ಮುಂಬೈ: ಭಾರತದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸಂಸ್ಕೃತವನ್ನು ಭಾರತ ಒಕ್ಕೂಟದ ಅಧಿಕೃತ ಭಾಷೆಯನ್ನಾಗಿ ಮಾಡುವ ಪ್ರಸ್ತಾವನೆ ಇಟ್ಟಿದ್ದರು ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೋಬ್ಡೆ ಹೇಳಿದರು. ಮಹಾರಾಷ್ಟ್ರ ಕಾನೂನು ವಿಶ್ವವಿದ್ಯಾಲಯದ ನೂತನ ಕಟ್ಟಡವೊಂದರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂಸ್ಕೃತವನ್ನೇ ಭಾರತದ ಅಧಿಕೃತ ಭಾಷೆಯನ್ನಾಗಿಸಲು ಕೆಲವು ಮುಸ್ಲಿಂ ಮತ್ತು ಹಿಂದೂ ಧಾರ್ಮಿಕ ಮುಖಂಡರ ಒಪ್ಪಿಗೆಯನ್ನೂ ಡಾ.ಅಂಬೇಡ್ಕರ್ ಪಡೆದಿದ್ದರು. ಅಲ್ಲದೆ, ಸ್ವತಃ ತಾವೂ ಈ ಪ್ರಸ್ತಾವನೆಗೆ ಸಹಿ ಹಾಕಿದ್ದರು ಎಂದು ನ್ಯಾಯಮೂರ್ತಿ ಬೋಬ್ಡೆ ತಮ್ಮ ಭಾಷಣದಲ್ಲಿ ಹೇಳಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರ 130ನೇ ಜನ್ಮದಿನೋತ್ಸವದಲ್ಲಿ ಮಾತನಾಡಿದ ಅವರು, ಭಾರತದ ಸಂವಿಧಾನ ಶಿಲ್ಪಿ ಹೊಂದಿದ್ದ ವಿವಿಧ ಚಿಂತನೆಗಳನ್ನು ಪ್ರಸ್ತಾಪಿಸಿದರು. ಸಂಸ್ಕೃತವನ್ನೇ ಭಾರತದ ಅಧಿಕೃತ ಭಾಷೆಯನ್ನಾಗಿ ಮಾಡಲು ಅಂಬೇಡ್ಕರ್ ಅವರಿಗೆ ಕೆಲವು ಕಾರಣಗಳಿದ್ದವು. ಉತ್ತರ ಭಾರತೀಯರ ಮತ್ತು ದಕ್ಷಿಣ ಭಾರತೀಯರ ನಡುವಿನ ಭಾಷಾ ಅಸಮಾಧಾನವನ್ನು ಹೋಗಲಾಡಿಸಲು, ಸಾಮರಸ್ಯ ಮೂಡಿಸಲು ಸಂಸ್ಕೃತವನ್ನು ಬಳಸಿಕೊಳ್ಳಬೇಕು ಎಂದು ಅಂಬೇಡ್ಕರ್ ಬಯಸಿದ್ದರು. ಉತ್ತರ ಭಾರತೀಯರು ತಮಿಳು ಭಾಷೆಯನ್ನು ವಿರೋಧಿಸುತ್ತಾರೆ. ಹಾಗೆಯೇ ದಕ್ಷಿಣ ಭಾರತೀಯರು ಹಿಂದಿಯನ್ನು ಅಷ್ಟೇ ಉಗ್ರವಾಗಿ ವಿರೋಧಿಸುತ್ತಾರೆ. ಉತ್ತರ ಮತ್ತು ದಕ್ಷಿಣ ಭಾರತೀಯರ ನಡುವೆ ಸಾಮರಸ್ಯ ಸಾಧಿಸಲು ಸಂಸ್ಕೃತವನ್ನು ದೇಶದ ಅಧಿಕೃತ ಭಾಷೆಯನ್ನಾಗಿ ರೂಪಿಸುವ ಇಚ್ಛೆಯನ್ನು ಬಿ.ಆರ್.ಅಂಬೇಡ್ಕರ್ ಹೊಂದಿದ್ದರು ಎಂದು ಭಾರತದ ಮುಖ್ಯ ನ್ಯಾಯಮೂರ್ತಿಗಳು ಭಾಷಣದಲ್ಲಿ ವಿವರಿಸಿದರು.
ಸಂಸ್ಕೃತದ ಮೂಲಕವಾದರೂ ಉತ್ತರ ಮತ್ತು ದಕ್ಷಿಣ ಭಾರತೀಯರ ನಡುವಿನ ಭಾಷೆ ಭಾಷೆಗಳ ನಡುವಿನ ವೈಮನಸ್ಸು, ಅಸಮಾಧಾನ ಶಮನವಾಗಬಹುದು ಎಂಬುದು ಅಂಬೇಡ್ಕರ್ ಮನಸ್ಸಿನಲ್ಲಿತ್ತು. ಅಂಬೇಡ್ಕರರ ಸಂಸ್ಕೃತ ಸೂತ್ರ ಇಡೀ ದೇಶವ್ಯಾಪಿ ಒಪ್ಪಿತವಾಗುವ ಸಂಭವವಿತ್ತು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಕೇಂದ್ರ ಸಚಿವ ನಿತಿನ್ ಗಡ್ಕರಿ, ಮಹಾರಾಷ್ಟ್ರದ ವಿಪಕ್ಷ ನಾಯಕ ದೇವೇಂದ್ರ ಫಡಣವೀಸ್ ಸಹ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಾತನಾಡಿದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ‘ವಿದ್ಯಾರ್ಥಿಗಳು ತಮ್ಮ ಶಿಕ್ಷಣವನ್ನು ಬಡವರ್ಗದ ಜನರ ಅಭಿವೃದ್ಧಿಗೆ ಮೀಸಲಿಡಬೇಕು. ಬೃಹತ್ ಕಾರ್ಪೊರೇಟ್ ಕಂಪೆನಿಗಳ ಮೊರೆ ಹೋಗಬಾರದು’ ಎಂದು ವಿದ್ಯಾರ್ಥಿ ಸಮೂಹದ ಬಳಿ ಮನವಿ ಮಾಡಿದರು.
ಇದನ್ನೂ ಓದಿ: ‘ಎಷ್ಟು ತಲೆಮಾರುಗಳವರೆಗೆ ಮೀಸಲಾತಿ ಮುಂದುವರೆಸುತ್ತೀರಿ?‘: ಸುಪ್ರೀಂಕೋರ್ಟ್
ಇದನ್ನೂ ಓದಿ: ಕೊರೊನಾ ಕಡಿಮೆ ಮಾಡಲು ಕೆಂಪಿರುವೆಯ ಚಟ್ನಿ; ಅರ್ಜಿ ತಿರಸ್ಕರಿಸಿದ ಒಡಿಶಾ ಹೈಕೋರ್ಟ್