ಚೀನಾ ಫಂಡಿಂಗ್, ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ನ್ಯೂಸ್‌ಕ್ಲಿಕ್ ಸುದ್ದಿ ಸಂಸ್ಥೆಯ ಪತ್ರಕರ್ತರ ಮನೆ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದ್ದಾರೆ. ಅಕ್ರಮ ಹಣ ವರ್ಗಾವಣೆ ಮತ್ತು ಚೀನಾ ಪರವಾದ ವಿಷಯವನ್ನು ತನ್ನ ವೇದಿಕೆಯಲ್ಲಿ ಪ್ರಕಟಿಸಿದ ಆರೋಪದ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಖಲಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರ ವಿಶೇಷ ಘಟಕ ಮಂಗಳವಾರ ನ್ಯೂಸ್‌ಕ್ಲಿಕ್ ಮಾಧ್ಯಮಕ್ಕೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿದೆ.
ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿನ ಮಾಧ್ಯಮ ಸಂಸ್ಥೆಯ ಅಧಿಕಾರಿಗಳು ಮತ್ತು ಅದರ ಉದ್ಯೋಗಿಗಳ ನಿವಾಸಗಳ ಮೇಲೆ ದಾಳಿ ನಡೆಸಲಾಗುತ್ತಿದೆ.
ಸುದ್ದಿವಾಹಿನಿಯು ಅಮೆರಿಕದ ಬಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ 38 ಕೋಟಿ ರೂಪಾಯಿಗಳನ್ನು ಪಡೆದು ಭಾರತದಲ್ಲಿ ಚೀನಾ ಪರ ಪ್ರಚಾರವನ್ನು ಮಾಡುತ್ತಿದೆ ಎಂಬ ಆರೋಪದ ಮೇಲೆ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕರಣದಲ್ಲಿ ನ್ಯೂಸ್‌ಕ್ಲಿಕ್ ಮೇಲೆ ಇಡಿ ತನಿಖೆ ನಡೆಸುತ್ತಿದೆ.
ಮಾಧ್ಯಮವೊಂದರ ವರದಿ ಪ್ರಕಾರ ಪೊಲೀಸರು ತನಿಖೆ ವೇಳೆ ಹಲವು ಡಿಜಿಟಲ್ ಸಾಕ್ಷ್ಯಗಳನ್ನೂ ವಶಪಡಿಸಿಕೊಂಡಿದ್ದಾರೆ. ಇವುಗಳಲ್ಲಿ ಲ್ಯಾಪ್ಟಾಪ್, ಮೊಬೈಲ್ ಫೋನ್ಗಳು, ಹಾರ್ಡ್ ಡಿಸ್ಕ್ಗಳು ಕೂಡ ಸೇರಿವೆ.
ಚೀನಾ ಸಂಪರ್ಕ
ಅಮೆರಿಕದ ಬಿಲಿಯನೇರ್ ನೆವಿಲ್ಲೆ ರಾಯ್ ಸಿಂಘಮ್ ಅವರಿಂದ ಹಣವನ್ನು ಪಡೆಯುವ ಜಾಗತಿಕ ನೆಟ್ವರ್ಕ್ನಲ್ಲಿ ನ್ಯೂಸ್ ಕ್ಲಿಕ್ ಒಂದು ಭಾಗವಾಗಿದೆ ಎಂದು ಅಮೆರಿಕದ ಪತ್ರಿಕೆ ನ್ಯೂಯಾರ್ಕ್ ಟೈಮ್ಸ್ ಹೇಳಿತ್ತು.
ನ್ಯೂಸ್ ಕ್ಲಿಕ್ನಿಂದ ಪಡೆದ ವಿದೇಶಿ ಹಣವು ಎಫ್ಸಿಆರ್ಎ ಅಂದೆ ವಿದೇಶಿ ಕೊಡುಗೆ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸುತ್ತದೆ ಎಂದು ಇಡಿ ಆರೋಪಿಸಿದೆ.ಈ ನಿಧಿಯನ್ನು ದೇಶವಿರೋಧಿ ಚಟುವಟಿಕೆಗಳಿಗೂ ಬಳಸಲಾಗುತ್ತದೆ ಎಂದು ಆರೋಪಿಸಲಾಗಿತ್ತು. ಚೀನಾದಲ್ಲಿ ನೆಲೆಸಿರುವ ಸಿಂಘಮ್ ಭಾರತದಲ್ಲಿ ಚೀನಾ ಬೆಂಬಲಿತ ಮಾಹಿತಿಯನ್ನು ಪ್ರಸಾರ ಮಾಡಲು ನ್ಯೂಸ್ಕ್ಲಿಕ್ಗೆ 38 ಕೋಟಿ ರೂ. ಅಕ್ರಮವಾಗಿ ನೀಡಿದ್ದಾರೆ ಎಂದು ಇಡಿ ಹೇಳಿತ್ತು.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ