ಶ್ರೀನಗರದಲ್ಲಿ ಮುಂದುವರಿದ ನಾಗರಿಕರ ಹತ್ಯೆ; ಉಗ್ರರ ಗುಂಡಿಗೆ ಫಾರ್ಮಸಿ ಉದ್ಯೋಗಿ ಬಲಿ

| Updated By: Lakshmi Hegde

Updated on: Nov 08, 2021 | 10:04 PM

ಬೋಹ್ರಿ ಕಡಲ್​ ಏರಿಯಾದಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ನಡೆದ ಬಗ್ಗೆ ಸಂಜೆ ಸುಮಾರು 8.10ರ ಹೊತ್ತಿಗೆ ನಮಗೆ ಮಾಹಿತಿ ಸಿಕ್ಕಿದೆ. ನಾವು ಹೋಗಿ ನೋಡಿದಾಗ ಇಬ್ರಾಹಿಂ ಖಾನ್​ ರಕ್ತದ ಮಡುವಲ್ಲಿ ಬಿದ್ದಿದ್ದರು ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಶ್ರೀನಗರದಲ್ಲಿ ಮುಂದುವರಿದ ನಾಗರಿಕರ ಹತ್ಯೆ; ಉಗ್ರರ ಗುಂಡಿಗೆ ಫಾರ್ಮಸಿ ಉದ್ಯೋಗಿ ಬಲಿ
ಸಾಂಕೇತಿಕ ಚಿತ್ರ
Follow us on

ಜಮ್ಮು-ಕಾಶ್ಮೀರದಲ್ಲಿ ನಾಗರಿಕರ ಹತ್ಯೆ ಮುಂದುವರಿದಿದೆ. ಇಂದು ಸಂಜೆ ಶ್ರೀನಗರದ ಬೊಹ್ರಿ ಕಡಾಲ್​ ಎಂಬ ಏರಿಯಾದಲ್ಲಿರುವ ಅಂಗಡಿಯೊಂದರ ಹೊರಗೆ ನಾಗರಿಕನೊಬ್ಬನಿಗೆ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ. ಮೃತನನ್ನು ಮೊಹಮ್ಮದ್​ ಇಬ್ರಾಹಿಂ ಖಾನ್​ ಎಂದು ಗುರುತಿಸಲಾಗಿದ್ದು, ಮೂಲತಃ ಬಂಡಿಪೋರಾದವರು. ಅವರು ಸೇಲ್ಸ್​ಮ್ಯಾನ್​ ಆಗಿ ಕೆಲಸ ಮಾಡುತ್ತಿದ್ದರು. ಉಗ್ರರು ಇಬ್ರಾಹಿಂ ಖಾನ್​​ರ ಹೊಟ್ಟೆಗೆ ಗುಂಡು ಹೊಡೆದಿದ್ದರು. ಇದರಿಂದಾಗಿ ತೀವ್ರ ರಕ್ತಸ್ರಾವದಿಂದ ಅಸ್ವಸ್ಥರಾಗಿದ್ದ ಅವರನ್ನು ಶ್ರೀನಗರದ ಶ್ರೀ ಮಹಾರಾಜ ಹರಿ ಸಿಂಗ್​ ಆಸ್ಪತ್ರೆಗೆ ದಾಖಲು ಮಾಡಲಾಯಿತು. 

ಇಬ್ರಾಹಿಂ ಫಾರ್ಮಸಿಯೊಂದರ ಸೇಲ್ಸ್​ಮ್ಯಾನ್​ ಆಗಿದ್ದರು. ಈ ಫಾರ್ಮಸಿ ನಡೆಸುತ್ತಿರುವ ವೈದ್ಯರು ಕಾಶ್ಮೀರಿ ಪಂಡಿತರಾಗಿದ್ದಾರೆ ಎಂದು ಹೇಳಲಾಗಿದೆ.  ಬೋಹ್ರಿ ಕಡಲ್​ ಏರಿಯಾದಲ್ಲಿ ಭಯೋತ್ಪಾದಕರ ಗುಂಡಿನ ದಾಳಿ ನಡೆದ ಬಗ್ಗೆ ಸಂಜೆ ಸುಮಾರು 8.10ರ ಹೊತ್ತಿಗೆ ನಮಗೆ ಮಾಹಿತಿ ಸಿಕ್ಕಿದೆ. ನಾವು ಹೋಗಿ ನೋಡಿದಾಗ ಇಬ್ರಾಹಿಂ ಖಾನ್​ ರಕ್ತದ ಮಡುವಲ್ಲಿ ಬಿದ್ದಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ಹಿರಿಯ ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಘಟನೆಗೆ ಸಂಬಂಧಪಟ್ಟಂತೆ ಪ್ರಕರಣ ದಾಖಲಾಗಿದೆ. ಅಷ್ಟೇ ಅಲ್ಲ, ಗುಂಡಿನ ದಾಳಿ ನಡೆದ ಸ್ಥಳದಲ್ಲಿ ಪೊಲೀಸ್​ ಬಿಗಿ ಭದ್ರತೆ ಕಲ್ಪಿಸಲಾಗಿದ್ದು, ಭಯೋತ್ಪಾದಕರನ್ನು ಹುಡುಕುವ ಕಾರ್ಯಾಚರಣೆಯೂ ಮುಂದುವರಿದಿದೆ. ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಒಮರ್​ ಅಬ್ದುಲ್ಲಾ ಈ ಹತ್ಯೆಯನ್ನು ಖಂಡಿಸಿದ್ದಾರೆ.

ಇನ್ನು ಜಮ್ಮು-ಕಾಶ್ಮೀರದಲ್ಲಿ ಇತ್ತೀಚಿನ ದಿನಗಳಲ್ಲಿ ನಾಗರಿಕರ ಹತ್ಯೆ ಪ್ರಮಾಣ ಹೆಚ್ಚಾಗಿದೆ. ಬಿಹಾರದ ಕಾರ್ಮಿಕರು, ಶಾಲೆಯೊಂದರ ಇಬ್ಬರು ಶಿಕ್ಷಕರು ಸೇರಿ ಹಲವು ನಾಗರಿಕರನ್ನು ಈಗಾಗಲೇ ಉಗ್ರರು ಹತ್ಯೆ ಮಾಡಿದ್ದಾರೆ. ಇತ್ತೀಚೆಗಷ್ಟೇ ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಿದ್ದ ಗೃಹ ಸಚಿವ ಅಮಿತ್​ ಶಾ, ಇಲ್ಲಿನ ನಾಗರಿಕರ ಸುರಕ್ಷತೆ ನಮ್ಮ ಜವಾಬ್ದಾರಿ ಎಂದೂ ಹೇಳಿದ್ದಾರೆ.

ಇದನ್ನೂ ಓದಿ: ಬುಡಕಟ್ಟು ಸಮುದಾಯವನ್ನು ಎಸ್​ಸಿ/ಎಸ್​ಟಿಗೆ ಸೇರಿಸಲು ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡ ಮನವಿ