ತೆರೆ ಎಳೆಯಲು ಶ್ರಮಿಸಿದ್ಧರು.
(I am not for Child Marriage but want education hassan girl pleads karnataka child development officials)
Published On - 9:28 am, Thu, 19 August 21